ತುಮಕೂರು :
ಕುರಿ, ಮೇಕೆ, ಹಸು, ಎಮ್ಮೆ ಇತ್ಯಾದಿ ಜಾನುವಾರುಗಳಿಗೆ ವಿವಿಧ ರೋಗಗಳ ಬಾಧೆ ಕಾಣಿಸಿಕೊಳ್ಳುತ್ತಿದ್ದು, ಸಾಕಾಣಿಕೆದಾರರಲ್ಲಿ ಆತಂಕ ಶುರುವಾಗಿದೆ. ಮುಖ್ಯವಾಗಿ ಕಾಲು-ಬಾಯಿ ರೋಗ ಅಥವಾ ಗೆರಸಲು ರೋಗ ಜಿಲ್ಲೆಯ ಬಹುತೇಕ ಎಲ್ಲ ಕಡೆ ವ್ಯಾಪಿಸಿಕೊಂಡಿದ್ದು, ಈ ರೋಗ ನಿರ್ಮೂಲನೆ ಇಲಾಖೆಯ ಅಧಿಕಾರಿಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೃಷಿ ಕ್ಷೇತ್ರದಲ್ಲಿ ದಿನೆ ದಿನೆ ನಷ್ಟ ಅನುಭವಿಸುತ್ತಿರುವ ರೈತರು ಹಾಗೂ ಕೃಷಿ ಭೂಮಿ ಇಲ್ಲದ ರೈತ ಕಾರ್ಮಿಕರು ಪಶು ಸಾಕಾಣಿಕೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಕೆಲವು ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯಗಳು ಕುರಿ, ಮೇಕೆ ಸಾಕಾಣಿಕೆಯಲ್ಲಿ ನಿರತರಾಗಿದ್ದರೆ ಇನ್ನಿತರ ಸಮುದಾಯಗಳು ಹಸು, ಎಮ್ಮೆ ಇತ್ಯಾದಿ ಜಾನುವಾರುಗಳ ಸಾಕಾಣಿಕೆಯಲ್ಲಿ ಬದುಕು ಸವೆಸುತ್ತಿದ್ದಾರೆ. ಕೃಷಿಗಿಂತ ಇದು ಉತ್ತಮ ಎಂದೇ ಭಾವಿಸಿದ್ದ ರೈತರಿಗೆ ಈಗ ದಿಗಿಲು ಶುರುವಾಗತೊಡಗಿದೆ. ಒಂದಲ್ಲ ಒಂದು ರೋಗ ಜಾನುವಾರು ಗಳನ್ನು ಬಾಧಿಸುತ್ತಿದ್ದು, ಸೂಕ್ತ ಸಮಯಕ್ಕೆ ಲಸಿಕೆ ಇಲ್ಲದೆ, ಜಾನುವಾರುಗಳನ್ನು ಉಳಿಸಿಕೊಳ್ಳಲಾಗದೆ ಪಶು ಸಾಕಾಣಿಕೆದಾರರು ಆತಂಕದಲ್ಲಿ ದಿನ ಸವೆಸುತ್ತಿದ್ದಾರೆ.
ಆಗಾಗ್ಗೆ ಬಂದೆರಗುವ ರೋಗ-ರುಜಿನಗಳ ವಿರುದ್ಧ ಸರ್ಕಾರ ವರ್ಷಕ್ಕೆ ಎರಡು ಬಾರಿ ಲಸಿಕೆ ಪೂರೈಸುತ್ತಾ ಬಂದಿದೆ. ಪಶು ವೈದ್ಯಕೀಯ ಇಲಾಖೆಯ ಮೂಲಕ ಹೋಬಳಿ ಮಟ್ಟದವರೆಗೂ ಇರುವ ಆಸ್ಪತ್ರೆಗಳಿಗೆ ಈ ಲಸಿಕೆ ರವಾನೆಯಾಗುತ್ತದೆ. ಹೋಬಳಿ ಮಟ್ಟದ ಗ್ರಾಮಗಳಲ್ಲಿ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡರೆ ಸ್ಥಳೀಯ ಪಶುವೈದ್ಯರು ಅಲ್ಲಿಗೆ ತೆರಳಿ ರೋಗ ಯಾವುದೆಂದು ಗುರುತಿಸಿ ಲಸಿಕೆ ನೀಡುತ್ತಾರೆ. ಆದರೆ ಕೋವಿಡ್ ನಂತರದ ದಿನಗಳಲ್ಲಿ ಎಲ್ಲ ಯೋಜನೆಗಳಿಗೂ ಗ್ರಹಣ ಹಿಡಿದಿದ್ದು, ಸರ್ಕಾರದಿಂದ ಲಸಿಕೆಯೇ ಬಿಡುಗಡೆಯಾಗಿಲ್ಲ. ಜನವರಿ ನಂತರ ಜೂನ್ ತಿಂಗಳಲ್ಲಿ ಲಸಿಕೆ ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆಯೂ ಇಲ್ಲ, ಈ ಬಗ್ಗೆ ಪ್ರಶ್ನೆ ಮಾಡುವವರೂ ಇಲ್ಲದಂತಾಗಿದೆ.
ಇತ್ತೀಚೆಗಷ್ಟೇ ವಿಧಾನ ಮಂಡಲದಲ್ಲಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಆರ್ಭಟಗಳು ನಡೆದವು. ಆದರೆ ಜನಜೀವನದ ಮೂಲಭೂತ ಸಮಸ್ಯೆಗಳು, ಸ್ಥಗಿತ ಯೋಜನೆಗಳ ಬಗ್ಗೆ, ಅನುದಾನಗಳು ಬಿಡುಗಡೆಯಾಗದ ಬಗ್ಗೆ ಚರ್ಚೆಯೇ ಆಗಿಲ್ಲದಿರುವುದು ವಿಪರ್ಯಾಸ. ಅಗತ್ಯ ಯೋಜನೆಗಳಿಗೂ ಅನುದಾನ ಒದಗಿಸದಂತಹ ಪರಿಸ್ಥಿತಿಗೆ ಸರ್ಕಾರಗಳು ಬಂದು ನಿಂತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಗ್ರಾಮೀಣ ಜನಜೀವನ ಮತ್ತಷ್ಟು ಹೈರಾಣಾಗಿ ಹೋಗಲಿದೆ.
ಕೃಷಿಗೆ ಪೂರಕವಾಗಿ ಕುರಿ ಅಥವಾ ಮೇಕೆ ಸಾಕಿಕೊಂಡು, ಹಸು ಸಾಕಾಣಿಕೆ ಮೂಲಕ ಪಶು ಸಂಗೋಪನೆಯಲ್ಲಿ ತೊಡಗಿಕೊಂಡಿದ್ದವರಿಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ಅನುಗ್ರಹ ಯೋಜನೆ ದಾಖಲೆಯಲ್ಲಿದೆ. ಆದರೆ ವರ್ಷದಿಂದಲೂ ಅರ್ಜಿಗಳನ್ನೇ ಸ್ವೀಕರಿಸುತ್ತಿಲ್ಲ. ಜಾನುವಾರುಗಳಿಗೆ ಲಸಿಕೆ ಹಾಕಲು ಡೋಸ್ ಸಿಗುತ್ತಿಲ್ಲ. ಪರಿಣಾಮವಾಗಿ ಕುರಿ, ಮೇಕೆ, ಹಸುಗಳು ನಿರಂತರವಾಗಿ ಅಸು ನೀಗುತ್ತಿವೆ. ಗ್ರಾಮೀಣ ಭಾಗದಲ್ಲಿ ರೈತನ, ಪಶು ಸಾಕಾಣಿಕೆ ವೃತ್ತಿಯಲ್ಲಿ ಇರುವವರ ಈ ದೈನಂದಿನ ಸಮಸ್ಯೆಗಳು ಹೊರ ಜಗತ್ತಿಗೆ ಕಾಣಿಸುತ್ತಲೇ ಇಲ್ಲ. ಇದೇ ಗ್ರಾಮೀಣ ಸಮುದಾಯದಿಂದ ಆರಿಸಿ ಬೆಂಗಳೂರಿಗೆ ಜಿಗಿಯುವ ಜನಪ್ರತಿನಿಧಿಗಳು ಮತ್ತೆ ಗ್ರಾಮೀಣರ ಸಂಕಷ್ಟಗಳನ್ನು ಅರಿಯುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಗ್ರಾಮೀಣರ ಬದುಕು ಮತ್ತೆ ಮತ್ತೆ ಅತಂತ್ರಕ್ಕೆ ಸಿಲುಕುತ್ತಿದೆ. ನಗರಗಳಲ್ಲಿ ಹಗಲು-ರಾತ್ರಿ ಎನ್ನದೆ 8 ರಿಂದ 10 ಸಾವಿರ ರೂಪಾಯಿಗಳಿಗೆ ದುಡಿಯಲು ಆಗಮಿಸುತ್ತಿರುವ ಯುವಕರ ಪರಿಸ್ಥಿತಿಗೆ ಇದೇ ಕಾರಣ.
ಈಗ ಜಿಲ್ಲೆಯಲ್ಲಿ ಹೆಚ್ಚು ವ್ಯಾಪಿಸಿರುವ ಕಾಲು-ಬಾಯಿ ಜ್ವರ ಒಂದು ಅಂಟು ಜಾಡ್ಯವಾಗಿದ್ದು, ಸಾಕಷ್ಟು ಸಾಕು ಪ್ರಾಣಿಗಳು ಈಗಾಗಲೇ ಅಸು ನೀಗಿವೆ. ರೋಗಗ್ರಸ್ತ ಪ್ರಾಣಿಗಳಲ್ಲಿ ಅತಿಯಾದ ಜ್ವರ, ಗುಳ್ಳೆಗಳು ಹೆಚ್ಚಾಗಿ ಒಡೆದು, ಜೊಲ್ಲು ಸೋರುವಿಕೆ, ಗೊರಸಿನ ಮಧ್ಯೆ ಹುಣ್ಣುಗಳಾಗಿ ಕುಂಟುವುದು, ಕೆಚ್ಚಲಿನ ಮೇಲೆ ನೀರು ಗುಳ್ಳೆಗಳಾಗಿ ಹಾಲು ಕರೆಯಲು ಸಾಧ್ಯವಾಗದ ಪರಿಸ್ಥಿತಿ ಇಂತಹ ಹಲವಾರು ಉದಾಹರಣೆಗಳನ್ನು ಜಿಲ್ಲೆಯಲ್ಲಿ ಕಾಣಬಹುದು.
ಸೀಮೆಜಾಲಿ ಮುಳ್ಳು :
ಈ ಮುಳ್ಳುಗಿಡ ರಾಕ್ಷಸ ರೀತಿಯಲ್ಲಿ ಎಲ್ಲ ಕಡೆ ಆವರಿಸಿಕೊಳ್ಳುತ್ತಿದೆ. ಕಡಿದು ಹಾಕಿದರೂ ನಿರ್ನಾಮವಾಗುತ್ತಿಲ್ಲ. ಕೆರೆಕಟ್ಟೆಗಳ ಹಾಗೂ ಗೋಮಾಳ ಪ್ರದೇಶಗಳಲ್ಲಿ ಈ ಮುಳ್ಳಿನ ಗಿಡಗಳು ವ್ಯಾಪಿಸಿವೆ. ರಸ್ತೆ ಬದಿಗಳಲ್ಲಿ ಬೆಳೆದು ನಿಂತಿವೆ. ಕುರಿ, ಮೇಕೆ ಅಥವಾ ಇತರೆ ಜಾನುವಾರುಗಳು ಕೆರೆ-ಕಟ್ಟೆಗಳ ಬಳಿ ಇರುವ ಈ ಮುಳ್ಳುಗಿಡಗಳ ಒಳಗೆ ನುಸುಳಿದರೆ ಸಾಕು ಮುಳ್ಳು ಕಾಲಿಗೆ ಚುಚ್ಚಿಕೊಂಡು ಅದರೊಳಗೆ ಸೇರಿಕೊಳ್ಳುತ್ತದೆ. ಈ ಮುಳ್ಳು ವಿಷಕಾರಿಯಾಗಿದ್ದು, ಕ್ರಮೇಣ ಕಾಲಿಗೆ ವ್ಯಾಪಿಸುವುದರಿಂದ ಇದನ್ನು ಕಾಲು ಕೊಳೆತ ರೋಗ ಎಂತಲೂ ಕರೆಯುತ್ತಾರೆ. ಇಂತಹ ರೋಗ ಬರುವ ಪ್ರಾಣಿಗಳನ್ನು ಪ್ರತ್ಯೇಕಿಸಿ ಆರೈಕೆ ಮಾಡಬೇಕು. ತಮಗೆ ರೋಗ ಬಂದರೇನೆ ಹೆಚ್ಚು ಗಮನ ಕೊಡದೆ ಉದಾಸೀನ ಮಾಡುವ ಗ್ರಾಮೀಣ ಸಮುದಾಯ ಇನ್ನು ಈ ಪಶುಗಳ ಬಗ್ಗೆ ಅಷ್ಟೊಂದು ಆಸಕ್ತಿಯನ್ನು ಹೇಗೆತಾನೆ ತೋರಿಸಿಯಾರು? ಹಾಗಾಗಿ ರೋಗ ಉಲ್ಬಣಿಸಿ ಜಾನುವಾರುಗಳು ಮರಣ ಹೊಂದುತ್ತ್ತಿವೆ.
ಕಾಲು ಬಾಯಿ ರೋಗಕ್ಕೆ ಲಸಿಕೆ ಇದೆ. ಸರ್ಕಾರದಿಂದ ಆಗಾಗ್ಗೆ ಈ ಲಸಿಕೆ ಬಿಡುಗಡೆಯಾಗುತ್ತಿದ್ದರೆ ಕೂಡಲೇ ಔಷಧ ನೀಡಿ ಗುಣಪಡಿಸಬಹುದು. ಆದರೆ ಈಗ ಔಷಧ ಮತ್ತು ಲಸಿಕೆ ಪೂರೈಕೆಯಾಗದ ಕಾರಣ ರಾಸುಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.
ಶಿರಾ ತಾಲ್ಲೂಕಿನ ದೊಡ್ಡಗೊಳ, ಚಿಕ್ಕನಹಳ್ಳಿ, ಕಡವಿಗೆರೆ, ದೇವರಹಳ್ಳಿ, ಕಾರ್ಪೆಹಳ್ಳಿ ಮೊದಲಾದ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಲು-ಬಾಯಿ ರೋಗ ಉಲ್ಬಣಿಸಿ ಸಾಕಷ್ಟು ಸಂಖ್ಯೆಯ ಜಾನುವಾರುಗಳು ಮರಣ ಹೊಂದಿವೆ. ಇದೇ ರೀತಿ ಚಿಕ್ಕನಾಯಕನಹಳ್ಳಿ, ಕುಣಿಗಲ್, ಗುಬ್ಬಿ, ತಿಪಟೂರು ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ರೋಗ ವ್ಯಾಪಿಸಿದ್ದು, ಪಶು ಸಾಕಾಣಿಕೆದಾರರು ಇಲಾಖೆಗಳನ್ನು ಎಡತಾಕುತ್ತಲೇ ಇದ್ದಾರೆ. ಶಿರಾ ತಾಲ್ಲೂಕಿನ ಕಡವಿಗೆರೆ, ಕಾರ್ಪೆಹಳ್ಳಿ, ಭೂಪಸಂದ್ರ ಮೊದಲಾದ ಕೆಲವು ಗ್ರಾಮಗಳಿಗೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ನೀಡಿರುವುದರಿಂದ ರೋಗ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆಯೂ ಲಸಿಕೆ ಹಾಕಿಸಲು ಕ್ರಮ ವಹಿಸಲಾಗುವುದು ಎನ್ನುತ್ತಾರೆ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಜಿ.ವಿ.ಜಗದೀಶ್.
ಸರ್ಕಾರದಿಂದ ಲಸಿಕೆ ಪೂರೈಕೆಯಾಗದಿದ್ದರೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಅನುದಾನ ಬಳಸಿ ಲಸಿಕೆ ನೀಡುವತ್ತ ಇಲಾಖೆ ಮುಂದಾಗಿದೆ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ವ್ಯಾಪ್ತಿಯ ಅನುದಾನವೇ ಸದ್ಯದ ಪರಿಸ್ಥಿತಿಯಲ್ಲಿ ಮುಂದಿರುವ ದಾರಿ.
ಕುರಿ ಮತ್ತು ಮೇಕೆ ಅಥವಾ ಇತರೆ ಜಾನುವಾರುಗಳ ಲಸಿಕೆ ಕುರಿತಂತೆ ಇಲಾಖೆಗಳು ಹೆಚ್ಚು ಜಾಗೃತವಾಗಬೇಕು. ಸರ್ಕಾರಕ್ಕೆ ಅವಶ್ಯಕತೆಯ ಅರಿವು ಮುಟ್ಟಿಸಬೇಕು. ದುರಂತವೆಂದರೆ ಇಲಾಖೆಗಳಲ್ಲಿ ಮನೆ ಮಾಡಿರುವ ಅಧಿಕಾರಶಾಹಿ ಧೋರಣೆ ಇದಾವುದಕ್ಕೂ ಆಸ್ಪದ ನೀಡುತ್ತಿಲ್ಲ. ಜಾನುವಾರುಗಳ ರಕ್ಷಣೆಗೆ ತುಂಬ ನುರಿತ ತಜ್ಞರೇನೂ ಬೇಕಿಲ್ಲ. ಅನುಭವ ಇದ್ದರೆ ಸಾಕು. ಅಂತಹ ಅನುಭವಿ ಅಧಿಕಾರಿಗಳನ್ನೇ ಬಳಸಿಕೊಂಡು ಜಾನುವಾರುಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬಹುದು. ಆದರೆ ಈ ಕಾಯಕ ಅಧಿಕಾರಿಗಳಿಗೂ ಬೇಕಿಲ್ಲ. ಜನಪ್ರತಿನಿಧಿಗಳಿಗೆ ಇವೆಲ್ಲ ಬೇಕಿಲ್ಲದ ವಿಷಯಗಳು.
ಕುಟುಂಬಗಳಿಗೆ ಆರ್ಥಿಕ ಹೊಡೆತ :
ಬಹಳಷ್ಟು ಮಂದಿ ತಮ್ಮ ಕುಟುಂಬದ ನಿರ್ವಹಣೆಗೆ ಒಂದೆರಡು ಹಸುಗಳನ್ನು ಸಾಕಿಕೊಂಡಿರುತ್ತಾರೆ. ಇನ್ನು ಕೆಲವರು ಕುರಿ ಅಥವಾ ಮೇಕೆ ಸಾಕಾಣಿಕೆಯಲ್ಲಿ ನಿರತರಾಗಿರುತ್ತಾರೆ. ಇಂತಹವರ ರಾಸುಗಳು ದಿಢೀರ್ ಕಣ್ಮರೆಯಾದರೆ ಇಡೀ ಕುಟುಂಬಕ್ಕೆ ಆರ್ಥಿಕ ಸಮಸ್ಯೆಯ ಹೊಡೆತ ಬೀಳುತ್ತದೆ. ನಿತ್ಯ ಹಾಲು ಕರೆಯುವ ಹಸು ಮರಣ ಹೊಂದಿದರೆ ಅದನ್ನೇ ನಂಬಿಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಮತ್ತೊಂದು ಹಸು ತರಬೇಕೆಂದರೆ ಸಾಲ ಮಾಡಬೇಕು. ಹೀಗೆ ಸಮಸ್ಯೆಯ ಸುಳಿಗಳು ತೆರೆದುಕೊಳ್ಳುತ್ತಲೆ ಹೋಗುತ್ತವೆ. ಅಧಿಕಾರಿಗಳಿಗೆ, ಐಷಾರಾಮಿ ಜೀವನ ನಡೆಸುವವರಿಗೆ, ಮೋಜು-ಮಸ್ತಿಯಲ್ಲಿ ತಿರುಗುವ ರಾಜಕಾರಣಿಗಳಿಗೆ ಬಡವರ ಈ ತಾಪತ್ರಯಗಳು ಹೇಗೆ ಅರ್ಥವಾಗಬೇಕು?
ಲಸಿಕೆಗೆ ಜಿ.ಪಂ. ನಿಧಿ ಬಳಕೆ :
ಜಿಲ್ಲೆಯ ಮಧುಗಿರಿ ಹಾಗೂ ಪಾವಗಡ ತಾಲ್ಲೂಕಿನಲ್ಲಿ ಈ ರೋಗ ಹೆಚ್ಚಾಗಿ ಕಂಡುಬಂದಿಲ್ಲ. ಉಳಿದ ಎಲ್ಲ ತಾಲ್ಲೂಕುಗಳಲ್ಲಿಯೂ ಕಾಲು-ಬಾಯಿ ರೋಗ ಇರುವುದು ನಿಜ. ಸರ್ಕಾರದಿಂದ ಲಸಿಕೆ ಬರುವುದನ್ನು ಕಾಯದೆ ಜಿಲ್ಲಾ ಪಂಚಾಯತ್ ನಿಧಿಯನ್ನು ಬಳಸಿಕೊಂಡು ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಜಿಲ್ಲೆಗೆ 70 ಸಾವಿರ ಡೊಸ್ ಲಸಿಕೆ ಖರೀದಿಯ ಅಗತ್ಯವಿದ್ದು, ಈಗಾಗಲೇ 1500 ಡೋಸ್ ಖರೀದಿಸಿ ಶಿರಾ ಮತ್ತಿತರ ಪ್ರದೇಶಗಳ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನು 10 ರಿಂದ 15 ದಿನಗಳಲ್ಲಿ ಲಸಿಕೆ ಖರೀದಿಸಿ ಎಲ್ಲೆಲ್ಲಿ ರೋಗ ಕಾಣಿಸಿಕೊಂಡಿದೆಯೋ ಅಂತಹ ಕಡೆಗಳಲ್ಲಿ ಡೋಸ್ ನೀಡಲಾಗುವುದು. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದೇವೆ.
-ಡಾ.ಜಿ.ವಿ. ಜಯಣ್ಣ, ಉಪನಿರ್ದೇಶಕರು, ಪಶು ವೈದ್ಯ ಇಲಾಖೆ.
ಸೀಮೆಜಾಲಿ ಅಪಾಯಕಾರಿ :
ಶಿರಾ, ಚಿ.ನಾ.ಹಳ್ಳಿ ಸೇರಿದಂತೆ ಕುರಿ, ಮೇಕೆ ಮತ್ತಿತರ ಜಾನುವಾರುಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ಸೀಮೆ ಜಾಲಿಯೂ ಅಧಿಕ ಪ್ರಮಾಣದಲ್ಲಿದೆ. ಇದೊಂದು ವಿಷಕಾರಿ ಜಾಲಿಗಿಡ. ಇದರಲ್ಲಿರುವ ಮುಳ್ಳು ತುಳಿದ ರಾಸುಗಳು ಗೆರೆಸಲು ರೋಗಕ್ಕೆ ತುತ್ತಾಗುತ್ತವೆ. ಪಶು ಸಾಕಾಣಿಕೆದಾರರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮಳೆಗಾಲದಲ್ಲಿ ಈ ರೋಗ ಹೆಚ್ಚು ಹರಡುವುದರಿಂದ ರೋಗವೂ ಅಧಿಕವಾಗುತ್ತದೆ. ಎಲ್ಲೆಲ್ಲಿ ಸೀಮೆಜಾಲಿ ಇದೆಯೋ ಅದರ ನಿರ್ಮೂಲನೆಗೆ ಸ್ಥಳೀಯ ಪಂಚಾಯತಿಗಳು ಕ್ರಮ ಕೈಗೊಳ್ಳಬೇಕು. ಈ ವಾತಾವರಣದಲ್ಲಿ ಪಶು ಸಾಕಾಣಿಕೆದಾರರು ನಿಂತ ಮಲಿನ ನೀರಿನ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
-ಡಾ.ಕೆ.ನಾಗಣ್ಣ, ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.
ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ