ಕರುನಾಡಿಗೆ ಕಾಲಿಟ್ಟ ರೂಪಾಂತರಿ ಡೆಲ್ಪಾಪ್ಲಸ್ ವೈರಸ್!!

 ತುಮಕೂರು :

      ಕೋವಿಡ್ ಎರಡನೇ ಅಲೆಯೇ ಇನ್ನೂ ಪೂರ್ಣಪ್ರಮಾಣದಲ್ಲಿ ತಗ್ಗಿಲ್ಲ. ಅಷ್ಟರಲ್ಲಾಗಲೇ 3ನೇ ಅಲೆಯ ಭೀತಿ ಎದುರಾಗಿದ್ದು,ಮಕ್ಕಳಿಗೆ ಸೋಂಕು ಎದುರಾಗುವ ಆತಂಕ ಸರಕಾರ, ಮಕ್ಕಳ ಪೋಷಕರನ್ನು ಚಿಂತೆಗೀಡುಮಾಡಿದೆ.

      ಮಹಾರಾಷ್ಟ್ರ ಕೇರಳ, ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡ ಡೆಲ್ಟಾಪ್ಲಸ್ ರೂಪಾಂತರಿ ವೈರಸ್ ಕರುನಾಡಿಗೂ ಕಾಲಿಟ್ಟಿದ್ದು, ಮೈಸೂರಿನಲ್ಲಿ ಡೆಲ್ಟಾಪ್ಲಸ್ ವೈರಸ್ ಸೋಂಕು ದೃಢಪಟ್ಟಿರುವುದು ಜನಸಾಮಾನ್ಯರಲ್ಲಿ ತಳಮಳಕ್ಕೆ ಕಾರಣವಾಗಿದೆ. ಜುಲೈ 1ರಿಂದ ಶಾಲೆ ಆರಂಭಿಸಬೇಕೆಂದಿದ್ದ ಸರಕಾರವೂ ಅಡ್ಡಕತ್ತರಿಯಲ್ಲಿ ಸಿಲುಕಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಇದರ ನಡುವೆ 3ನೇ ಅಲೆ ಯಾವಾಗ ಬೇಕಾದರೂ ಬರಬಹುದೆಂದು ಜಿಲ್ಲಾಡಳಿತದ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯವರು ಸಿದ್ಧತೆಗಳನ್ನು ನಡೆಸಿದ್ದು, ಈಗಾಗಲೇ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೂರ್ನಾಲ್ಕು ಸಭೆಗಳನ್ನು ನಡೆಸಿ ಬಾಲ ವಿಕಾಸ ಸಮಿತಿ,ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಟಾಸ್ಕ್‍ಪೋರ್ಸ್ ರಚಿಸಿ ಬೆಡ್‍ಗಳು, ಆರೈಕೆ ಕೇಂದ್ರಗಳು ಸೇರಿ ಅಗತ್ಯ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

547 ಬೆಡ್‍ಗಳು ಲಭ್ಯತೆ:

      ಜಿಲ್ಲೆಯ ಹತ್ತು ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗೋಸ್ಕರ 115 ಎನ್‍ಐಸಿಯು ಬೆಡ್, 53 ಪಿಎಸ್‍ಯುಐ ಬೆಡ್ ಹಾಗೂ 20 ವೆಂಟಿಲೇಟರ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆ ಸೇರಿ ಒಟ್ಟು 547 ಬೆಡ್‍ಗಳು ಮಕ್ಕಳಿಗಾಗಿ ಲಭ್ಯವಿದೆ.

      ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 17 ಜನ ಮಕ್ಕಳ ತಜ್ಞರಿದ್ದು, ಖಾಸಗಿ ಆಸ್ಪತ್ರೆಯಲ್ಲೂ 43 ಜನ ಮಕ್ಕಳ ತಜ್ಞರು ಚಿಕಿತ್ಸೆಗೆ ಲಭ್ಯವಿದ್ದು, 6 ರಿಂದ 18 ವರ್ಷದೊಳಗಿನ ಮಕ್ಕಳು ಕೋವಿಡ್‍ಭಾದಿತರಾದರೆ ಅವರಿಗೆ ಸರಕಾರಿ ಬಾಲಕರ ಮಂದಿರ ಹಾಗೂ ಸರಕಾರಿ ಬಾಲಕಿಯರ ಮಂದಿರದಲ್ಲಿ ಪಾಲನೆಗೆ ಕಾದಿರಿಸಲಾಗಿದೆ. ಇನ್ನೂ 6 ವರ್ಷದೊಳಗಿನ ಮಕ್ಕಳು ಕೋವಿಡ್‍ಗೆ ಬಾಧಿತರಾದರೆ ಅಂತಹವರ ಆರೈಕೆಗೆ ಕುಣಿಗಲ್ ದಯಾಕಿರಣ ಸಂಸ್ಥೆಗೆ ದಾಖಲಿಸಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲು. ಮಕ್ಕಳೊಟ್ಟಿಗೆ ಒಬ್ಬರು ಪೋಷಕರು ಜತೆಯಾಗಿರಲು ವ್ಯವಸ್ಥೆ ಮಡಲಾಗಿದೆ.

8136 ಮಕ್ಕಳಲ್ಲಿ ಅಪೌಷ್ಠಿಕತೆ:

      ರೋಗ ನಿರೋಧಕ ಶಕ್ತಿ ದುರ್ಬಲಗೊಂಡ ಮಕ್ಕಳಲ್ಲಿ ಕೋವಿಡ್ ಹೆಚ್ಚು ಬಾಧಿಸುವ ಆತಂಕವಿರುವುದರಿಂದ ಅಂತಹ 8136 ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಪೌಷ್ಠಿಕಾಂಶ ವೃದ್ಧಿಸುವ ಸ್ಪಿರುಲಿನಾ ಚಿಕ್ಕಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಮನೆಗಳಿಗೆ ವಿತರಿಸಲು ಕ್ರಮ ವಹಿಸಲಾಗಿದೆ. ತೀವ್ರ ಅಪೌಷ್ಠಿಕತೆಯ 176 ಮಕ್ಕಳು ಜಿಲ್ಲೆಯಲ್ಲಿ ಕಂಡುಬಂದಿದ್ದು, 1, 62,451 ಮಂದಿ ಅಂಗನವಾಡಿ ಮಕ್ಕಳು, 16352 ಗರ್ಭಿಣಿಯರು, 15,642 ಬಾಣಂತಿಯರಿದ್ದು ಎಲ್ಲರಿಗೂ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಟರಾಜು ತಿಳಿಸಿದ್ದಾರೆ.

4,82,651 ಮಕ್ಕಳ ರಕ್ಷಣೆಯ ಸವಾಲು

      ಜಿಲ್ಲೆಯಲ್ಲಿ 0 ಯಿಂದ 18 ವರ್ಷದೊಳಗಿನ 4,82,651 ಮಕ್ಕಳಿದ್ದು ಕೋವಿಡ್ ಮೂರನೇ ಅಲೆಯಿಂದ ಇವರನ್ನು ಪಾರು ಮಾಡುವ ಮಹತ್ವದ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ. ಅದರಲ್ಲೂ 6 ವರ್ಷದೊಳಗಿನ ಮಕ್ಕಳು 1,46,079 ಸಂಖ್ಯೆಯಲ್ಲಿದ್ದು ಇವರನ್ನು ಮತ್ತಷ್ಟು ಕಾಳಜಿಯಿಂದ ಕೋವಿಡ್ 3ನೇ ಅಲೆ, ಡೆಲ್ಟಾ ಪ್ಲಸ್ ವೈರಸ್‍ನಿಂದ ಕಾಪಾಡಬೇಕಿದೆ. ಸದ್ಯಕ್ಕೆ ಆಕ್ಸಿಜನ್ ಕಾನ್ಸರ್‍ಟ್ರೇಟರ್‍ಗಳು, ಉಪಕರಣಗಳಿಗೆ ಜಿಲ್ಲೆಯಲ್ಲಿ ಕೊರತೆಯಿಲ್ಲ. ಹೀಗಾಗಿ ಮಕ್ಕಳ ರಕ್ಷಣೆಯನ್ನು ದೇಶದ ಭವಿಷ್ಯವನ್ನು ಉಳಿಸುತ್ತಿದ್ದೇವೆ ಎನ್ನುವ ರೀತಿಯಲ್ಲಿ ಸರಕಾರ ಜಿಲ್ಲಾಡಳಿತ ಮಾಡಬೇಕಿದೆ ಎಂಬುದು ಪೋಷಕರ ಒತ್ತಾಯವಾಗಿದೆ.

ಮಕ್ಕಳಿಗೆ ಕೋವಿಡ್ ಬಂದಾಗ ವ್ಯಥೆಪಡದೇ, ಈಗಲೇ ಈ ನಿಯಮಗಳನ್ನು ಪಾಲಿಸಿ

      ಕೋವಿಡ್ ಪಿಡುಗಿನಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕರಪತ್ರದ ಮುಖೇನ ಪೋಷಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಮಕ್ಕಳಿಗೆ ನೀಡುವ ವ್ಯಾಕ್ಸಿನ್ ಇನ್ನೂ ಪ್ರಯೋಗದ ಹಂತದಲ್ಲಿರುವಿರುವುದರಿಂದ ಮಕ್ಕಳು ಮಾಸ್ಕ್, ಆಗಾಗ್ಗೆ ಕೈ ತೊಳೆಯುವ ನಿಯಮ ಪಾಲನೆಯೊಂದಿಗೆ ಪೌಷ್ಠಿಕಾಂಶ ವೃದ್ಧಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಲು ಈ ಕ್ರಮ ಅನುಸರಿಸಬೇಕೆಂದು ಸಲಹೆ ನೀಡಿದೆ.

ಪ್ರೋಟಿನ್ ಕೊರತೆಗೆ:

      ಮಕ್ಕಳಲ್ಲಿ ತೆಳುವಾದ ಕೂದಲು, ಹೊಟ್ಟೆದಪ್ಪ, ಕೈ ಕಾಲು ಸಣ್ಣ, ಮಂಕಾಗಿರುವಂತೆ ಕಂಡುಬಂದರೆ ಅದು ಪ್ರೋಟಿನ್ ಕೊರತೆಂiು ಲಕ್ಷಣ. ಇಂತಹ ಮಕ್ಕಳಿಗೆ ಬೇಳೆಕಾಳು, ಕಡ್ಲೆಬೀಜ, ಮೊಟ್ಟೆ, ಮಾಂಸ, ಮೊಸರಿನ ಆಹಾರ ತಿನ್ನಿಸುವುದು. ತಟ್ಟೆಯಲ್ಲಿ ಕಾಮನಬಿಲ್ಲು ಮಾದರಿಯಲ್ಲಿ ಸಮತೋಲಿತ ಪೋಷಕಾಂಶ ಒದಗಿಸುವ ಆಹಾರಗಳನ್ನು ನೀಡಲು ಸೂಚಿಸಲಾಗಿದೆ. ಮೊಳಕೆ ಕಾಳಿನ ಕೋಸಂಬರಿ(1 ಕಪ್ಪು ಪ್ರತಿದಿನ), ಸ್ಥಳೀಯವಾಗಿ ಸಿಗುವ ವಿವಿಧ ಬಣ್ಣದ ಹಣ್ಣು ತರಕಾರಿ, ಊಟದಲ್ಲಿ ಶೇಕಡ 30ಕ್ಕಿಂತ ಹೆಚ್ಚು ಸಿರಿಧಾನ್ಯ ಹಾಗೂ ಬೇಯಿಸಿದ ತರಕಾರಿ ನೀಡಬೇಕಿದೆ.

ಇದು ಬೇಡ:

      ಅತಿಯಾದ ಮೈದಾ, ಸಕ್ಕರೆ ಬಳಸಿದ ಆಹಾರಗಳನ್ನು ಬೇಡ. ಸಿದ್ಧ ಆಹಾರಗಳಾದ ಚಿಪ್ಸ್, ಬೋಟಿ ಇತ್ಯಾದಿ ಕಡಿಮೆ ಮಾಡಿ, ಬಾಟೆಲ್ ಪಾನೀಯ, ಬೀದಿ ಬದಿಯ ಆಹಾರ ಪದಾರ್ಥಗಳನ್ನು ನೀಡದಿರಿ.

     ಮಾನಸಿಕವಾಗಿ ಖಿನ್ನರಾದರೆ ಕೂಡಲೇ ಮಕ್ಕಳ ಸಹಾಯವಾಣಿ 1098, 104ಕ್ಕೆ ಕರೆ ಮಾಡಿ. ಬೆಡ್ ಚಿಕಿತ್ಸೆ ಅವಶ್ಯಕತೆಯಿದ್ದರೆ ಕೊರೊನಾ ವಾರ್ ರೂಂ ಸದಂಖ್ಯೆ 0816-2213401, 402, 403,404, 405ಕ್ಕೆ ಕರೆ ಮಾಡಬಹುದಾಗಿದೆ.

      ಕಳೆದ ಎರಡು ಅಲೆಯಲ್ಲಿ 10,041 ಮಕ್ಕಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 3ನೇ ಅಲೆ ಮಕ್ಕಳಿಗೆ ಹೆಚ್ಚು ಆವರಿಸುತ್ತದೆ ಮಾಹಿತಿಗಳ ಹಿನ್ನೆಲೆಯಲ್ಲಿ ಸಚಿವರು, ಜಿಲ್ಲಾಧಿಕಾರಿಗಳು, ಸಿಇಓ ಅವರುಗಳ ಸೂಚನೆÉಗಳ ಆಧಾರದಲ್ಲಿ ಪೂರಕ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಂಡಿದೆ. 547 ಬೆಡ್‍ಗಳು ಲಭ್ಯವಿದ್ದು, ಅಪೌಷ್ಠಿಕತೆಯಿಂದಿರುವ 8136 ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲುಕ್ರಮ ವಹಿಸಲಾಗಿದೆ.

-ನಟರಾಜು, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

      ಸೋಂಕು ಬಂದಾಗ ಆಸ್ಪತ್ರೆ, ಕೇರ್ ಸೆಂಟರ್‍ಗಳಿಗೆ ದಾಖಲಾಗಿ ಚಿಕಿತ್ಸೆ ನೀಡುವುದು ಒಂದೆಡೆಯಾದರೆ, ಸೋಂಕು ಪೋಷಕರಿಂದ ಮಕ್ಕಳಿಗೆ ಹರಡದಂತೆ ತಡೆಯಲು ಮುಂಜಾಗ್ರತ ಕ್ರಮವಾಗಿ 14 ವರ್ಷದೊಳಗಿನ ಮಕ್ಕಳ ತಂದೆ –ತಾಯಿ ಇಬ್ಬರಿಗೂ ಕೋವಿಡ್ ವ್ಯಾಕ್ಸಿನ್ ಹಾಕಲು ಯೋಜಿಸಲಾಗಿದೆ.

-ವೈ.ಎಸ್.ಪಾಟೀಲ್ ಜಿಲ್ಲಾಧಿಕಾರಿ.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap