ತುಮಕೂರು :
ಪಾಲಿಕೆಯಲ್ಲಿ ಮಹಿಳಾ ಸದಸ್ಯರಿಗೆ ಗೌರವವೇ ಸಿಗುತ್ತಿಲ್ಲ. ಒಂದು ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಳ್ಳುವುದು ಕಷ್ಟವಾಗಿದ್ದು, ಪುರುಷ ಸದಸ್ಯರಂತೆ ನಾವು ಸದಸ್ಯರಲ್ಲವೇ ಎಂದು ಉಪಮೇಯರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆಯಾದಿಯಾಗಿ ಮಹಿಳಾ ಸದಸ್ಯೆಯರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಶುಕ್ರವಾರ ಮುಂದುವರಿದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜರುಗಿತು.
ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ನಡಾವಳಿ ವಿಷಯವಾಗಿ ಚರ್ಚೆಮಾಡುವಾಗ ಉಪಮೇಯರ್ ಹೆಸರನ್ನೇ ಕೈ ಬಿಟ್ಟು ತೀರ್ಮಾನ ದಾಖಲಿಸುತ್ತಿದ್ದನ್ನು ಕಂಡು ಹೌಹಾರಿದ ಉಪಮೇಯರ್ ನಾಜೀಮಾ ಬಿ ಅವರು ಹೆಸರಿಗಷ್ಟೇ ನಾವು ಉಪಮೇಯರ್ ಎನಿಸಿಕೊಂಡಿದ್ದೇವೆ. ಮಹಿಳಾ ಉಪಮೇಯರ್ ಎಂದು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಏತನ್ಮಧ್ಯೆಯೇ ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾ ಇಂದ್ರಕುಮಾರ್ ಮಾತನಾಡಿ ಮಾಹಿತಿ ಪಡೆಯುವುದು ಪ್ರತೀ ನಾಗರಿಕರ ಹಕ್ಕು. ಅದರಲ್ಲೂ ಹಣಕಾಸುಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಬಜೆಟ್ ಮಂಡಿಸುವುದಷ್ಟೇ ನನ್ನ ಕೆಲಸವೇ. ಖರ್ಚು ವೆಚ್ಚದ ಲೆಕ್ಕ ಕೇಳಿದರೆ ಲೆಕ್ಕಪತ್ರ ಸಮಿತಿಗೆ ನೀಡುತ್ತೇವೆ ನಿಮಗೆ ಬರುವುದಿಲ್ಲ ಎಂದರೂ.ಒಂದು ತಿಂಗಳಿಂದ ಸತಾಯಿಸಿದ್ದಾರೆ. ಮಹಿಳೆ ಎನ್ನುವ ಕಾರಣಕ್ಕ್ಕೆ ಈ ರೀತಿ ಮಾಡಲಾಗುತ್ತಿದೆಯೇ.ಹಣಕಾಸುಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಹೀಗಾದರೆ ಇತರೆ ಮಹಿಳಾ ಸದಸ್ಯರ ಪಾಡೇನು?, ಇದು ನನ್ನೊಬ್ಬಳಿಗೆ ಮಾಡಿದ ಅಪಮಾನವಲ್ಲ. ಇಡೀ ಮಹಿಳಾ ಸದಸ್ಯರಿಗಾದ ಅವಮಾನ. ಸಂಬಂಧ ಪಟ್ಟ ಲೆಕ್ಕಪತ್ರ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದರು. ಉಪಮೇಯರ್ ,ಮಹಿಳಾ ಸದಸ್ಯರೆಲ್ಲರು ಮೇಜುಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ ತೋರಿದವರಿಗೆ ನೋಟಿಸ್ :
ಆಯುಕ್ತೆ ರೇಣುಕಾ ಅವರು ಪ್ರತಿಕ್ರಿಯಿಸಿ ನೀವು ಮಾಹಿತಿ ಕೇಳಿದ್ದೀರೆಂಬುದು ನನ್ನ ಗಮನಕ್ಕೆ ನಿನ್ನೆಯಷ್ಟೇ ತಿಳಿಯಿತು. ನಾನೊಬ್ಬಳು ಮಹಿಳಾ ಅಧಿಕಾರಿಯಾಗಿ ಮಹಿಳಾ ಸದಸ್ಯರಿಗೆ ಪಾಲಿಕೆಯಲ್ಲಿ ಅಗೌರವವಾಗುವುದಕ್ಕೆ ಆಸ್ಪದಕೊಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್ ನೀಡುವ ಜೊತೆಗೆ ಕೇಳಿರುವ ಮಾಹಿತಿಯನ್ನು ಕೊಡಿಸುವುದಾಗಿ ತಿಳಿಸಿದರು. ಮೇಯರ್ ಬಿ.ಜಿ.ಕೃಷ್ಣಪ್ಪ ಪ್ರತಿಕ್ರಿಯಿಸಿ ಸದಸ್ಯರಲ್ಲಿ ಮಹಿಳೆ, ಪುರುಷರೆಂಬ ಯಾವುದೇ ಭೇದವಿಲ್ಲ. ಇಬ್ಬರನ್ನು ಸಮಾನವಾಗಿ ಕಾಣಲಾಗುತ್ತದೆ. ಅಗತ್ಯ ಮಾಹಿತಿ ಕೊಡಿಸುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು. ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆಯ ಮಾಹಿತಿ ಸೋರಿಕೆ ಸಂಬಂಧವೂ ವಿಸ್ತøತ ಚರ್ಚೆ ನಡೆದು, ಲೀಕ್ ಮಾಡಿದವರನ್ನು ವಿಚಾರಣೆಗೊಳಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸ್ಕೌಟ್ಸ್- ಗೈಡ್ಸ್, ಟೌನ್‍ಕ್ಲಬ್ ಜಾಗದ ಸರ್ವೆಗೆ ತೀರ್ಮಾನ :
ತುಮಕೂರು ಮಹಾನಗರಪಾಲಿಕೆ ಪ್ರಾಂಗಣಕ್ಕೆ ಹೊಂದಿಕೊಂಡಂತಿರುವ ಟೌನ್ ಕ್ಲಬ್ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಚೇರಿ ಜಾಗ ಪಾಲಿಕೆಗೆ ಸೇರಬೇಕಿದ್ದು, ಸ್ವತ್ತು ನಮ್ಮದಾಗಿದ್ದರೆ ಅದನ್ನು ಪಾಲಿಕೆ ಸುಪರ್ದಿಗೆ ಪಡೆಯಬೇಕು ಎಂದು ವಿಪಕ್ಷ ನಾಯಕ ಕುಮಾರ್‍ಗೌಡ, ಸದಸ್ಯರಾದ ಸಿ.ಎನ್.ರಮೇಶ್ ಲಕ್ಷ್ಮೀನರಸಿಂಹರಾಜು, ಟಿ.ಎಂ.ಮಹೇಶ್ ಇತರರು ಆಗ್ರಹಿಸಿದರು. ಡಿಸಿ ಅವರನ್ನು ಕ್ಲಬ್ ಅಧ್ಯಕ್ಷರಾಗಿಸಿ ಜಾಗದ ತಂಟೆಗೆ ಯಾರು ಬಾರದಂತೆ ತಂತ್ರ ಮಾಡಲಾಗುತ್ತಿದೆ ಎಂದರು. ಕಡೆಗೆ ಸರ್ವೆ ಮಾಡಿಸಿ ಸುಪರ್ದಿಗೆ ಪಡೆಯಲು ಮೇಯರ್ ಹಾಗೂ ಆಯುಕ್ತರು ಸಹಮತ ವ್ಯಕ್ತಪಡಿಸಿದರು.ಅಣ್ಣೇನಹಳ್ಳಿ, ಅಜ್ಜಗೊಂಡನಹಳ್ಳಿ ಘಟಕಕ್ಕೆ ಹಂದಿ ಸಾಕಾಣಿಕೆದಾರರನ್ನು ಸ್ಥಳಾಂತರಿಸಲು ಶೀಘ್ರ ಕ್ರಮ ವಹಿಸಬೇಕೆಂದು ಈ ಬಾರಿಯ ಸಭೆಯಲ್ಲೂ ಸದಸ್ಯರು ಆಗ್ರಹಿಸಿದರು. ಮಟನ್ ಶಾಪ್‍ಗಳು ಹೊರಗಡೆ ಮಾಂಸ ನೇತುಹಾಕದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸದಸ್ಯ ಶಿವರಾಂ ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಧರಣೇಂದ್ರಕುಮಾರ್, ಮುಜಿದಾಖಾನಂ ಹಾಗೂ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.
ಕಸ ವಿಲೇವಾರಿಯಲ್ಲಿ ಭಾರೀ ಗೋಲ್‍ಮಾಲ್ :
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನಡಾವಳಿ ಚರ್ಚೆಯ ವೇಳೆ 16ನೇ ವಾರ್ಡ್ ಸದಸ್ಯ ಇನಾಯತ್ ಮಾತನಾಡಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ಘಟಕಕ್ಕೆ ಕಸ ಸಾಗಿಸುವಲ್ಲಿ ಬಾರೀ ಗೋಲ್‍ಮಾಲ್ ನಡೆದಿದೆ. ಕೋಟಿಗಟ್ಟಲೇ ಪಾಲಿಕೆಗೆ ನಷ್ಟವಾಗುತ್ತಿದೆ. ಹಾಲಿ ಗುತ್ತಿಗೆದಾರರ ಅವಧಿ ಸೆ.30ಕ್ಕೆಕೊನೆಗೊಳ್ಳಲಿದ್ದು, ಒಂದು ದಿನವೂ ಹೆಚ್ಚುವರಿಯಾಗಿ ಮುಂದುವರಿಸಬಾರದು. ಅಷ್ಟರೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಅ.1ರಿಂದ ಹೊಸಬರಿಗೆ ಕಾರ್ಯಾದೇಶ ನೀಡಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಸಿ.ಎನ್.ರಮೇಶ್, ಎಚ್.ಮಲ್ಲಿಕಾರ್ಜುನ್, ವಿಪಕ್ಷ ನಾಯಕ ಕುಮಾರ್, ಷಫಿ, ಶ್ರೀನಿವಾಸ್ ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು. ಸೆ.30ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಹೋದರೆ ಪೌರಕಾರ್ಮಿಕರು, ಕಸ ಎತ್ತುವವರು ಕೆಲಸ ನಿಲ್ಲಿಸಿದರೆ ಸ್ವಚ್ಛತೆ ಬಗ್ಗೆ ಉತ್ತರ ಕೊಡುವವರ್ಯಾರು? ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ಅವರು ಪ್ರಶ್ನಿಸಿ, ಹೊಸ ಟೆಂಡರ್ ಆಗುವವರೆಗೆ ಕಸ ವಿಲೇವಾರಿ ನಿಲ್ಲಬಾರದು ಎಂದರು. ಆಯುಕ್ತೆ ರೇಣುಕಾ ಅವರು ಪ್ರತಿಕ್ರಿಯಿಸಿ ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಕ್ಟೋಬರ್ ಮೊದಲ ವಾರದೊಳಗೆ ಮುಕ್ತಾಯವಾಗಲಿದೆ ಎಂದರು. ಅಕ್ರಮ ಕಟ್ಟಡಗಳ ತೆರವಿನ ಟಾಸ್ಕ್‍ಫೋರ್ಸ್ ರಚನೆ, ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ ಅವ್ಯವಸ್ಥೆ ಅಕ್ರಮಗಳ ಬಗ್ಗೆಯೂ ಸಭೆಯಲ್ಲಿ ವಿಸ್ತøತಚರ್ಚೆ ನಡೆಯಿತು. ರಾತ್ರಿಯವರೆಗೂ ಸಭೆ ಮುಂದುವರಿದಿತ್ತು.
ಮೇಯರ್ -ಸದಸ್ಯರ ಜಟಾಪಟಿಗೆ ತೆರೆ :
ಸಭಾ ನೋಟಿಸ್ ನೀಡಿಕೆ ವಿಷಯವಾಗಿ ಸದಸ್ಯರಾದ ಮಂಜುನಾಥ್, ಮನು ಅವರುಗಳು ಗುರುವಾರದ ಸಭೆಯಲ್ಲಿ ಎತ್ತಿದ ಆಕ್ಷೇಪಕ್ಕೆ ಸಂಬಂಧಿಸಿದಂತೆ ಶುಕ್ರವಾರದ ಮುಂದುವರಿದ ಸಭೆಯಲ್ಲೂ ಮೇಯರ್ ಮತ್ತು ಸದಸ್ಯ ಮಂಜುನಾಥ್ ನಡುವಿನ ಜಟಾಪಟಿಗೆ ಕಾರಣವಾಗಿ ಗದ್ದಲ ಏರ್ಪಟ್ಟಿತು. ಸಭೆ ನಡೆಸಲಾಗದ ಪರಿಸ್ಥಿತಿಯಲ್ಲಿ ಬಿಜೆಪಿ ಸದಸ್ಯ ಸಿ.ಎನ್.ರಮೇಶ್ ಅವರು ಮಧ್ಯಪ್ರವೇಶಿಸಿ ನಾವೆಲ್ಲರೂ ಒಂದೇ ಮನೆಯ ಸದಸ್ಯರು, ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪ ಬರುತ್ತದೆ. ನಾವೆಲ್ಲ ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ. ಮೇಯರ್ ಅವರು ಇಡೀ ನಗರದ ಪ್ರಥಮ ಪ್ರಜೆ. ಮೇಲು-ಕೀಳೆಂಬ ಭಾವನೆ ಯಾವ ಸದಸ್ಯರೂ ಹೊಂದಿಲ್ಲ. ಮೇಯರ್ ಅವರ ಮನಸ್ಸಿಗೆ ನೋವಾಗಿದ್ದರೆ ಮನಸ್ಸಿನಿಂದ ಕಿತ್ತುಹಾಕಲಿ. ಘಟನೆಗೆ ಸಂಬಂಧಿಸಿದಂತೆ ಯಾರೂ ಕ್ಷಮೆ ಕೇಳುವ ಅಗತ್ಯವಿಲ್ಲ, ಸದಸ್ಯರು ಸಭೆ ನಡೆಸಲು ಸಹಕರಿಸಬೇಕೆಂದು ಹೇಳಿ ಚರ್ಚೆಗೆ ತೆರೆ ಎಳೆದರು. ಎಲ್ಲಾ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.
ಪೌರಕಾರ್ಮಿಕರಿಗೆ ಹೊಟ್ಟೆ ತುಂಬಾ ಊಟ ಕೊಡಿ :
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಮಾತನಾಡಿ ಪೌರಕಾರ್ಮಿಕರಿಗೆ ಈಗ ನೀಡುತ್ತಿರುವ ಉಪಾಹಾರ ಸಾಲದಾಗಿದೆ. ಸರಬರಾಜು ದಾರರ ಕಡಿಮೆ ದರ ಕೋಟ್ ಮಾಡಿರುವ ಕಡಿಮೆ ಪ್ರಮಾಣದ ಆಹಾರ ನೀಡಲಾಗುತ್ತಿದೆ. ಈ ದರ ಹೆಚ್ಚಿಸಿ ಹೊಟ್ಟೆ ತುಂಬಾ ಊಟ ಕೊಡಲು ಕ್ರಮವಹಿಸಿ. ಟ್ರ್ಯಾಕ್ಟರ್, ಟಿಪ್ಪರ್, ಕಸ ಸಂಗ್ರಹಣ ಆಟೋ ಚಾಲಕರಿಗೂ ಉಪಾಹಾರ ಕೊಡಿ ಎಂದರು. ಆಯುಕ್ತೆ ರೇಣುಕಾ ಅವರು ಪ್ರತಿಕ್ರಿಯಿಸಿ ಮೊಟ್ಟೆ ಸಹಿತಿ ಉಪಾಹಾರ ಕೊಡುವ ಯೋಜನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ