ತುಮಕೂರು : ಪುಂಡರ ಗುಂಪುಗಳಿಗೆ ಖಾಲಿ ಜಾಗಗಳೆ ತಾಣ!!

 ತುಮಕೂರು : 

      ತುಮಕೂರು ನಗರದ ಹೊರ ವಲಯದಲ್ಲಿ ಖಾಲಿ ಜಾಗಗಳು ಬಹಳಷ್ಟಿವೆ. ಕೆರೆಯ ಅಂಗಳ, ಖಾಲಿ ಲೇಔಟ್‍ಗಳು, ತೋಟದ ಸಾಲುಗಳು ಹೀಗೆ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಂತಹ ಕಡೆಗಳಲ್ಲಿ ಅಕ್ರಮ ಚಟುವಟಿಕೆಗಳು ಸಲೀಸಾಗಿ ನಡೆದು ಹೋಗುತ್ತಿವೆ. ಪೊಲೀಸ್ ಬೀಟಿಂಗ್ ವ್ಯವಸ್ಥೆ ಹೆಚ್ಚಾದರೆ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

      ನಗರದೊಳಗೆ ಸಂಚರಿಸುವ ವಾಹನಗಳನ್ನು ಹಿಡಿಯುವುದು, ಹೆಲ್ಮೆಟ್ ಇಲ್ಲದವರನ್ನು ಹುಡುಕುವುದೇ ಪ್ರಮುಖ ಕರ್ತವ್ಯವಾಗಬಾರದು. ಇದರ ಜೊತೆಗೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಿಡುವಂತಿರಬೇಕು. ಹಗಲು ಮತ್ತು ರಾತ್ರಿವೇಳೆ ಎಲ್ಲೆಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತವೆಯೋ ಆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎನ್ನುತ್ತಾರೆ ನಾಗರಿಕರು.
ತುಮಕೂರು ನಗರ ದಿನೆ ದಿನೆ ಬೆಳೆಯುತ್ತಿದೆ. ಹೊರ ರಾಜ್ಯ ಹಾಗೂ ರಾಷ್ಟ್ರಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೈಗಾರಿಕೆಗಳು ಬರುತ್ತಿವೆ. ವಸಂತನರಸಾಪುರ ಇನ್ನೂ ಬೆಳೆಯುವ ನಿಟ್ಟಿನಲ್ಲಿದೆ. ಹಿರೇಹಳ್ಳಿ, ದಾಬಸ್‍ಪೇಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕೆಗಳು ತಲೆ ಎತ್ತುತ್ತಲಿವೆ. ಹೀಗಿರುವಾಗ ಇಲ್ಲಿ ನೆಮ್ಮದಿಯ ವಾತಾವರಣವೂ ಮುಖ್ಯ. ಹೊರ ವಲಯದಲ್ಲಿ ಜನಸಂಚರಿಸುವಾಗ ಅಂತಹವರ ಮೇಲೆ ಹಲ್ಲೆಗಳಾಗುವುದು, ಅವರ ಮೇಲೆ ಎರಗುವ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು.

      ಬಡಾವಣೆಗಳು ಹೆಚ್ಚುತ್ತಿರುವುದರಿಂದ ಅಲ್ಲಲ್ಲಿ ನಿವೇಶನಗಳು ವಿಗಂಡಣೆಯಾಗುತ್ತಿವೆ. ಹಂಚಿಕೆಯಾದ ನಿವೇಶನಗಳು ಖಾಲಿ ಉಳಿದಿದ್ದರೆ ಅಂತಹ ಪ್ರದೇಶಗಳನ್ನೇ ಕೆಲವರು ಅಕ್ರಮ ಚಟುವಟಿಕೆಗಳಿಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಎಣ್ಣೆ ಬಾಟಲ್‍ಗಳೊಂದಿಗೆ ತೆರಳುವ ಗುಂಪು ಅಲ್ಲೆಲ್ಲಾ ರಂಪಾಟ ನಡೆಸುತ್ತಾರೆ. ಆ ಭಾಗದಲ್ಲಿ ಯಾರಾದರೂ ಸಂಚರಿಸಿದರೆ ಅವರನ್ನು ಟಾರ್ಗೆಟ್ ಮಾಡುತ್ತಾರೆ.

      ಇದರ ಜೊತೆಗೆ ಕಳ್ಳ ಕಾಕರ ಗುಂಪುಗಳು ಸಹ ಹುಟ್ಟಿಕೊಂಡಿವೆ. ಹಾಡಹಗಲೇ ಸರಗಳ್ಳತನ ಪ್ರಕರಣಗಳು ನಡೆಯುತ್ತಿರುವಾಗ ಇನ್ನು ರಾತ್ರಿವೇಳೆ ಒಂಟಿಯಾಗಿ ಸಂಚರಿಸುವುದು ಹೇಗೆ ಎಂಬ ಪ್ರಶ್ನೆಗಳನ್ನು ಜನಸಾಮಾನ್ಯರು ಮುಂದಿಡುತ್ತಾರೆ. ಎಲ್ಲದಕ್ಕೂ ಪೊಲೀಸರೇ ಪರಿಹಾರವಲ್ಲ. ಎಲ್ಲ ಸಮಯದಲ್ಲೂ ಪೊಲೀಸರು ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ. ಆದರೆ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಿದರೆ ಖಂಡಿತ ಇಂತಹುವುಗಳನ್ನು ನಿಯಂತ್ರಿಸಬಹುದು. ಆಗಾಗ್ಗೆ ಆ ಭಾಗಗಳಿಗೆ ಭೇಟಿ ನೀಡುತ್ತಿದ್ದರೆ ಪುಂಡರ ಗುಂಪು ಅಲ್ಲಿಂದ ಪಲಾಯನ ಮಾಡಬಹುದು ಅಥವಾ ಪೊಲೀಸ್ ಭಯದಿಂದ ಅಲ್ಲಿ ಜಾಂಡಾ ಹೂಡುವುದನ್ನು ತಪ್ಪಿಸಬಹುದು.
ಕೆಲವು ಯುವಕರ ಗುಂಪು ಎಣ್ಣೆ ಹೊಡೆದು ಮತ್ತಿನಲ್ಲಿ ಜಗಳವಾಡುವ ಪ್ರವೃತ್ತಿಗಳು ಹೆಚ್ಚುತ್ತಿವೆ. ಈ ಗುಂಪುಗಳು ಡ್ರಗ್ಸ್ ಅಡಿಕ್ಟ್ ಆಗಿರುವ ಸಂದರ್ಭಗಳೇ ಹೆಚ್ಚು. ಯಾವ ಭಾಗದಿಂದ ಎಂತಹ ಡ್ರಗ್ಸ್ ಇವರಿಗೆಲ್ಲಾ ಸಿಗುತ್ತಿದೆ ಎಂಬ ಮಾಹಿತಿಯನ್ನು ಕಲೆಹಾಕಬೇಕು. ಡ್ರಗ್ಸ್ ಪೂರೈಸುವ ಜಾಲವನ್ನು, ಕೇಂದ್ರಗಳನ್ನು ಶೋಧಿಸಬೇಕು. ಎಷ್ಟೋ ಹುಡುಗರು ಇಂತಹ ಗುಂಪುಗಳಿಗೆ ಸಿಲುಕಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತರೆಯವರನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಾದಿಯಾಗಿ ಪೋಷಕರೂ ಸಹ ಎಚ್ಚರಿಕೆ ವಹಿಸಬೇಕು.

      ಖಾಲಿ ನಿವೇಶನ ಇರುವ, ನಗರಕ್ಕೆ ಹೊಂದಿಕೊಂಡ ಹೊರವಲಯದ ಜಾಗಗಳಲ್ಲಿ, ಹೊಸ ಲೇಔಟ್‍ಗಳನ್ನೇ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸಂಜೆಯಾದರೆ ಸಾಕು ಪುಂಡರ ಗುಂಪು ನಶೆ ಏರಿಸಿಕೊಂಡು ಮತ್ತಿನಲ್ಲಿ ತಮ್ಮ ಆರ್ಭಟ ಶುರು ಹಚ್ಚಿಕೊಳ್ಳುತ್ತಾರೆ. ಹೊರ ಜಗತ್ತಿನ ಪರಿವೇ ಇಲ್ಲದಂತೆ ವರ್ತಿಸುತ್ತಾರೆ. ಇಂತಹ ಪ್ರದೇಶಗಳಲ್ಲಿ ನಾಗರಿಕರಾದವರು ಓಡಾಡುವುದಾದರೂ ಹೇಗೆ? ಎಲ್ಲೆಲ್ಲಿ ಪುಂಡರ ಗುಂಪು ಸೇರುತ್ತದೆಯೋ ಅಂತಹ ತಾಣಗಳನ್ನು ಪೊಲೀಸ್ ಇಲಾಖೆ ಪತ್ತೆ ಹೆಚ್ಚಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪುಂಡರ ಗುಂಪುಗಳು ಮತ್ತಷ್ಟು ಹೆಚ್ಚಿ ಅಕ್ರಮ ಚಟುವಟಿಕೆಗಳು ಮರುಕಳಿಸುತ್ತಲೇ ಇರುತ್ತವೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap