ತುಮಕೂರು : ಜಿಲ್ಲಾ ಮಾಹಿತಿಯ ಜಿಐಎಸ್ ವೆಬ್ ಪೋರ್ಟಲ್ ಬಿಡುಗಡೆ

 ತುಮಕೂರು :

     ತುಮಕೂರು ಜಿಐಎಸ್ ವೆಬ್ ಪೋರ್ಟಲ್ ಅನ್ನು ಶುಕ್ರವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದ ಜ.ಎಸ್.ಬಸವರಾಜು ಬಿಡುಗಡೆ ಮಾಡಿ, ಸಾರ್ವಜನಿಕರಿಗೆ ಮುಕ್ತ ಮಾಡಿದರು.

     ತುಮಕೂರು ಜಿಐಎಸ್ ವೆಬ್ ಪೋರ್ಟಲ್ ಮೂಲಕ ಮಾಹಿತಿಯ ಅಂಕಿ ಅಂಶ ಒಳಗೊಂಡಂತೆ ಇಲಾಖಾವಾರು, ಯೋಜನಾವಾರು ದೃಶ್ಯೀಕರಣದೊಂದಿಗೆ ಮಾಹಿತಿ ವೀಕ್ಷಿಸಬಹುದಾಗಿದೆ.

     ಇದರೊಂದಿಗೆ ತುಮಕೂರು ಜಿಐಎಸ್ ವೆಬ್ ಪೋರ್ಟಲ್‍ಗೆ ಟ್ಯಾಗಿಂಗ್ ಮಾಡುವ ತುಮಕೂರು ಜಿಲ್ಲೆಯ ಶುದ್ಧ ಕುಡಿಯುವ ನೀರು ಮೊಬೈಲ್ ಅಪ್ಲಿಕೇಷನ್‍ಗಳನ್ನು ಸಂಸದರು ಬಿಡುಗಡೆಗೊಳಿಸಿದರು.

     ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿವೃದ್ಧಿಪಡಿಸಿರುವ ತುಮಕೂರು ಜಿಐಎಸ್ ವೆಬ್ ಪೋರ್ಟಲ್‍ನಲ್ಲಿ ಜಿಐಎಸ್ ಲೇಯರ್‍ಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತುಮಕೂರು ಜಿಐಎಸ್ ವೆಬ್ ಪೋರ್ಟಲ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ ಎಂದು ಸಂಸದರು ಹೇಳಿದರು.

      ಈವರೆಗೆ 40 ಇಲಾಖೆಗಳ 270ಕ್ಕೂ ಅಧಿಕ ಲೇಯರ್ ಮಾಹಿತಿಯನ್ನು ತುಮಕೂರು ಜಿಐಎಸ್ ವೆಬ್ ಪೋರ್ಟಲ್‍ನಲ್ಲಿ ಇಂದೀಕರಿಸುವ ಕಾರ್ಯಕ್ಕೆ ಕ್ರಮವಹಿಸಲಾಗಿದ್ದು, ಉಳಿದ ಇಂದೀಕರಿಸುವ ಕಾರ್ಯ ಮುಂದುವರೆದಿದೆ. ಸಾರ್ವಜನಿಕರು ತುಮಕೂರು ಜಿಐಎಸ್ ಅಂತರ್ಜಾಲದಲ್ಲಿ ಮಾಹಿತಿ ವೀಕ್ಷಿಸಲು  https://kgis.ksrsac.in/tumakuru ಅವಕಾಶ ಕಲ್ಪಿಸಲಾಗಿದೆ.
ಆರಂಭದಲ್ಲಿ ಕಾರ್ಯಕ್ರಮದ ಅನುಷ್ಠಾನ ಕುರಿತು ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಮಾತನಾಡಿ, ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಜಿಐಎಸ್ ಅಪ್ಲಿಕೇಶನ್ ಮೂಲಕ ಜಿಲ್ಲೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಜಿಐಎಸ್ ವೆಬ್ ಸೈಟ್‍ನಲ್ಲಿ ಜಿಲ್ಲೆಯ ನಗರ, ಪಟ್ಟಣ, ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಸರ್ವೆ ನಂಬರ್ ಪ್ರಕಾರ ಸಂಪರ್ಕ ರಸ್ತೆ, ಸರ್ಕಾರದ ಇಲಾಖೆ, ಕಚೇರಿ ಇಲಾಖೆಗಳ ಯೋಜನಾವಾರು ಕಾರ್ಯಕ್ರಮಗಳ ಅಂಕಿಅಂಶಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

      ಬಳಿಕ ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ತುಮಕೂರು ಜಿಐಎಸ್ ವೆಬ್ ಪೋರ್ಟಲ್ ರಾಜ್ಯದ ಮೊದಲ ವೆಬ್ ಪೋರ್ಟಲ್ ಆಗಿದ್ದು, ಜಿಲ್ಲೆಯ ಎಲ್ಲಾ ಅಂಕಿಅಂಶಗಳನ್ನೊಳಗೊಂಡಂತೆ ಇಲಾಖಾವಾರು, ಯೋಜನವಾರು ಮಾಹಿತಿಯನ್ನು ಅಳವಡಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾ ಸಂಗ್ರಹಣೆ, ನವೀಕರಣ, ಜಿಯೋ-ಟ್ಯಾಗಿಂಗ್ ಮಾಡುವ ಕಾರ್ಯದ ಸಲುವಾಗಿ ‘ಶುದ್ಧನೀರು’ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಎರಡು ತಂತ್ರಾಂಶಗಳಿಗೆ ಚಾಲನೆ ನೀಡಲಾಗಿದೆ. ಈವರೆಗೆ ಜಿಐಎಸ್ ಪೋರ್ಟಲ್ ನಲ್ಲಿ 40 ಇಲಾಖೆಗಳ 270ಕ್ಕೂ ಅಧಿಕ ಲೇಯರ್ ಮಾಹಿತಿಯನ್ನು ಇಂದೀಕರಿಸಲಾಗಿದೆ ಎಂದು ಹೇಳಿದರು.

      ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ತುಮಕೂರು ಜಿಐಎಸ್ ಪೋರ್ಟಲ್ ಅಭಿವೃದ್ಧಿ ಪಡಿಸಿ ಅದರಲ್ಲಿ ಮಾಹಿತಿ ಸಂಗ್ರಹಿಸುವ ಗುರಿ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ. ಜಿಲ್ಲೆಯ ಎಲ್ಲಾ ಇಲಾಖೆಗಳು ಸಂಪೂರ್ಣ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಅಪ್ಡೇಟ್ ಆಗದೆ ಉಳಿದಿರುವ ಮಾಹಿತಿಯನ್ನು ಅಪ್ಡೇಟ್ ಮಾಡಿ ನೂರರಷ್ಟು ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಎಲ್ಲಾ ಅಧಿಕಾರಿಗಳು ಕೈಜೋಡಿಸಬೇಕು ಎಂದು ತಿಳಿಸಿದರು.

      ಎಲ್ಲರ ಸಹಕಾರದಿಂದ 11 ಇಲಾಖೆಗಳ 7 ಯೋಜನೆಗಳು ತುಮಕೂರು ಜಿಐಎಸ್ ವೆಬ್ ಪೋರ್ಟಲ್‍ನಲ್ಲಿ ನಮೂದಾಗಿವೆ. ಈಗ ಶುದ್ಧ ನೀರು ಆಪ್ ಬಿಡುಗಡೆಯಾಗಿದೆ. ಜಿಲ್ಲೆಯ 1500 ಶುದ್ಧ ನೀರಿನ ಘಟಕಗಳ ಸ್ಥಿತಿಗತಿಗಳ ಬಗ್ಗೆ ಇಂಜಿನಿಯರ್‍ಗಳು ಅಪ್‍ಲೋಡ್ ಮಾಡಿ ಜನರ ಬಳಕೆಗೆ ಅವಕಾಶ ಮಡಿಕೊಡಬೇಕು ಎಂದು ಶುಭಾ ಕಲ್ಯಾಣ್ ಹೇಳಿದರು.

      ತುಮಕೂರು ಜಿಐಎಸ್ ವೆಬ್ ಪೋರ್ಟಲ್ ಆರಂಭಿಸಿರುವುದು ಅಭಿನಂದನೀಯ ಎಂದು ಹೇಳಿದ ವಿಧಾನ ಪರಿಷತ್ ಸದಸ್ಯ ತಿಪ್ಪೆಸ್ವಾಮಿ ಅವರು, ತುಮಕೂರು ಜಿಐಎಸ್ ಲೈವ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದರ ಅಪ್‍ಡೇಟ್ ಬಗ್ಗೆ ಡೈಲಿ ಮಾನಿಟರಿಂಗ್ ಮಾಡಲು ಜಿಲ್ಲಾ ಪಂಚಾಯತಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ (ವಾರ್) ಕೊಠಡಿ ಮಾಡಿದರೆ ಸೂಕ್ತವಾಗಲಿದೆ ಎಂದು ಹೇಳಿದಾಗ, ಸಂಸದ ಜಿ.ಎಸ್.ಬಸವರಾಜು ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ವಾರ್ ರೂಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯ ಗ್ರಾಮ ಮಟ್ಟದಿಂದ ಹಿಡಿದು ಸಕಲ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಲೋಪವಿಲ್ಲದಂತೆ ಪಾರದರ್ಶಕವಾಗಿ ಕಾಲಕಾಲಕ್ಕೆ ಜಿಐಎಸ್ ಅಪ್ಲಿಕೇಶನ್‍ಗೆ ಅಪ್ಡೇಟ್ ಮಾಡಬೇಕು. ಸ್ವಾತಂತ್ರ್ಯ ನಂತರ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಖರ ಮಾಹಿತಿಯನ್ನೂ ಅಳವಡಿಸಬೇಕು. ಈ ಕಾರ್ಯಾನುಷ್ಠಾನದಿಂದ ಸಮರ್ಪಕ ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

      125 ಉತ್ಪನ್ನಗಳನ್ನು ತಯಾರಿಸಬಹುದಾದ ತೆಂಗು ಉತ್ಪನ್ನಕ್ಕೆ ಹಾಗೂ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ. ರಘು ಅವರಿಗೆ ಸೂಚಿಸಿದ ಸಚಿವರು, ರೇಷ್ಮೆ, ಕೃಷಿ, ಕೆವಿಕೆ, ತೋಟಗಾರಿಕೆ ಇಲಾಖೆಗಳು ಸಮನ್ವಯ ಸಾಧಿಸಿ ಜಂಟಿಯಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಗತಿ ಕೈಗೊಳ್ಳುವಂತೆ ನಿರ್ದೇಶಿಸಿದರು.

      ತುಮಕೂರು ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಿಗೂ ಮತ್ತು ಕಾಲೋನಿಗಳಿಗೂ ವಿದ್ಯುತ್ ಸರಬರಾಜು ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಬೇಕು. ಜಿಲ್ಲೆಯಲ್ಲಿ ಯಾವುದೇ ಗ್ರಾಮ ಹಾಗೂ ಕಾಲೋನಿಯೂ ವಿದ್ಯುತ್‍ನಿಂದ ವಂಚಿತವಾಗದಂತೆ ವಿದ್ಯುತ್ ಕಲ್ಪಿಸಬೇಕು ಎಂದು ಬೆಸ್ಕಾಂ ಅಧಿಕಾರಿಗೆ ಸೂಚಿಸಿದರು.

      ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿಲ್ಲ ಎಂಬ ಬಗ್ಗೆ ವರದಿಯಾಗಿದೆ ನೀವು ಲಸಿಕೆ ತೆಗೆದುಕೊಂಡಿಲ್ಲವಾ ಎಂದು ಡಿಎಚ್‍ಒ ನಾಗೇಂದ್ರಪ್ಪ ಅವರಿಗೆ ಸಂಸದ ಜಿ.ಎಸ್.ಬಸವರಾಜು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‍ಒ ಅವರು, ನಾನು ಲಸಿಕೆ ಪಡೆದಿದ್ದೇನೆ. ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಈವರೆಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ ಎಂದು ಹೇಳಿದರು.

      ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕಾದ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಪ್ರಾಣಿ-ಪಕ್ಷಿಗೆ ಉಪಯೋಗವಾಗುವ ಹಣ್ಣಿನ ಸಸಿಗಳನ್ನು ನೆಡುವಂತೆ ಸೂಚಿಸಿದ ಸಚಿವರು, ಶಾಲಾ ಕಟ್ಟಡ ಅಭಿವೃದ್ಧಿ, ಕುಡಿಯುವ ನೀರು, ವಸತಿ ಯೋಜನಾ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹೌಸಿಂಗ್ ಫಾರ್ ಆಲ್ ಯೋಜನೆ ಹಿನ್ನಡೆ:

      2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೌಸಿಂಗ್ ಫಾರ್ ಆಲ್ ಯೋಜನೆ ಜಾರಿಗೊಳಿಸಿದ್ದಾರೆ. ಆಗಲೇ ಕೇಂದ್ರ ಸರ್ಕಾರದಲ್ಲಿ ಒಂದು ವೆಬ್ ಪೋರ್ಟಲ್ ಮಾಡಿ ಮನೆ ಇಲ್ಲದವರು ಮನೆಗಾಗಿ ಮಾಹಿತಿ ನೊಂದಣಿ ಮಾಡಿಕೊಳ್ಳಲು ಹೇಳಿದ್ದರು. ಆ ಸಂಬಂಧ ಎಷ್ಟು ಜನ ಫಲಾನುಭಾವಿಗಳ ಆಯ್ಕೆಯಾಗಿ ಮನೆ ನೋಡಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳನ್ನು ಕೇಳಿದರು.

      ಫಲಾನುಭವಿಗಳ ಪಟ್ಟಿ ಸಿದ್ಧವಾಗಿಲ್ಲ, ಹಾಗಾಗಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು.
ಶಾಸಕರು ಆಶ್ರಯ ಸಮಿತಿ ಸಭೆ ನಡೆಸಿ, ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಅರ್ಹರೇ, ಅನರ್ಹರೆ ಎಂದು ಮಾಹಿತಿ ಪಡೆದು ಅರ್ಹರನ್ನು ಆಯ್ಕೆ ಮಾಡಿಲ್ಲ. 2022ರೊಳಗೆ ಈ ಯೋಜನೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮನೆ ಇಲ್ಲದವರಿಗೆ ಮನೆ ಒದಗಿಸಬೇಕಾಗಿದೆ. ಮನೆಗಾಗಿ ಸರ್ಕಾರಿ ಜಮೀನು ಗುರುತಿಸಬೇಕು, ಸರ್ಕಾರಿ ಜಮೀನು ಇಲ್ಲದ ಕಡೆ ಖಾಸಗಿ ಜಮೀನು ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕು. ಈ ಕಾರ್ಯಗಳು ಆಗೇ ಇಲ್ಲ ಎಂದು ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಹೇಳಿದರು.

      ಯೋಜನೆ ಆರಂಭವಾಗಿ 8 ವರ್ಷವಾಗುತ್ತಾ ಬಂದಿದೆ. ಇನ್ನೊಂದು ವರ್ಷ ಬಾಕಿ ಇದೆ. ಶಾಸಕರ ಆಶ್ರಯ ಸಮಿತಿ ಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ತಮ್ಮ ವ್ಯಾಪ್ತಿಯಲ್ಲಿ ಜಮೀನು ಗುರುತಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದಲ್ಲಿ ಅಳವಡಿಸಿರುವ ಬೀದಿ ದೀಪಗಳಿಂದ ಸಮರ್ಪಕ ಬೆಳಕು ಹರಡುತ್ತಿಲ್ಲ, ಲೈಟ್‍ಗಳು ಇದ್ದರೂ ಕತ್ತಲೆಯಂತಾಗಿದೆ. ಗುಣಮಟ್ಟದ, ಯೋಗ್ಯ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ದಿಶಾ ಸಮಿತಿ ಸದಸ್ಯೆ ಲೋಕೇಶ್ವರಿ ಪ್ರಭು ಅಧಿಕಾರಿಗಳ ಗಮನಕ್ಕೆ ತಂದರು. ಪರಿಶೀಲನೆ ಮಾಡಿ ಸೂಕ್ತ ಬಲ್ಬ್ ಅಳವಿಡಿಸದಿದ್ದರೆ ಬಿಲ್ ಪಾವತಿಸುವುದಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ರಂಗಸ್ವಾಮಿ ಹೇಳಿದರು. ನೀವು ಇತರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಇಂತಹ ಲೋಪಗಳಾಗದಂತೆ ಎಚ್ಚರವಹಿಸಿ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

      ಉಪವಿಭಾಗಾಧಿಕಾರಿ ಅಜಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ದಿಸಾ ಸಮಿತಿ ಸದಸ್ಯರಾದ ಹನುಮಂತಪ್ಪ, ಕೆ.ಎನ್. ಲೋಕೇಶ್ವರಿ, ರಘೋತ್ತಮರಾವ್, ಗೋವಿಂದ್ ರಾವ್, ಪ್ರೇಮಾ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
 
     125 ಉತ್ಪನ್ನಗಳನ್ನು ತಯಾರಿಸಬಹುದಾದ ತೆಂಗು ಉತ್ಪನ್ನಕ್ಕೆ ಹಾಗೂ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆಗಳು ಸಮನ್ವಯ ಸಾಧಿಸಿ ಜಂಟಿಯಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಗತಿ ಕೈಗೊಳ್ಳಬೇಕು.

-ಜಿ.ಎಸ್.ಬಸವರಾಜು, ಸಂಸದರು.

     ತುಮಕೂರು ಜಿಐಎಸ್ ಲೈವ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದರ ಅಪ್‍ಡೇಟ್ ಬಗ್ಗೆ ಡೈಲಿ ಮಾನಿಟರಿಂಗ್ ಮಾಡಲು ಜಿಲ್ಲಾ ಪಂಚಾಯತಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಮಾಡಿ, ಪ್ರತಿದಿನ ಮಾಹಿತಿ ಅಪ್‍ಲೋಡ್ ಮಾಡಲು ಕ್ರಮ ತೆಗೆದುಕೊಳ್ಳಬೇಕು. 

-ತಿಪ್ಪೆಸ್ವಾಮಿ, ವಿಧಾನ ಪರಿಷತ್ ಸದಸ್ಯರು

      ಶಾಸಕರು ಆಶ್ರಯ ಸಮಿತಿ ಸಭೆ ನಡೆಸಿ, ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಅರ್ಹರೇ, ಅನರ್ಹರೆ ಎಂದು ಮಾಹಿತಿ ಪಡೆದು ಅರ್ಹರನ್ನು ಆಯ್ಕೆ ಮಾಡಿಲ್ಲ. 2022ರೊಳಗೆ ಈ ಯೋಜನೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮನೆ ಇಲ್ಲದವರಿಗೆ ಮನೆ ಒದಗಿಸಬೇಕಾಗಿದೆ. ಮನೆಗಾಗಿ ಸರ್ಕಾರಿ ಜಮೀನು ಗುರುತಿಸಬೇಕು, ಸರ್ಕಾರಿ ಜಮೀನು ಇಲ್ಲದ ಕಡೆ ಖಾಸಗಿ ಜಮೀನು ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಬೇಕು. ಈ ಕಾರ್ಯಗಳು ಆಗೇ ಇಲ್ಲ.

-ಕುಂದರನಹಳ್ಳಿ ರಮೇಶ್, ರಾಜ್ಯ ದಿಶಾ ಸಮಿತಿ ಸದಸ್ಯರು.

Recent Articles

spot_img

Related Stories

Share via
Copy link
Powered by Social Snap