ತುಮಕೂರು :
ಜಿಲ್ಲಾ ಪೊಲೀಸ್ ಇಲಾಖೆಯು ಎಲ್‍ಹೆಚ್‍ಎಂಎಸ್ ಆಪ್ಲಿಕೇಷನ್ ಪರಿಚಯ ಮಾಡಿರುವುದು ಹಾಗೂ 112 ಕರೆ ಮೂಲಕ ಯಾವುದೇ ತರಹದ ತುರ್ತು ಮತ್ತು ಅಪರಾಧ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆಯನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿ, ಪೊಲೀಸ್ ಇಲಾಖೆಯನ್ನು ಅಭಿನಂದಿಸಿದೆ.
ನಗರದ ಬಟವಾಡಿಯಿಂದ ಗುಬ್ಬಿ ಗೇಟ್‍ವರೆಗೆ ಬಿ.ಹೆಚ್ ರಸ್ತೆಯು ಒಂದು ಪ್ರಮುಖ ವಾಣಿಜ್ಯ ವಾಹಿವಾಟು ನಡೆಯುವ ರಸ್ತೆಯಾಗಿದೆ. ನಗರದ ಹೃದಯ ಭಾಗವಾದ ಈ ರಸ್ತೆಯಲ್ಲಿ ಆಸ್ಪತ್ರೆಗಳು, ಮೇಡಿಕಲ್ ಶಾಪ್‍ಗಳು, ಶಾಲಾಕಾಲೇಜುಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು, ಟೆಕ್ಸ್‍ಟೈಲ್ಸ್‍ಗಳು, ಆಟೋಮೊಬೈಲ್ಸ್‍ಗಳು ಹಾಗೂ ಇನ್ನಿತರ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಈ ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಇಲ್ಲಿ ಸರ್ವಿಸ್ ರಸ್ತೆಯು ಪೂರ್ಣ ಇರುವುದಿಲ್ಲ. ಇದು ಬಹಳ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸೆÉ್ಥಯ ಪದಾಧಿಕಾರಿಗಳು ಅಡಿಷನಲ್ ಎಸ್ಪಿ ಉದೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜನರಲ್ ಕರಿಯಪ್ಪ ರಸ್ತೆ, ಗಂಗೋತ್ರಿ ರಸ್ತೆ, ಎಸ್‍ಐಟಿ ಮುಖ್ಯರಸ್ತೆ ಹಾಗೂ ಅಶೋಕ ರಸ್ತೆಯಲ್ಲಿ ನೋ ಪಾರ್ಕಿಂಗ್ ಫಲಕಗಳ ಕಂಬಗಳನ್ನು ಅವೈಜ್ಞಾನಿಕವಾಗಿ ಅಳವಡಿಲಾಗಿದೆ. ಸೂಕ್ತವಾದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ದಿನೇ ದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಾ ಸಂಚಾರ ಸಮಸ್ಯೆಯಾಗಿದೆ. ಅದಕ್ಕೆ ಎಲ್ಲಾ ಕಡೆ ಸಿಗ್ನಲ್‍ನಿಂದ ಸಿಗ್ನಲ್‍ಗೆ ಸಿಂಕ್ರನೈಸಿಂಗ್ ಸಿಸ್ಟಂ ಅಳವಡಿಸಬೇಕು ಹಾಗೂ ಈಗಿರುವ ಎಸ್‍ಐಟಿ ಕಾಲೇಜು ಮುಂಭಾಗ ಇರುವ ಸಿಗ್ನಲ್ ಅನುಪಯುಕ್ತವಾಗಿದೆ ಅದನ್ನು ನಾಲ್ಕು ರಸ್ತೆಗಳು ಕೂಡಿರುವ ಗಂಗೋತ್ರಿ ರಸ್ತೆ ಕ್ರಾಸ್‍ಗೆ ಅಳವಡಿಸಬೇಕು.
ಬಡ್ಡಿಹಳ್ಳಿ ಹಾಗೂ ಬಟವಾಡಿ 80ಅಡಿ ರಸ್ತೆಯಲ್ಲಿ ರೈಲ್ವೇಹಳಿ ಹಾದು ಹೋಗಿದ್ದು ರೈಲು ಬರುವಾಗ ರೈಲ್ವೆಗೇಟ್ ಬಳಿ ಮನಬಂದಂತೆ ವಾಹನಗಳನ್ನು ಎರಡು ಬದಿಯಲ್ಲಿ ನಿಲ್ಲಿಸುತ್ತಾರೆ. ಇದರಿಂದ ಎರಡು ಕಡೆ ವಾಹನ ಸವಾರರು ಅದರಲ್ಲಿಯೂ ಹೆಣ್ಣುಮಕ್ಕಳು ರೈಲ್ವೇ ಹಳಿ ಕ್ರಾಸ್ ಮಾಡಲು ತೊಂದರೆ ಆಗುತ್ತದೆ, ಆದ್ದರಿಂದ ರಸ್ತೆಯ ಎರಡು ಬದಿಯಲ್ಲಿ 20 ಮೀಟರ್ ಹಳದಿ ಪಟ್ಟೆ ಅಥವಾ ಡಿವೈಡರ್ ಅಳವಡಿಸುವುದರಿಂದ ವಾಹನಗಳು ಅಡ್ಡದಿಡ್ಡಿ ನಿಲ್ಲವುದು ತಪ್ಪುತ್ತದೆ.
ಇತ್ತೀಚೆಗೆ ಸರ ಕಳ್ಳತನ, ವಾಹನ ಕಳ್ಳತನ, ಪಿಗ್ಮೀ ಹಾಗೂ ಎಲ್‍ಐಸಿ ಏಜೆಂಟ್‍ರವರಿಂದ ಹಣ ಕಿತ್ತಕೊಂಡು ಹೋಗಿರುವುದು ಕೇಳಿಬಂದಿರುತ್ತದೆ. ಇದನ್ನೆಲ್ಲಾ ನೋಡಿದರೇ ಸರ್ವಾಜನಿಕರಿಗೆ ಭಯದ ವಾತಾವರಣ ಉಂಟಾಗುತ್ತದೆ. ಹಿರೇಹಳ್ಳಿ, ಅಂತರಸನಹಳ್ಳಿ ಮತ್ತು ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಔಟ್ ಪೋಸ್ಟ್ ಹಾಗೂ ನಿತ್ಯ ಪೊಲೀಸ್ ಬೀಟ್ ಅವಶ್ಯಕತೆ ಇರುತ್ತದೆ ಎಂದು ಮನವಿ ಮಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಉಪಾಧ್ಯಕ್ಷ ಎಂ.ಎನ್.ಲೋಕೇಶ್, ಕಾರ್ಯದರ್ಶಿ ಟಿ.ಜೆ.ಗಿರೀಶ್, ಖಜಾಂಚಿ ಟಿ.ಟಿ.ಸತ್ಯನಾರಾಯಣ, ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ, ಸುಜ್ಞಾನ್ ಹಿರೇಮಠ್, ಪಿ.ಪಿ.ಮಲ್, ಟಿ.ಆರ್.ಲೋಕೇಶ್, ಸಾಗರನಹಳ್ಳಿ ಪ್ರಭು, ಸುರೇಂದ್ರ ಷಾ, ಎ.ಆರ್.ಶ್ರೀನಾಥ್, ಹಾಗೂ ಸಂಸ್ಥೆಯ ನಿರ್ದೇಶಕರು ಹಾಜರಿದ್ದು ಮನವಿ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
