ತುಮಕೂರು : ಅಸಮರ್ಪಕ -ಕಳಪೆ ಸ್ಮಾರ್ಟ್ ರಸ್ತೆ ಕಾಮಗಾರಿ!!

ತುಮಕೂರು :

      ಅಸಮರ್ಪಕ ಯೋಜನೆ, ಕಳಪೆ ಕಾಮಗಾರಿ ಎಂಬ ಸಾರ್ವಜನಿಕ ದೂರುಗಳ ಅಪವಾದಕ್ಕೀಡಾಗಿರುವ ನಗರದ ಜನರಲ್ ಕಾರ್ಯಪ್ಪ ಸ್ಮಾರ್ಟ್ ರಸ್ತೆಯ ಕಾಮಗಾರಿ ಮತ್ತೆ ವಿವಾದಕ್ಕೀಡಾಗಿದೆ. ಸಮಗ್ರ ತನಿಖೆಯಾಗದ ಹೊರತು ಈ ರಸ್ತೆ ಕಾಮಗಾರಿಯ ಬಿಲ್ ಅನ್ನು ತಡೆಹಿಡಿಯಲು ಸ್ಮಾರ್ಟ್ ಸಿಟಿ ಸಮಿತಿ ನಿದೇಶಕರೂ ಆಗಿರುವ, ನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಅವರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

      ನಗರದ ಕೆಲವು ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳಾಗಿ ಅಭಿವೃದ್ಧಿಪಡಿಸಿಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಲ್ಲಿ ಜನರಲ್ ಕಾರ್ಯಪ್ಪ ರಸ್ತೆಯನ್ನು ಪೈಲೆಟ್ ರಸ್ತೆಯಾಗಿ 363.37 ಲಕ್ಷ ರೂ. ವೆಚ್ಚದಲ್ಲಿ 5.12.2018ರಲ್ಲಿ ಕಾಮಗಾರಿ ಆರಂಭಿಸಲಾಯಿತು. 12 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ ಎರಡು ವರ್ಷ ಮುಗಿದರೂ ಪೂರ್ಣ ಪ್ರಮಾಣದಲ್ಲಿ ಯೋಜನೆ ಪೂರ್ಣಗೊಂಡಿಲ್ಲ.

       ಸ್ಮಾರ್ಟ್ ರಸ್ತೆಯೆಂದರೆ ಸುಸಜ್ಜಿತ, ಸುಗಮ ಸಂಚಾರಕ್ಕೆ ಅನುವಾಗಿರುತ್ತದೆ, ಮಾದರಿ ಸಂಚಾರಿ ಸೌಲಭ್ಯಗಳಿರುತ್ತವೆ ಎಂದು ನಿರೀಕ್ಷಿಸಿದ್ದ ಸಾರ್ವಜನಿಕರಿಗೆ ಈ ಸ್ಮಾರ್ಟ್ ರಸ್ತೆ ವ್ಯವಸ್ಥೆ ನಿರಾಶೆ ಮೂಡಿಸಿದೆ. ಇಲ್ಲಿ ಅಂತಹ ಯಾವುದೇ ಸುಧಾರಣೆ ಕಂಡುಬಂದಿಲ್ಲ, ಬದಲಿಗೆ ರಸ್ತೆ ಇನ್ನಷ್ಟು ಕಿರಿದಾಗಿ ವಾಹನ ಸಂಚಾರ ಮತ್ತಷ್ಟು ಕಿರಿಕಿರಿಯಾಗಿದೆ. ಫುಟ್‍ಪಾತ್, ವಾಹನ ಪಾರ್ಕಿಂಗ್ ಜಾಗ ವಿಂಗಡಿಸಿ ರಸ್ತೆಯನ್ನು ಇಕ್ಕಟ್ಟು ಮಾಡಲಾಗಿದೆ. ವಾಹನ ದಟ್ಟಣಿ ಹೆಚ್ಚಿರುವ, ಮುಂದಿನ ದಿನಗಳಲ್ಲಿ ಸಂಚಾರ ಸಾಂದ್ರತೆ ಮತ್ತಷ್ಟು ಹೆಚ್ಚಾಗುವ ಈ ರಸ್ತೆ ಅಭಿವೃದ್ಧಿಯಲ್ಲಿ ದೂರದೃಷ್ಠಿ ಇಲ್ಲ. ಈ ಕಾರಣದಿಂದಾಗಿ ರಸ್ತೆಯನ್ನು ಅಗಲಗೊಳಿಸಿ ವಾಹನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕಾಗಿತ್ತು. ಅಂತಹ ಕೆಲಸ ಈ ಸ್ಮಾರ್ಟ್ ರಸ್ತೆಯಲ್ಲಿ ಆಗಿಲ್ಲ ಎಂದು ಸಾರ್ವಜನಿಕರಿಂದ ತಮಗೆ ಸಾಕಷ್ಟು ದೂರುಗಳು ಬರುತ್ತಿವೆ. ಸ್ಮಾರ್ಟ್ ಸಿಟಿಯವರು ರಸ್ತೆ ಕಾಮಗಾರಿಯನ್ನು ಮುಗಿಸಿ ಜವಾಬ್ದಾರಿ ಕಳೆದುಕೊಳ್ಳುವರು, ಗುತ್ತಿಗೆದಾರರು ಬಿಲ್ ಪಡೆದು ಹೋಗುವರು. ಆದರೆ, ಮುಂದೆ ಈ ರಸ್ತೆಯಲ್ಲಿ ಸಮಸ್ಯೆಗಳಾದರೆ ನಗರಪಾಲಿಕೆಯೇ ನಿರ್ವಹಿಸಬೇಕು, ಹೀಗಾಗಿ ಸಮರ್ಪಕ ಕಾಮಗಾರಿ ಆಗದ ಹೊರತು ಗುತ್ತಿಗೆದಾರರಿಗೆ ಬಿಲ್ಲು ಪಾವತಿ ಮಾಡದೆ, ತಡೆಯಿಡಿಯಿರಿ ಎಂದು ಮೇಯರ್ ಹೇಳಿದ್ದಾರೆ.

      ಈ ಸಂಬಂಧ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಿಗೆ ಮೇಯರ್ ಫರಿದಾಬೇಗಂ ಅವರು ಈ ತಿಂಗಳ 4ರಂದು ಪತ್ರ ಬರೆದು ಯೋಜನೆ, ಕಾಮಗಾರಿಯ ವಿವರಗಳನ್ನು ಕೇಳಿದ್ದಾರೆ. ಜನರಲ್ ಕಾರ್ಯಪ್ಪ ಸ್ಮಾರ್ಟ್ ರಸ್ತೆಯ ಕಾಮಗಾರಿಯು ಕಳಪೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿಲ್ಲದಿರುವ ಬಗ್ಗೆ ಸಾರ್ವಜನಿಕರ ದೂರಿನಿಂದ ತಿಳಿದು ಬಂದಿದೆ. ಈ ರಸ್ತೆಯ ಅಗಲ ಕಡಿಮೆಯಾಗಲು ಕಾರಣವೇನು? ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಬಳಸಿರುವಂತಹ ನಿಯಮಗಳು ಯಾವುವು? ಅಭಿವೃದ್ಧಿಗೊಂಡ ರಸ್ತೆ ಎಷ್ಟು ಉದ್ದ ಇದೆ? ರಸ್ತೆಯ ಅಭಿವೃದ್ಧಿ ವೆಚ್ಚ ಎಷ್ಟು? ಸಾರ್ವಜನಿಕರಿಗೆ ಈ ರಸ್ತೆಯಿಂದ ಏನು ಉಪಯೋಗವಾಗಿದೆ? ಸಾರ್ವಜನಿಕ ಹಿತದೃಷ್ಟಿಯಿಂದ ಅಂದಾಜು ಪಟ್ಟಿಯಂತೆ ಕಾರ್ಯನಿರ್ವಹಿಸಿರುವ ಹಾಗೂ ವೆಚ್ಚ ಭರಿಸಿರುವ ಅಳತೆ ಪಟ್ಟಿ ನೀಡಬೇಕು ಎಂದು ಕೇಳಿದ್ದಾರೆ.

      ಈ ರಸ್ತೆಯ ಎರಡು ಬದಿ ಡಕ್ಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಫುಟ್‍ಪಾತ್, ವಾಹನ ಪಾರ್ಕಿಂಗ್ ಜಾಗ ವಿಂಗಡಿಸಿ, ರಸ್ತೆಗೆ ಡಾಂಬರು ಮಾಡಲಾಗಿದೆ. ಇದರ ಹೊರತಾಗಿ ಇಲ್ಲಿ ಸ್ಮಾರ್ಟ್ ರಸ್ತೆ ಅನ್ನಿಸಿಕೊಳ್ಳುವ ಇನ್ನಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸಾಲದಕ್ಕೆ ಹಿಂದೆ ಇದ್ದ ರಸ್ತೆಯನ್ನು ಇನ್ನಷ್ಟು ಕಿರಿದು ಮಾಡಲಾಗಿದೆ ಎಂಬುದು ಸ್ಥಳೀಯರ ದೂರು.

      ವಿವಿಧ ಕಾರಣಗಳಿಂದ ಈ ರಸ್ತೆಯ ಮೂಲ ಯೋಜನೆ ಬದಲಾಗುತ್ತಾ, ಕಡೆಗೆ ಈ ರೂಪ ಪಡೆದಿದೆ. ಯಾವುದೇ ರಸ್ತೆಯ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸುವಾಗ ಆ ಭಾಗದ ವ್ಯಾವಹಾರಿಕ ಚಟುವಟಿಕೆ, ವಾಹನ ಸಾಂದ್ರತೆ, ಜನಸಂದಣಿಯನ್ನು ಪ್ರಮುಖವಾಗಿ ಆಧರಿಸಿ ರೂಪಿಸಬೇಕು. ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಕಾರ್ಯಪ್ಪ ರಸ್ತೆಯಲ್ಲಿ ವಾಹನಗಳ ಒತ್ತಡ ಹೆಚ್ಚಾಗಿರುತ್ತದೆ, ಎಂಜಿ.ರಸ್ತೆಯ ವಾಣಿಜ್ಯ ಒತ್ತಡ ನಿಯಂತ್ರಣದ ಪ್ರದೇಶವಾಗಲಿರುವ ಈ ರಸ್ತೆಯ ಅಭಿವೃದ್ಧಿಗೆ ದೂರದೃಷ್ಟಿ ಇಲ್ಲದ ಯೋಜನೆ ರೂಪಿಸಲಾಗಿದೆ. ಇಕ್ಕಟ್ಟಾಗಿರುವ ಈ ರಸ್ತೆ ಕೆಲವೇ ವರ್ಷಗಳಲ್ಲಿ ಏಕಮುಖ ಸಂಚಾರ ಮಾಡುವಂತಹ ಪರಿಸ್ಥಿತಿ ಮುಂದೆ ಬರುತ್ತದೆ. ಇಲ್ಲಿ ರಸ್ತೆಗಿಂಥಾ ಫುಟ್‍ಪಾತ್‍ಗೇ ಆದ್ಯತೆ ನೀಡಿದಂತಿದೆ ಎಂದು ಮೇಯರ್ ಫರೀದಾ ಬೇಗಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ನನಗೆ ತಿಳಿದಂತೆ ಜನರಲ್ ಕಾರ್ಯಪ್ಪ ರಸ್ತೆಯ ಪ್ರಮುಖ ಕಟ್ಟಡಗಳಲ್ಲಿ ನಿಯಮಾನುಸಾರ ಹೊಂದಿರಬೇಕಾದ ವಾಹನ ಪಾರ್ಕಿಂಗ್‍ಗೆ ಸ್ಥಳ ಮೀಸಲಿಟ್ಟಿಲ್ಲ. ಆಯಾ ಮಳಿಗೆಗಳಿಗೆ ಬರುವ ಗ್ರಾಹಕರು ಅದರದೇ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಲು ಅವಕಾಶವಿದ್ದರೆ, ಈ ರಸ್ತೆಯಲ್ಲಿ ಪಾರ್ಕಿಂಗ್ ಒತ್ತಡ ಕಮ್ಮಿಯಾಗಿರುತ್ತಿತ್ತು. ಇದಾವುದೂ ಇಲ್ಲದೆ, ರಸ್ತೆಯನ್ನು ಚಿಕ್ಕದು ಮಾಡಿ, ಪಾರ್ಕಿಂಗ್ ಜಾಗ ಅಗಲ ಮಾಡಿರುವುದು, ಅಕ್ಕಪಕ್ಕದ ವಾಣಿಜ್ಯ ಮಳಿಗೆಯವರಿಗೆ ವಾಹನ ನಿಲುಗಡೆಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಹೇಳಿದರು.

      ಈ ರಸ್ತೆಗೆ ಹೊಂದಿಕೊಂಡಂತಿರುವ ಕನ್ಸರ್‍ವೆನ್ಸಿಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿತ್ತು, ಆದರೆ, ಅದರ ಬಳಕೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಸ್ಮಾರ್ಟ್ ರಸ್ತೆಯಲ್ಲೂ ವಾಹನ ಸಂಚಾರ ನಿಯಂತ್ರಣಕ್ಕೆ ಬಾರದೆ, ಕೆಲವು ಸಾರಿ ಸಂಚಾರಿ ಪೊಲೀಸರು ಸಂಚಾರ ನಿಯಂತ್ರಣ ಮಾಡುವ ಪರಿಸ್ಥಿತಿ ಬರುತ್ತದೆ ಎಂದ ಮೇಲೆ ಸ್ಮಾರ್ಟ್ ರಸ್ತೆ ಮಾಡಿ ಏನು ಸಾರ್ಥಕ ಬಂತು ಎಂದು ಪ್ರಶ್ನಿಸಿದರು.
ಈ ರಸ್ತೆಯ ಪಾರ್ಕಿಂಗ್ ಸಾರ್ವಜನಿಕ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತದೆ. ಇಲ್ಲಿ ಜಾಗ ಸಿಗದವರು ಅಲ್ಲಲ್ಲಿ ಫುಟ್‍ಪಾತ್‍ನಲ್ಲೂ ವಾಹನ ನಿಲ್ಲಿಸಿಬಿಡುತ್ತಾರೆ. ಹೀಗಾಗಿ, ಪಾದಚಾರಿಗಳು ಫುಟ್‍ಪಾತ್ ಬಿಟ್ಟು ರಸ್ತೆಗಿಳಿದು ಓಡಾಡುವಂತಾಗಿದೆ. ಇದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತದೆ. ಈ ರಸ್ತೆಯನ್ನು ಮತ್ತಷ್ಟು ಅಗಲ ಮಾಡಿ ಮಧ್ಯೆ ವಿಭಜಕಗಳನ್ನು ಅಳವಡಿಸಬೇಕಾಗಿತ್ತು ಎಂದು ಇಲ್ಲಿನ ವ್ಯಾಪಾರಿ ಮಂಜುನಾಥ್ ಹೇಳುತ್ತಾರೆ.

     ಕಾರ್ಯಪ್ಪ ರಸ್ತೆಯ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಿಲ್ಲ. ಇಲ್ಲಿ ಸದ್ಯ ಕೇಬಲ್, ಕುಡಿಯುವ ನೀರು, ಗ್ಯಾಸ್ ಲೈನ್‍ಗೆ ಸಂಪರ್ಕ ನೀಡಲಾಗಿದೆ. ಅಂಡರ್‍ಗ್ರೌಂಡ್ ವಿದ್ಯುತ್ ಲೈನ್ ಅಳವಡಿಕೆಯಾಗಿಲ್ಲ. ಅಂಡರ್‍ಗ್ರೌಂಡ್ ವಿದ್ಯುತ್ ಮಾರ್ಗ ಹಾಗೂ ಆ ಮೂಲಕ ಬೀದಿ ದೀಪ ಅಳವಡಿಸುವ ಕಾರ್ಯ ಬಾಕಿ ಇದೆ. ಹೊಸದಾಗಿ ಬೀದಿ ದೀಪ ಅಳವಡಿಕೆಗೆ ಕಂಬಗಳನ್ನು ನೆಡಲಾಗಿದೆ. ರಸ್ತೆಯ ಮನೆ, ಅಂಗಡಿಗಳಿಗೆ ಅಂಡರ್‍ಗ್ರೌಂಡ್ ವಿದ್ಯುತ್ ಸಂಪರ್ಕಕ್ಕಾಗಿ ಪೈಪ್‍ಗಳನ್ನು ಅಳವಡಿಸಲಾಗಿದೆ. ಆದರೆ ಸಂಪರ್ಕ ಒದಗಿಸಲು ಆಗಿಲ್ಲ. ಯೋಜನೆಯಂತೆ ಕಾಮಗಾರಿಯಾಗಿಲ್ಲ. ಈಗ ಸಿದ್ಧವಿರುವ ರಸ್ತೆಯಲ್ಲೂ ಸಂಚಾರ ವ್ಯವಸ್ಥೆ ಸುಧಾರಣೆ ಸಾಧÀ್ಯವಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap