ತುಮಕೂರು :
ರಾಜ್ಯದಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿಯೂ ಸಹ ವಿದ್ಯಾರ್ಥಿಗಳು ಉತ್ಸಾಹ, ಸಂತೋಷದಿಂದ ಶಾಲೆಗಳತ್ತ ಮುಖ ಮಾಡಿದ್ದಾರೆ. ಕಳೆದ ಎರಡು ವರ್ಷದ ನಂತರ ತರಗತಿಗಳು ಆರಂಭ ವಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದ್ದು, ಶಾಲೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಸಂತಸ, ಸಂಭ್ರಮ ಎದ್ದು ಕಾಣುತ್ತಿತ್ತು. ಶಾಲೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಜಿಲ್ಲೆಯು ತುಮಕೂರು ಹಾಗೂ ಮಧುಗಿರಿ ಎರಡು ಶೈಕ್ಷಣಿಕ ಜಿಲ್ಲೆಗಳನ್ನು ಹೊಂದಿದ್ದು, ಸೋಮವಾರ ನಡೆದ ಭೌತಿಕ ತರಗತಿಗಳ ಹಾಜರಾತಿಯು ಕ್ರಮವಾಗಿ ಶೇ.68.4 ಮತ್ತು ಶೇ.60 ಇದ್ದಿತು.
ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ನಡೆದ ತರಗತಿಗಳು :
ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನೆಯಲ್ಲಿಯೇ ಆನ್‍ಲೈನ್ ಪಾಠ ಕೇಳುತ್ತಿದ್ದರು. ಇದೀಗ ಸೋಂಕಿನ ಪ್ರಮಾಣ ತಗ್ಗಿರುವುದರಿಂದ ಸರ್ಕಾರ 9 ರಿಂದ 12ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಆರಂಭಿಸಿದೆ. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿಯೇ ಆನ್‍ಲೈನ್ ಪಾಠ ಕೇಳುತ್ತಾ ಅರ್ಥೈಸಿಕೊಳ್ಳಲು ಸಾಧ್ಯವಾಗದಿದ್ದರೂ ವಿಧಿ ಇಲ್ಲದೆ ಮನೆಯಲ್ಲೇ ಉಳಿದಿದ್ದ ಮಕ್ಕಳು ಸೋಮವಾರ ಆರಂಭವಾದ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳಿಗೆ ಮಾಸ್ಕ್‍ಧರಿಸಿ, ಸ್ಯಾನಿಟೈಸರ್‍ನೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಾ ಹಾಜರಾದರು.
ತರಗತಿಯ ಒಳಗೂ ಅಂತರ ಕಾಪಾಡಿಕೊಂಡು ಡೆಸ್ಕ್‍ನಲ್ಲಿ ವಿದ್ಯಾರ್ಥಿಗಳು ಕುಳಿತಿದ್ದು, ತರಗತಿ ಮುಗಿಯುವವರೆಗೂ ಮಾಸ್ಕ್ ಧರಿಸಿಕೊಂಡೇ ಪಾಠ ಕೇಳಿದರು. ಪ್ರತಿ ಶಾಲಾ ಕೊಠಡಿಯಲ್ಲಿ 20 ಮತ್ತು ಅದಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳು ಕೂರಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಗುಲಾಬಿ ಹೂ ನೀಡಿ ಸ್ವಾಗತ :
ನಗರದ ಎಂಪ್ರೆಸ್ ಕರ್ನಾಟ ಪಬ್ಲಿಕ್ ಶಾಲೆ, ಸಿದ್ದಗಂಗಾ ಮಹಿಳಾ ಪ.ಪೂ.ಕಾಲೇಜು, ವಿದ್ಯಾನಿಕೇತನ ಪ.ಪೂ.ಕಾಲೇಜು, ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯಾದ್ಯಂತ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿವೆ. ಈ ಎಲ್ಲ ಶಾಲಾ-ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಖುಷಿ-ಖುಷಿಯಿಂದಲೇ ತರಗತಿಗಳತ್ತ ತೆರಳಿದ ದೃಶ್ಯಗಳು ಕಂಡು ಬಂದವು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರೆ, ಇನ್ನು ಕೆಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗೆ ಸ್ಯಾನಿಟೈಸರ್ ಹಾಕಿ ತರಗತಿಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಕಳೆದ ಮೂರ್ನಾಲ್ಕು ದಿನಗಳಿಂದಲೇ ಜಿಲ್ಲೆಯ ಶಾಲಾ-ಕಾಲೇಜುಗಳ ತರಗತಿಗಳ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸಿದ್ದಪಡಿಸಲಾಗಿತ್ತು. ಗ್ರಾ.ಪಂ., ಪಟ್ಟಣ ಪಂಚಾಯ್ತಿಗಳ ನೆರವಿನೊಂದಿಗೆ ಕೊಠಡಿಗಳಲ್ಲಿ ಸ್ಯಾನಿಟೈಸ್ ಮಾಡಲಾಗಿತ್ತು.
ಲಸಿಕೆ ಹಾಕಿಸಿಕೊಂಡವರು ಮಾತ್ರ ಕರ್ತವ್ಯಕ್ಕೆ :
ತುಮಕೂರು ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸಿ.ನಂಜಯ್ಯ ಅವರು ಪ್ರತಿಕ್ರಿಯಿಸಿ ಶಿಕ್ಷಕರು ಹಾಗೂ ಶಾಲೆಗಳ ಬಹುತೇಕ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ. ಲಸಿಕೆ ಹಾಕಿಸಿಕೊಂಡ ಶಿಕ್ಷಕರು ಮತ್ತು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
28856 ವಿದ್ಯಾರ್ಥಿಗಳ ಹಾಜರಿ :
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾರಂಭವಾದ 9 ಹಾಗೂ 10ನೇ ತರಗತಿ ಶಾಲೆಗಳಿಗೆ ಒಟ್ಟು 28856 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ. ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 467 ಪ್ರೌಢಶಾಲೆಗಳಿದ್ದು, 458 ಪ್ರೌಢಶಾಲೆಗಳು ಮಾತ್ರ ಪ್ರಾರಂಭವಾಗಿವೆ. ಪ್ರಾರಂಭವಾದ ಎಲ್ಲಾ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಪ್ರತಿ ಕೋಣೆಯಲ್ಲಿ 15 ರಿಂದ 20 ವಿದ್ಯಾರ್ಥಿಗಳಂತೆ ತಂಡ ರಚಿಸಿ ತರಗತಿಗಳನ್ನು ನಡೆಸಲಾಗಿದೆ. ತರಗತಿಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ನಿಯಮಗಳನ್ನು ಪಾಲನೆ ಮಾಡುವಂತೆ ಕ್ರಮವಹಿಸಲಾಗಿತ್ತು.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 9 ಹಾಗೂ 10ನೇ ತರಗತಿಯ ಒಟ್ಟು 42150 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದು, ಭೌತಿಕವಾಗಿ 28856 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಧುಗಿರಿ ಪೂರ್ವ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲನೇ ದಿನ ಮಕ್ಕಳ ಹಾಜರಾತಿ ಶೇ.60 ರಷ್ಟು ಇದ್ದು, ನಾಳೆ, ನಾಡಿದ್ದು ಶೇ.80 ಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಇಲಾಖೆ ಸೂಚನೆಯ ಅನುಸಾರ ವಿದ್ಯಾರ್ಥಿಗಳು ಕೋವಿಡ್ ನಿಯಮ ಪಾಲನೆ ಮಾಡಿ ತರಗತಿಗಳಿಗೆ ಹಾಜರಾಗಿದ್ದರು. 15-20 ಮಕ್ಕಳ ತಂಡದೊಂದಿಗೆ ಶಾಲೆಗಳನ್ನು ಆರಂಭಿಸಲಾಗಿದೆ. 9-10 ರವರೆಗಿನ ತರಗತಿಗಳಲ್ಲಿ ಮೊದಲನೇ ದಿನ ಶೇ.68.4 ರಷ್ಟು ಹಾಜರಾತಿ ಇತ್ತು.
-ಸಿ.ನಂಜಯ್ಯ, ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ
ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ತರಗತಿಗಳಲ್ಲಿ ಭಗವಹಿಸಿದ್ದರು. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಂಭ್ರಮಿಸಿದರು. ಮೊದಲನೇ ದಿನ ಮಕ್ಕಳ ಹಾಜರಾತಿ ಶೇ.60 ರಷ್ಟು ಇದ್ದು, ನಾಳೆ, ನಾಡಿದ್ದು ಶೇ.80 ಕ್ಕೆ ಹೆಚ್ಚುವ ಸಾಧ್ಯತೆ ಇದೆ.
-ಕೃಷ್ಣಮೂರ್ತಿ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ
ಆನ್‍ಲೈನ್ ತರಗತಿಯಿಂದ ವಿದ್ಯಾರ್ಥಿಗಳಿಗೆ ಏನು ಅರ್ಥವಾಗುತ್ತಿರಲಿಲ್ಲ, ವರ್ಷಗಳ ನಂತರ ಕಾಲೇಜು ಆರಂಭವಾಗಿರುವುದು ಸಂತಸವನ್ನುಂಟು ಮಾಡಿದ್ದು, ವ್ಯಾಸಂಗ ಮಾಡಲು ವೇದಿಕೆ ದೊರಕಿದಂತೆ ಆಗಿದೆ.
– ಗೀತಾ, ಪ್ರಥಮ ಪಿಯುಸಿ ವಿದ್ಯಾರ್ಥಿ, ತುಮಕೂರು
ಕೊರೋನಾದಿಂದ ಆನ್‍ಲೈನ್ ತರಗತಿಗೆ ಹಾಜರಾಗುತ್ತಿದ್ದೆ, ಪಾಠಗಳು ಅರ್ಥವಾಗುತ್ತಿದ್ದವು ಈಗ ಶಾಲೆ ತೆಗೆದಿರುವುದು ಖುಷಿಯಾಗಿದೆ.
– ಮಹಾಲಕ್ಷ್ಮೀ, 10 ನೇ ತರಗತಿ ವಿದ್ಯಾರ್ಥಿ, ಊರುಕೆರೆ
ಮೊದಲದಿನ ಶೇ.68.46 ವಿದ್ಯಾರ್ಥಿಗಳು ಹಾಜರು
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಚಿ.ನಾ.ಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು, ತುರುವೇಕೆರೆಯ ತಾಲ್ಲೂಕುಗಳಲ್ಲಿ ಸೋಮವಾರ ಆರಂಭವಾದ 9-10ನೇ ತರಗತಿಗಳಲ್ಲಿ 42,150 ದಾಖಲಾತಿಗೆ 28,856 ವಿದ್ಯಾರ್ಥಿಗಳು ಹಾಜರಾಗಿದ್ದು, ಒಟ್ಟಾರೆ ಹಾಜರಾತಿ ಶೇ.68.46 ರಷ್ಟಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಜರಾತಿ ತುರುವೇಕೆರೆ ತಾಲ್ಲೂಕಿನಲಿ ಕಂಡು ಬಂದಿದ್ದು, 10ನೇ ತರಗತಿಗೆ ಶೇ.90.77 ಮಂದಿ ವಿದ್ಯಾರ್ಥಿಗಳು ಹಾಜರಾಗಿ ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಸಚಿವರ ಕ್ಷೇತ್ರ ತಿಪಟೂರು ತಾಲ್ಲೂಕು ಎರಡನೇ ಸ್ಥಾನದಲ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ