ತುಮಕೂರು :
ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಗಳು ಅನುದಾನ ಕೊರತೆಯಿಂದ ಬಳಲುತ್ತಿದ್ದು, ಸಿಬ್ಬಂದಿ ಸಂಖ್ಯೆಯೂ ಕಡಿತಗೊಂಡು ಶುಚಿತ್ವ ಕಾಪಾಡಲು ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಇದಕ್ಕೆ ತುಮಕೂರು ಎಪಿಎಂಸಿಯೇ ಜ್ವಲಂತ ನಿದರ್ಶನವೆನಿಸಿದೆ.
ಹೌದು ನಗರದ ಹೃದಯಭಾಗದ ಬಟವಾಡಿಯಲ್ಲಿರುವ ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಹುಣಸೆಹಣ್ಣು, ಸೀಗೆಕಾಯಿ, ರಾಗಿ ಭತ್ತ, ಅಡಿಕೆ ವಹಿವಾಟಿಗೆ ಪ್ರಸಿದ್ಧಿಯಾಗಿದ್ದು, ಸೀಜನ್‍ನಲ್ಲಿ ದಿನವೊಂದಕ್ಕೆ ಎರಡೂವರೆ ಕೋಟಿಯಷ್ಟು ವಹಿವಾಟು ನಡೆಯುವ ಪ್ರಮುಖ ಮಾರುಕಟ್ಟೆಯೆನಿಸಿದೆ.
800ಕ್ಕೂ ಅಧಿಕ ಮಳಿಗೆಗಳಿರುವ ಈ ಮಾರುಕಟ್ಟೆಯಲ್ಲಿ ಸಂತೆ ನಡೆಯುವ ಸೋಮವಾರ ಮಂಗಳವಾರದಂದು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು, ಖರೀದಿದಾರರು ಜಮಾಯಿಸುತ್ತಾರೆ. ಸಂತೆ ನಡೆದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ತ್ಯಾಜ್ಯ ರಸ್ತೆಗಳಲ್ಲಿ ಚೆಲ್ಲಾಪಲ್ಲಿಯಾಗಿರುತ್ತದೆ. ನಿತ್ಯ ವಹಿವಾಟಿನ ಬಳಿಕವೂ ಸಾಕಷ್ಟು ತ್ಯಾಜ್ಯಗಳು ರಸ್ತೆ, ಖಾಲಿ ನಿವೇಶನಕ್ಕೆ ಬೀಳುತ್ತವೆ. ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಸಂತೆಯಾದ ಮರುದಿನ ಗುತ್ತಿಗೆದಾರರು ಆವರಣವನ್ನು ಸ್ವಚ್ಛಗೊಳಿಸುತ್ತಿದ್ದು, ನಿತ್ಯದ ವಹಿವಾಟಿನಿಂದ ಅನುದಿನ ಬೀಳುವ ಕಲಸ ಅಂಗಡಿ-ಮುಂಗಟ್ಟುಗಳು, ಖಾಲಿ ನಿವೇಶನಗಳ ಬಳಿಯೇ ಸಂಗ್ರಹಿಸಲ್ಪಡುತ್ತಿದೆ. ಕೆಲವರು ತ್ಯಾಜ್ಯಕ್ಕೇ ಅಲ್ಲಿಯೇ ಬೆಂಕಿಯಿಟ್ಟು ಸುಡುತ್ತಿದ್ದು, ಸ್ವಚ್ಛತೆ ಕಾಪಾಡಲು ಎಪಿಎಂಸಿ ಬಳಿ ಅನುದಾನದ ಕೊರತೆ ಎದುರಾಗಿರುವುದು ಕಂಡುಬಂದಿದೆ.
ಸಂತೆ ಸಮಯದಲ್ಲಿ ಬರುವ ರೈತರು, ಖರೀದಿದಾರರಿಗೂ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ವರ್ತಕರು ದೂರುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಒಂದು ಮಾತ್ರ ನಿರ್ವಹಿಸುತ್ತಿದ್ದು, ಹೆಚ್ಚುವರಿ ಘಟಕಗಳನ್ನು ಸ್ಥಾಪಿಸಬೇಕಿದೆ. ಸಾರ್ವಜನಿಕ ಶೌಚಾಲಯಗಳು ಕನಿಷ್ಠ ಇನ್ನೂ ಎರಡು ಅವಶ್ಯಕತೆ ಎಂದು ವರ್ತಕರು, ಹಮಾಲಿಗಳು, ರೈತರು ಒತ್ತಾಯಿಸಿದ್ದಾರೆ. ಆದರೆ ಈ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಎಪಿಎಂಸಿ ಬಳಿ ಅನುದಾನವೇ ಇಲ್ಲ ಎನ್ನುವ ಸ್ಥಿತಿ ಎದುರಾಗಿದ್ದು, ಹೊರಗುತ್ತಿಗೆ ನೌಕರರಿಗೂ ವೇತನ ನೀಡಲಾಗದೆ ಶೇ50ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ಮುಕ್ತಗೊಳಿಸಲಾಗಿದೆ.
ಸೆಸ್ ಇಳಿಕೆಯಿಂದ ಅನುದಾನ ಕೊರತೆ: ಎಪಿಎಂಸಿ ವಹಿವಾಟಿನಲ್ಲಿ ಈ ಹಿಂದೆ ಪ್ರತೀ ವಹಿವಾಟಿಗೆ 1.5ರಷ್ಟು ಸೆಸ್ ಸಂಗ್ರಹವಾಗಿ ಆದಾಯ ರೂಪದಲ್ಲಿ ಎಪಿಎಂಸಿಗೆ ದೊರೆಯುತ್ತಿತ್ತು. ವಾರ್ಷಿಕ ಆದಾಯ 2009-10ನೇ ಸಾಲಿನಲ್ಲಿ 4 ಕೋಟಿಗೂ ಅಧಿಕ ಸಂಗ್ರಹವಾಗಿತ್ತು. ದಶಕದ ಬಳಿಕ ಆದಾಯ ಲಕ್ಷಗಳಿಗೆ ಕುಸಿದಿದ್ದು, ಸೆಸ್ ಪ್ರಮಾಣವನ್ನು 1.5ರಿಂದ 0.6ಕ್ಕೆ ಇಳಿಸಿರುವುದು ಹಾಗೂ ಕೋವಿಡ್ ಪರಿಣಾಮ 2020-21ನೇ ಸಾಲಿನಲ್ಲಿ ಎಪಿಎಂಸಿ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ.
ಗಾಯದ ಮೇಲೆ ಬರೆ ಎಳೆದ ಕಾಯ್ದೆ ತಿದ್ದುಪಡಿ: ಮತ್ತೊಂದೆಡೆ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ವರ್ತಕರು, ಖರೀದಿದಾರರ ಮೇಲೆ ಎಪಿಎಂಸಿ ಹಿಡಿತವನ್ನು ತಪ್ಪಿಸಿದ್ದು, ಹೊರಗಡೆ ಖಾಸಗಿಯಾಗಿಯೇ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಎಪಿಎಂಸಿಯ ಆದಾಯಕ್ಕೆ ಕೊಕ್ಕೆ ಹಾಕಿದೆ. ತಿದ್ದುಪಡಿ ಕಾಯ್ದೆ, ಸೆಸ್ ಇಳಿಕೆಯಿಂದ ಎಪಿಎಂಸಿಯ ಬುನಾದಿಯೇ ಅಲುಗಾಡುವ ಸ್ಥಿತಿ ಬಂದೊದಗುತ್ತಿದ್ದು, ಆದಾಯ ಕುಂಠಿತದಿಂದ ಯಾವುದೇ ರೈತ ಸ್ನೇಹಿ ಯೋಜನೆಗಳನ್ನು ಕೈಗೊಳ್ಳದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಡಳಿತ ಮಂಡಳಿ ಮಾಜಿ ಸದಸ್ಯ ಯದುಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.
ಹೀಗೆ ಮುಂದುವರಿದರೆ ಎಪಿಎಂಸಿಗಳು ಅವನತಿಯತ್ತ..,
ಅನುದಾನ ಕೊರತೆ, ಕಾಯ್ದೆ ತಿದ್ದುಪಡಿಯಿಂದಾಗಿ ಖಾಸಗಿ ಮಾರುಕಟ್ಟೆಗೆ ಅವಕಾಶವಾಗಿದ್ದು, ಅವನತಿಯತ್ತ ಸಾಗುತ್ತಿರುವ ಎಪಿಎಂಸಿಗೆ ಸರಕಾರದ ನೆರವು ಇಲ್ಲವಾಗುತ್ತಿದೆ. ಸ್ವಂತ ಆದಾಯವೂ ಕುಂಠಿತಗೊಂಡಿದ್ದು ಪರಿಸ್ಥಿತಿ ಹೀಗೆ ಕೊನೆಗೆ ಎಪಿಎಂಸಿಗಳನ್ನೇ ಮುಚ್ಚುವ ಪರಿಸ್ಥಿತಿ ಬರಲಿದೆ ಎಂಬ ಆತಂಕ ಮನೆ ಮಾಡಿದೆ. ಹೊಸ ಕಾಯ್ದೆಯಿಂದಾಗಿ ಖಾಸಗಿ ಮಾರುಕಟ್ಟೆಗಳು ಹೆಚ್ಚೆಚ್ಚು ಸ್ಥಾಪಿತಗೊಂಡರೆ ರೈತರು, ಹಮಾಲಿಗಳು, ವರ್ತಕ ವಲಯವೂ ಸಂಕಷ್ಟಕ್ಕೆ ಸಿಲುಕುವ ಕಾಲ ದೂರವಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ರೈತರು, ವರ್ತಕರು, ಹಮಾಲಿಗಳ ಆಗ್ರಹವಾಗಿದೆ.
ಹಮಾಲಿಗಳ ಸಂಕಷ್ಟಕ್ಕೆ ಸ್ಪಂದನೆಯಿಲ್ಲ
ತುಮಕೂರು ಎಪಿಎಂಸಿಯಲ್ಲಿ 1000ಕ್ಕೂ ಅಧಿಕ ಮಂದಿ ಹಮಾಲಿ ಕಾರ್ಮಿಕರು ದುಡಿಯುತ್ತಿದ್ದು, 700 ಮಂದಿ ಎಪಿಎಂಸಿ ಲೈಸೆನ್ಸ್ ಪಡೆದಿದ್ದಾರೆ. 20-30 ವರ್ಷ ಶ್ರಮಪಟ್ಟು ದುಡಿದು 60 ವರ್ಷ ದಾಟಿದ ಹಮಾಲರಿಗೆ ಲೈಸೆನ್ಸ್ ರದ್ದುಗೊಳಿಸಿ ಕುಟುಂಬಕ್ಕೆ ಯಾವುದೇ ಪರಿಹಾರವಿಲ್ಲದೆ ಅವರನ್ನು ನಿರ್ಗತಿಕರನ್ನಾಗಿಸುತ್ತಿದ್ದು, ಸತ್ತ 8-10 ಮಂದಿ ಹಮಾಲರ ಕುಟುಂಬಗಳಿಗೆ ವರ್ಷಗಳೇ ಕಳೆದರೂ ವೈದ್ಯಕೀಯ ವೆಚ್ಚ ಮೊದಲಾದ ಪರಿಹಾರವೇ ದೊರೆತಿಲ್ಲ. ಕಾಯಕ ನಿಧಿ ಯೋಜನೆಯಡಿ ಕನಿಷ್ಠ 1 ಲಕ್ಷ ಪರಿಹಾರ, ಜೀವವಿಮೆ ಕಲ್ಪಿಸಬೇಕು. ಹಿಂದೆ ನೀಡಲಾಗುತ್ತಿದ್ದ ಹಮಾಲರ 9 ರಿಂದ 12ನೇ ತರಗತಿವರೆಗೆ ಓದುತ್ತಿದ್ದ ಮಕ್ಕಳಿಗೆ ವಿದ್ಯಾರ್ಥಿ ವೇತನವೂ ನಿಂತು ಹೋಗಿದ್ದು, ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆಯೂ ಕಲ್ಪಿಸಿಲ್ಲ ಎಂಬುದು ತುಮಕೂರು ಎಪಿಎಂಸಿ ಹಮಾಲಿಗಳ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಅವರ ನೋವಿನ ನುಡಿಯಾಗಿದೆ.
ಸೆಸ್ ಹೆಚ್ಚಿಸಿ, ಎಪಿಎಂಸಿಗೆ ಕಾಯಕಲ್ಪ ಕಲ್ಪಿಸಿ
ಎಪಿಎಂಸಿಯಲ್ಲಿ ನಡೆಯುತ್ತಿದ್ದ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಸೆಸ್ ಪ್ರಮಾಣವನ್ನು 1.5 ಪ್ರತಿಶತದಿಂದ 0.6ಕ್ಕೆ ಇಳಿಸಿರುವುದು ಸ್ಥಳೀಯ ಆದಾಯ ಸಂಗ್ರಹಣೆಗೆ ದೊಡ್ಡ ಹೊಡೆತ ನೀಡಿದೆ ಎಂದು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿರುವ ಎಪಿಎಂಸಿ ಅಧ್ಯಕ್ಷ ಮೂಲಸೌಕರ್ಯಗಳ ನಿರ್ಮಾಣ, ಹೊಸ ಯೋಜನೆಗಳನ್ನು ಕೈಗೊಳ್ಳುವುದಕ್ಕೂ ಸಂಪನ್ಮೂಲ ಕೊರತೆ ದೊಡ್ಡ ಹಿನ್ನಡೆಯಾಗಿದ್ದು, ಹೊರಗುತ್ತಿಗೆ ಸಿಬ್ಬಂದಿಗಳನ್ನು ಅನಿವಾರ್ಯ ಕಡಿತಗೊಳಿಸುವಂತಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಎದುರಾದ ಕೋವಿಡ್ ಎಪಿಎಂಸಿಗಳನ್ನು ಮತ್ತಷ್ಟು ಹೈರಾಣಾಗಿಸಿದ್ದು, ಆಡಳಿತ ಮಂಡಳಿ ಕುರ್ಚಿಯಲ್ಲಿ ಕೂರುತ್ತಿದ್ದೇವೆ ವಿನಃ ಅನುದಾನ ಕೊರತೆಯಿಂದ ಏನೂ ಮಾಡಲಾಗದ ಸ್ಥಿತಿ ತಲೆದೋರಿದೆ. ಸರಕಾರ ಸೆಸ್ ಪ್ರಮಾಣವನ್ನು ಹಿಂದಿನಷ್ಟೇ ನಿಗದಿಗೊಳಿಸಿ ಎಪಿಎಂಸಿಗಳಿಗೆ ಕಾಯಕಲ್ಪ ಒದಗಿಸಬೇಕು. ಈ ಸಂಬಂಧ ರಾಜ್ಯ ಎಪಿಎಂಸಿ ಅಧ್ಯಕ್ಷರ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು, ಸಹಕಾರ ಸಚಿವರು ರಾಜ್ಯ ಬಜೆಟ್‍ನಲ್ಲಿ ಈ ಕುರಿತು ಒತ್ತು ನೀಡಬೇಕೆಂಬುದು ನಮ್ಮ ಮನವಿಯಾಗಿದೆ.
-ಕೆ.ಎಂ.ಉಮೇಶ್‍ಗೌಡ ಅಧ್ಯಕ್ಷರು, ಎಪಿಎಂಸಿ ತುಮಕೂರು.
ತುಮಕೂರು ಎಪಿಎಂಸಿಯಲ್ಲಿ ಕೆಲವು ಮೂಲಸೌಕರ್ಯಗಳ ಕೊರತೆ ಇದೆ. ನಿತ್ಯ ಸ್ವಚ್ಛತೆ ಮರೀಚಿಕೆಯಾಗಿದ್ದು, ರಸ್ತೆಗಳಲ್ಲಿ, ಖಾಲಿ ಸ್ಥಳಗಳಲ್ಲಿ ತ್ಯಾಜ್ಯಗಳು ಸುರಿಯಲ್ಪಡುತ್ತಿದೆ. ಸಂತೆಯ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದು, ಕುಡಿಯುವ ನೀರಿಗೂ ಕೆಲವೊಮ್ಮೆ ಪರದಾಡುತ್ತಿರುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕಗಳು, ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಬೇಕಿದ್ದು, ಹಮಾಲಿಗಳು, ರೈತರು, ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಆರೋಗ್ಯದದೃಷ್ಟಿಯಿಂದ ಉಪ ಆರೋಗ್ಯ ಕೇಂದ್ರವೊಂದನ್ನು ತೆರೆಯಬೇಕಿದೆ.
-ಶರತ್‍ಕುಮಾರ್ ಎಪಿಎಂಸಿ ವರ್ತಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ