ತುಮಕೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಶಿಕ್ಷೆ

 ತುಮಕೂರು :

      11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣವೊಂದರಲ್ಲಿ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.

      2018 ರಲ್ಲಿ ಶಿರಾ ತಾಲ್ಲೂಕು ತಾವರಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪ್ರಕರಣ ಇದು. ತಾವರಕೆರೆ ಬಳಿ ಸ್ಥಳೀಯವಾಗಿ ಅಂಗಡಿ ಇಟ್ಟುಕೊಂಡಿದ್ದ ಸುಮಾರು 48 ವರ್ಷ ವಯಸ್ಸಿನ ಪ್ರಭು ಎಂಬಾತ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನಂತರ ತಪ್ಪಿಸಿಕೊಂಡಿದ್ದ. ಆತನನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದರು. ತನಿಖಾಧಿಕಾರಿ ಸುದರ್ಶನ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

      ಪ್ರಕರಣದ ವಿಚಾರಣೆಯು ಪೋಕ್ಸೋ ವಿಶೇಷ ನ್ಯಾಯಾಲವೂ ಆಗಿರುವ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಯಲದಲ್ಲಿ ನಡೆದಿತ್ತು. ವಾದ ವಿವಾದಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಎನ್.ಕೃಷ್ಣಯ್ಯ ಅವರು ಐಪಿಸಿ ಕಲಂ 376 ಎ ಮತ್ತು ಬಿ ಕಲಂ ಅಡಿಯಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ, ದಂಡ ಪಾವತಿಸಲು ವಿಫಲರಾದರೆ ಮತ್ತೆ 6 ತಿಂಗಳ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಐಪಿಸಿ ಕಲಂ 506ರ ಅಪರಾಧಕ್ಕಾಗಿ 2 ವರ್ಷಗಳ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಟ್ಟು 30 ಸಾವಿರ ರೂ.ಗಳ ದಂಡವನ್ನು ದೌರ್ಜನ್ಯಕ್ಕೊಳಗಾದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಬಾಲಕಿಗೆ 6 ಲಕ್ಷರೂ.ಗಳ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಜಿ.ವಿ.ಗಾಯತ್ರಿರಾಜು ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link