ಗುಡಿಕೈಗಾರಿಕೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಲು ಆದ್ಯತೆ

 ತುಮಕೂರು : 

      ಯುವಜನರಿಗೆ ಕೌಶಲ್ಯ ತರಬೇತಿ ಕೊಟ್ಟು ದೇಶೀಯ ಉತ್ಪನ್ನಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಉತ್ಪಾದನೆಯಲ್ಲಿ ತೊಡಗಿಸಿದರೆ ಅವರ ಆರ್ಥಿಕ ಬೆಳವಣಿಗೆ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಪೂರಕವಾಗುತ್ತದೆ. ಅಂತಹವರಿಗೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆರ್ಥಿಕ ನೆರವು ಒದಗಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದು ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

      ಸೋಮವಾರ ನಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳ ಆಯ್ಕೆಯಲ್ಲಿ ಇನ್ನಷ್ಟು ಪಾರದರ್ಶಕತೆ ಅನುಸರಿಸಲು ಎಚ್ಚರಿಕೆ ವಹಿಸಲಾಗುತ್ತಿದೆ. ನಿಗಮದ ಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

      ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಅರಸು ಒಬ್ಬರು, ಅವರ ಹೆಸರಿನಲ್ಲಿರುವ ನಿಗಮವನ್ನು ಮತ್ತಷ್ಟು ಜನಪರಗೊಳಿಸುವ, ವಿಸ್ತರಿಸುವ, ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ಕೋರೋನಾ ಮಹಾಮಾರಿಯಿಂದಾಗಿ ಕಳೆದ ಸಾಲಿನಲ್ಲಿ ಅಂದರೆ 2019-20ಕ್ಕೆ ಹೊಲಿಕೆ ಮಾಡಿದರೆ 2020-21ರಲ್ಲಿ ನಿಗಮಕ್ಕೆ ನೀಡಿದ್ದ 80 ಕೋಟಿ ರೂ ಅನುದಾನದಲ್ಲಿ 206 ಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆಗಿರುವ ವ್ಯತ್ಯಾಸವನ್ನು 2021-22ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿ, ಮತ್ತಷ್ಟು ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದು ರಘು ಕೌಟಿಲ್ಯ ಭರವಸೆ ನೀಡಿದರು.

      ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರದ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಅದ್ಯತೆ ನೀಡುವ ಚಿಂತನೆ ಇದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 50 ಜನ ಹಿಂದುಳಿದ ವರ್ಗದ ಯುವಜನರಿಗೆ ಸೇರಿದಂತೆ ವರ್ಷದಲ್ಲಿ 1.25 ಲಕ್ಷ ಜನರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ತರಬೇತಿ ಪಡೆದಂತಂತಹ ಯುವಜನರಿಗೆ ಸರಕಾರಿ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆಗೆ ಅದ್ಯತೆ ನೀಡಲಾಗುವುದು. ಕಮ್ಮಾರ, ಚಮ್ಮಾರ, ಕುಂಬಾರ, ಬಡಗಿ, ಕ್ಷೌರಿಕರ ಕುಲ ಕಸುಬುಗಳಿಗೆ ಅಧುನಿಕ ಸ್ಪರ್ಷ ನೀಡಿ, ಅವುಗಳನ್ನು ಉತ್ತೇಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

      ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ಜನರಿಗೆ ವಿವಿಧ ಆರ್ಥಿಕ ಚಟುವಟಿಕೆ ಕೈಗೊಳ್ಳಲು ನಿಗಮದಿಂದ ಸಹಾಯಧನ ಹಾಗೂ ಬ್ಯಾಂಕ್ ಪಾಲಿನ ಮೊತ್ತ ಸೇರಿ ಗರಿಷ್ಠ 500 ಲಕ್ಷ ರೂ.ವರೆಗೆ ಸೌಲಭ್ಯ ಒದಗಿಸಲಾಗುವುದು. ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಚಟುವಟಿಕೆ ಅನುಸಾರ ಗರಿಷ್ಠ 2 ಲಕ್ಷ ರೂ.ವರೆಗೆ ಆರ್ಥಿಕ ನೆರವು, ಇದರಲ್ಲಿ ಶೇಕಡ 15ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇಕಡ 4ರಷ್ಟು ಬಡ್ಡಿ ದರದಲ್ಲಿ ಸಾಲ ನಿಡಲಾಗುವುದು ಎಂದು ಹೇಳಿದರು.

      ಕಿರುಸಾಲ ಯೋಜನೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ ಹಣ್ಣು, ತರಕಾರಿ, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರಕ್ಕೆ ವಾರ್ಷಿಕ ಶೇಕಡ 4ರ ಬಡ್ಡಿ ದರದಲ್ಲಿ ಗರಿಷ್ಠ 10 ಸಾವಿರ ರೂ. ಸಾಲ ಹಾಗೂ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಯೋಜನೆ ಅರ್ಜಿದಾರರು ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿರಬಾರದು ಎಂದು ರಘು ಕೌಟಿಲ್ಯ ಹೇಳಿದರು.

      ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ ಆಧುನಿಕ ಉಪಕರಣ ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು ವೃತ್ತಿ ಅನುಸಾರ ಗರಿಷ್ಠ 2 ಲಕ್ಷ ರೂ.ವರೆಗೆ ಆರ್ಥಿಕ ನೆರವು, ಇದರಲ್ಲಿ ಶೇಕಡ 15ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇಕಡ 2ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದರು.

      ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಈ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಸಿ, ಪಂಪ್‍ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಸಾಮೂಹಿಕ ನಿರಾವರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಕನಿಷ್ಟ 3 ಜನ ರೈತರು ಹೊಂದಿರುವ 8ರಿಂದ 15 ಎಕರೆ ಜಮೀನಿಗೆ 4 ಲಕ್ಷ ರೂ. ವೆಚ್ಚದಲ್ಲಿ 2 ಕೊಳವೆ ಬಾವಿ, 15 ಎಕರೆಗಿಂತಾ ಹೆಚ್ಚು ಜಮೀನಿಗೆ 6 ಲಕ್ಷ ರೂ. ವೆಚ್ಚದಲ್ಲಿ 3 ಕೊಳವೆ ಬಾವಿ ಕೊರೆಸಿ ಪಂಪ್‍ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ 50 ಸಾವಿರ ರೂ.ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು ಎಂದು ಹೇಳಿದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್, ತೆಂಗು ಮತ್ತು ನಾರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಕೆ.ಮಂಜುನಾಥ್, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಭಕ್ತ ಕುಚೇಲ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link