ಮಧುಗಿರಿ :
ಸಿದ್ದಾಪುರ ಕೆರೆಗೆ ವರ್ಷಕ್ಕೆ ನಾಲ್ಕು ಬಾರಿ ಹೇಮಾವತಿ ನಾಲೆಯಿಂದ ಪೈಪ್‍ಲೈನ್ ಮೂಲಕ ಕೆರೆಗೆ ನೀರು ತುಂಬಿಸಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಮುಖ್ಯ ಪೈಪ್‍ಲೈನ್ ಒಡೆದು ಹೋಗಿ, ನೀರು ಮೋರಿ ಪಾಲಾಗುತ್ತಿದ್ದರೂ ಪುರಸಭೆಯವರು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ್ಲವೆಂಬಂತೆ ಜಾಣ ಮೌನ ವಹಿಸಿದ್ದಾರೆ.
ಪಟ್ಟಣದ ಶಿರಾ ರಸ್ತೆಯ ಸಮೀಪವಿರುವ ಸಿದ್ದಾಪುರದ ಕೆರೆಗೆ ಕಳೆದ ಒಂದು ವಾರದಿಂದ ಹೇಮಾವತಿ ನದಿಯ ನೀರನ್ನು ಬಳ್ಳಾಪುರದ ಪಂಪ್ ಹೌಸ್ ಮೂಲಕ ಪೈಪ್‍ಲೈನ್ ಮಾರ್ಗವಾಗಿ ಕೆರೆಗೆ ಹೇಮಾವತಿ ನೀರು ತುಂಬಿಸಲಾಗುತ್ತಿದೆ. ಈ ಹಿಂದೆ ಕೆರೆಗೆ ನೀರು ಹರಿಸುವ ಬಗ್ಗೆ ರಾಜಕೀಯ ಜಟಾಪಟಿ ನಡೆದು ಸಾಕಷ್ಟು ಬಾರಿ ವಿಷಯ ಚರ್ಚೆಗೆ ಗ್ರಾಸವಾಗಿತ್ತು.
ಯಾವುದೇ ಮೂಲದಿಂದಾದರು ಸರಿ ನೀರು ತುಂಬಿದರೆ ಸಾಕೆಂದು ಜನರು ನಿಟ್ಟುಸಿರು ಬಿಡುತ್ತಿದ್ದ ಸನ್ನಿವೇಶಗಳು ಈ ಹಿಂದೆ ಎದುರಾಗಿದ್ದವು. ಆದರೆ ಪುರಸಭೆ ಆಡಳಿತದ ದಿವ್ಯ ನಿರ್ಲಕ್ಷ್ಯದಿಂದಾಗಿ ಉಪವಿಭಾಗಾಧಿಕಾರಿಗಳ ಮನೆ ಮುಂಭಾಗ ಓವರ್ ಹೆಡ್‍ಟ್ಯಾಂಕ್‍ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‍ಲೈನ್ ಹೊಡೆದು ಹೋಗಿದ್ದು, ಶುದ್ಧೀಕರಿಸಿದ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ.
ಈ ನೀರು ನೇರವಾಗಿ ಚರಂಡಿ ಸೇರುತ್ತಿರುವುದರಿಂದ ಚರಂಡಿಯಲ್ಲಿ ಗಿಡಗೆಂಟೆಗಳು ಬೆಳೆದು ನಿಂತಿದ್ದು, ನೀರು ಪೋಲಾಗುತ್ತಿರುವುದು ಅಷ್ಟಾಗಿ ಯಾರಿಗೂ ಕಂಡುಬರುತ್ತಿಲ್ಲ. ಪ್ರತಿನಿತ್ಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ನ್ಯಾಯಾಧೀಶರು, ಶಾಸಕರು ಸಹ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಗೋಚರವಾಗಿಲ್ಲ. ಇದರ ರಿಪೇರಿಗೆ ಹುಬ್ಬಳ್ಳಿ ಮತ್ತು ಶಿವಮೊಗ್ಗದಿಂದ ಮೆಕ್ಯಾನಿಕ್‍ಗಳು ಬರಬೇಕಾಗಿದೆ ಎನ್ನುತ್ತಾರೆ. ಪೈಪ್‍ಗಳನ್ನು ಸಹ ಶಿವಮೊಗ್ಗದಿಂದ ಖರೀದಿ ಮಾಡಿ ತರಬೇಕಾಗಿದೆ. ವೆಲ್ಡ್ ಮಾಡುವ ನುರಿತ ಕೆಲಸಗಾರರನ್ನು ಕರೆಸ ಬೇಕಾಗಿದೆ. ತಮಿಳುನಾಡಿನಿಂದ ರಿಪೇರಿಯ ವಸ್ತುಗಳನ್ನು ಖರೀದಿಸಬೇಕಾಗಿದೆ. ಇದಕ್ಕೆ ಒಂದು ಲಕ್ಷ ರೂ. ವರೆವಿಗೂ ಹಣ ಖರ್ಚಾಗಲಿದೆ. ಯಾರೇ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ನಾವೇನು ಮಾಡೋಕೆ ಆಗುತ್ತೆ ಎಂದು ಅಧಿಕಾರಿಗಳು ಕೈ ಚೆಲ್ಲುತ್ತಿದ್ದಾರೆ.
ಹೇಮಾವತಿ ನೀರು ಹರಿಸುವುದಕ್ಕೆ ಶಾಸಕ ಎಂ.ವಿ.ವೀರಭದ್ರಯ್ಯನವರು ಪಟ್ಟಿರುವ ಶ್ರಮ ಮೋರಿ ಪಾಲಾಗುತ್ತಿದೆಯೆಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
