ತುಮಕೂರು : ಯಥಾಸ್ಥಿತಿಯತ್ತ ಜನ ಜೀವನ ; ಗಿಜಿಗುಟ್ಟಿದ ರಸ್ತೆಗಳು

 ತುಮಕೂರು : 

      ಕೊರೋನಾ ಅಲೆಗಳ ಕೊಂಡಿ ಕತ್ತರಿಸಲು ರಾಜ್ಯ ಸರ್ಕಾರವು ಕಳೆದ ಏಪ್ರಿಲ್ 28 ರಿಂದ ಲಾಕ್‍ಡೌನ್ ಘೋಷಿಸಿ ಅಗತ್ಯ ನಿಯಂತ್ರಣ ಉಪಕ್ರಮಗಳನ್ನು ಕೈಗೊಂಡಿತ್ತು. ಸೋಂಕು ನಿಯಂತ್ರಣಕ್ಕೆ ಬಂದಂತೆಲ್ಲ ತನ್ನ ನಿಯಮಗಳನ್ನು ಸಹ ಸಡಿಲಿಸುತ್ತಾ ಬಂದಿತ್ತು. ಇದೀಗ ರಾಜ್ಯದಲ್ಲಿ ಒಂದು ವಾರದ ಅವಧಿಯಲ್ಲಿ ಸರಾಸರಿ, ಶೇಕಡ 5 ಕ್ಕಿಂತ ಕಡಿಮೆ ಕೋವಿಡ್ ದೃಢ ಪ್ರಮಾಣ ದಾಖಲಾಗಿರುವ 16 ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಸಹ ಸೇರಿದ್ದು, ನಿನ್ನೆ (ಜೂ.21) ಜಿಲ್ಲೆಯಲ್ಲಿ ಹಗಲಿನವೇಳೆ ಲಾಕ್‍ಡೌನ್ ಸಂಪೂರ್ಣವಾಗಿ ತೆರವಾಗಿ ಕಳೆದ 53 ದಿನಗಳಿಂದ ಅಸ್ತವ್ಯಸ್ತವವಾಗಿದ್ದ ಜನ ಜೀವನ ಯಥಾಸ್ಥಿತಿಯತ್ತ ಮರಳುತ್ತಿರುವುದು ಕಂಡು ಬಂತು.

      ಟ್ರಾಫಿಕ್ ಜಾಮ್ ಆದ ರಸ್ತೆಗಳು:

      ಸದ್ಯ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಸಂಪೂಣ್ ಲಾಕ್‍ಡೌನೆ ಇಲ್ಲವೆನೊ ಎಂಬಷ್ಟರ ಮಟ್ಟಿಗೆ ನಿನ್ನೆ ಬೆಳಗ್ಗೆಯಿಂದಲೆ ಎಲ್ಲಾ ತರಹದ ವಾಹನಗಳು ಒಮ್ಮೆಲೆ ರಸ್ತೆಗಿಳಿದವು. ಹಾಗಾಗಿ ನಗರದ ಕಾಲ್‍ಟೆಕ್ಸ್, ಟೌನ್‍ಹಾಲ್ ಸರ್ಕಲ್, ಭದ್ರಮ್ಮ ಸರ್ಕಲ್, ಶಿವಕುಮಾರ ಸ್ವಾಮಿಜಿ ಸರ್ಕಲ್, ಬಟವಾಡಿ ಹಾಗೂ ಕ್ಯಾತ್ಸಂದ್ರ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಲಾಕ್‍ಡೌನ್‍ಗೂ ಮುಂಚೆ ಇದ್ದಂತೆ ಹೆಚ್ಚು ಹೆಚ್ಚು ವಾಹನಗಳು ಸಂಚರಿಸಿ ತಮ್ಮ ಸಮಯ ನಿರೀಕ್ಷೀಸುತ್ತಾ ಟ್ರಾಫಿಕ್‍ನಲ್ಲಿ ನಿಂತಿದ್ದವು ಅಲ್ಲದೇ ನಗರದ ಗುಬ್ಬಿ ಗೇಟ್, ಕುಣಿಗಲ್ ರಸ್ತೆ, ಚರ್ಚ್ ಸರ್ಕಲ್, ಎಂ.ಜಿ.ರಸ್ತೆ ಹಾಗೂ ಬಸ್ಟಾಂಡ್ ಸುತ್ತಮುತ್ತ ಹೆಚ್ಚಾಗಿ ವಾಹನಗಳು ಸಂಚರಿಸುತ್ತಿದ್ದವು.

      ಜನ ನೋಡಿ ಬಸ್ ಬಿಟ್ಟ ಕೆಎಸ್ಸಾರ್ಟಿಸಿ : ಪ್ರಯಾಣಕರಿಗೆ ತೊಂದರೆ:

      ಅನ್‍ಲಾಕ್ ನಂತರ ಬಸ್ ಪ್ರಯಾಣಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು, ಹೆಚ್ಚು ಜನರು ಸಂಚರಿಸುವ ರೂಟ್‍ಗಳ ಕಡೆ ಸಾರಿಗೆ ಬಸ್‍ಗಳನ್ನು ಬಿಡಲಾಗುತ್ತಿತ್ತು. ನಿನ್ನೆ ಮುಂಜಾನೆಯಿಂದ ಮಧ್ಯಾಹ್ನದ ತನಕ ಉತ್ತರ ಕರ್ನಾಟಕ ಭಾಗಗಳ ಜಿಲ್ಲೆಗಳಿಗೆ 2-3 ಬಸ್‍ಗಳು ಮಾತ್ರ ಸಂಚರಿಸಿವೆ. 1 ಬಸ್ ಗೆ 30 ಸೀಟುಗಳಷ್ಟು ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳುವ ನಿಯಮದಿಂದ ಹಾಗೂ ವಿರಳ ಬಸ್‍ಗಳಿಂದಾಗಿ ದೂರದ ಊರಿಗೆ ಹೋಗುವ ಪ್ರಯಾಣಿಕರು ಬಸ್ಟ್ಯಾಂಡ್‍ನ ತಂಗುದಾಣದಲ್ಲಿ ಆತಂಕದಿಂದ ಕುಳಿತಿದ್ದ ದೃಶ್ಯಗಳು ಕಂಡು ಬಂದವು.

      ನಿನ್ನೆ ಮುಂಜಾನೆಯಿಂದ ಮಧ್ಯಾಹ್ನ 1 ಗಂಟೆ ಹೊತ್ತಿಗೆ 250 ಮಾರ್ಗಗಳಲ್ಲಿ ಸುಮಾರು 4300 ಕ್ಕೂ ಹೆಚ್ಚು ಜನ ನಗರದಿಂದ ರಾಜ್ಯದ ವಿವಿಧ ಭಾಗಗಳಿಗೆ ಸಾರಿಗೆ ಬಸ್‍ಗಳ ಮೂಲಕ ಸಂಚರಿಸಿದ್ದಾರೆ. ನಗರದಲ್ಲಿ ಖಾಸಗಿ, ಗ್ರಾಮಾಂತರ ಮತ್ತು ನಗರ ಸಾರಿಗೆ ಬಸ್‍ಗಳು ವಿರಳವಾಗಿದ್ದು ಗ್ರಾಮೀಣ ಪ್ರದೇಶಗಳ ಜನ ಪ್ರಯಾಣಕ್ಕೆ ತಮ್ಮ ಸ್ವಂತ ವಾಹನ, ಆಟೋಗಳನ್ನು ಆಶ್ರಯಿಸಿದರು.

ವ್ಯಾಪಾರ-ವ್ಯವಹಾರಕ್ಕೆ ತಯಾರಿ:

      ಲಾಕ್‍ಡೌನ್‍ನಿಂದ ಸುಮಾರು 2 ತಿಂಗಳಿನಿಂದ ವ್ಯಾಪಾರ-ವ್ಯವಹಾರ ಬಂದ್ ಮಾಡಿದ್ದ ನಗರದ ಎಲ್ಲಾ ರೀತಿಯ ವ್ಯಾಪಾರಿಗಳು ಅನ್‍ಲಾಕ್‍ನಲ್ಲಾದರೂ ಉತ್ತಮ ವ್ಯಾಪಾರ ಮಾಡಬುದೆಂಬ ನಿರೀಕ್ಷೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛ ಮಾಡಿ ಮುಂದಿನ ದಿನಗಳ ವ್ಯಾಪಾರಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತಿದ್ದರು.

      ಕಾವೇರಿ ಸಿಲ್ಕ್ ಅಂಡ್ ಸ್ಯಾರೀಸ್ ಮಾಲೀಕರಾದ ರಾಜಶೇಖರ್ ಅವರು ಪ್ರತಿಕ್ರಿಯಿಸಿ “ಒಳ್ಳೆ ಹಬ್ಬಗಳ ಸಮಯದಲ್ಲಿ ಕೊರೋನಾ ಲಾಕ್‍ಡೌನ್ ಬಂದು ಜವಳಿ ದುಡಿಮೆಗೆ ಪೆಟ್ಟು ಬಿತ್ತು. ಈಗ ಅನ್‍ಲಾಕ್ ಆಗಿದ್ದು, ವ್ಯಾಪಾರದ ಬಗ್ಗೆ ಇನ್ನೂ 10-15 ದಿನ ಏನೂ ಹೇಳಲು ಬರುವುದಿಲ್ಲ. ಸದ್ಯ ಆಷಾಢ ಮಾಸವಿದ್ದು ಯಾವುದೆ ಶುಭಸಮಾರಂಭ, ಹಬ್ಬಗಳಿರುವುದಿಲ್ಲ ಹಾಗಾಗಿ ಶ್ರಾವಣ ಮಾಸದ ತನಕ ಬಟ್ಟೆ ಅಂಗಡಿಗಳ ವ್ಯಾಪಾರ ಅಂತ ಆಶಾದಾಯಕವಾಗೇನೂ ಇರುವುದಿಲ್ಲ” ಎಂದರು.

      ಅದೇ ರೀತಿ ಗೀತಾ ಎಂಬ್ರಾಯಡರಿ ಸ್ಟುಡಿಯೋ ಮಾಲೀಕರಾದ ಗೀತಾ ಅವರು ಪ್ರತಿಕ್ರಿಯಿಸಿ ಇನ್ನೂ ಎರಡು ತಿಂಗಳು ಯಾವುದೆ ಮದುವೆ, ಶುಭಸಮಾರಂಭ ಇರುವುದಿಲ್ಲ ಹಾಗಾಗಿ ಮಹಿಳೆಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿರುವ ಹೊಲಿಗೆ ಮತ್ತು ಎಂಬ್ರಾಯಡರಿ ಉದ್ಯಮವು ಮುಂದಿನ ಸಮಾರಂಭಗಳಿಗೆ ತಯಾರಾಗಲು ಸಮಯಾವಕಾಶ ಸಿಕ್ಕಿದ್ದು ಈ ಉದ್ಯಮವು ಮುಂದೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

      ನಗರದ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಎಸ್.ಎಸ್.ಪುರಂ, ಮಂಡಿಪೇಟೆ ಹಾಗೂ ಇತರ ರಸ್ತೆಗಳಲ್ಲಿರುವ ಹೊಟೇಲ್, ಜವಳಿ, ಜ್ಯೂವೆಲರಿ, ದಿನಸಿ, ಬಾರ್, ಮಾಂಸ, ಫ್ಯಾನ್ಸಿ, ಪಾತ್ರೆ, ಸ್ಟೆಷನರಿ ಹಾಗೂ ಮೊಬೈಲ್ ಶಾಪ್‍ಗಳು, ಅಂತರಸನಹಳ್ಳಿಯ ಹಣ್ಣು ತರಕಾರಿ ಮಾರುಕಟ್ಟೆ, ಬಟವಾಡಿಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದ ಸಂಜೆ 5 ರವರೆಗೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರು. ಆದರೆ ಅನ್‍ಲಾಕ್ ಮೊದಲ ದಿನವಾದ್ದರಿಂದ ಶೇ 50 ರಷ್ಟು ಗ್ರಾಹಕರು ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿದ್ದು ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವ ಸ್ಪಷ್ಟತೆ ಕಂಡು ಬಂತು.

      ಜನರನ್ನು ನೋಡಿಕೊಂಡು ಬಸ್‍ಗಳನ್ನು ಬಿಡುತ್ತಿದ್ದೇವೆ. ಬೆಂಗಳೂರು ಕಡೆ ಹೆಚ್ಚು ಪ್ರಯಾಣಿಕರಿದ್ದರಿಂದ ಈ ಮಾರ್ಗದಲ್ಲಿ ಹೆಚ್ಚು ಬಸ್‍ಗಳನ್ನು ಬಿಟ್ಟಿದ್ದೇವೆ. ಗ್ರಾಮಾಂತಕ್ಕೆ ಬಸ್ ಸಂಚಾರ ಇರುವುದಿಲ್ಲ. ನಗರ ಸಾರಿಗೆ ಬಸ್‍ಗಳು ಸಹ ರಸ್ತೆಗಿಳಿದಿವೆ. ಸದ್ಯ ಶೇ 50 ರಷ್ಟು ಬಸ್‍ಗಳು ರಸ್ತೆಗಿಳಿದಿದ್ದು ಹೆಚ್ಚು ಪ್ರಯಾಣಿಕರು ಬಂದಂತೆ ಹೆಚ್ಚು ಬಸ್ ಸಂಚರಿಸಲು ಅನುವು ಮಾಡಿಕೊಡಲಾಗುವುದು.

-ಶಿವಕುಮಾರ್.ಕೆ, ನಿಲ್ದಾಣಾಧಿಕಾರಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ತುಮಕೂರು

      ಪದೆ ಪದೆ ಲಾಕ್‍ಡೌನ್‍ನಿಂದಾಗಿ ಹೊಟೇಲ್ ಉದ್ಯಮ ನಷ್ಟದಲ್ಲಿದೆ. ನನ್ನ ಹೊಟೇಲ್ ಉದ್ಯಮದ 50 ವರ್ಷದ ಅನುಭವದಲ್ಲಿ ಇಂತಹ ಸಂಕಷ್ಟದ ದಿನಗಳನ್ನು ಎಂದೂ ನೋಡಿರಲಿಲ್ಲ. ಈಗ ಅನ್‍ಲಾಕ್ ಆಗಿದೆ ಹೋಟೆಲ್ ವ್ಯಾಪಾರ ಚೇತರಿಸಿಕೊಳ್ಳುವ ವಿಶ್ವಾಸವಿದೆ.

-ಮಾಧವ್ ಡಿ ನಾಯಕ್, ಮಾಲೀಕರು, ಸುಧಾ ಹೊಟೇಲ್, ತುಮಕೂರು

       ಮುಂದಿನ ಎರಡು ತಿಂಗಳ ನಂತರ ಹಬ್ಬ ಹರಿದಿನಗಳು, ಮದುವೆ ಮುಂಜಿಗಳು ಶುರುವಾಗುತ್ತವೆ. ಈಗ ಲಾಕ್‍ಡೌನ್ 5 ಗಂಟೆಯವರೆಗೂ ವಿಸ್ತರಣೆ ಆಗಿರುವುದರಂದ ವ್ಯಾಪಾರ-ವಹಿವಾಟು ಹೆಚ್ಚಾಗುತ್ತದೆ. ಖರೀದಿಗೆ ಬರುವ ಜನರು ಸರ್ಕಾರದ ಕೊರೋನಾ ಕುರಿತ ನಿಯಮಗಳನ್ನು ಪಾಲಿಸಿದರೆ ಸೋಂಕು ಹರಡುವುದನ್ನು ನಿಯಂತ್ರಿಸಿ ಮುಂದೆ ಲಾಕ್‍ಡೌನ್ ಆಗುವುದನ್ನು ತಪ್ಪಿಸಬಹುದು.

-ವಿಶ್ವಾಸ್, ಮಾಲೀಕರು ವಿಶ್ವಾಸ್ ಜ್ಯೂವೆಲರ್ಸ್, ತುಮಕೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap