ತುಮಕೂರು :
ಈ ಬಾರಿ ಮುಂಗಾರು ಆಗಮನ ಸಂತಸದಾಯಕವಾಗಿಯೆ ಇತ್ತು. ಇತ್ತೀಚಿನವರೆಗೂ ಮಳೆಗಾಲ ಕೈ ಕೊಡದೆ ರೈತರು ಒಂದಷ್ಟು ಕನಸು ಕಂಡಿದ್ದರು. ಆದರೆ ಇದೀಗ ಮಳೆ ಕೈ ಕೊಟ್ಟಿರುವುದರಿಂದ ಕೃಷಿಕರು ಮತ್ತೆ ಸಪ್ಪೆ ಮೋರೆ ಹಾಕುವಂತಾಗಿದೆ.
ಮಳೆಯನ್ನೆ ನಂಬಿ ರಾಗಿ ನಾಟಿ ಮಾಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ ಸೇರಿದಂತೆ ಬಹುತೇಕ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದಾಗಿ ರಾಗಿ ಪೈರು ಬಾಡತೊಡಗಿದೆ. ಕಳೆದ ಒಂದು ತಿಂಗಳಲ್ಲಿ ಹಸಿರಾಗಿ ನಳನಳಿಸಿ ನೆಲದಿಂದ ಮೇಲಕ್ಕೆ ಬರುತ್ತಿದ್ದ ರಾಗಿ ಪೈರು ಈಗ ಮೇಲೆ ಬೆಳೆಯದೆ ಇದ್ದಲ್ಲಿಯೇ ಮೊಟಕಾಗುತ್ತಿದೆ. ಹೀಗೆಯೆ ಮಳೆ ಹೋದರೆ ಏನಪ್ಪಾ ಗತಿ ಎನ್ನುವಂತಾಗಿದೆ ರಾಗಿ ಬೆಳೆಗಾರರ ಸ್ಥಿತಿ.
ಪೂರ್ವ ಮುಂಗಾರು ಬಿತ್ತನೆಗೆ ಮಳೆ ಬಾರದೆ ಪ್ರಮುಖ ವಾಣಿಜ್ಯ ಬೆಳೆ ಹೆಸರು ಮತ್ತು ಇತರೆ ದ್ವಿದಳ ಧಾನ್ಯಗಳ ಬಿತ್ತನೆಗೆ ಹಿನ್ನಡೆಯಾಗಿತ್ತು. ಕೆಲವು ಕಡೆಗಳಲ್ಲಿ ಬಿತ್ತಿದ ಬೀಜಕ್ಕೆ ಮೋಸವಾಗಲಿಲ್ಲ. ಅಷ್ಟಕ್ಕೆ ತೃಪ್ತಿ ಪಟ್ಟುಕೊಂಡರು. ಸಾಧಾರಣ ಮಳೆಯಾಯಿತಾದರೂ ಕೀಟಬಾಧೆಯಂತಹ ವಿವಿಧ ಆಪತ್ತುಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ದ್ವಿದಳ ಧಾನ್ಯ ರೈತರ ಕೈ ಹಿಡಿಯಲಿಲ್ಲ.
ಆನಂತರದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯಿತಾದರೂ ಈಗ ಮತ್ತೆ ವರುಣನ ಕೃಪೆಯಾಗುತ್ತಿಲ್ಲ. ಕಳೆದ 20 ದಿನಗಳ ಹಿಂದಿನವರೆಗೂ ರಾಗಿ ಬೆಳೆಯುವ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ಧಾರೆ. ಕೆಲವು ಕಡೆ ರಾಗಿಯ ಬೆಳೆ ಹಸಿರಾಗಿ ಬರತೊಡಗಿತ್ತು. ಇನ್ನೊಂದು ಹದ ಮಳೆ ಬಿದ್ದರೂ ಸಾಕಾಗಿತ್ತು ರಾಗಿ ಹುಲುಸಾಗಿ ಬರುತ್ತಿತ್ತು. ಆದರೆ ಮೈ ಕೈ ಕೊಟ್ಟಿರುವ ಕಾರಣ ಈಗ ಆತಂಕ ಶುರುವಾಗಿದೆ.
ಸರಿಯಾಗಿ ಮಳೆ ಬಾರದೆ ಹೋದರೆ ವಿವಿಧ ರೋಗಗಳು ಆವರಿಸಿಕೊಳ್ಳುತ್ತವೆ. ಬೇರುಗಳು ಸಹ ಒಣಗುತ್ತವೆ. ಮಳೆಯನ್ನೇ ಆಶ್ರಯಿಸಿ ರಾಗಿ ಬೆಳೆಯುವ ಕಾರಣ ಇನ್ನು ಕೆಲವು ದಿನಗಳ ಅಂತರದಲ್ಲಿ ಮಳೆ ಬಾರದೆ ಹೋದರೆ ಸಂಪೂರ್ಣ ನೆಲ ಕಚ್ಚುವ ಅಪಾಯವಿದೆ.
ಜುಲೈ ತಿಂಗಳು ರಾಗಿ ಬಿತ್ತನೆಗೆ ಸಕಾಲ. ಆಗಸ್ಟ್ ತಿಂಗಳ ಮಧ್ಯಭಾಗದವರೆಗೂ ಬಿತ್ತನೆ ಮಾಡಿದ್ದಾರೆ. ಬಿತ್ತನೆಯಾದ ದಿನದಿಂದಲೂ ಮೋಡ ಮುಸುಕಿದ ವಾತಾವರಣ ಇರುವುದರಿಂದ ಬೆಳೆ ಸಂಪೂರ್ಣವಾಗಿ ಒಣಗಿಲ್ಲ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾಧಾರಣ ಹಾಗೂ ಕೆಲವು ಕಡೆ ಉತ್ತಮ ಮಳೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ತುಂತುರು ಹನಿ ಮಳೆ ಬಿದ್ದಿದೆ. ರಾಗಿಗೆ ಇಷ್ಟು ಸಾಕು. ಆದರೆ ಸತತವಾಗಿ ಮಳೆ ಬಾರದೆ ಹೋದರೆ ಬೇರು ಒಣಗಿ ಅಲ್ಲಿಯೇ ಕಮರುವ ಸಾಧ್ಯತೆ ಹೆಚ್ಚು. ಹೀಗಾಗಿ ಇನ್ನು ಕೆಲವು ದಿನಗಳ ಒಳಗೆ ಮಳೆ ಬಂದರೆ ಸಾಕು ಎಂಬ ನಿರೀಕ್ಷೆಯಲ್ಲಿ ರೈತಾಪಿ ವರ್ಗ ಎದುರು ನೋಡುತ್ತಿದ್ದಾರೆ.
ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಮುಂತಾದ ಭಾಗಗಳಲ್ಲಿ ಶೇಂಗಾ, ಮುಸುಕಿನ ಜೋಳ, ರಾಗಿ ಇತ್ಯಾದಿ ಬೆಳೆ ಬೆಳೆಯಲಾಗುತ್ತದೆ. ಇಲ್ಲಿಯೂ ಮಳೆ ಬಾರದೆ ಇರುವುದರಿಂದ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಸಂಕಷ್ಟ ಎದುರಾಗುತ್ತಲೆ ಇದ್ದು, ಈ ವರ್ಷವೂ ಮಳೆ ಕೈಕೊಟ್ಟರೆ ಬೆಳೆ ತೆಗೆಯುವುದು ಹೇಗೆ ಎನ್ನುತ್ತಾರೆ ರೈತರು.
ಈಗಾಗಲೇ ಕೆಲವು ಕಡೆಗಳಲ್ಲಿ ಶೇಂಗಾ ಸ್ವಲ್ಪ ಮಟ್ಟಿಗೆ ಬಲಿತಿದೆ. ಇವುಗಳಿಗೆ ಕಾಡು ಹಂದಿ, ಇಲಿ, ನವಿಲು ಹಾಗೂ ಕೋತಿಗಳ ಕಾಟ ಶುರುವಾಗಿದೆ. ಇನ್ನೂ ಬಲಿಯದ ಶೇಂಗಾದ ಗಿಡಗಳನ್ನು ತಿರುವಿ ಹಾಕುತ್ತಿವೆ. ಮೊದಲೆ ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಈಗ ಈ ಪ್ರಾಣಿಗಳನ್ನು ನಿಯಂತ್ರಿಸುವುದೇ ಒಂದು ಸವಾಲಾಗಿ ಪರಿಣಮಿಸಿದೆ. ರೈತರು ಇವುಗಳನ್ನು ನಿಯಂತ್ರಿಸುವ ಸಲುವಾಗಿ ಪಟಾಕಿ ಸಿಡಿಸುವುದು, ಬೆಂಕಿ ಹೊತ್ತಿಸಿ ಬರುವುದನ್ನು ಮಾಡುತ್ತಿದ್ದಾರೆ. ಈ ಪ್ರಾಣಿಗಳು ರೈತರ ನಿದ್ರೆಗೆಡಿಸುತ್ತಿರುವುದರಿಂದ ರೈತ ಆತಂಕದಲ್ಲಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ