ತುಮಕೂರು : ಲಸಿಕಾಕರಣ ; ನೂರರಷ್ಟು ಗುರಿ ಸಾಧಿಸಲು ಸೂಚನೆ!

 ತುಮಕೂರು :

      ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಮೂಲಕ ನೂರರಷ್ಟು ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ರಾಕೇಶ್‍ಸಿಂಗ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೋವಿಡ್ ಲಸಿಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ನಿರ್ದೇಶಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಮೂಲಕ ಲಸಿಕಾಕರಣವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು. ಯಾವುದೇ ಕಾರಣಕ್ಕೂ ಲಸಿಕೆ ವಿತರಣೆಯಲ್ಲಿ ವಿಳಂಬ ಮಾಡಬಾರದು. ಎಲ್ಲರಿಗೂ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

     ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಾದ್ಯಂತ ಲಸಿಕಾಕರಣ ಯಶಸ್ವಿಯಾಗಿ ನಡೆಯುತ್ತಿದೆ. ತಾಲೂಕು ಹಾಗೂ ಗ್ರಾಮಗಳಲ್ಲಿ ಕಾರ್ಯಪಡೆ ಮೂಲಕ ತಾಲೂಕುವಾರು, ಗ್ರಾಮ ಪಂಚಾಯತ್‍ವಾರು ಗುರಿ ನೀಡಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದರು.

     ಆಶಾ-ಅಂಗನವಾಡಿ ಮನೆ-ಮನೆ ಭೇಟಿ, ದೂರವಾಣಿ ಸಂಪರ್ಕದ ಮೂಲಕ, ಶಾಲೆಗಳ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಲಸಿಕೆ ಸೇರಿದಂತೆ ಮೂರು ವಿಧಾನಗಳ ಮುಖೇನ ಲಸಿಕೆ ನೀಡಲಾಗುತ್ತಿದೆ. ಲಸಿಕಾಕರಣದಲ್ಲಿ ಎಲ್ಲಾ ಅಧಿಕಾರಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಲಸಿಕಾಕರಣವನ್ನು ನೂರರಷ್ಟು ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.

     ನಗರ ಪ್ರದೇಶದಲ್ಲಿ ಲಸಿಕಾಕರಣ ಈಗಾಗಲೇ ನೂರರಷ್ಟು ಪೂರ್ಣಗೊಳ್ಳುವ ಹಂತ ತಲುಪಿದೆ. ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಮನೆ-ಮನೆಗಳಿಗೆ ಭೇಟಿ ಲಸಿಕೆ ಬಗ್ಗೆ ಅರಿವು ಮೂಡಿಸಿ ಲಸಿಕಾಕರಣ ಯಶಸ್ವಿಗೊಳಿಸಲಾಗುತ್ತಿದೆ. ಯಾವುದೇ ಸಮಸ್ಯೆ ಎದುರಾಗದಂತೆ ಲಸಿಕಾಕರಣ ನಡೆಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಪಾಲಿಕೆ ಆಯಕ್ತೆ ರೇಣುಕಾ, ಆರ್‍ಸಿಎಚ್ ಅಧಿಕಾರಿ ಡಾ. ಕೇಶವರಾಜ್ ಸೇರಿದಂತೆ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap