ತುಮಕೂರು :ಮರಳೂರು ದಿಣ್ಣೆ ನೀರು ಪೂರೈಕೆಗೆ 3 ತಿಂಗಳ ಗಡವು

ತುಮಕೂರು :

      ನಗರದ ಮರಳೂರು ದಿಣ್ಣೆಯ 29ನೇ ವಾರ್ಡ್‍ಗೆ ಮೂರು ತಿಂಗಳೊಳಗೆ ದಿನದ 24 ತಾಸು ನೀರು ಪೂರೈಸುವ ಯೋಜನೆ ಚಾಲುಗೊಳಿಸಬೇಕು ಎಂದು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಮೇಯರ್ ಫರೀದಾಬೇಗಂ ಸೂಚಿಸಿದರು.

      24*7 ಯೋಜನೆಯಡಿ ಪೈಪ್‍ಲೈನ್ ಅಳವಡಿಸಿ ಮೂರು ವರ್ಷಗಳೇ ಕಳೆದರೂ ಇನ್ನೂ ನೀರು ಹರಿಸುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಉಪಮೇಯರ್ ಶಶಿಕಲಾ ಅವರ ಜೊತೆಗೂಡಿ ಸ್ಥಳ ಪರಿಶೀಲಿಸಿದ ಅವರು, ಹಿಂದಿನ ಶಾಸಕ ಡಾ.ರಫೀಕ್ ಅಹಮದ್ ಅವರ ಅವಧಿಯಲ್ಲಿ ಈ ಯೋಜನೆ ಜಾರಿಗೊಳಿಸಿದ್ದು, ಬಡಜನರು, ಅಲ್ಪಸಂಖ್ಯಾತರು ಹೆಚ್ಚಿರುವ ಈ ಬಡಾವಣೆಯ ಜನರಿಗೆ ನೀರು ಕೊಡದಿರಲು ಕಾರಣವೇನು? ಯಾರಿಂದಾದರೂ ಒತ್ತಡವಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

      ಅಧಿಕಾರಿ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿ ಬುಗುಡನಹಳ್ಳಿ ಜಲ ಸಂಗ್ರಹಗಾರದಿಂದ ನಿರಂತರ ನೀರು ಪಂಪ್ ಮಾಡಿದಲ್ಲಿ ಯೋಜನೆಯಡಿಯ ಪೈಪ್‍ಲೈನ್‍ನಲ್ಲಿ ನೀರು ಹರಿಸಲು ಸಾಧ್ಯ. ಇಲ್ಲಿಯವರೆಗೆ ರಾತ್ರಿವರೆಗೆ ಮಾತ್ರ ನೀರನ್ನು ಎತ್ತುವಳಿ ಮಾಡಲಾಗುತ್ತಿತ್ತು. ರಾತ್ರಿ ವೇಳೆ ನೀರು ಪಂಪ್ ಮಾಡಲು ಅನುವು ಮಾಡಿಕೊಟ್ಟಲ್ಲಿ ನೀರನ್ನು ಹರಿಸಲಾಗುವುದು. ಮುಂದಿನ 15 ದಿನದೊಳಗೆ ಈ ಬಗ್ಗೆ ಪ್ರಾಯೋಗಿಕ ಚಾಲನೆಗೆ ಕ್ರಮವಹಿಸುವುದಾಗಿ ತಿಳಿಸಿದರು.

      ಇದೇ ವೇಳೆ ಸ್ಥಳೀಯ ಕಾರ್ಪೋರೇಟರ್ ಪತಿ ಇಸ್ಮಾಯಿಲ್ ಮಾತನಾಡಿ 2ನೇ ಹಂತದ ಯುಜಿಡಿ ವ್ಯವಸ್ಥೆ ಹದಗೆಟ್ಟಿದ್ದು, ಸರಿಯಾಗಿ ಲಿಂಕ್ ಮಾಡದೆ ಮ್ಯಾನ್‍ಹೋಲ್‍ನಿಂದ ಹೊರಬಂದು ಗಬ್ಬುವಾಸನೆ ಬೀರುತ್ತಿದೆ. ಈ ಸಮಸ್ಯೆಗೆ ಮುಕ್ತಿ ಹಾಡಬೇಕೆಂದು ಕೋರಿದರು. ನಾಗರಿಕರು ದನಿಗೂಡಿಸಿದರು. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಫೆ. 15-16ರಂದು ಮತ್ತೊಮ್ಮೆ ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಲಾಗುವುದು ಎಂದರು.

  ಮಾಜಿ ಆದರೂ ಸರಿ ಕಾರ್ಯಗತವಾಗೋವರೆಗೆ ಬಿಡೋಲ್ಲ : ಫರೀದಾಬೇಗಂ

      ಬಳಿಕ ಮಾತನಾಡಿದ ಮೇಯರ್ ಅವರು ವಾರ್ಡ್‍ನ 2-3 ಬೀದಿಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ನೀರು ಹರಿಸಲು ಪ್ರಯತ್ನಿಸಿ. ಮೂರು ವರ್ಷವೇ ಇಲ್ಲಿನ ಜನ ಕಾದಿದ್ದಾರೆ. ಇನ್ನೂ ಮೂರು ತಿಂಗಳು ಕಾಯುತ್ತಾರೆ. ಆದರೆ ಅಷ್ಟರೊಳಗೆ ನೀರು ಹರಿಸಬೇಕು. ರಾಜಕೀಯ ಮತ್ತಿತರ ಒತ್ತಡಕ್ಕೆ ಮಣಿದು ನೀರು ಹರಿಸದಿದ್ದರೆ ನಾನೂ ಮಾಜಿ ಮೇಯರ್ ಆದರೂ ಸರಿ ಕೌನ್ಸಿಲ್‍ನಲ್ಲಿ ಧ್ವನಿ ಎತ್ತಿ ಜನಪರ ಹೋರಾಟ ಮಾಡುವುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap