ತುಮಕೂರು: ಭಾಗ್ಯ ನಗರದಲ್ಲಿ ಸಂಕ್ರಾಂತಿ ಸಂಭ್ರಮ ; ರಾಸುಗಳ ಪ್ರದರ್ಶನ

ತುಮಕೂರು : 

      ಮಕರ ಸಂಕ್ರಾಂತಿ ಹಬ್ಬದ ದಿನ ನಗರದ ಭಾಗ್ಯನಗರದಲ್ಲಿ ಸಡಗರದ ಸುಗ್ಗಿ ಹಬ್ಬ ಆಚರಣೆ ನಡೆಯಿತು. ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ನಡೆಯುವುದು ವಿಶೇಷವಲ್ಲದಿದ್ದರೂ ತುಮಕೂರು ನಗರದಲ್ಲಿ ಇಂತಹ ಆಚರಣೆ ವಿಶೇಷವಾಗಿ ನಡೆಯಿತು. ನಗರದ ಜನರಿಗೆ ಹೊಸ ತಲೆಮಾರಿನವರಿಗೆ ಸುಗ್ಗಿ ಆಚರಣೆ, ಕೃಷಿ ಸಂಸ್ಕøತಿ, ಆಚಾರ, ಆಚರಣೆ ಬಗ್ಗೆ ತಿಳಿಸಿಕೊಡುವ ಆಶಯದಿಂದ 23ನೇ ವಾರ್ಡಿನ ಭಾಗ್ಯನಗರದ ಶ್ರೀರಾಮ ಕೃಪಾಪೋಷಿತ ಬಾಲ ಭಜನಾ ಸಂಘ ಸುಗ್ಗಿ ಸಂಭ್ರಮ ಆಯೋಜಿಸಿತ್ತು.

      ರೈತನಿಗೆ ಜೊತೆಯಾಗಿ ವರ್ಷವಿಡೀ ದುಡಿದ ಎತ್ತುಗಳನ್ನು ಸಂಕ್ರಾಂತಿಯಂದು ಸಿಂಗರಿಸಿ, ಪೂಜಿಸುವ ಸಂಪ್ರದಾಯ ನಡೆದುಬಂದಿದೆ. ಈ ಸಂದರ್ಭದಲ್ಲಿ ಉತ್ತಮ ಎತ್ತುಗಳ ಜೋಡಿಗಳ ಪ್ರದರ್ಶನ ಹಾಗೂ ಬಹುಮನ ವಿತರಣೆ ಮಾಡಲಾಯಿತು.

      ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ತಂದಿದ್ದರು. ಬಣ್ಣಬಣ್ಣದ ಹಾರಗಳಿಂದ ಕಂಗೊಳಿಸುತ್ತಿದ್ದ ಜೋಡಿ ಎತ್ತುಗಳು, ಹೋರಿಗಳು, ಹಸುಗಳು ಒಂದಕ್ಕಿಂತ ಆಕರ್ಷಣೀಯವಾಗಿ ಗಮನ ಸೆಳೆದವು. ನಂತರ ರಾಸುಗಳ ಮೆರವಣಿಗೆ ಮಾಡಲಾಯಿತು.

      ಭಾಗ್ಯನಗರದ ಶ್ರೀರಾಮ ಕೃಪಾಪೋಷಿತ ಬಾಲ ಭಜನಾ ಸಂಘದ ಬಳಿ ಭತ್ತ, ರಾಗಿ ಸೇರಿದಂತೆ ದವಸ ಧಾನ್ಯ ಹಾಗೂ ಇತರ ಫಲಗಳನ್ನು ರಾಶಿ ಮಾಡಿ ಅಲಂಕರಿಸಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಗ್ರಾಮದ ಯಜಮಾನರುಗಳು ಅವುಗಳಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ರೈತರೇ ನಿಜವಾದ ದೇವರು : ಜಿಎಸ್‍ಬಿ

      ಇದೇ ಸಂದರ್ಭದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು, ರೈತರ ಪರಿಶ್ರಮದಿಂದ ಇಂದು ಗ್ರಾಮೀಣ ಸಂಸ್ಕೃತಿ ಉಳಿದಿದೆ. ವರ್ಷಪೂರ್ತಿ ಕಷ್ಟಪಟ್ಟು ದುಡಿಮೆ ಮೂಲಕ ದೇಶದ ಜನತೆಗೆ ಅನ್ನ ನೀಡುವ ರೈತನೇ ದೇಶದ ನಿಜವಾದ ದೇವರು ಎಂದು ಬಣ್ಣಿಸಿದರು.

      ಇಂದು ಯಾವ ಹಳ್ಳಿಗೆ ಹೋದರೂ ದೇಸೀ ಹಸುಗಳೇ ಸಿಗುವುದಿಲ್ಲ, ಹಾಲು ಕರೆದು ಮಾರಲು ಸೀಮೆ ಹಸುಗಳು ಪ್ರತಿಯೊಂದು ಹಳ್ಳಿಯಲ್ಲೂ ಕಂಡು ಬರುತ್ತವೆ. ರೈತರ ಸಾಂಪ್ರದಾಯಿಕ ಜೀವನ ನಡೆಸಬೇಕಾದರೆ ನೂರಾರು, ಸಾವಿರಾರು ವರ್ಷಗಳಿಂದ ಬಂದಿರುವಂತಹ ರೈತನ ಕಸುಬನ್ನು ಉದ್ಧಾರಗೊಳಿಸಲು ಮತ್ತೆ ನಾವು ದೇಸೀ ಹಸುಗಳನ್ನು ಸಾಕಬೇಕು ಎಂದು ಸಲಹೆ ನೀಡಿದರು.

      ದೇಸೀ ಹಸುವಿನ ಹಾಲು ಅತ್ಯಂತ ಶ್ರೇಷ್ಠವಾದುದು ಎಂದು ತಜ್ಞರೇ ಹೇಳುತ್ತಾರೆ. ದೇಸೀ ಹಸುವಿನ ಹಾಲಿನಲ್ಲಿ ತರಾವರಿಯ ವಿಶೇಷ ಗುಣಗುಳುಳ್ಳ ಹಾಲನ್ನು ಪಡೆಯಬಹುದಾಗಿದೆ. ಇಂದು ಜಾನುವಾರುಗಳ ಸಂತತಿಯನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಆಧುನಿಕ ತಾಂತ್ರಿಕ ಯುಗದಲ್ಲಿ ಜಾನುವಾರುಗಳ ಸಂತತಿ ಕ್ಷೀಣಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

      ಮಹಾನಗರಪಾಲಿಕೆ ಸ್ಥಾಯಿಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಜನರ ಜೀವನದ ಒಂದು ಭಾಗವೇ ಆಗಿರುವ ರಾಸುಗಳಿಗೆ ಪೂಜೆ ಸಲ್ಲಿಸುವುದು ಮಾತ್ರವಲ್ಲದೇ, ರೈತರು ಫಸಲು ಕೊಯ್ಯುವ ಸುಗ್ಗಿ ಸಂಭ್ರಮ ಇಂದು ಸಾಕ್ಷಿಯಾಗಿದೆ. ರೈತರ ಬದುಕು ಹಸನಾಗಬೇಕು. ಗ್ರಾಮೀಣ ಸೊಗಡಿನ ಆಚರಣೆಗಳನ್ನು ಹಾಗೂ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.

      ಮುಖಂಡರಾದ ರವೀಶ್ ಜಾಂಗೀರ್ ಮಾತನಾಡಿ, ಇಂದು ರಾಸುಗಳನ್ನು ಸಾಕುವುದು ಕಡಿಮೆಯಾಗುತ್ತಿದೆ. ಯಾಂತ್ರಿಕರಣದ ಬದುಕು ದೂರಾಗಿ, ಕೃಷಿ-ಮಣ್ಣಿನ ಕಡೆಗೆ ಮನುಷ್ಯನ ಚಿಂತನೆ ಬದಲಾಗಬೇಕು ಎಂದು ತಿಳಿಸಿದರು.

      ಹೆಬ್ಬೂರು ಚಿಕ್ಕಣ್ಣಸ್ವಾಮಿ ಕ್ಷೇತ್ರದ ಧರ್ಮದರ್ಶಿ ಪಾಪಣ್ಣ ಮಾತನಾಡಿ, ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಕ್ರಾಂತಿ ಸುಗ್ಗಿ ಸಂಭ್ರಮವನ್ನು ಇಂದಿನ ಯುವಜನತೆ ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.  ಈ ಸಂದರ್ಭದಲ್ಲಿ 20ನೇ ವಾರ್ಡಿನ ಪಾಲಿಕೆ ಸದಸ್ಯ ಎ.ಶ್ರೀನಿವಾಸ್, ಮುಖಂಡರಾದ ಎನ್.ಎಸ್.ಶಿವಣ್ಣ, ಟಿ.ಎಲ್. ಕುಂಭಯ್ಯ, ರವೀಶ್, ಕೃಷ್ಣಪ್ಪ, ಸೀನಣ್ಣ ಸೇರಿದಂತೆ ಗ್ರಾಮದ ಯಜಮಾನರುಗಳು, ಮುಖಂಡರು ಭಾಗವಹಿಸಿದ್ದರು.

      ಕಾರ್ಯಕ್ರಮಕ್ಕೂ ಮುನ್ನ ರಾಸುಗಳನ್ನು ಶ್ರೀರಾಮದೇವಾಲಯದಿಂದ ಜ್ಯೋತಿಪುರದ ಗಣಪತಿ ದೇವಾಲಯ ಹಾಗೂ ಹನುಮಂತಪುರದ ಶ್ರೀ ಕೊಲ್ಲಾಪುರದಮ್ಮ ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು.

ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ:

      ಜೋಡಿ ಎತ್ತುಗಳ ಪ್ರದರ್ಶನ ಹಾಗೂ ಸ್ಪರ್ಧೆ ವಿಭಾಗದಲ್ಲಿ ಹೆಬ್ಬೂರು ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ ಅವರು ಸಾಕಿದ್ದ ಜೋಡಿ ಎತ್ತುಗಳಿಗೆ ಮೊದಲ ಬಹುಮಾನ ಪಡೆದು 10 ಸಾವಿರ ರೂ, ದೊರೆಯಿತು. ಹೆತ್ತೇನಹಳ್ಳಿ ಸಿದ್ದಪ್ಪ ಅವರ ರಾಸುಗಳು ಎರಡನೇ ಬಹುಮಾನ ಪಡೆದು 5 ಸಾವಿರ ರೂ., ಮುತ್ಸಂದ್ರದ ಕೃಷ್ಣಮೂರ್ತಿಯವರ ರಾಸುಗಳು ಮೂರನೇ ಬಹುಮಾನದೊಂದಿಗೆ ಮೂರು ಸಾವಿರ ರೂ. ಮಾಲೀಕರಿಗೆ ವಿತರಿಸಲಾಯಿತು. ಮುತ್ಸಂದ್ರ ಗ್ರಾಮದ ನಾರಾಯಣಪ್ಪ ಅವರ ಹೋರಿಗಳು ಹಾಗೂ ಗೋವಿಂದಪ್ಪ ಅವರ ಹಸುಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದು ತಲಾ ಎರಡು ಸಾವಿರ ರೂ. ಬಹುಮಾನ ಪಡೆದುಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap