ತುಮಕೂರು : ಕುಸಿಯುವ ಹಂತದಲ್ಲಿ ಬಹು ಅಂತಸ್ತಿನ ಕಟ್ಟಡ!

 ತುಮಕೂರು : 

     ಕ್ಯಾತ್ಸಂದ್ರ ವೃತ್ತದ ಬಳಿ ಎಡಭಾಗದ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಹಿಂದೆ ಅರೆ-ಬರೆಯಾಗಿ ತೆರವುಗೊಳಿಸಿದ ಬಹು ಅಂತಸ್ತಿನ ಕಟ್ಟಡ ಕುಸಿಯುವ ಸ್ಥಿತಿ ತಲುಪಿದ್ದು, ಹೆದ್ದಾರಿ ಪ್ರಾಧಿಕಾರದವರ ನಿರ್ಲಕ್ಷ್ಯಕ್ಕೆ ಜನರ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ. ಬೆಂಗಳೂರಿಂದ -ತುಮಕೂರಿಗೆ ಬರುವ ಹೆದ್ದಾರಿ 48ರ ಕ್ಯಾತ್ಸಂದ್ರ ಬಳಿ ಎಡಭಾಗದ ಸರ್ವೀಸ್ ರಸ್ತೆಗಾಗಿ ಖಾಸಗಿ ಹೋಟೆಲ್‍ಕಟ್ಟಡವನ್ನು ದಶಕಗಳಿಗೂ ಹಿಂದೆ ನೆಲಸಮಕ್ಕೆ ಹೆದ್ದಾರಿ ಪ್ರಾಧಿಕಾರದವರು ಆರ್ಡರ್ ಮಾಡಿ ಅರೆಬರೆಯಾಗಿ ತೆರವುಗೊಳಿಸಿ ಹಾಗೆಯೇ ಬಿಟ್ಟಿರುವುದು ದಾರಿಯಲ್ಲಿ ತೆರಳುವ ಸಾರ್ವಜನಿಕರು, ವಾಹನ ಸವಾರರ ಮೇಲೆ ಯಾವಾಗ ಬೇಕಾದರೂ ಕಟ್ಟಡ ಕುಸಿಯುವ ಅಪಾಯವನ್ನು ತಂದೊಡ್ಡಿದೆ.
ಕಟ್ಟಡದ ಮುಂಭಾಗವೇ ವಿದ್ಯುತ್ ಕಂಬ ಸಹ ಇದ್ದು, ಹೆವಿ ವಿದ್ಯುತ್ ಪ್ರವಹಿಸುವ ತಂತಿ ಎಳೆಯಲಾಗಿದೆ.

ಅಳಿವಿನಂಚಿನಲ್ಲಿರುವ ಕಟ್ಟಡವೇನಾದರೂ ಈ ವಿದ್ಯುತ್ ಲೇನ್ ಹಾಗೂ ಕಂಬದ ಮೇಲೆ ಉರುಳಿದರೆ, ದುರಂತ ಸಂಭವಿಸುವುದು ನಿಶ್ಚಿತವೆನಿಸಿದೆ. ಕಟ್ಟಡದ ಸನಿಹ ಪೆಟ್ರೋಲ್‍ಬಂಕ್, ಹೋಟೆಲ್‍ಗಳು, ಗ್ಯಾರೇಜ್‍ಗಳು ಸಹ ಇದ್ದು ಯಾವುದೇ ಅವಘಡ ಸಂಭವಿಸಿದರೂ ಪರಿಣಾಮ ಭೀಕರವಾಗಲಿದೆ.

     ಅರೆ-ಬರೆ ತೆರವಾಗಿರುವ ಸದರಿ ಹೋಟೆಲ್ ಕಟ್ಟಡಕ್ಕೆ ಈಗಾಗಲೇ ಪರಿಹಾರ ನೀಡಲಾಗಿದ್ದರೂ ಇನ್ನೂ ತೆರವುಗೊಳಿಸದಿರಲು ಕಾರಣವೇನು? ಎಂಬ ಪ್ರಶ್ನೆಯನ್ನು ಸ್ಥಳೀಯರೇ ಎತ್ತಿದ್ದು, ಕಟ್ಟಡದ ಮಾಲೀಕರಿಗೆ ಜಾಗದ ಪೂರ್ಣ ಪರಿಹಾರ ದೊರೆತಿಲ್ಲದಿರುವುದಕ್ಕೆ ಪೂರ್ಣಪ್ರಮಾಣದಲ್ಲಿ ತೆರವಾಗಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.

ಸ್ಥಳೀಯ ಆಡಳಿತ ಗಮನಹರಿಸಲಿ:

     ಆಡಳಿತಾತ್ಮಕ ಕಾರಣ, ಪರಿಹಾರದ ಸಮಸ್ಯೆಗಳು ಏನೇ ಇರಲಿ ಜನರ ಪ್ರಾಣ ರಕ್ಷಣೆ, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಶಿಥಿಲಾವಸ್ಥೆಯ ಕಟ್ಟಡವನ್ನು ನೆಲಸಮಗೊಳಿಸುವುದು ತುರ್ತು ಅಗತ್ಯವಾಗಿದೆ. ಹೆದ್ದಾರಿ ಪ್ರಾಧಿಕಾರದವರಾಗಲೀ, ಸ್ಥಳೀಯ ಪಾಲಿಕೆಯವರಾಗಲಿ ಈ ಸಂಬಂಧ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಕ್ರಮ ಚಟುವಟಿಕೆಗಳಿಗೂ ಆಸ್ಪದ: 

      ಪಳಯುಳಿಕೆಯಂತಾಗಿರುವ ಈ ಬಹುಅಂತಸ್ತಿನ ಕಟ್ಟಡದ ಹಿಂಭಾಗವೇ ವಸತಿಗೃಹವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಸಹ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಇಬ್ಬರು ಪಶ್ಚಿಮ ಬಂಗಾಳ ಮೂಲದ ಯುವತಿಯರನ್ನು ರಕ್ಷಿಸಲಾಗಿದೆ. ಈ ರೀತಿ ಪಾಳುಬಿದ್ದ ಕಟ್ಟಡಗಳು ಮುಂದುವರಿದಷ್ಟು ಅಕ್ರಮ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಾಗಲಿದ್ದು, ಸ್ಥಳೀಯ ನಿವಾಸಿಗಳು ಕಿರಿಕಿರಿ ಎದುರಿಸುವಂತಾಗಿದೆ.

ಷಟ್ಪಥ ಕಾಮಗಾರಿ ಹಂತಕ್ಕೂ ಬಂದರೂ ಪೂರ್ಣಗೊಳ್ಳದ ತೆರವು ಕಾರ್ಯಾಚರಣೆ

      ಚತುಷ್ಪಥ ಹೆದ್ದಾರಿ, ಮೇಲ್ಸುತೆವೆ ನಿರ್ಮಾಣ ಸಂದರ್ಭದಲ್ಲಿ ಚಾಲುಗೊಂಡ ಸರ್ವೀಸ್ ರಸ್ತೆಗೆ ಅಗತ್ಯವಾದ ಕಟ್ಟಡ ತೆರವು ಕಾರ್ಯ ಷಟ್ಪಥ ಹೆದ್ದಾರಿ ನಿರ್ಮಾಣದ ಟೆಂಡರ್ ಹಂತಕ್ಕೆ ಬಂದರೂ ಕೈಗೂಡದಿರುವುದು ಸರಕಾರಿ ಕಾಮಗಾರಿಗಳ ಅವಸ್ಥೆ, ಅವಾಂತರಕ್ಕೆ ಸಾಕ್ಷಿಎನಿಸಿದೆ. 10-15 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬೀಳುತ್ತದೆಯೆಂದರೆ ಏನರ್ಥ? ಪರಿಹಾರ ಕೊಟ್ಟು ಸುಮ್ಮನೆ ಅಧಿಕಾರಿಗಳು ಕೂತಿರುವರೇ? ಸರ್ವೀಸ್ ರಸ್ತೆಗೆ ಅಗತ್ಯವಾದ ಜಾಗವನ್ನು ಸ್ವಾಧೀನಕ್ಕೆ ಪಡೆದು ರಸ್ತೆಯನ್ನು ವಿಸ್ತರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಲ್ಲವೇ? ಎಂಬ ಪ್ರಶ್ನೆಗಳನ್ನು ಸಾಮಾಜಿಕ ಹೋರಾಟಗಾರರು ಕೇಳಿದ್ದು, ಹಾಲಿ ಸರ್ವೀಸ್ ರಸ್ತೆ , ಪ್ರಾಧಿಕಾರದ ಜಾಗ ಸಹ ಒತ್ತುವರಿಯಾಗಿದ್ದು ಈ ಸಂಬಂಧ ಹೆದ್ದಾರಿ ಪ್ರಾಧಿಕಾರದವರು ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ದೊಡ್ಡಕಟ್ಟಡಗಳಿಗೆ ಮಾತ್ರ ಪರಿಹಾರ!

      ಇನ್ನೂ ಹೆದ್ದಾರಿ ಎರಡು ಬದಿಯ ಸರ್ವೀಸ್ ರಸ್ತೆಗೆ ಹಿಂದೆ ಪ್ರಾಧಿಕಾರಕ್ಕೆ ಜಾಗ ಬಿಟ್ಟುಕೊಟ್ಟ ಸ್ಥಳೀಯರಲ್ಲಿ ದೊಡ್ಡ ಕಟ್ಟಡಗಳಿಗೆ ಮಾತ್ರ ಪರಿಹಾರ ದೊರೆತಿದ್ದು, 10 ಅಡಿ, 20 ಅಡಿ ಕಟ್ಟಡಗಳಿಗೆ ಪರಿಹಾರ ಇನ್ನೂ ಕೊಟ್ಟಿದೆ. 15-16 ವರ್ಷಗಳಿಂದಲೂ ಪ್ರಾಧಿಕಾರದ ಕಚೇರಿಗೆ ಎಡತಾಕಿ ಸಾಕಾಗಿದೆ. ಮತ್ತೆ ಷಟ್ಪಥ ರಸ್ತೆಗೆ ಜಮೀನು ಸ್ವಾಧೀನಕ್ಕೆ ನೋಟಿಸ್‍ಗಳು ನೀಡತೊಡಗಿದ್ದು, ನಮಗೆ ಆತಂಕಕ್ಕೆ ಕಾರಣವಾಗಿದೆ. ಬಾಕಿಯಿರುವ ಪರಿಹಾರವನ್ನು ಮೊದಲು ನೀಡಬೇಕು ಎಂದು ಸ್ಥಳೀಯ ನಿವಾಸಿಗಳಾದ ಸೈಯದ್ ಅಪ್ಸರ್, ಸೈಯದ್ ಅನ್ವರ್, ಚಾಂದ್ ಮತ್ತಿತರರು ಆಗ್ರಹಿಸಿದ್ದಾರೆ.

     ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಕುಸಿಯುವ ಹಂತದ ಕಟ್ಟಡ ಪರಿಶೀಲಿಸಲು ಸ್ಥಳೀಯ ಸಿಬ್ಬಂದಿಗೆ ಸೂಚಿಸಲಾಗುವುದು. ಭೂಸ್ವಾಧೀನ ಪರಿಹಾರದ ವಿಳಂಬದ ಬಗ್ಗೆ ಬೆಂಗಳೂರಿನ ಯಲಹಂಕದ ಪ್ರಾಧಿಕಾರದ ಕಚೇರಿ ಗಮನಹರಿಸುತ್ತಿದ್ದು, ಫಲಾನುಭವಿಗಳು ಆ ಕಚೇರಿಯನ್ನು ಸಂಪರ್ಕಿಸಿ, ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. 

-ವಿಶ್ವನಾಥ್, ಎಂಜಿನಿಯರ್ ಹೆದ್ದಾರಿ ಪ್ರಾಧಿಕಾರ, ಚಿತ್ರದುರ್ಗ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap