ತುಮಕೂರು :
ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಪೂರಕ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಮೂರು ದಿನಗಳಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದ ಕೆಎಸ್‍ಆರ್‍ಟಿಸಿ ನೌಕರರು ಹೋರಾಟ ಮುಂದುವರೆಸಿದ್ದಾರೆ. ಭಾನುವಾರ ಸಂಜೆ ನೌಕರರ ಮುಖಂಡರ ಒಂದು ಗುಂಪು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅರೊಂದಿಗೆ ಸಂಧಾನ ಸಭೆ ನಡೆಸಿ ಸರ್ಕಾರದ ಭರವಸೆಗಳಿಗೆ ಸಮ್ಮತಿ ಸೂಚಿಸಿತು. ಆದರೆ ಧರಣಿ ನಡೆಸುತ್ತಿರುವ ಮತ್ತೊಂದು ಗುಂಪು ಸರ್ಕಾದ ಭರವಸೆಗಳನ್ನು ತಿರಸ್ಕರಿಸಿ ಧರಣಿ ಮುಂದುವರೆಸಿದೆ. ಹೀಗಾಗಿ, ಸೋಮವಾರವೂ ನೌಕರರ ಹೋರಾಟ ಮುಂದುವರೆಯಲಿದ್ದು, ಬಸ್ ಸಂಚಾರ ಆರಂಭವಾಗುವುದು ಇನ್ನೂ ಅನಿಶ್ಚಿತವಾಗಿದೆ.
ಈ ಮಧ್ಯೆ, ಭಾನುವಾರ ನಗರದಲ್ಲಿ ಸಾರಿಗೆ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗಾಂಧೀಜಿ ಫೋಟೋ ಇಟ್ಟುಕೊಂಡು ದಿಢಿರ್ ಧರಣಿ ಸತ್ಯಾಗ್ರಹ ಆರಂಭಿಸಿದರು. ನೌಕರರೊಂದಿಗೆ ಅವರ ಮಕ್ಕಳು, ಕುಟುಂಬದ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೆಎಸ್‍ಆರ್‍ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಮುಖ ಬೇಡಿಕೆಯೊಂದಿಗೆ ಈ ಹೋರಾಟ ನಡೆದಿದ್ದಿತ್ತು. ಜೊತೆಗೆ ನೌಕರರ ವೇತನ ಪರಿಷ್ಕರಣೆ, ಸಂಸ್ಥೆ ಅಧಿಕಾರಿಗಳ ಕಿರುಕುಳ, ಲಂಚದ ಹಾವಳಿ ವಿರುದ್ಧವೂ ನೌಕರರು ಧ್ವನಿ ಮಾಡಿದ್ದರು.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೆಎಸ್‍ಆರ್‍ಟಿಸಿ ನೌಕರರ ವೇತನ ಪರಿಷ್ಕರಣೆ ಆಗಬೇಕು. ಆದರೆ, ಕಳೆದ ಜನವರಿಯಲ್ಲೇ ಮಾಡಬೇಕಾಗಿದ್ದ ವೇತನ ಪರಿಷ್ಕರಣೆಯನ್ನು ಇನ್ನೂ ಮಾಡಿಲ್ಲ. 6ನೇ ವೇತನ ಆಯೋಗದ ಯಾವ ಸೌಲಭ್ಯಗಳೂ ನಮಗೆ ಸಿಕ್ಕಿಲ್ಲ ಎಂದು ಧರಣಿ ನಿರತ ನೌಕರ ರಾಜಶೇಖರ್ ಹೇಳಿದರು.
ಹೋರಾಟ ನಡೆಸುತ್ತಿರುವ ಹೋರಾಟ ಸಮಿತಿ ಮುಖಂಡರು ನಿರ್ಧಾರ ಪ್ರಕಟಿಸುವವರೆಗೂ ಅನಿರ್ಧಿಷ್ಟಾವಧಿವರೆಗೆ ಹೋರಟ ಮುಂದುವರೆಸುವುದಾಗಿ ಹೇಳಿದರು. ತುಮಕೂರು ಡಿಪೋ 1 ಮತ್ತು 2 ಹಾಗೂ ವಿಭಾಗ ವ್ಯಾಪ್ತಿಯ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ವರ್ಗದ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೆಎಸ್‍ಆರ್‍ಟಿಸಿ ನೌಕರರಿಗೆ ದೊರೆಯುತ್ತಿರುವ ವೇತನದಿಂದ ಇವತ್ತಿನ ಕಾಲದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಆಸ್ಪತ್ರೆ ಖರ್ಚು, ದಿನಬಳಕೆ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಕೆಎಸ್‍ಆರ್‍ಟಿಸಿ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಸೌಲಭ್ಯ ನೀಡಬೇಕು ಎಂದು ತಮ್ಮ ಮಕ್ಕಳೊಂದಿಗೆ ಧರಣಿಯಲ್ಲಿ ಭಾಗವಹಿಸಿದ್ದ ಕಂಡಕ್ಟರ್ ಪತ್ನಿ ನೇತ್ರಾ ಹೇಳಿದರು.
ಸರ್ಕಾರದೊಂದಿಗೆ ನೌಕರ ಮುಖಂಡರು ನಡೆಸಿದ ಸಂಧಾನ ಸಭೆ ವಿಫಲವಾಗಿ ನೌಕರರು ಮುಷ್ಕರವನ್ನು ಸೋಮವಾರಕ್ಕೂ ಮುಂದುವರೆಸುವ ಸಾಧ್ಯತೆಗಳಿವೆ.
ನೌಕರರ ಮುಷ್ಕರದಿಂದ ಬಸ್ ಸೇವೆ ಇಲ್ಲದೆ ಪ್ರಯಾಣಿಕರು ಮೂರು ದಿನಗಳಿಂದ ಪರದಾಡುವಂತಾಗಿದೆ. ಪ್ರಯಾಣಿಕರು ಖಾಸಗಿ ಬಸ್‍ಗಳನ್ನು ಆಶ್ರಯಿಸುವಂತಾಗಿದೆ. ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಖಾಸಗಿ ಬಸ್‍ನವರು ದುಬಾರಿ ಪ್ರಯಾಣ ದರ ಸಂಗ್ರಹಿಸುತ್ತಿದ್ದಾರೆ. ತುಮಕೂರು-ಬೆಂಗಳೂರು ನಡುವೆ ಈ ಮೊದಲು ಪ್ರಯಾಣದರ 70-80 ರೂ. ಇತ್ತು. ಕೆಎಸ್‍ಆರ್‍ಟಿಸಿ ಮುಷ್ಕರದ ಸಂದರ್ಭದಲ್ಲಿ ಖಾಸಗಿ ಬಸ್‍ಗಳವರು ಪ್ರತಿ ಪ್ರಯಾಣಿಕನಿಂದ 150-200 ರೂ. ಸಂಗ್ರಹ ಮಾಡುತ್ತಿದ್ದಾರೆ ಎಮದು ಹೇಳಲಾಗಿದೆ.
ಇದರ ನಡುವೆ, ರೈಲು ಪ್ರಯಾಣವೂ ಸುಲಭವಾಗಿಲ್ಲ. ಕೋವಿಡ್ ಕಾರಣದಿಂದಾಗಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಸೀಟು ಇರುವಷ್ಟು ಮಾತ್ರ ಪ್ರಯಾಣಿಕರು ಪ್ರಯಾಣ ಮಾಡಬೇಕಾಗಿದೆ. ಅಲ್ಲದೆ, ಪ್ರಯಾಣಿಕರು ಮುಂಗಡವಾಗ ಸೀಟು ಕಾಯ್ದಿರಿಸಬೇಕಾಗಿರುವುದರಿಂದ ಹಿಂದಿನಂತೆ ರೈಲು ಪ್ರಯಾಣ ಸುಲಭವಾಗಿಲ್ಲ. ತುಮಕೂರು-ಬೆಂಗಳೂರು ನಡುವೆ ನಿತ್ಯಾ ಸಾವಿರಾರು ಜನ ಉದ್ಯೋಗ, ವ್ಯವಹಾರಗಳಿಗೆ ಹೋಗಿಬರಬೇಕಾಗಿದೆ. ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಮಿತಿಗೊಳಿಸಿರುವುದೂ ಕೂಡಾ ಸಮಸ್ಯೆಯಾಗಿದೆ. ಹೀಗಾಗಿ, ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು. ಈಗ ನೌಕರರ ಮುಷ್ಕರ ಮುಂದುವರೆದಿದ್ದು, ಸಾರಿಗೆ ಸಂಸ್ಥೆ ಬಸ್‍ಗಳು ಇಲ್ಲದೆ ಪ್ರಯಾಣಿಕರು ಫಜೀತಿಪಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ