ತೋವಿನಕೆರೆ :
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟವು ಕಸಿ ಮಾಡಿರುವ ಹುಣಸೆ ಹಣ್ಣಿನ ಸಸಿಗಳನ್ನು ರೈತ ಲಕ್ಷ್ಮಣ ಹೆಸರಿನಲ್ಲಿ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ತೋವಿನಕೆರೆ ಸಮೀಪದ ತುಮಕೂರು ತಾಲ್ಲೂಕು ಕೋರಾ ಹೋಬಳಿ ನಂದಿಹಳ್ಳಿ ರೈತ 65 ವರ್ಷ ವಯಸ್ಸಿನ ಲಕ್ಷ್ಮಣ ಬೆಳೆಸಿರುವ ನಲ್ವತ್ತು ವರ್ಷದ ಹುಣಸೆ ಮರದ ಹಣ್ಣು ಹಲವು ರೀತಿಯ ವಿಶೇಷತೆಗಳನ್ನು ಹೊಂದಿದೆ. ಐಐಎಚ್‍ಆರ್ ವಿಜ್ಣಾನಿಗಳು ನಾಲ್ಕು ವರ್ಷಗಳ ಕಾಲ ನಡೆಸಿದ ಸಂಶೋಧನೆಗಳಿಂದ ಈ ಮರದಲ್ಲಿನ ಹಣ್ಣು ಪ್ರತಿ ವರ್ಷ ಒಂದೇ ರೀತಿಯ ಇಳುವರಿ, ರುಚಿ, ಬಣ್ಣ, ತಿರುಳಿನ ದಪ್ಪ ಮತ್ತು ಉದ್ದ ಮತ್ತು ಹುಳಿಯ ಅಂಶ ಹೊಂದಿರುವುದು ಕಂಡು ಬಂದಿದೆ.
ಹಲವು ದಶಕಗಳಿಂದ ಪ್ರತಿ ವರ್ಷ ರೈತನಿಗೆ ಐವತ್ತು ಸಾವಿರದಿಂದ ಒಂದು ಲಕ್ಷ ರೂ. ಗಳಿಗಿಂತಲೂ ಹೆಚ್ಚು ಅದಾಯವನ್ನು ಗಳಿಸಿ ಕೊಟ್ಟಿದೆ. 2020ರಲ್ಲಿ ಒಂದು ಕ್ವಿಂಟಾಲ್‍ಗೆ 42 ಸಾವಿರ ರೂ., 2021 ರಲ್ಲಿ 35 ಸಾವಿರ ರೂ. ಬೆಲೆಗೆ ತುಮಕೂರು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ರೈತನ ಜೊತೆ ಒಪ್ಪಂದ ಮಾಡಿಕೊಂಡು ಕಸಿ ಮಾಡಿದ ಸಸಿಗಳನ್ನು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುತ್ತಾರೆ. ಪ್ರತಿ ಸಸಿಗೂ ರೈತನ ಖಾತೆಗೆ ಮಾರಾಟದಿಂದ ಬಂದ ಹಣವನ್ನು ಹಂಚಿಕೊಳ್ಳಲು ಮಂಗಳವಾರ ಒಪ್ಪಂದ ಮಾಡಿಕೊಳ್ಳಲಾಗಿದೆ.
ರೈತನಿಗೆ ಕಸಿ ಕಟ್ಟುವ ತರಬೇತಿಯನ್ನು ನೀಡಿ ಸ್ವಾವಲಂಬಿಯಾಗಿ ಬದುಕು ನಡೆಸುವ ಶಕ್ತಿ ತುಂಬುತ್ತ್ತಿದೆ. ಸಸಿಗಳ ಖರೀದಿದಾರರ ಮಾಹಿತಿಯನ್ನು ನೀಡುತ್ತದೆ. ಡಾ.ಕುನ್ನು ಪ್ರಿಯಾ, ಡಾ.ಪ್ರಸನ್ನ, ತೋವಿನಕೆರೆ ಎಚ್.ಜೆ.ಪದ್ಮರಾಜು ಮತ್ತು ವಿನಯ್ ಕುಮಾರ್ ಒಪ್ಪಂದ ಸಮಯದಲ್ಲಿ ಹಾಜರಿದ್ದರು.
ತುಮಕೂರು ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬರುವುದರಿಂದ ಹುಣಸೆ ಬೆಳೆಗೆ ಸೂಕ್ತವಾದ ಪ್ರದೇಶವಾಗಿದೆ. ರಾಷ್ಟ್ರದಲ್ಲಿ ತುಮಕೂರು ಹುಣಸೆ ಉತ್ತಮ ಹೆಸರು ಪಡೆದಿರುತ್ತದೆ. ಸಂಸ್ಥೆಯು ಉತ್ತಮವಾದ ಮರಗಳನ್ನು ಆಯ್ಕೆ ಮಾಡಿ ಕಸಿ ಮಾಡಿದ ತಳಿಗಳನ್ನು ಕೊಡುವ ಪ್ರಯತ್ನ ಮಾಡುತ್ತಿದೆ. ಈಗಾಗಲೆ ಲಕ್ಷ್ಮಣ ತಳಿಗೆ ಸಾವಿರಾರು ಸಸಿಗಳ ಬೇಡಿಕೆ ಬಂದಿದ್ದು, ಮೂರು ಸಾವಿರ ಕಸಿ ಸಸಿಗಳನ್ನು ಸಿದ್ಧ ಮಾಡಲಾಗಿದೆ.
-ಡಾ. ಜಿ.ಕೆ ಕರುಣಾಕರನ್, ಮುಖ್ಯಸ್ಥ, ಐ.ಐ.ಎಚ್.ಆರ್, ಹೀರೇಹಳ್ಳಿ, ತುಮಕೂರು.
ಒಂದೇ ಮರದ ಎರಡು ಬೀಜಗಳನ್ನು ಹಾಕಿದ್ದೆ. ಒಂದು ಮರ ಮಾತ್ರ ತಾಯಿ ಮರಕ್ಕಿಂತಲೂ ಮೀರಿ ಉತ್ತಮವಾದ ಹಣ್ಣು ನೀಡುತ್ತಿದೆ. ಮತ್ತೊಂದು ಮರ ಈ ಮಟ್ಟದಲ್ಲಿ ಬರಲಿಲ್ಲ. ತುಮಕೂರು ಮಾರುಕಟ್ಟೆಯಲ್ಲಿ ನಮ್ಮ ಹಣ್ಣಿಗೆ ಒಳ್ಳೆಯ ಬೇಡಿಕೆ ಇದೆ. ಸಸಿ ಬೆಳಸುವವರು ಬೀಜವನ್ನು ಆಸೆ ಪಟ್ಟು ತೆಗೆದುಕೊಂಡು ಹೋಗುತ್ತಾರೆ. ಬೆಲೆ ಕಡಿಮೆ ಇದ್ದಾಗಲೂ ಈ ಮರದಿಂದ ಪ್ರತಿ ವರ್ಷ ಐವತ್ತು ಸಾವಿರದಿಂದ ಒಂದು ಲಕ್ಷಕ್ಕಿಂತ ಕಡಿಮೆ ಪಡೆದಿಲ್ಲ.
– ಲಕ್ಷ್ಮಣ(65), ರೈತ, ತೋವಿನಕೆರೆ, ಕೊರಟಗೆರೆ ತಾಲ್ಲೂಕು.
ಕಸಿ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವುದು. ಬಂದ ಹಣದಲ್ಲಿ ರೈತನಿಗೆ ಶೇ. 60, ಸಂಸ್ಥೆಗೆ ಶೇ. 40 ಅನುಪಾತದಲ್ಲಿ ಹಣವನ್ನು ಹಂಚಿ ಕೊಳ್ಳಲಾಗುತ್ತದೆ. ತರಬೇತಿ ಮತ್ತು ಕಸಿ ತಂತ್ರಜ್ಣಾನದ ಬಗ್ಗೆ ಮಾಹಿತಿ ನೀಡಿ ಸ್ವಾವಲಂಬಿಯಾಗಿ ಬದುಕಲು ಮಾರ್ಗದರ್ಶನ ನೀಡುತ್ತೇವೆ. ಮುಂದಿನ ವರ್ಷದಿಂದ ರೈತರೆ ಕಸಿ ಗಿಡಗಳನ್ನು ಸಿದ್ದ ಮಾಡಿ ಮಾರಾಟ ಮಾಡಲು ಪ್ರೋತ್ಸಾಹಿಸುತ್ತೇವೆ.
– ಬಿ.ಎನ್ ಶ್ರೀನಿವಾಸ ಮೂರ್ತಿ, ನಿರ್ದೇಶಕ, ಐ.ಐ.ಎಚ್.ಆರ್, ಹೆಸರುಘಟ್ಟ, ಬೆಂಗಳೂರು.
ಭಾರತೀಯ ಸಂಶೋಧನಾ ಸಂಸ್ಥೆಯ ಹಿರೇಹಳ್ಳಿ ಮುಖ್ಯಸ್ಥ ಡಾ. ಕರುಣಾಕರಣ್ ತಂಡ ನಾಲ್ಕು ವರ್ಷಗಳಿಂದ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹಲವು ತಾಕುಗಳಿಗೆ ಭೇಟಿ ನೀಡಿ, ನೂರಾರು ಹುಣಸೆ ಮರಗಳ ಸಮೀಕ್ಷೆ ಮಾಡಿದ್ದರು. ಲಕ್ಷ್ಮಣ ಮರ ಗಮನ ಸೆಳೆದಿತ್ತು. ಕಳೆದ ವರ್ಷ ಬೆಂಗಳೂರಿನ ಸಂಸ್ಥೆಯ ಹಿಂದಿನ ನಿರ್ದೇಶಕ ಎಂ.ಆರ್. ದಿನೇಶ್ ಸಹ ಬೇಟಿ ನೀಡಿದ್ದರು. ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗದಲ್ಲಿ ಹುಣಸೆ ಹಣ್ಣು ರೈತರಿಗೆ ಕೊಟ್ಯಂತರ ಆದಾಯ ತರುವ ಬೆಳೆಯಾಗಿದೆ.
-ಎಚ್.ಜೆ.ಪದ್ಮರಾಜು, ಕೃಷಿಕ, ತೋವಿನಕೆರೆ, ಕೊರಟಗೆರೆ ತಾಲ್ಲೂಕು.
ಮುಖ್ಯಾಂಶಗಳು:
- ದೇಶದಲ್ಲಿ ಮೊದಲ ಹುಣಸೆ ಹಣ್ಣಿನ ತಳಿಗೆ ರೈತನ ಹೆಸರು.
- ತುಮಕೂರು ಜಿಲ್ಲೆಯಲ್ಲಿ ನಾಲ್ಕನೆ ರೈತನ ಹೆಸರಿನ ತಳಿ. ಮೂರು ಹಲಸು, ಒಂದು ಹುಣಸೆ.
- ರೈತನ ಜೊತೆ ಒಪ್ಪಂದ ಪತ್ರಕ್ಕೆ ಸಹಿ. ಹುಣಸೆಯಿಂದ ಮಹಿಳೆಯರಿಗೆ ಐದು ತಿಂಗಳು ಕೆಲಸ.
- ಹುಣಸೆ ಬೆಳೆಯಿಂದ ಮದ್ಯವರ್ತಿಗಳು, ಕೂಲಿ ಕಾರ್ಮಿಕರಿಗೆ ಕೈತುಂಬಾ ಕೆಲಸ.
- ತೋವಿನಕೆರೆ ಸುತ್ತಮುತ್ತಲ ಸಣ್ಣ ಹಳ್ಳಿಗಳಲ್ಲಿ ಕೋಟಿಗಟ್ಟಲೆ ವ್ಯವಹಾರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ