ವಿದ್ಯುತ್‌ ಕಂಬ ಏರಿ ಮಹಿಳೆ ಹೈಡ್ರಾಮಾ….!

ಲಖನೌ:

     ವೈವಾಹಿಕ ಜೀವನದಲ್ಲಿ ಜಗಳ, ಮನಸ್ತಾಪ ನಡೆಯುವುದು ಸಹಜ. ಆದರೆ ಈಗ ಈ ಜಗಳಗಳು ಜೀವ ಕಳೆದುಕೊಳ್ಳುವ ಮತ್ತು ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗುತ್ತಿವೆ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿ ಮನನೊಂದು ಹೈಟೆನ್ಷನ್ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದಿದೆ. ಆದರೆ, ಧೈರ್ಯಶಾಲಿ ಪೊಲೀಸ್ ಕಾನ್‌ಸ್ಟೇಬಲ್‌ ತನ್ನ ಪ್ರಾಣವನ್ನು ಲೆಕ್ಕಿಸದೇ ಟವರ್‌ ಹತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಹೈ ವೋಲ್ಟೇಜ್ ಡ್ರಾಮಾವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

    ವರದಿಗಳ ಪ್ರಕಾರ, ಲಾಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಛತಾರಾ ಗ್ರಾಮದಲ್ಲಿ ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳಂತೆ. ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಕಾನ್‌ಸ್ಟೇಬಲ್‌ ರಾಹುಲ್ ಸಿಂಗ್. ಸೋಶಿಯಲ್ ಮಿಡಿಯಾ ನೆಟ್ಟಿಗರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಕಾನ್‌ಸ್ಟೇಬಲ್‌ ಅನ್ನು ಹೊಗಳಿದ್ದಾರೆ. 

   ವೈರಲ್ ವಿಡಿಯೊದಲ್ಲಿ ಮಹಿಳೆ ವಿದ್ಯುತ್ ಟವರ್‌ನ ತುತ್ತ ತುದಿಗೆ ಹೋಗಿರುವುದು ಸೆರೆಯಾಗಿದೆ. ಮಹಿಳೆಯ ಜೀವ ಉಳಿಸಲು ಪೊಲೀಸ್ ಕಾನ್‌ಸ್ಟೇಬಲ್‌ ಟವರ್ ಹತ್ತಿದ್ದಾರೆ. ಮಹಿಳೆ ಮತ್ತು ಕಾನ್‌ಸ್ಟೇಬಲ್‌ ಅನ್ನು ರಕ್ಷಿಸಲು ಇತರ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಟವರ್‌ನ ಕೆಳಗೆ ಬಲೆಯನ್ನು ಹಿಡಿದು ನಿಂತಿರುವುದು ಸೆರೆಯಾಗಿತ್ತು. ಪೊಲೀಸ್ ಅಧಿಕಾರಿಗಳು ನೀಡಿದ ಹಗ್ಗದ ಸಹಾಯದಿಂದ ಪೊಲೀಸ್ ಕಾನ್‌ಸ್ಟೇಬಲ್‌ ಮಹಿಳೆಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾನೆ.

   ಕೌಟುಂಬಿಕ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ 34 ವರ್ಷದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧದ ಬಗ್ಗೆ ಪತಿಗೆ ತಿಳಿದ ಬಳಿಕ ಆತನೊಂದಿಗೆ ಜಗಳವಾಡಿ ವಿದ್ಯುತ್ ಕಂಬವನ್ನು ಹತ್ತಿ ಹೈಟೆನ್ಷನ್ ತಂತಿಯನ್ನು ಹಿಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗೋರಖ್‌ಪುರದಲ್ಲಿ ನಡೆದಿತ್ತು. 

   ಪೊಲೀಸರ ಪ್ರಕಾರ, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 34 ವರ್ಷದ ಸುಮನ್ ದೇವಿ ಎಂದು ಗುರುತಿಸಲಾಗಿದ್ದು ಆಕೆ ಮೂರು ಮಕ್ಕಳ ತಾಯಿಯಾಗಿದ್ದು, ಅನೈತಿಕ ಸಂಬಂಧದಲ್ಲಿ ತೊಡಗಿದ್ದಳು ಎನ್ನಲಾಗಿದೆ. ಈಕೆ ತನ್ನ ಪತಿ 35 ವರ್ಷದ ರಾಮ್ ಗೋವಿಂದ್ ಬಳಿ ತನ್ನ ಪ್ರಿಯಕರನನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆದರೆ ಆತ ಇದಕ್ಕೆ ನಿರಾಕರಿಸಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಹೀಗಾಗಿ ದೇವಿ ವಿದ್ಯುತ್ ಕಂಬವನ್ನು ಹತ್ತಿ ಹೈಟೆನ್ಷನ್ ತಂತಿಯನ್ನು ಹಿಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ವಿಷಯ ತಿಳಿದ ಪೊಲೀಸರು ಸ್ಥಳೀಯ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲು ಹೇಳಿ ಅಂತಿಮವಾಗಿ ಮಹಿಳೆಯ ಜೀವವನ್ನು ಉಳಿಸಿದರು. ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.