ತುಮಕೂರು :
ಜಿಲ್ಲೆಯಲ್ಲಿ ಮೊದಲ ಹಂತದ 168 ಗ್ರಾಮ ಪಂಚಾಯಿತಿ ಚುನಾವಣೆಗೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ಪ್ರಚಾರ ವ್ಯಾಪಕವಾಗಿ ಜರುಗುತ್ತಿದೆ.
ಸ್ಪರ್ಧಿಸಿರುವ ವಾರ್ಡ್ ವ್ಯಾಪ್ತಿಯಲ್ಲಿ ಕರಪತ್ರ ಹಂಚಿ ಮತಯಾಚಿಸುತ್ತಿರುವ ಅಭ್ಯರ್ಥಿಗಳ ಬಳಿ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದ ಮತದಾರರು ಒಂದು ಓಟಿಗೆ ಎಷ್ಟು ಕೊಡ್ತೀರಿ ಎಂಬ ಪ್ರಶ್ನೆಯನ್ನು ನೇರವಾಗಿ ಮುಂದಿಡುತ್ತಿರುವುದು ಪಂಚಾಯಿತಿ ಚುನಾವಣೆಯಲ್ಲಿ ಕುರುಡು ಕಾಂಚಾಣದ ಕಿಮ್ಮತ್ತಿಗೆ ಸಾಕ್ಷಿಎನಿಸಿದೆ.
ಇಷ್ಟು ದಿನ ನೀವು ಮಾಡಿದ್ದು ಸಾಕು, ಹಾಗಾಗಿ ನಮ್ಗೆ ಬರೋದು ಬರ್ಲಿ. ಬರೀ ಪಾಂಪ್ಲೆಟ್ ಕೊಟ್ರೆ ಆಗೋಯ್ತಾ, ನಮ್ಮನು ನೋಡ್ಕೊಳಿ ಅಂಥಾ ನೇರವಾಗಿ ಮತದಾರರೇ ಅಭ್ಯರ್ಥಿಗಳ ಮುಂದೆ ಬೇಡಿಕೆ ಇಡುತ್ತಿರುವುದು ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕಂಡು ಬಂದಿದ್ದು, ಮತದಾರರ ಬೇಡಿಕೆಯನ್ನು ಪೂರೈಸುವಲ್ಲಿ ಅಭ್ಯರ್ಥಿಗಳು ಮುಂದಾಗಿರುವುದು ಪ್ರಜಾಪ್ರಭುತ್ವದ ಪ್ರಥಮ ವೇದಿಕೆಯೂ ಹಣದಿಂದಲೇ ನಿರ್ಮಿತವಾಗುವಂತಹ ಆತಂಕಕಾರಿ ಸ್ಥಿತಿ ಬಂದೊದಗಿದೆ.
ನಮ್ಮ ಸಮುದಾಯದ ಮತದಾರರು ಇಷ್ಟು ಸಂಖ್ಯೆಯಲ್ಲಿದ್ದಾರೆ, ನಮ್ಮ ನೆಂಟರು, ಬೆಂಬಲಿಗರ ಇಷ್ಟು ಮನೆ ಈ ವಾರ್ಡ್‍ನಲ್ಲಿವೆ ಎಂದು ಲೆಕ್ಕ ಹೇಳಿ ಅಭ್ಯರ್ಥಿಗಳ ಮುಂದೆ ಪ್ರತೀ ಓಟಿಗೆ 500, 1000 ರೂ.ಗಳಿಗೆ ಬೇಡಿಕೆ ಇಡುತ್ತಿರುವುದು ಪಂಚಾಯಿತಿ ಅಖಾಡದಲ್ಲಿ ಈ ಬಾರಿ ಹೆಚ್ಚಾಗಿ ಕಂಡುಬರುತ್ತಿದ್ದು, ನಮ್ಮೂರಿಗೆ ರಸ್ತೆ ಮಾಡ್ಸಿ, ಅಲ್ಲಿ ಚರಂಡಿ ಹಾಳಾಗಿದೆ, ಬೀದಿದೀಪ ಇಲ್ಲ, ನೀರಿನ ವ್ಯವಸ್ಥೆ ಸರಿಮಾಡಿಸಿ ಎಂದು ಸಾರ್ವತ್ರಿಕ ಸಮಸ್ಯೆಯ ಬಗ್ಗೆ ಅಭ್ಯರ್ಥಿಗಳ ಬಳಿ ಚರ್ಚೆ ಮಾಡದಿರುವುದು ಪ್ರಜಾಪ್ರಭುತ್ವದ ದುರಂತವೆನಿಸಿದೆ.
ಅವಧಿಯಿಂದ ಅವಧಿಗೆ ಹೆಚ್ಚಾಗುತ್ತಿದೆ ಮತದ ರೇಟು!:
ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಳೆದ ಎರಡು ದಶಕಕ್ಕೆ ಹೋಲಿಸಿದರೆ ಅವಧಿಯಿಂದ ಅವಧಿಗೆ ಮತಹಾಕಲು ಇಡುತ್ತಿರುವ ಹಣದ ಬೇಡಿಕೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಹಿಂದೆಲ್ಲ 50 -100, 200, 300ರೂ. ಪ್ಯಾಕೆಟ್ ಮದ್ಯ ಹಂಚಿಕೆಗೆ ಸೀಮಿತವಾಗುತ್ತಿದ್ದ ಗ್ರಾಮ ಪಂಚಾಯಿತಿ ಅಖಾಡದಲ್ಲಿ ಈ ಬಾರಿ 500, 1000, 2000ದವರೆಗೆ ಹಣ ಹಂಚಿಕೆಯ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮೀಸಲು ಕ್ಷೇತ್ರದಲ್ಲಿ 500 ರೂ.ಗಳಾದರೆ, ಸಾಮಾನ್ಯ ಕ್ಷೇತ್ರದಲ್ಲಿ 1000ಕ್ಕೂ ಮೇಲ್ಪಟ್ಟು ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ. ವಿಧಾನಸಭೆ, ಲೋಕಸಭೆ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಹರಿಸಿದ ಹಣದ ಹರಿವು ಪಂಚಾಯ್ತಿ ಚುನಾವಣೆಯನ್ನು ದುಡ್ಡಿಲ್ಲದೆ ಗೆಲ್ಲದಂತೆ ಮಾಡಿದೆ ಎಂಬುದು ಹಿರಿಯರ ಅಂಬೋಣವಾಗಿದೆ.
ಹಳ್ಳಿ ಕೆಡಿಸ್ತಾವ್ರೆ ಹಿರಿತಲೆಗಳ ಆರೋಪ: ಕೊರೊನಾ ಲಾಕ್‍ಡೌನ್ ಸಿಟಿಯಿಂದ ಹಳ್ಳಿಗಳಿಗೆ ಮರಳಿದ ಎಷ್ಟೋ ಜನ ಯುವಕರು ಮರಳಿ ನಗರಕ್ಕೆ ಹೋಗುವ ಇಚ್ಚೆ ತೋರದೆ ಹಳ್ಳಿಯಲ್ಲಿ ನೆಲೆಸಿರುವವರು ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ರಾಜಕಾರಣದಲ್ಲಿ ಬದುಕಿನ ಹಾದಿಯನ್ನು ಕಂಡುಕೊಳ್ಳಲು ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದು, ಗ್ರಾಮ ಯುವ ಪಡೆಯನ್ನು ಕಟ್ಟಿಕೊಂಡು ಹಣ, ಪಾರ್ಟಿಯಂತೆಲ್ಲ ಯಥೇಚ್ಚ ವೆಚ್ಚ ಮಾಡುತ್ತಿದ್ದಾರೆಂಬ ಆರೋಪಗಳು ಜಾಸ್ತಿಯಾಗಿವೆ. ಸಾಮರಸ್ಯದಿಂದ ಕೂಡಿದ್ದ ಹಳ್ಳಿಯ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ ಎಂಬುದು ಗ್ರಾಮದ ಹಳೆ ತಲೆಗಳ ಆರೋಪವಾದರೆ, ಇಷ್ಟು ದಿನ ಹಳಬರು ಬರೀ ಪಂಚಾಯಿತಿ ಕುರ್ಚಿಯಲ್ಲಿ ಕೂತು ಅವರಿವರನ್ನು ಬೆದರಿಸಿ ಏನು ಅಭಿವೃದ್ಧಿ ಮಾಡದೆ ದರ್ಬಾರ್ ಮಾಡಿದ್ದೇ ಬಂತು.
ಯುವಜನರ ಕೈಗೆ ಅಧಿಕಾರ ಕೊಡಿ ಹಳ್ಳಿಯನ್ನು ಮಾದರಿಯಾಗಿ ಅಭಿವೃದ್ಧಿ ಮಾಡಿ ತೋರಿಸ್ತಿವೆ ಅಂಥಾ ಯುವಜನರು ಮತದಾರರ ಮನಗೆಲ್ಲಲು ಮುಂದಾಗುತ್ತಿರುವುದು ಕಂಡುಬಂದಿದೆ.
ಗ್ರಾಮದ ದೇವರುಗಳಿಗೆ ಹರಿಕೆ:
ಇನ್ನೂ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಗ್ರಾಮದಲ್ಲಿನ ದೇವಾಲಯಗಳಿಗೆ ತೆರಳಿ ಹರಿಕೆ ಹೊರುತ್ತಿರುವುದು ಹೆಚ್ಚಾಗಿ ಕಂಡುಬಂದಿದ್ದು, ನನ್ನನ್ನು ಗೆಲ್ಲಿಸಮ್ಮ, ನನ್ನಗೆಲ್ಲಿಸಪ್ಪ, ಗಂಟೆ ಹಾಕಿಸ್ತೀನಿ, ಕಾಣಿಕೆ ಒಪ್ಪಿಸ್ತೀನಿ, ಕುರಿ, ಕೋಳಿ ಬಲಿಕೊಡ್ತೀವಿ ಎಂದೆಲ್ಲ ಹರಿಕೆ ಹೊರುತ್ತಿರುವುದು ಕಂಡು ಬಂದಿದೆ. ಗ್ರಾಮದೇವತೆಗಳಿಗಷ್ಟೇ ಅಲ್ಲದೇ ಮನದಲ್ಲೇ ಧರ್ಮಸ್ಥಳ ಮಂಜುನಾಥಸ್ವಾಮಿ, ತಿರುಪತಿ ತಿಮ್ಮಪ್ಪ ಹೀಗೆ ದೂರದ ದೇವರುಗಳಿಗೆ ದರ್ಶನ ಮಾಡ್ತಿವಿ, ಮುಡಿ ಕೊಡ್ತೀವಿ ಎಂದೆಲ್ಲ ಹರಿಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಬೆಟ್ಟಿಂಗ್ ಸಹ ಜೋರು:
ಎಲೆಕ್ಷನ್ ಬಿಡ್ಲಾ, ಈಗ್ಲೇ ಹೇಳ್ತಿನಿ ಕಣ್ಲಾ, ನಮ್ಮ ಗೌಡ್ರೇ ಗೆಲ್ಲೋದು, ಅವಕ್ಕನೇ ಮೆಂಬರ್, ಎಷ್ಟು ಕಟ್‍ತ್ಯಾ ಕಟ್ಲಾ. ಕುರಿ ಕೋಳಿ, ಕ್ಯಾಶ್ ಏನು ಹೇಳ್ಳಾ ಎಂದು ಚುನಾವಣೆಗೂ ಮುಂಚೆಯೂ ಬೆಟ್ಟಿಂಗ್ ಸಹ ಕಟ್ಟುತ್ತಿರುವುದು ಪಂಚಾಯಿತಿ ಅಖಾಡವನ್ನು ರಂಗೇರಿಸುವಂತೆ ಮಾಡಿದೆ.
ಪರ-ವಿರೋಧವಾಗಿ ಮತದಾರರ ವಿಂಗಡಣೆ ಗ್ರಾಪಂ ಚುನಾವಣೆಯಲ್ಲಿ ಪ್ರತೀ ವಾರ್ಡ್‍ಗೆ 300ರಿಂದ 400 ಸಂಖ್ಯೆಯ ಮತದಾರರಿರುವುದರಿಂದ ಅವರು ಆ ಕಡೆಯವರು ಕಣ್ಲಾ, ಇವರು ನಮ್ಗೆ ಸಪೋರ್ಟ್ ಮಾಡೋಲ್ಲ. ಇವರು ಓಟು ಪಕ್ಕಾ ಎಂದು ಮತದಾರರನ್ನು ವಿಂಗಡಿಸಿ ರಾಜಕೀಯ ಲೆಕ್ಕಚಾರಗಳನ್ನು ಹಾಕುತ್ತಿರುವ ದೃಶ್ಯ ಕಂಡು ಬಂದಿದ್ದು, ಹಿರಿಯರ ಪಾದಕ್ಕೆರಗಿ ಮತಯಾಚಿಸುವುದು ಮಾತ್ರವಲ್ಲದೇ, ಅವರನ್ನು ಬೆಂಬಲಿಸದಿರುವವರನ್ನು ಗುರುತಿಸಿ ಬೆದರಿಕೆ ಒತ್ತಡ ತಂತ್ರವನ್ನು ಹಾಕುತ್ತಿರುವುದು ಕಂಡುಬಂದಿದೆ.ಇನ್ನೂ ಒಂದು ಮನೆಯ ಸದಸ್ಯರು ಸ್ಪರ್ಧಿಸಿರುವ ಹಲವೆಡೆ ಅವರ ಸಮೀಪ ಬಂಧುಗಳಿಗೆ ಯಾರನ್ನು ಬೆಂಬಲಿಸುವುದು, ಬಿಡುವುದು ಎಂಬುದು ಪೀಕಲಾಟ ತಂದೊಡ್ಡಿದೆ. ಅಂತೆಯೇ ಹಾಲಿ, ಮಾಜಿ ಎಂಎಲ್‍ಎಗಳು, ಜಿಪಂ ತಾಪಂ ಪ್ರತಿನಿಧಿಗಳ ಬೆಂಬಲಿಗರ ಮಧ್ಯೆ ಪ್ರತಿಷ್ಠೆಯ ಕಣವಾಗಿ ಗ್ರಾಪಂ ಚುನಾವಣೆ ಮಾರ್ಪಟ್ಟಿದೆ. ಆಡಳಿತಾರೂಢ ಪಕ್ಷದವರು ತಮಗೆ ಬೇಕಾದಂತೆ ಮೀಸಲಾತಿ ತಂದ್ಕೊಡವ್ರೆ ಅಂಥಾ ದೂಷಣೆಗಳು ಕೇಳಿಬರುತ್ತಿವೆ.
ಹಿಂದಿನ ಗ್ರಾಪಂ ಚುನಾವಣೆಗಳಿಗೂ ಈ ಚುನಾವಣೆಗಳಿಗೂ ಬಹಳಷ್ಟು ವ್ಯತ್ಯಾಸವನ್ನು ನಾವು ಕಾಣುತ್ತಿದ್ದೇವೆ. ಮೀಸಲು ವಾರ್ಡ್ ಚುನಾವಣೆ ಎದುರಿಸಲು ಕನಿಷ್ಠ 2 ಲಕ್ಷ ಖರ್ಚಾಗುತ್ತಿದೆ. ಇನ್ನೂ ಸಾಮಾನ್ಯ ಕ್ಷೇತ್ರಕ್ಕೆ 3-4 ಲಕ್ಷಕ್ಕೂ ಅಧಿಕ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಸಬರು, ಯುವಕರು ಚುನಾವಣೆ ಅಖಾಡಕ್ಕೆ ಹೆಚ್ಚಿನದಾಗಿ ಪ್ರವೇಶಿಸಿದ್ದು, ಜಾತಿ, ಗುಂಪುಗಳ ಸಂಖ್ಯೆಯನ್ನು ಆಧರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಅಭ್ಯರ್ಥಿಗಳೊಡನೆ ಚರ್ಚಿಸದೆ ಹಣದ ಪ್ರಸ್ತಾಪವೇ ಹೆಚ್ಚಾಗುತ್ತಿರುವುದು ತಳಹಂತದ ಪ್ರಜಾಪ್ರಭುತ್ವದ ವೇದಿಕೆಯ ಪತನಕ್ಕೆ ಕಾರಣವಾಗಲಿದೆ.
-ಪಿ.ಮೂರ್ತಿ ಮೈದಾಳ ಗ್ರಾಪಂ ಮಾಜಿ ಅಧ್ಯಕ್ಷರು.