ತುಮಕೂರು :
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದವರೆಲ್ಲರನ್ನು ಉತ್ತೀರ್ಣಗೊಳಿಸಿ ವ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ಕಾಲೇಜುಗಳಲ್ಲಿ ಹೌಸ್‍ಫುಲ್ ಎಂಬಂತೆ ದಾಖಲಾತಿ ನಡೆಯುತ್ತಿದೆ. ಈ ರೀತಿ ಅನಿರ್ಬಂಧಿತವಾಗಿ ಪ್ರವೇಶ ಹೆಚ್ಚಳವಾಗುತ್ತಿರುವುದು, ಕಾಲೇಜುಗಳಲ್ಲಿ ಕೋವಿಡ್ (ಎಸ್‍ಓಪಿ) ನಿಯಮಾವಳಿ ಪಾಲಿಸಲು ಸಾಧ್ಯವೇ ಎಂಬ ಸವಾಲನ್ನು ಮುಂದಿಟ್ಟಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿಶೇಷವಾಗಿ ಪಿಯುಸಿಯ ಪ್ರತಿ ಸಂಯೋಜನೆಗೂ (ಕಲಾ, ವಿಜ್ಞಾನ, ವಾಣಿಜ್ಯ ನಿಖಾಯ) ಶೇ.20ರಷ್ಟು ಹೆಚ್ಚುವರಿ ಪ್ರವೇಶಾತಿಗೆ ಅನುದಾನಿತ, ಖಾಸಗಿ ಕಾಲೇಜುಗಳಿಗೆ ಸರಕಾgರ ಅನುಮತಿ ನೀಡಿದ್ದು,. ಪ್ರತೀ ಸಂಯೋಜನೆಗೆ 80 ಇದ್ದ ಪ್ರವೇಶಮಿತಿಯನ್ನು 100ರ ಸಂಖ್ಯೆಗೂ ಹೆಚ್ಚಳ ಮಾಡಿ ಆ.31ರಂದು ಆದೇಶಿಸಿದೆ. ಇದರೊಂದಿಗೆ ಸರಕಾರಿ ಕಾಲೇಜುಗಳಿಗೆ ಅನಿರ್ಬಂಧಿತ ಪ್ರವೇಶ ಅವಕಾಶ ಮುಂದುವರಿಸಿರುವುದೆ. ಇದರಿಂದ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಮೆಟ್ಟಿಲು ಹತ್ತುವ ಅವಕಾಶ ದೊರೆಯುತ್ತಿರುವುದೇನೋ ಸರಿ. ಆದರೆ ¸ ಕೋವಿಡ್ ಸಂದರ್ಭದಲ್ಲಿ ದೈಹಿಕ ಅಂತರ ಕಾಪಾಡಿ ಗುಣಾತ್ಮಕ ಬೋಧನೆ ಸಾಧ್ಯವೇ? ಪೂರಕ ಸೌಕರ್ಯಗಳು ಕಲ್ಪಿಸಬೇಕಲ್ಲವೇ ಎಂಬ ಪ್ರಶ್ನೆಗಳು ಏಳುವಂತಾಗಿದೆ.
210 ಖಾಲಿ ಹುದ್ದೆ:
ಜಿಲ್ಲೆಯಾದ್ಯಂತ 74 ಸರಕಾರಿ, 85 ಅನುದಾನಿತ, 88 ಅನುದಾನರಹಿತ(ಖಾಸಗಿ), 03 ಮೊರಾರ್ಜಿ ದೇಸಾಯಿ ವಸತಿ ಕಾಲೇಜುಸೇರಿ 250 ಪ.ಪೂ ಕಾಲೇಜುಗಳಿದ್ದು, ಸರಕಾರಿ, ಅನುದಾನಿತ ಕಾಲೇಜುಗಳಲ್ಲಿ ಮೂಲಸೌಕರ್ಯ, ಅಧ್ಯಾಪಕರ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಜಿಲ್ಲೆಯ ಸರಕಾರಿ ಪ.ಪೂ ಕಾಲೇಜುಗಳಿಗೆ ಮಂಜೂರಾದ 772 ಬೋಧಕ-ಬೋಧಕೇತರ ಹುದ್ದೆಗಳಲ್ಲಿ 210 ಹುದ್ದೆಗಳು ಖಾಲಿ ಇದ್ದು, ಹೊಸದಾಗಿ ಮಂಜೂರಾದ 92 ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. ಅತಿಥಿ ಉಪನ್ಯಾಸಕರ ಮೂಲಕ ಈ ಕೊರತೆಯನ್ನು ನೀಗಬೇಕಾದ ಹೊಣೆ ಪ.ಪೂ ಶಿಕ್ಷಣ ಇಲಾಖೆ ಮೇಲಿದೆ.
ಇನ್ನೂ 74 ಸರಕಾರಿ ಪ.ಪೂ ಕಾಲೇಜುಗಳಲ್ಲಿ ಶೇ.60ಕ್ಕೂ ಅಧಿಕ ಕಾಲೇಜುಗಳ ಹಳೆ ಕಟ್ಟಡ, ಕೊಠಡಿ, ಶೌಚಾಲಯಗಳ ಕೊರತೆ ಎದುರಿಸುತ್ತಿದ್ದು, 2000 ವೇತನ ನೀಡಿ ನೇಮಕ ಮಾಡಿಕೊಳ್ಳುತ್ತಿದ್ದ ಅನಿಪುಣ ಕೆಲಸಗಾರರನ್ನು (ಡಿಗ್ರೂಪ್) ಕಳೆದ 3 ವರ್ಷದಿಂದ ಸರಕಾರ ಕೈ ಬಿಟ್ಟಿರುವುದು ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಸ್ವಚ್ಛತೆಯ ಸಮಸ್ಯೆಯನ್ನು ಸೃಷ್ಟಿಸಿದೆ.
100ಮಂದಿಯನ್ನು ಒಂದೇ ಕೊಠಡಿಯಲ್ಲಿ ಕೂರಿಸುವುದಾದರು ಹೇಗೆ?:
ಸರಕಾರಿ ಕಾಲೇಜುಗಳಲ್ಲಿ ಅನಿರ್ಬಂಧಿತ ಪ್ರವೇಶವಕಾಶ, ಖಾಸಗಿ, ಅನುದಾನಿತ ಕಾಲೇಜುಗಳಲ್ಲಿ 80 ರಿಂದ 100 ಸಂಖ್ಯೆಗೆ ಪ್ರವೇಶ ಮಿತಿ ಹೆಚ್ಚಳ ಮಾಡಿರುವುದರಿಂದ ಕೋವಿಡ್ ಸಂದರ್ಭದಲ್ಲಿ ಒಂದು ತರಗತಿಯಲ್ಲಿ ಗರಿಷ್ಠ 100 ಸಂಖ್ಯೆಯ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲು ಸಾಧ್ಯವೇ? ಇದು ಎಸ್‍ಓಪಿ ನಿಯಮವಾಳಿಗೆ ವಿರುದ್ಧವಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಪ್ರಜ್ಞಾವಂತರು ಕೇಳುತ್ತಿದ್ದು, ಮೂಲಸೌಕರ್ಯ ಕೊರತೆಯಿರುವ ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಮಿತಿ ಏರುವುದು ಅವಶ್ಯಕ ಎಂಬ ಅಭಿಪ್ರಾಯಗಳನ್ನು ಶಿಕ್ಷಣ ಕ್ಷೇತ್ರದ ಪ್ರಮುಖರೇ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರನ್ನೂ ಪಾಸು ಮಾಡಿದ್ದೇವೆಂಬ ಕಾರಣಕ್ಕೆ ಎಲ್ಲರಿಗೂ ಪ್ರವೇಶ ಎನ್ನುವ ನೀತಿ ಸರಿಯಲ್ಲ. ಸೌಕರ್ಯವಿಲ್ಲದ ಕಾಲೇಜುಗಳಿಗೆ ಪ್ರವೇಶ ಪಡೆದು ನೆಲದ ಮೇಲೆ ಕುಳಿತು ಪಾಠ ಕೇಳಬೇಕೇ? ಕೋವಿಡ್ 3ನೇ ಅಲೆ ಮಕ್ಕಳನ್ನೇ ಕಾಡುತ್ತಿದೆ ಎಂಬ ತಜ್ಞರ ವರದಿಯನ್ನು ಸರಕಾರ ಮರೆತಂತಿದೆ ಎಂಬ ಅಸಮಾಧಾನಗಳು ವ್ಯಕ್ತವಾಗಿವೆ.
35, 634 ಮಂದಿ ಕಾಲೇಜು ಪ್ರವೇಶಕ್ಕೆ ಅರ್ಹರು:
ಎಸ್ಸೆಸೆಲ್ಸಿ ಫಲಿತಾಂಶ ಆ.9ರಂದು ಪ್ರಕಟಗೊಂಡಿದ್ದು, 35,634 ಮಂದಿ ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತೀರ್ಣರಾಗಿದ್ದರು. ಇವರಲ್ಲಿ ಶೇ.10-20ರಷ್ಟು ಡಿಪ್ಲೊಮೊ, ಐಟಿಐ, ಜಿಟಿಟಿಸಿಯಂತಹ ವೃತ್ತಿ ಆಧಾರಿತ ತರಬೇತಿ ಕೋರ್ಸ್‍ಗೆ ಪ್ರವೇಶ ಪಡೆಯುವವರಾದರೆ, ಉಳಿದವರು ಪಿಯು ಕಾಲೇಜುಗಳಿಗೆ ಪ್ರವೇಶಾತಿ ಬಯಸುವವರು, ಪ್ರವೇಶ ಪಡೆಯಲು ಅರ್ಹರಾಗಿರುವವರಾಗಿದ್ದಾರೆ/ ಕಳೆದ ವರ್ಷ 2020-21ನೇ ಸಾಲಿನಲ್ಲಿ 26,323 ಮಂದಿಗೆ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದರು. ಈ ಬಾರಿ ಸೆ.11ರವರೆಗಿದ್ದ ಪ್ರಥಮ ಪಿಯುಸಿ ಪ್ರವೇಶ ಅವಧಿಯನ್ನು ಸೆ.21ರವರೆಗೆ ವಿಸ್ತರಣೆ ಮಾಡಿದ್ದು, ಪ್ರವೇಶಾತಿ ಮತ್ತಷ್ಟು ಸಾವಿರ ಹೆಚ್ಚಳವಾಗುವುದು ನಿಶ್ಚಿತವೆನಿಸಿದೆ.
ಪ್ರಥಮ ಪಿಯುಸಿ ಪ್ರವೇಶಾತಿಯಲ್ಲಿ ಶೇ.20ರಷ್ಟು ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದ್ದು, ಪ್ರವೇಶಮಿತಿಯನ್ನು 80 ರಿಂದ 100ಕ್ಕೆ ಅನುದಾನಿತ, ಅನುದಾನರಹಿತ ಕಾಲೇಜುಗಳಿಗೆ ಹೆಚ್ಚಳ ಮಾಡಲಾಗಿದೆ. ಉತ್ತೀರ್ಣರಾದವರೆಲ್ಲರಿಗೂ ಕಾಲೇಜು ಪ್ರವೇಶ ಅವಕಾಶಸಿಗಬೇಕೆಂಬುದು ಸರಕಾರದ ಉದ್ದೇಶ. ಸರಕಾರಿ ಕಾಲೇಜುಗಳಲ್ಲಿ ಕೊರತೆಯಿರುವ ಉಪನ್ಯಾಸಕರನ್ನು ತುಂಬಲು ಅತಿಥಿ ಉಪನ್ಯಾಸಕರ ನೇಮಕಕ್ಕೂ ಇಲಾಖೆ ಕ್ರಮ ವಹಿಸುತ್ತಿದೆ.
-ಗಂಗಾಧರ್, ಉಪನಿರ್ದೇಶಕರು, ಪ.ಪೂ ಶಿಕ್ಷಣ ಇಲಾಖೆ.
ಬಹುತೇಕ ಸರಕಾರಿ ಕಾಲೇಜುಗಳು ಮೂಲಭೂತ ಸೌಕರ್ಯದ ಕೊರತೆ ಎದುರಿಸುತ್ತಿವೆ. 100 ಮಂದಿ ಪ್ರವೇಶ ಮಾಡಿಕೊಳ್ಳುವೆಡೆ 300 ಮಂದಿಗೆ ಅವಕಾಶ ಕಲ್ಪಿಸುವುದು ಎಷ್ಟರ ಮಟ್ಟಿಗೆ ವೈಜ್ಞಾನಿಕ. ಕೋವಿಸ್ ಸಂದರ್ಭದಲ್ಲಿ ಎಸ್‍ಓಪಿ ನಿಯಮ ಪಾಲನೆ ಸಾಧ್ಯವೇ? ಎಲ್ಲರನ್ನು ಪಾಸು ಮಾಡಿದ್ದೇವೆನ್ನುವ ಕಾರಣಕ್ಕೆ ಎಲ್ಲರಿಗೂ ಪ್ರವೇಶ ಎನ್ನುವ ನೀತಿ ಸರಿಯಲ್ಲ. ಸರಕಾರಿ, ಅನುದಾನಿತ, ಖಾಸಗಿ ಎಲ್ಲದಕ್ಕೂ ಪ್ರವೇಶ ಮಿತಿ ಯಿರಬೇಕು. ಶಿಕ್ಷಣಕ್ಷೇತ್ರವನ್ನು ಸರಕಾರವೊಂದೇ ಬೆಳೆಸಲು ಸಾಧ್ಯವಿಲ್ಲ.
-ಡಾ.ಹಾಲನೂರು ಎಸ್.ಲೇಪಾಕ್ಷ, ಅಧ್ಯಕ್ಷರು, ರೂಪ್ಸಾ ಕರ್ನಾಟಕ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೆಲ್ಲರು ಉತ್ತೀರ್ಣರಾಗಿರುವುದು ಕಾಲೇಜುಗಳಿಗೆ ಪ್ರವೇಶಾತಿ ಪಡೆಯುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಸರಕಾರ ಶೇ.20ರಷ್ಟು ಪ್ರವೇಶಮಿತಿಯನ್ನು ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಕೋವಿಡ್ ಎಸ್‍ಓಪಿ ನಿಯಮ ಪಾಲನೆ ಮಾಡಬೇಕಿರುವುದರಿಂದ ಹೆಚ್ಚುವರಿ ಬ್ಯಾಚ್‍ಗಳನ್ನು ತೆರೆಯಲು ತ್ವರಿತ ಅನುಮೋದನೆ ಕೊಡಬೇಕು. ಇಲ್ಲವಾದಲ್ಲಿ ಪ್ರವೇಶ ಮಾಡಿಸಿಕೊಂಡು ಗುಣಾತ್ಮಕ ಶಿಕ್ಷಣ ಕೊಡಲು ತೊಂದರೆಯಾಗಲಿದೆ.
-ಎನ್.ಪ್ರದೀಪ್‍ಕುಮಾರ್, ಕಾರ್ಯದರ್ಶಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ