ತುಮಕೂರು :
ಆಡಳಿತಾರೂಢ ಬಿಜೆಪಿ ಸರಕಾರ ತುಮಕೂರು ತಾಲೂಕು ಅನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸುತ್ತಿದ್ದು, ತಾಲೂಕು ವ್ಯಾಪ್ತಿಯ ತುಮಕೂರು ನಗರದಲ್ಲಿ ಬಿಜೆಪಿ ಶಾಸಕ, ಸಂಸದರು ಆಯ್ಕೆಯಾಗಿದ್ದು, ಹಿಂದೆ 2 ಬಾರಿಶಾಸಕರನ್ನು ಆರಿಸಿ ಕಳುಹಿಸಿದ್ದರೂ, ತಾಲೂಕಿಗೆ ಹೇಮಾವತಿ ನೀರು, ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ನಿರ್ಲಕ್ಷ್ಯ, ತಾರತಮ್ಯ ಧೋರಣೆ ಮಾಡಲಾಗುತ್ತಿದೆ. ವಿವಿಧ ಅಭಿವೃದ್ಧಿ ಸಂಬಂಧ 500 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದರೂ ನಯಾಪೈಸೆ ಸರಕಾರದಿಂದ ಬಿಡುಗಡೆ ಮಾಡಿಲ್ಲ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಡಿ.ಸಿ.ಗೌರಿಶಂಕರ್ ಆರೋಪಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಗ್ಗೆರೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರೊಡನೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಬೀಗುವ ಬಿಜೆಪಿ ನಾಯಕರು ಹೆಬ್ಬೂರು, ನಾಗವಲ್ಲಿ ಭಾಗಕ್ಕೆ ಬಂದು ವಾಸ್ತವತೆ ನೋಡಲಿ. ಏತ ನೀರಾವರಿಯಲ್ಲಿ ಹರಿಸಲಾಗುತ್ತಿರುವ ಪೈಪ್‍ಲೈನ್ ಸಹ ಕಿರಿದಾಗಿದ್ದು, ನೀರು ಎತ್ತುವ ಪಂಪ್‍ಸೆಟ್ ಮೋಟಾರುಗಳು ನಿಯಮತವಾಗಿ ಚಾಲುವಾಗುತ್ತಿಲ್ಲ. ವಿದ್ಯುತ್ ಬಿಲ್ ಅನ್ನು ಕಟ್ಟಲು ಈ ಸರಕಾರದ ಬಳಿ ಹಣವಿಲ್ಲ. ಇದರಿಂದ ಹತ್ತಾರು ದಿನಕ್ಕೊಮ್ಮೆ ನೀರು ಈ ಭಾಗಕ್ಕೆ ಹರಿಯುವಂತಾಗಿದ್ದು, ಮದಲೂರು ಕೆರೆಗೆ ಸಿಎಂ ಕೊಟ್ಟ ಮಾತಿನಂತೆ ಹೇಮೆ ನೀರು ಹರಿಸುತ್ತಿರುವಂತೆ ಗ್ರಾಮಾಂತರ ಕುಣಿಗಲ್ ಭಾಗಕ್ಕೆ ಉಪ ಕಾಲುವೆ ಮೂಲಕಹೇಮೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ಚುನಾವಣೆ ಗೆದ್ದ ಮೇಲೆ ಗೊಲ್ಲರ ಬಗ್ಗೆ ಚಕಾರವಿಲ್ಲ: ಶಿರಾ ಉಪಚುನಾವಣೆ ಗೆಲ್ಲುವ ತನಕ ಗೊಲ್ಲ, ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಘೋಷಿಸಿ ಮತಗಿಟ್ಟಿಸಿಕೊಂಡ ನಂತರದಲ್ಲಿ ಗೊಲ್ಲ, ಕಾಡುಗೊಲ್ಲ ಸಮುದಾಯವನ್ನು ಉಪೇಕ್ಷಿಸಿದೆ. ಗೊಲ್ಲರ ಅಭಿವೃದ್ಧಿ ನಿಗಮದ ಬಗೆಗೆನ ಗೊಂದಲವನ್ನು ಹೋಗಲಾಡಿಸಿ ನೂರು ಕೋಟಿ ಅನುದಾನ ಘೋಷಿಸಬೇಕು ಎಂದು ಗೌರಿಶಂಕರ್ ಒತ್ತಾಯಿಸಿದರು.
ಒಕ್ಕಲಿಗ, ತಿಗಳರ ಅಭಿವೃದ್ಧಿ ನಿಗಮ ಸ್ಥಾಪಿಸಿ,: ಮುಖ್ಯಮಂತ್ರಿಗಳು ಎಲ್ಲಾ ಜಾತಿ ಜನಾಂಗಕ್ಕೂ ನಿಗಮ ಕಲ್ಪಿಸುತ್ತಿದ್ದು, ಹಳೇ ನಿಗಮಗಳೇ ಅನುದಾನವಿಲ್ಲದೆ ಹಲ್ಲುಕ್ಕಿತ್ತ ಹಾವಾಗಿವೆ. ಲಿಂಗಾಯಿತರಷ್ಟೇ ಜನಸಂಖ್ಯೆಯಲ್ಲಿ ಬಾಹುಳ್ಯ ಹೊಂದಿರುವ ಒಕ್ಕಲಿಗರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆ ಮುಂದಿಟ್ಟರೂ ಬಿಜೆಪಿ ಸರಕಾರ ಪರಿಗಣಿಸಿಲ್ಲ. ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಕೂಡಲೇ ಘೋಷಿಸಿ ಸಾವಿರ ಕೋಟಿ ಅನುದಾನ ಮೀಸಲಿರಿಸಬೇಕು. ರೈತಾಪಿ ವರ್ಗದ ಒಕ್ಕಲಿಗರಲ್ಲಿ ಬಹಳಷ್ಟು ಮಂದಿ ಬಡವರಿದ್ದಾರೆ. ಅಂತೆಯೇ ಅಗ್ನಿಕುಲ ತಿಗಳರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ನನ್ನ ಒತ್ತಾಯವಾಗಿದೆ ಎಂದರು.
ಸಾಲ ಮನ್ನಾ ರೈತರಿಗಾಗಿ ಮಾಡಿದ್ದು: ಮೈತ್ರಿ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೊಳಿಸಿದ ಕೃಷಿ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ಸಾವಿರಾರು ರೈತರಿಗೆ ಪ್ರಯೋಜನ ದೊರೆತಿದೆ. ಆದರೆ ಚುನಾವಣೆ ಬಂದಾಗ ರೈತರು ಅದನ್ನು ಮರೆಯುತ್ತಿದ್ದಾರೆ. ಜೆಡಿಎಸ್ ರೈತಾಪಿ ವರ್ಗಕ್ಕೆ ಹತ್ತಿರವಾದ ಪಕ್ಷ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಗ್ರಾಮಸ್ವರಾಜ್ ಸಮಾವೇಶದ ಮೂಲಕ ಈಗ ಗ್ರಾಮಮಟ್ಟದಲ್ಲಿ ತಳವೂರಲು ಪ್ರಯುತ್ನಿಸುತ್ತಿದೆ. ರೈತ ವಿರೋಧಿಯಾಗಿ ನಡೆದುಕೊಂಡು ಪಂಚಾಯಿತಿಯಲ್ಲಿ ಬೆಂಬಲಿತರನ್ನು ಗೆಲ್ಲಿಸುವಂತೆ ರೈತರನ್ನು ಮತಕೇಳುತ್ತಿರುವುದು ನಾಟಕೀಯವೆಂದು ಲೇವಡಿ ಮಾಡಿದರು.
