ತುಮಕೂರು : ಬೀದಿ ನಾಯಿ-ಹಂದಿಗಳಿಗೆ ಪಾಲಿಕೆಯಿಂದ ಫಾರಂ

ತುಮಕೂರು : 

      ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಗೋಶಾಲೆಗಳ ರೀತಿಯಲ್ಲಿಯೇ ಬೀದಿ ನಾಯಿ-ಹಂದಿಗಳಿಗೆ ಆಶ್ರಯ ಒದಿಗಿಸುವ ನಾಯಿ-ಹಂದಿ ಫಾರಂ (ಡಾಗ್-ಪಿಗ್‍ಫಾರಂ) ತೆರೆದು, ಸಾರ್ವಜನಿಕರಿಗೆ ಉಪದ್ರವ ಕೊಡುವ ಬೀದಿ ನಾಯಿ-ಹಂದಿಗಳನ್ನು ಹಿಡಿದು, ನಗರವನ್ನು ಬೀದಿ ನಾಯಿ-ಹಂದಿ ಮುಕ್ತವಾಗಿಸಲು ಸೋಮವಾರ ನಡೆದ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪ್ರಯೋಗಾತ್ಮಕ ಯೋಜನೆಗೆ ಸಭೆ ಒಪ್ಪಿಗೆ : 

       ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ಅಧ್ಯಕ್ಷತೆಯಲ್ಲಿ, ಮೇಯರ್ ಕೃಷ್ಣಪ್ಪ, ಉಪಮೇಯರ್ ನಾಜೀಮಾ ಬೀ ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬೀದಿ ನಾಯಿ-ಹಂದಿಗಳ ಹಾವಳಿಗಳಿಂದ ಜನ ಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಕೆಲ ದಿನಗಳ ಕಾಲ ಅಜ್ಜಗೊಂಡನಹಳ್ಳಿಯಲ್ಲಿ ಆಶ್ರಯ ನೀಡಿ, ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಅದೇ ಸ್ಥಳಕ್ಕೆ ತಂದು ಬೀಡುವವರೆಗೂ ಡಾಗ್ ಫಾರಂನಲ್ಲಿ ಆಶ್ರಯ ನೀಡುವ ಪ್ರಯೋಗಾತ್ಮಕ ಯೋಜನೆಗೆ ಸಭೆ ಒಪ್ಪಿಗೆ ನೀಡಿತು.

ಹರಿಹಾಯ್ದ ಸದಸ್ಯರು :

      ತುಮಕೂರು ನಗರವೂ ಸೇರಿದಂತೆ ಪ್ರಸ್ತುತ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಇದುವರೆಗೂ 197 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಕೆಲವು ಪ್ರಕರಣಗಳು ಅತ್ಯಂತ ಗಂಭೀರವಾಗಿವೆ. ಮಕ್ಕಳ ಮೇಲೆ ಎರಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಕುರಿಂತಂತೆ 19-07-2021 ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಇದುವರೆಗೂ ಕ್ರಮ ಕೈಗೊಳ್ಳದಿರುವ ಬಗ್ಗೆ ಪಾಲಿಕೆಯ ಆರೋಗ್ಯ ಅಧಿಕಾರಿಯ ಮೇಲೆ ಹರಿಹಾಯ್ದ ಸದಸ್ಯರು, ಸಭೆಯಲ್ಲಿ ತೆಗೆದುಕೊಂಡು ಯಾವ ತೀರ್ಮಾನಗಳು ಜಾರಿಗೆ ಬರುವುದಿಲ್ಲ. ಅಧಿಕಾರಿಗಳು ಸರಕಾರದ ನಿಯಮ, ಸುತ್ತೊಲೆ ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ.

      ಇದರಿಂದ ಜನಸಾಮಾನ್ಯರು ಜನಪ್ರತಿನಿಧಿಗಳನ್ನು ಬಾಯಿಗೆ ಬಂದಂತೆ ಬೈದು ಕೊಳ್ಳುತ್ತಿದ್ದಾರೆ. ಹಾಗಾಗಿ ಬೀದಿ ನಾಯಿಗಳ ಕಾಟಕ್ಕೆ ಶಾಶ್ವತ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳ ಪ್ರಕಾರವೇ ಬೀದಿನಾಯಿಗಳ ಸಂತತಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ಡಾಗ್‍ಫಾರಂ ಪ್ರಸ್ತಾವನೆಯನ್ನು ಮೇಯರ್ ಬಿ.ಜಿ.ಕೃಷ್ಣಪ್ಪ ಸಭೆಯ ಮುಂದಿಟ್ಟರು. ಇದಕ್ಕೆ ಸ್ಥಾಯಿ ಸಮಿತಿಯ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ, ಪ್ರಾಯೋಗಾತ್ಮಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.

ಅಣ್ಣೇನಹಳ್ಳಿ ಬಳಿ ಸ್ಥಳ ಗುರುತು :

     ಬೀದಿ ನಾಯಿಗಳ ರೀತಿಯಲ್ಲಿಯೆ ನಗರದಲ್ಲಿ ಬಿಡಾಡಿ ಹಂದಿಗಳ ಕಾಟವೂ ಹೆಚ್ಚಿದೆ. ಕೆಲವು ಹಂದಿಗಳ ಮಾಲೀಕರು ಹಂದಿಗಳನ್ನು ನಗರದಲ್ಲಿ ಮೇಯಲು ಬಿಟ್ಟು, ಜನಸಾಮಾನ್ಯರಿಗೆ ತೊಂದೆರೆ ನೀಡುತ್ತಿದ್ದಾರೆ. ಹಾಗಾಗಿ ಬಿಡಾಡಿ ಹಂದಿಗಳನ್ನು ಹಿಡಿದು ಮುಟ್ಟುಗೊಲು ಹಾಕಿಕೊಳ್ಳುವಂತೆ ಕಟ್ಟುನಿಟ್ಟಿನಲ್ಲಿ ಆದೇಶ ನೀಡಿದ ಸೈಯದ್‍ನಯಾಜ್, ಹಂದಿಗಳ ಸಾಕಾಣಿಕೆಗೆ ಈಗಾಗಲೇ ಅಣ್ಣೇನಹಳ್ಳಿ ಬಳಿ ಜಿಲ್ಲಾಡಳಿತ 4 ಎಕರೆ ಜಾಗ ಗುರುತಿಸಿದೆ. ಹಂದಿ ಸಾಕಾಣಿಕೆ ಮಾಡುವವರು ಅಲ್ಲಿ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ನಗರದ ಎಲ್ಲೆಂದರಲ್ಲಿ ಹಂದಿಗಳು ಓಡಾಡುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲಿದೆ. ಹಾಗಾಗಿ ಹಂದಿಗಳನ್ನು ಹಿಡಿದು ಹೊರ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದರು.

ನಗರದಲ್ಲಿವೆ 6,800 ಬೀದಿ ನಾಯಿಗಳು :

     ನಗರದಲ್ಲಿರುವ ಕೋಳಿ ಮತ್ತು ಕುರಿ, ಮೇಕೆ ಮಾಂಸದ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಿ, ಅಜ್ಜಗೊಂಡನಹಳ್ಳಿಗೆ ಸಾಗಿಸುವ ಕೆಲಸ ಸುಸೂತ್ರವಾಗಿ ನಡೆಯುತ್ತಿಲ್ಲ. ಇದರ ಪರಿಣಾಮ ಅಂಗಡಿಗಳ ಕೋಳಿ, ಮಾಂಸದ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ತಿನ್ನುವ ನಾಯಿಗಳು, ಪಾದಾಚಾರಿಗಳ ಮೇಲೆ ಎರಗುತ್ತಿವೆ. ನಗರದಲ್ಲಿ ಸುಮಾರು 6,800 ಬೀದಿ ನಾಯಿಗಳಿವೆ. ಇವುಗಳನ್ನು ಹಿಡಿಯಲು ಹೋದರೆ ಪ್ರಾಣಿ ದಯಾಸಂಘ, ಇನ್ನಿತರ ಸಂಘಟನೆಗಳು ಸದಸ್ಯರು ನಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ, ತೊಂದರೆ ನೀಡುತ್ತಿದ್ದಾರೆ. ಇದು ಸೂಕ್ಷ್ಮ ವಿಚಾರವಾಗಿದ್ದು, ಆಯುಕ್ತರ ಜೊತೆ ಚರ್ಚೆ ನಡೆಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬೀದಿ ನಾಯಿ, ಬೀಡಾಡಿ ಹಂದಿಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿಗಳು ಸಭಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾದ ರೂಪಶ್ರೀ, ಮಂಜುಳ, ಯಶೋಧ, ಶ್ರೀನಿವಾಸ್, ನರಸಿಂಹರಾಜು, ಮಂಜುನಾಥ್, ಶಿವರಾಮ್ ಅವರುಗಳು ಭಾಗವಹಿಸಿದ್ದರು.

      ನಗರದಲ್ಲಿ ಬೀದಿ ನಾಯಿ-ಹಂದಿಗಳ ಕಾಟ ವಿಪರೀತವಾಗಿದ್ದು, ವಾರ್ಡ್‍ಗಳಲ್ಲಿ ಜನರು ಸದಸ್ಯರನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪಾಲಿಕೆ ಈ ಪ್ರಯೋಗಾತ್ಮಕ ಕಾರ್ಯಕ್ಕೆ ಮುಂದಾಗಿದೆ. ಪ್ರಾಣಿಗಳ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಿ ದಯಾ ಸಂಘಟನೆಗಳು ಕೋರ್ಟ್‍ಗೆ ಹೋಗುತ್ತವೆ. ಆದ್ದರಿಂದ ಕಾನೂನು ಚೌಕಟ್ಟಿನಲ್ಲಿ ಪ್ರಾಣಿಗಳಿಗೆ ಸೂಕ್ತ ನೆರಳು, ನೀರು, ಆಹಾರ, ಆಶ್ರಯ ಒದಗಿಸಿ ಸಾರ್ವಜನಿಕರ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
-ಸೈಯದ್‍ನಯಾಜ್, ಅಧ್ಯಕ್ಷರು, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ಬೀದಿ ಹಂದಿಗಳು ಪಾಲಿಕೆಯ ಸ್ವತ್ತು :

      ನಗರದಲ್ಲಿ ಹಂದಿ ಸಾಕುವವರು ತಮ್ಮ ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ನೋಡಿಕೊಳ್ಳಬೇಕು. ಬೀದಿ ಹಂದಿಗಳು ಇನ್ನು ಮುಂದೆ ಪಾಲಿಕೆಯ ಸ್ವತ್ತು. ಹಿಡಿದ ಹಂದಿಗಳನ್ನು ಪಿಗ್‍ಫಾರಂನಲ್ಲಿ ಬಿಟ್ಟು, ಪಾಲಿಕೆಯಿಂದಲೆ ಆರೈಕೆ ಮಾಡಿ ನಂತರ ಹರಾಜು ಹಾಕಲಾಗುವುದು. ದಂಡ ಕಟ್ಟಿಸಿಕೊಂಡು ಹಂದಿಗಳನ್ನು ಬಿಡುವ ಪ್ರಶ್ನೆಯೆ ಇಲ್ಲ. ದಂಡ ಕಟ್ಟಿಸಿಕೊಂಡು ಬಿಡುವ ಸಂಪ್ರದಾಯ ಪಾಲಿಸಿದರೇ ಹಂದಿಗಳ ಮಾಲೀಕರು ಈ ತೀರ್ಮಾನವನ್ನು ದುರುಪಯೋಗ ಮಾಡಿಕೊಂಡು ಹೇಗಿದ್ದರೂ ಪಾಲಿಕೆಯವರು ಪಿಗ್‍ಫಾರಂ ಮಾಡಿದ್ದಾರೆ. ಅಲ್ಲಿ ನಮ್ಮ ಹಂದಿಗಳು ತಿಂದುಂಡು ಕೊಬ್ಬಲಿ ಎಂದು ಬೇಕೆಂದೆ ಗಂದಿಗಳನ್ನು ರಸ್ತೆಗೆ ಬಿಡುವ ಸಾಧ್ಯತೆ ಇದೆ. ಎಂದು ಸಭೆ ಎಲ್ಲಾ ಆಯಾಮಗಳಲ್ಲೂ ಚರ್ಚಿಸಿ ಹಿಡಿದ ಬೀದಿ ಹಂದಿಗಳನ್ನು ಹರಾಜು ಹಾಕುವ ಒಮ್ಮತದ ತೀರ್ಮಾನಕ್ಕೆ ಬಂತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap