ತುಮಕೂರು :
ಸ್ಮಾರ್ಟ್‍ಸಿಟಿಯಾಗಲು ಹೊರಟಿರುವ ತುಮಕೂರು ನಗರದಲ್ಲಿ ಜಾರಿಗೊಳ್ಳುತ್ತಿರುವ ದಿನದ 24 ತಾಸು ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಅವಾಂತರಗಳೇ ಹೆಚ್ಚಿದ್ದು, ಪೈಪ್‍ಲೈನ್ ಹಾಕಲು ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಲು ಕ್ರಮವಹಿಸದೆ ಇಡೀ ಯೋಜನೆ ವೈಫಲ್ಯದ ಹಾದಿ ಹಿಡಿಯುತ್ತಿರುವುದಕ್ಕೆ ಅವೈಜ್ಞಾನಿಕವಾಗಿ ಮುಚ್ಚಿರುವ ಗುಂಡಿಗಳೇ ಸಾಕ್ಷಿ ಹೇಳುತ್ತಿವೆ.
ಪೈಪ್‍ಲೈನ್ ಅಳವಡಿಸಲು ಭೂಮಿ ಮಟ್ಟದಿಂದ ಅಗತ್ಯತೆಗನುಗುಣವಾಗಿ ಮೂರ್ನಾಲ್ಕು ಅಡಿ ಆಳಕ್ಕೆ ಗುಂಡಿ ತೆಗೆಯಲಾಗುತ್ತಿದ್ದು, ಸರಿಯಾಗಿ ರಿಸ್ಟೋರ್ ಮಾಡದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ರಸ್ತೆಯಲ್ಲಿ ಗುಂಡಿತೆಗೆದು ಪೈಪ್ಲೈನ್ ಹಾಕಿದ ಮೇಲೆ ಅದರ ಮೇಲೆ ಮತ್ತೆ ಮಣ್ಣು, ನೀರು ಹಾಕಿ ಅದು ಸಮದಟ್ಟಾದ ಮೇಲೆ ಮತ್ತೆ ಮಣ್ಣು ಕೂಡಿಸಿ ಮೊದಲಿನಂತೆ ರಸ್ತೆಯನ್ನು ವ್ಯವಸ್ಥೆಗೊಳಿಸಬೇಕಾದ್ದು ಗುತ್ತಿಗೆದಾರರ ಜವಾಬ್ದಾರಿ. ಆದರೆ ನಗರದ ಬಹುತೇಕ ವಾರ್ಡ್‍ಗಳಲ್ಲಿ ಮರಳಿ ಮುಚ್ಚುವ ಕಾಮಗಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬದೂರುಗಳೇ ವ್ಯಾಪಕವಾಗಿವೆ.
ತಮಗೆ ತೋಚಿದಂತೆ ಪೈಪ್‍ಲೈನ್ ಹಾಕಿ ಮಣ್ಣು ಎಳೆದು ಮುಂದೆ ಸಾಗುತ್ತಿದ್ದು, ಒಂದು ಬೈಕ್ ಕಾಮಗಾರಿ ಮುಗಿದ ಹಾದಿಯಲ್ಲಿ ಸಾಗಿದರೂ ನೆಲಕ್ಕೆ ಭೂಮಿ ಕುಸಿಯುತ್ತಿರುವ ಅನುಭವ ಅನೇಕರಿಗೆ ಆಗುತ್ತಿದೆ. ಇನ್ನೂ ಮನೆಗಳಿಗೆ ಸಂಪರ್ಕ ಕಲ್ಪಿಸುವ ಪೈಪ್‍ಲೈನ್ ಅನ್ನು ಸಂಪ್‍ವರೆಗೆ ಹಾಕಬೇಕೆಂಬುದು ನಿಯಮ. ಆದರೆ ಮನೆ ಕಾಂಪೌಂಡ್ ಆವರಣಕ್ಕೆ ಹಾಕಿ ಮುಂದಕ್ಕೆ ನೀವೆ ಪೈಪ್ ಅಳವಡಿಸಿಕೊಳ್ಳಬೇಕೆಂದು ಹೇಳುತ್ತಿದ್ದು ಕಾಮಗಾರಿ ಕೊನೆಯ ಹಂತದಲ್ಲಿ ಯರ್ರಾಬಿರ್ರಿ ಮುಗಿಸಿ ಹೊರಡುವ ಧಾವಂತದಲ್ಲಿ ಗುತ್ತಿಗೆದಾರರು ಇರುವುದು ಕಂಡುಬಂದಿದೆ.
ನಗರದ ಎನ್.ಆರ್.ಕಾಲೋನಿ, 7ನೇ ವಾರ್ಡ್, ನಜರಾಬಾದ್, ಮೇಯರ್ ಅವರ ವಾರ್ಡ್‍ಗಳು, ಪ್ರಾಯೋಗಿಕ ನೀರು ಸರಬರಾಜು ಚಾಲೂಗೊಳಿಸಿದ 26ನೇ ವಾರ್ಡ್‍ನ ಅಶೋಕನಗರ ಸೇರಿ ಹಲವೆಡೆ ಕಳಪೆ ಕಾಮಗಾರಿಗಳು ಕಣ್ಣಿಗೆ ರಾಚುತ್ತಿದ್ದು, ಪಾಲಿಕೆ ಸಾಮಾನ್ಯ ಸಭೆ, ನಗರಾಭಿವೃದ್ಧಿ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಷಯಗಳು ಪ್ರಸ್ತಾಪಗೊಂಡು ಗುತ್ತಿಗೆದಾರ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ಸಹ ನೀಡಿದ್ದರು.
ಭೂಬಾಲನ್ ಅವಧಿಯಲ್ಲಿ ದಂಡ, ಆಯುಕ್ತರ ಸೂಚನೆ ಮೇರೆಗೆ ನೋಟಿಸ್ :
ಕಾಮಗಾರಿ ಕೈಗೊಂಡು ಸಮರ್ಪಕವಾಗಿ ರೆಸ್ಟೋರೇಷನ್ ಮಾಡದ ಕಾರಣಕ್ಕೆ ಗುತ್ತಿಗೆದಾರ ಕಂಪನಿಗಳಿಗೆ ಸ್ಮಾರ್ಟ್‍ಸಿಟಿ ಎಂಡಿಯಾಗಿದ್ದ ಭೂಬಾಲನ್ ಅವರ ಅವಧಿಯಲ್ಲಿ 1 ಕೋಟಿ 63 ಲಕ್ಷದಷ್ಟು ದಂಡ ವಿಧಿಸಲಾಗಿತ್ತು. ಜೂನ್ 24ರಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ವಾರ್ಡ್‍ನಂಬರ್ 20ರ ಎನ್‍ಆರ್ ಕಾಲೋನಿಗೆ ಭೇಟಿ ಕೊಟ್ಟ ವೇಳೆಯಲ್ಲಿ ಸರಿಯಾಗೆ ರಸ್ತೆ ರೆಷ್ಟೋರೇಷನ್ ಮಾಡದಿರುವುದನ್ನು ಗಮನಿಸಿ ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರಿಗೆ ನೋಟಿಸ್ ನೀಡಿದ್ದರು. ಆದರೆ ಕಾಮಗಾರಿಗಳು ಮಾತ್ರ ಅವೈಜ್ಞಾನಿಕವಾಗಿಯೇ ಮುಂದುವರಿದಿರುವುದು ಸ್ಮಾರ್ಟ್‍ಸಿಟಿಯಾಗಲು ಹೊರಟಿರುವ ತುಮಕೂರು ನಗರಕ್ಕೆ ಕಪ್ಪುಚುಕ್ಕೆ ಎನಿಸಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರ ಪರಾಮರ್ಶೆ ನಡೆಸುವ ಅಗತ್ಯವಿದೆ.
ಯೋಜನೆ ಮುಗಿಸುವ ಮುನ್ನ ತನಿಖೆಯಾಗಲಿ :
ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯವರು ಸಣ್ಣ ಮತ್ತು ಮಧ್ಯಮ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ಅಮೃತ್ ಯೋಜನೆಯಡಿ 204.49 ಕೋಟಿ ಮೊತ್ತದಲ್ಲಿ 850 ಕಿ.ಮೀ ಉದ್ದದ ಪೈಪ್‍ಲೈನ್ ಅಳವಡಿಸಿ ನಿರಂತರ 24 ತಾಸು ನೀರು ಪೂರೈಸುವ ಯೋಜನೆಯನ್ನು ಎಲ್‍ಅಂಡ್‍ಟಿ ಹಾಗೂ ರಮೇಶ್ ಅಂಡ್ ಕೋ ಕಂಪನಿಯವರಿಗೆ ಗುತ್ತಿಗೆ ನೀಡಿದ್ದರು. ಕಾಮಗಾರಿ ಅವಧಿ ಮುಗಿದಿದ್ದರೂ ಕೋವಿಡ್ ಕಾರಣಕ್ಕೆ ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡಲಾಗಿದೆ.. ಈಗಾಗಲೇ ಶೇ.90ರಷ್ಟು ಕಾಮಗಾರಿ ಮುಗಿದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, ಇನ್ನೆರೆಡುವರೆ ತಿಂಗಳಷ್ಟೇ ಬಾಕಿ ಕಾಮಗಾರಿ ಮುಗಿಸಬೇಕಿದೆ. ಕಾಮಗಾರಿ ಮುಗಿಸುವ ಭರದಲ್ಲಿ ಅನೇಕ ಅವಾಂತರಗಳು ಜರುಗುತ್ತಿದ್ದು, ಕಡಿಮೆ ಗುಣಮಟ್ಟದ ಪೈಪ್‍ಗಳ ಅಳವಡಿಕೆ, ರೆಸ್ಟೋರೇಷನ್ ಅಸಮರ್ಪಕವಾಗಿರುವುದು ಕಂಡುಬಂದಿದೆ. ಇದೆಲ್ಲವನ್ನು ತಜ್ಞರಿಂದ ಪರಾಮರ್ಶೆಗೊಳಪಡಿಸಿ ಬಳಿಕವೇ ಅಂತಿಮ ಬಿಲ್ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಎಲ್ಲಾ ವಾರ್ಡ್‍ಗಳಲ್ಲೂ ಬೇಕಾಬಿಟ್ಟಿಯಾಗಿ 24 ತಾಸು ನೀರು ಸರಬರಾಜು ಯೋಜನೆ ಜರುಗುತ್ತಿದ್ದು, ಕಳಪೆ ಗುಣಮಟ್ಟದ ಪೈಪ್‍ಲೈನ್ ಹಾಕುವ ಜೊತೆಗೆ ಕಾಮಗಾರಿ ಪೂರ್ಣಗೊಳಿಸಿ ಯಥಾವತ್ ರಸ್ತೆ ನಿರ್ಮಿಸುವ ನಿಯಮವನ್ನು ಗುತ್ತಿಗೆದಾರರು ಪಾಲಿಸುತ್ತಿಲ್ಲ. ಬೇಕಾದಂತೆ ಮಣ್ಣುಮಚ್ಚಿ ಹೋಗುತ್ತಿದ್ದು, ಕಂಬಿಗಳೆ ಹೊರಗೆ ಕಾಣುತ್ತಿವೆ. 200 ಕೋಟಿ ಮೊತ್ತದ ಯೋಜನೆ ಮಣ್ಣು ಪಾಲಾಗುತ್ತಿದೆ.
-ಕುಮಾರ್ ಪಾಲಿಕೆ ವಿಪಕ್ಷ ನಾಯಕ.
26ನೇ ವಾರ್ಡಿನಲ್ಲಿ ಕಳೆದ ಜನವರಿ 25ರಂದು ಪ್ರಾಯೋಗಿಕವಾಗಿ ಚಾಲನೆ ಕೊಡಲಾಯಿತು. ಆದರೆ ಈವರೆಗೆ ನೀರು ಸಮರ್ಪಕವಾಗಿ ಬರುತ್ತಿಲ್ಲ. ನೀರನ್ನು ಪಂಪ್ ಮಾಡಿದ ಕೂಡಲೇ ನೀರು ಪೈಪ್‍ಲೈನ್‍ಗಳಲ್ಲೇ ಲೀಕ್ ಆಗಿ ರಸ್ತೆಯಲ್ಲೇ ಸೋರಿಕೆಯಾಗಿ ಜಲಾವೃತವಾಗುತ್ತಿದ್ದು, ರೈಸಿಂಗ್ ಮೈನ್ ಪೈಪಲೈನ್‍ಗಳು ಕಿರಿದಾಗಿರುವುದರಿಂದ ನೀರು ರಭಸವಾಗಿ ಪಂಪ್ ಆಗದೆ ಮನೆಗಳಿಗೆ ತಲುಪಲು ಅಸಾಧ್ಯವಾಗಿದೆ.
-ಎಚ್.ಮಲ್ಲಿಕಾರ್ಜುನ್, 26ನೇ ವಾರ್ಡ್ ಸದಸ್ಯರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ