ಬಳ್ಳಾರಿ ಹಾಸ್ಟೆಲ್​ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಪೊಲೀಸ್ ವಶಕ್ಕೆ

ಬಳ್ಳಾರಿ: ಖಾಸಗಿ ವಸತಿ ಶಾಲೆಯಲ್ಲಿ ಸಹಪಾಠಿ ಸೇರಿ ವಾರ್ಡನ್​ ಮೇಲೆ ಹಲ್ಲೆ ಮಾಡಿ ಓರ್ವನ ಸಾವಿಗೂ ಕಾರಣನಾಗಿದ್ದ ಬಳಿಕ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ಮಾಡಿದ​ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಐಜಿಪಿ ಹರ್ಷ ಹಾಗೂ ಎಸ್ಪಿ ಸುಮನ್ ಡಿ.ಪನ್ನೇಕರ್ ಮಾಹಿತಿ ನೀಡಿದರು.

ಐಜಿಪಿ ಹರ್ಷ ಮಾತನಾಡಿ, “ಬ್ರೂಸ್​ ಪೇಟೆಯ ಪೊಲೀಸ್​ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಘಟನೆ ನಡೆದಿತ್ತು. ವಸತಿ ಶಾಲಾ ವ್ಯವಸ್ಥೆ ಅಲ್ಲಿತ್ತು. ಮಾರ್ಚ್ 7ರ ರಾತ್ರಿ 9 ವಿದ್ಯಾರ್ಥಿಗಳು ತಂಗಿದ್ದರು. ಆ ವಿದ್ಯಾರ್ಥಿಗಳಲ್ಲಿ ಓರ್ವ ಬಾಲಕ 7 ವಿದ್ಯಾರ್ಥಿಗಳು ಹಾಗು ವಾರ್ಡನ್​ ಮೇಲೆ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದ. ತಕ್ಷಣ ನಾವು ಗಂಭೀರ ಸ್ವರೂಪದ ಪ್ರಕರಣವೆಂದು ಪರಿಗಣಿಸಿ ತನಿಖೆ ಕೈಗೊಂಡೆವು. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಅಪ್ರಾಪ್ತ ಬಾಲಕ ನಮ್ಮ ತಂಡದ ವಶದಲ್ಲಿದ್ದು, ತನಿಖೆ ವಿಭಿನ್ನವಾಗಿರುತ್ತದೆ. ಪೊಲೀಸರಲ್ಲದೇ ಕೌನ್ಸೆಲಿಂಗ್​ ತಂಡವೂ ಇರಲಿದೆ. ಈತನಿಗೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ” ಎಂದರು.

ಎಸ್ಪಿ ಸುಮನ್ ಪನ್ನೇಕರ್ ಮಾತನಾಡಿ, “ಘಟನೆಯ ಬಳಿಕ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕ ಘಟನಾ ಸ್ಥಳದಿಂದ ತೆರಳಿದ್ದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಐಜಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಎಲ್ಲಾ ಸ್ಥಳಗಳು ಹಾಗು ಸಿಸಿಟಿವಿ ಪರಿಶೀಲಿಸಿದ ಬಳಿಕ ಬಾಲಕನ ಪತ್ತೆಯಾಗಿದ್ದಾನೆ” ಎಂದು ಹೇಳಿದರು.

ಈ ಘಟನೆಯಿಂದ ಆಕ್ರೋಶಗೊಂಡ ಎಬಿವಿಪಿ ಸಂಘಟನೆ ವಸತಿ ಶಾಲೆಯ ನಿರ್ಲಕ್ಷ್ಯದ ವಿರುದ್ಧ ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿ ಮುಖಂಡ ದಿಲೀಪ್ ಮಾತನಾಡಿ, “ಗುರುಕುಲ ಶಾಲೆಯ ವಸತಿ ಗೃಹದಲ್ಲಿ ಓರ್ವ ವಿದ್ಯಾರ್ಥಿ ತನ್ನ ಸಹಪಾಠಿಗಳ ಮೇಲೆ ಹಲ್ಲೆ ಮಾಡಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಬಳ್ಳಾರಿಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂಬ ಸುದ್ದಿ ಇಲ್ಲಿನ ಕಾಲೇಜು ಕ್ಯಾಂಪಸ್​ಗಳಲ್ಲಿ ಹಬ್ಬುತ್ತಿದೆ. ಗುರುಕುಲ ಶಾಲೆಯಲ್ಲಿ ನಡೆದ ಘಟನೆಯಿಂದ ಸಾವನ್ನಪ್ಪಿದ್ದ ವಿದ್ಯಾರ್ಥಿಯ ಪೋಷಕರು ಹಲ್ಲೆ ಮಾಡಿದ್ದ ವಿದ್ಯಾರ್ಥಿ ಡ್ರಗ್ಸ್​​​ ಸೇವನೆ ಮಾಡಿದ್ದ ಎಂದು ಹೇಳಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೇಗೆ ಮಾದಕ ದ್ರವ್ಯಗಳು ಪೂರೈಕೆ ಆಗುತ್ತಿವೆ ಎಂಬುದು ಅಚ್ಚರಿಯ ವಿಚಾರ. ಇಂಥವುಗಳ ವಿರುದ್ಧ ಯಾಕೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ?. ಕೂಡಲೇ ಗುರುಕುಲ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೃತ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕು” ಎಂದು ಆಗ್ರಹಿಸಿದರು.

Recent Articles

spot_img

Related Stories

Share via
Copy link