ಮಹಿಳಾ ದೌರ್ಜನ್ಯ ಹೆಚ್ಚಳ : ಸಾಂತ್ವನ ಅತಂತ್ರ

-ಸಾ.ಚಿ.ರಾಜಕುಮಾರ

ತುಮಕೂರು :

      ಲಾಕ್‍ಡೌನ್ ಸಂದರ್ಭದಲ್ಲಿ ಹೊರ ಬರಲಾಗದೆ ಸಂಕಷ್ಟ ಅನುಭವಿಸುತ್ತಿದ್ದ ಮಹಿಳಾ ದೌರ್ಜನ್ಯ ಪ್ರಕರಣಗಳು ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೆಚ್ಚುತ್ತಿದ್ದು, ಬಹುಪಾಲು ಪ್ರಕರಣಗಳನ್ನು ಸೂಕ್ತ ಸಮಾಲೋಚನೆ ಮೂಲಕ ಬಗೆಹರಿಸುವಲ್ಲಿ ಶ್ರಮಿಸುತ್ತಿದ್ದ ಸಾಂತ್ವನ ಕೇಂದ್ರಗಳು ಈಗ ಸರ್ಕಾರದ ಅನುದಾನವಿಲ್ಲದೆ ಅತಂತ್ರ ಸ್ಥಿತಿಗೆ ತಲುಪಿವೆ.

      ಕೌಟುಂಬಿಕ ದೌರ್ಜನ್ಯ ಪ್ರಕರಣಗಳೆಲ್ಲವನ್ನು ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗದು. ನೇರವಾಗಿ ನ್ಯಾಯಾಲಯಕ್ಕೂ ಹೋಗಲಾಗದು. ಯಾವುದೋ ಕಾರಣಗಳಿಗಾಗಿ ಸಮಸ್ಯೆಗಳು ಉದ್ಭವಿಸಿ ಅದು ಬೃಹದಾಕಾರಕ್ಕೆ ಬೆಳೆದು ಕೌಟುಂಬಿಕ ವ್ಯವಸ್ಥೆಯೇ ಹಾಳಾಗುವ ಹಂತಕ್ಕೆ ಹೋಗುತ್ತವೆ. ಇಂತಹ ಸಮಸ್ಯೆಗಳನ್ನು ಸಮಾಲೋಚನೆಯ ಮೂಲಕ ಬಗೆಹರಿಸಲೆಂದೇ ಸಾಂತ್ವನ ಕೇಂದ್ರಗಳನ್ನು ರಾಜ್ಯಾದ್ಯಂತ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ಇವುಗಳ ಕಾರ್ಯಾಚರಣೆಯಿಂದಾಗಿ ಪೊಲೀಸ್ ಠಾಣೆಗಳ ಕಾರ್ಯಭಾರವು ಕಡಿಮೆಯಾಗಿದೆ.

      ಅಂದರೆ, ಸಮಸ್ಯೆಗಳನ್ನು ಸುಲಭವಾಗಿ ಮತ್ತು ಯಾವುದೇ ಖರ್ಚು ವೆಚ್ಚವಿಲ್ಲದೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಬಹುದಾದ ಒಂದು ವ್ಯವಸ್ಥೆ ಸಾಂತ್ವನ ಕೇಂದ್ರಗಳಲ್ಲಿದೆ. ಇದಷ್ಟೇ ಅಲ್ಲ, ಮಹಿಳೆಯರ ಮೇಲಿನ ಇತರೆ ದೌರ್ಜನ್ಯ ಪ್ರಕರಣಗಳನ್ನು ಕೈಗೆತ್ತಿಕೊಂಡು ನ್ಯಾಯ ದೊರಕಿಸಿಕೊಡುವಲ್ಲಿ ಈ ಕೇಂದ್ರಗಳು ಯಶಸ್ವಿಯಾಗಿವೆ.

     2000-2001 ರಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಸಕ್ರಿಯವಾಗಿ ಮಹಿಳೆಯರ ಪರವಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳನ್ನು ಗುರುತಿಸಿ ಸರ್ಕಾರ ಅವುಗಳಿಗೆ ಕೇಂದ್ರ ನಡೆಸುವ ಮಾನ್ಯತೆ ನೀಡಿತ್ತು. ಪ್ರಕರಣಗಳು ಜಿಲ್ಲಾ ಮಟ್ಟದಲ್ಲಿ ಹೆಚ್ಚಿದಂತೆಲ್ಲಾ ಸರ್ಕಾರವು ಇವುಗಳ ಪರಿಣಾಮಕಾರಿ ಯೋಜನೆ ಪರಿಗಣಿಸಿ 2009 ರಿಂದ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಿತು. ಅದರಂತೆ ಪ್ರಸ್ತುತ ರಾಜ್ಯದಲ್ಲಿ 194 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಕೇಂದ್ರದಲ್ಲಿ ನಾಲ್ಕು ಮಂದಿ ಮಹಿಳಾ ಸಿಬ್ಬಂದಿ ಗೌರವ ಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

      ದುರಂತವೆಂದರೆ, ಕಳೆದ 7 ತಿಂಗಳಿನಿಂದಲೂ ಈ ಕೇಂದ್ರಗಳಿಗೆ ಅನುದಾನವಿಲ್ಲ. ಬದಲಿಗೆ ಈ ಹಿಂದೆ ಈ ಜನಪರ ಯೋಜನೆಯನ್ನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಸರ್ಕಾರ ಬಂದುಬಿಟ್ಟಿತ್ತು. ರಾಜ್ಯವ್ಯಾಪಿ ಸಂಘ ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದ ಸರ್ಕಾರ ಕೇಂದ್ರಗಳನ್ನು ಮುಂದುವರೆಸುವ ಭರವಸೆ ನೀಡಿತು. ಆದರೆ ಈವರೆವಿಗೂ ಈ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಅನುದಾನವೆ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಕನಿಷ್ಠ ಗೌರವ ಧನಕ್ಕೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಅತಂತ್ರರಾಗಿದ್ದಾರೆ.

      ಒಂದು ವೇಳೆ ಸರ್ಕಾರದ ಈ ನಿರ್ಲಕ್ಷ್ಯದಿಂದ ಕೇಂದ್ರಗಳೇ ಸ್ಥಗಿತಗೊಂಡರೆ ಮಹಿಳೆಯರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ. ಎಲ್ಲರೂ ಎಲ್ಲ ಸಮಯದಲ್ಲಿಯೂ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಕಾನೂನು ಕ್ರಮಗಳೆ ಕೌಟುಂಬಿಕ ವ್ಯವಸ್ಥೆಯಲ್ಲಿ ಮುಖ್ಯವಲ್ಲ. ಮನಸ್ಸುಗಳನ್ನು ಸರಿಪಡಿಸಿ ಹೊಂದಾಣಿಕೆ ಮಾಡುವ ಶ್ರಮ ಎಲ್ಲರಿಂದಲೂ ಸಾಧ್ಯವಾಗದು. ಆ ಕೆಲಸವನ್ನು ಈ ಕೇಂದ್ರಗಳು ಮಾಡುತ್ತಿದ್ದವು. ಇದೀಗ ಸರ್ಕಾರ ಈ ಕೇಂದ್ರಗಳಿಗೆ ಬದಲಾಗಿ ಕೇಂದ್ರ ಸರ್ಕಾರದ ಒನ್ ಸ್ಟಾಪ್ ಸೆಂಟರ್ ತೆರೆದಿರುವುದರಿಂದ ಕೇಂದ್ರಗಳು ಅಗತ್ಯವಿಲ್ಲ ಎಂದು ಹೇಳುತ್ತಿದೆಯಾದರೂ ಒನ್ ಸ್ಟಾಪ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಲೇ ಇಲ್ಲ. ಸಾಂತ್ವನ ಕೇಂದ್ರಗಳಿಗೆ ಹಣ ಬಿಡುಗಡೆ ಮಾಡಿ ಅವುಗಳನ್ನೇ ಸದೃಢಗೊಳಿಸಬಹುದಿತ್ತಲವೆ ಎಂಬ ಒತ್ತಾಯಗಳು ಸಾಮಾಜಿಕ ಸಂಘ ಸಂಸ್ಥೆಗಳಿಂದ ಕೇಳಿಬರುತ್ತಲೇ ಇವೆ.

      ಈಗ್ಗೆ 15 ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್‍ಗಳ ಮೂಲಕ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೂಡಲೇ ಸಾಂತ್ವನ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು. ಜನಪರವಾಗಿರುವ ಇಂತಹ ಯೋಜನೆಗಳು ಮೂಲೆ ಗುಂಪಾಗಲು ಬಿಡಬಾರದು ಎಂದು ಸಲಹೆಯನ್ನೂ ನೀಡಿದ್ದರು. ಆದರೆ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ.

      ಅನುದಾನ ಬರಲಿ, ಬಿಡಲಿ ಸಾಮಾಜಿಕ ಸೇವಾ ದೃಷ್ಟಿಯಿಂದ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಲೇ ಇವೆ. ತಿಂಗಳ ಕಟ್ಟಡ ಬಾಡಿಗೆ, ದೂರವಾಣಿ ವೆಚ್ಚ, ಸಿಬ್ಬಂದಿ ಗೌರವ ಧನ ಇತ್ಯಾದಿ ಭರಿಸಲಾಗದೆ ಸಂಸ್ಥೆಗಳು ಹೆಣಗಾಡುತ್ತಿವೆ. ಎಷ್ಟೋ ಸಿಬ್ಬಂದಿ ಈ ಕೇಂದ್ರಗಳನ್ನೇ ತೊರೆದು ಪರ್ಯಾಯ ಉದ್ಯೋಗ ಹುಡುಕಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. 20 ವರ್ಷಗಳಿಂದ ಸಮಾಜಮುಖಿಯಾಗಿ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ ಸರಿಪಡಿಸುತಾ ಬಂದಿರುವ, ನೊಂದವರ ಬಾಳಿನಲ್ಲಿ ಆಶಾಕಿರಣ ಮೂಡಿಸಿರುವ ಇಂತಹ ಸಂಸ್ಥೆಗಳ ಸಿಬ್ಬಂದಿಗಳು ಅತಂತ್ರರಾಗಲು ಸರ್ಕಾರಗಳು ಬಿಡಬಾರದು, ಇದು ಶೋಭೆಯಲ್ಲ ಎನ್ನುತ್ತಾರೆ ಲೇಖಕಿ ಬಾ.ಹ.ರಮಾಕುಮಾರಿ.

   
     ಅನುದಾನದ ಕೊರತೆ ಇದೆ ಎಂದು ಹೇಳಿ ಸರ್ಕಾರವು ಈ ಕೇಂದ್ರಗಳನ್ನು ಮುಚ್ಚಲು ಹೊರಟಾಗ ರಾಜ್ಯವ್ಯಾಪಿ ಪ್ರತಿಭಟನೆ ವ್ಯಕ್ತವಾಯಿತು. ಈ ಕೇಂದ್ರಗಳಲ್ಲಿ ಸಿಗುತ್ತಿರುವ ಪರಿಹಾರಾತ್ಮಕ ಕ್ರಮಗಳು ಅತ್ಯಂತ ಮಾದರಿಯಾಗಿವೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಮುಖಂಡರು ಸಾಂತ್ವನ ಕೇಂದ್ರಗಳ ಉಳುವಿಗಾಗಿ ಕೈಜೋಡಿಸಿದರು. ಆದರೆ ಕಳೆದ 7 ತಿಂಗಳಿನಿಂದ ಅನುದಾನ ಬಿಡುಗಡೆಯಾಗಿಲ್ಲ. ನೂರಾರು ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಈ ಯೋಜನೆಯನ್ನು ಒಂದು ಮಹತ್ವದ್ದು ಎಂದು ಪರಿಗಣಿಸಿ ದೀಪಾವಳಿ ವೇಳೆಗಾದರೂ ಸಿಬ್ಬಂದಿಗೆ ಗೌರವ ಧನ ಬಿಡುಗಡೆ ಮಾಡಬೇಕು. ನಿರ್ಲಕ್ಷಿಸಬಾರದು.

-ಇಸಬೆಲ್ಲ ಜೇವಿಯರ್, ಅಧ್ಯಕ್ಷರು, ರಾಜ್ಯ ಸಾಂತ್ವನ ಕೇಂದ್ರಗಳ ಒಕ್ಕೂಟ.

       ನೊಂದವರ ಬಾಳಿಗೆ ದಾರಿದೀಪ ಎಂಬಂತೆ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೌಟುಂಬಿಕ ಸಮಸ್ಯೆ, ದೌರ್ಜನ್ಯ ಇತ್ಯಾದಿಗಳಿಂದ ನೊಂದವರು ಎಲ್ಲ ಕಾಲಕ್ಕೂ ಕಾನೂನಿನ ಮೊರೆ ಹೋಗಲಾಗದು. ತಮ್ಮ ಸೀಮಿತ ಚೌಕಟ್ಟಿನಲ್ಲಿಯೇ ಸಾಂತ್ವನ ಕೇಂದ್ರಗಳು ಮಹಿಳಾ ಶೋಷಣೆಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾ ಬಂದಿವೆ. ಆರ್ಥಿಕ ಸಮಸ್ಯೆ ತೋರಿಸಿ ಜನರ ಒಳಿತಿಗಾಗಿ ಇರುವ ಇಂತಹ ಕೇಂದ್ರಗಳನ್ನು ಸರ್ಕಾರ ನಿರ್ಲಕ್ಷಿಸಬಾರದು. ಕೂಡಲೇ ಅನುದಾನ ಬಿಡುಗಡೆ ಮಾಡಿ ಅಲ್ಲಿನ ಸಿಬ್ಬಂದಿಗಳಿಗೆ ಧೈರ್ಯ ತುಂಬಬೇಕು. ಸಾಮಾಜಿಕ ಪರ ಕೆಲಸ ಮಾಡುವವರಿಗೆ ಸರ್ಕಾರದ ನೈತಿಕ ಬೆಂಬಲ ಇರಬೇಕಲ್ಲವೆ?


  • – ಅನ್ನಪೂರ್ಣ ವೆಂಕಟನಂಜಪ್ಪ, ಅಧ್ಯಕ್ಷರು, ವರದಕ್ಷಿಣೆ ವಿರೋಧಿ ವೇದಿಕೆ.

Recent Articles

spot_img

Related Stories

Share via
Copy link