ತುಮಕೂರು ; ಬಿಜೆಪಿಯೊಳಗೆ ಹೆಚ್ಚಿದ ಬಣಗಳು ; ವರಿಷ್ಟರಿಗೆ ದೂರುಗಳು!!

ತುಮಕೂರು : 

    ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್‍ಗೌಡ ರಾಜಿನಾಮೆ ಪ್ರಕಟಿಸಿದ ಹಿಂದೆಯೇ ರಾಜಕೀಯ ವಲಯದಲ್ಲಿ ತರಹೆವಾರಿ ಚರ್ಚೆಗಳು ಆರಂಭವಾಗಿವೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳು ಸನಿಹವಾಗುತ್ತಿರುವ ಸಂದರ್ಭದಲ್ಲಿಯೇ ನಡೆದಿರುವ ಈ ರಾಜಿನಾಮೆಯ ಬೆಳವಣಿಗೆ ಪಕ್ಷದೊಳಗೆ ಎಲ್ಲವೂ ಸರಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

      ಸುರೇಶ್ ಗೌಡ ತಮ್ಮ ರಾಜಿನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ನೀಡಿದ ನಂತರ ರಾಜಿನಾಮೆ ವಿಷಯ ಬಹಿರಂಗವಾಗಬೇಕಿತ್ತು. ಆದರೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ದಿಢೀರ್ ರಾಜಿನಾಮೆ ವಿಷಯ ಪ್ರಕಟಿಸಿದ್ದು, ಆನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಇವೆಲ್ಲ ವಿದ್ಯಮಾನಗಳು ಅತ್ಯಂತ ಕುತೂಹಲಕಾರಿಯಾಗಿವೆ. ಅಷ್ಟೇ ಅಲದ್ಲೆ, ಪಕ್ಷದೊಳಗೆ ಗುಂಪುಗಾರಿಕೆ ಹೆಚ್ಚುತ್ತಿರುವುದನ್ನು ಪುಷ್ಟೀಕರಿಸಿದಂತಿದೆ.

      ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯನಾಗುವ ದೃಷ್ಟಿಯಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಸುರೇಶ್‍ಗೌಡ ಸೋಮವಾರ ಸಂಜೆ ಹೇಳಿಕೊಂಡಿದ್ದರು. ಆನಂತರದ ಬೆಳವಣಿಗೆಯಲ್ಲಿ ನನ್ನ ರಾಜಿನಾಮೆಗೆ ಪಕ್ಷದ ರಾಜ್ಯಾಧ್ಯಕ್ಷರನ್ನೇ ಕೇಳಿ ಎಂದು ಮಾಧ್ಯಮದವರೊಂದಿಗೆ ಹೇಳಿದ್ದರು. ಅವರ ಈ ಮಾತಿನಲ್ಲಿ ಅಸಹನೆಯೂ ಇತ್ತು. ಈ ಕಾರಣಕ್ಕಾಗಿಯೆ ಸುರೇಶ್‍ಗೌಡ ರಾಜಿನಾಮೆ ನೀಡಿರುವ ಬದಲು ರಾಜಿನಾಮೆ ಪಡೆದಿದ್ದಾರೆ ಎಂಬ ವ್ಯಾಖ್ಯಾನಗಳೆ ಹೆಚ್ಚಾಗಿ ಕೇಳಿ ಬರುತ್ತಿವೆ.

      ಇದರ ಹಿಂದೆ ಹಲವು ಕಾರಣಗಳಿವೆ ಎಂಬುದು ಚರ್ಚಿತವಾಗುತ್ತಿರುವ ವಿಷಯ. ಪಕ್ಷದೊಳಗಿನ ಗುಂಪುಗಾರಿಕೆ ಉಲ್ಬಣಗೊಂಡಿರುವುದು ಈ ಕಾರಣಗಳಲ್ಲಿ ಒಂದು. ಹಿಂದೆಲ್ಲ ಪಕ್ಷದೊಳಗೆ ಎರಡು ಗುಂಪುಗಳಿದ್ದವು. ಈಗ ಆ ಗುಂಪುಗಳ ಒಳಗೇ ಮತ್ತಷ್ಟು ಆಂತರಿಕ ಗುಂಪುಗಳು ಸೃಷ್ಟಿಯಾಗಿದ್ದು, ಯಾರು ಯಾರಿಗೂ ಹಿಡಿತಕ್ಕೆ ಸಿಗದ ಪರಿಸ್ಥಿತಿ ಪಕ್ಷದೊಳಗೆ ನಿರ್ಮಾಣವಾಗಿದ್ದು, ನಾಲ್ಕು ಗುಂಪುಗಳು ಸಕ್ರಿಯವಾಗಿರುವುದನ್ನು ಆ ಪಕ್ಷದೊಳಗಿರುವವರೆ ಹೇಳಿಕೊಳ್ಳುತ್ತಾರೆ.

     ಇಲ್ಲಿನ ಸಂಸದರು-ಶಾಸಕರದ್ದು ಒಂದು ಬಣ, ಜಿಲ್ಲಾ ಉಸ್ತುವಾರಿ ಸಚಿವರದ್ದು ಮತ್ತೊಂದು ಬಣ, ಮಾಜಿ ಸಚಿವ ಶಿವಣ್ಣ ಅವರದ್ದು ಇನ್ನೊಂದು ಬಣ, ಸುರೇಶ್‍ಗೌಡ ಅವರದ್ದು ಮಗದೊಂದು ಬಣ ಹೀಗೆ ಜಿಲ್ಲಾ ಬಿಜೆಪಿ ವಲಯದಲ್ಲಿ ಬಣಗಳು ಹೆಚ್ಚಾಗುತ್ತಲೆ ಇವೆ. ಇದರೊಳಗೆ ಮತ್ತಷ್ಟು ಗುಂಪುಗಳು ಕವಲೊಡೆಯುತ್ತಿವೆ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರದ್ದೂ ಒಂದು ಗುಂಪಿದೆ. ಇನ್ನು ತಾಲ್ಲೂಕು ಮಟ್ಟಕ್ಕೆ ಹೋದರೆ ಬಣಗಳ ಪ್ರತ್ಯೇಕ ಸಭೆಗಳು ರಾಜಾರೋಷವಾಗಿ ನಡೆಯುತ್ತಿವೆ. ಚಿಕ್ಕನಾಯಕನ ಹಳ್ಳಿಯೇ ಒಂದು ಸ್ಪಷ್ಟ ಉದಾಹರಣೆ. ಜಿಲ್ಲೆಯಲ್ಲಿ ಹೀಗೆ ಹುಡುಕುತ್ತಾ ಹೋದರೆ ಬಣಗಳು ಹೆಚ್ಚಾಗುತ್ತಿದ್ದು, ಕೆಲವರು ಪ್ರಾಬಲ್ಯ ಮೆರೆಯುತ್ತಿದ್ದರೆ ಮತ್ತೆ ಕೆಲವರು ಮಂಕಾಗುತ್ತಿದ್ದಾರೆ. ಪಕ್ಷದೊಳಗೆ ನಮ್ಮ ಅಭಿಪ್ರಾಯಗಳಿಗೆ ಬೆಲೆ ಇಲ್ಲ, ಮನ್ನಣೆ ಸಿಗುತ್ತಿಲ್ಲ ಎಂಬುದರಿಂದ ಹಿಡಿದು ನಮ್ಮ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ಅಸಮಾಧಾನಗಳು ಹೆಚ್ಚತೊಡಗಿವೆ. ಪಕ್ಷದ ವರಿಷ್ಠರಿಗೆ ದೂರುಗಳು ಸಲ್ಲಿಕೆಯಾಗುತ್ತಿವೆ.

     ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ, ತುಮಕೂರು ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇವರಲ್ಲಿ ಇಬ್ಬರು ಪ್ರಮುಖ ಸಚಿವರೂ ಆಗಿದ್ದಾರೆ. ಹೀಗಿದ್ದರೂ ಸಂಘಟಿತವಾಗಿ ನೋಡಿದರೆ ಜಿಲ್ಲೆಯಲ್ಲಿ ಯಾವತ್ತೂ ಮುಖಂಡರೆಲ್ಲ ಒಗ್ಗಟ್ಟಾಗಿ ಇರುವುದು ಕಂಡು ಬರುತ್ತಿಲ್ಲ. ಒಗ್ಗಟ್ಟಿನ ಕಾರ್ಯ ಚಟುವಟಿಕೆ ಇರಲಿ, ಹೇಳಿಕೆಗಳೇ ಭಿನ್ನ ರೀತಿಯಲ್ಲಿರುತ್ತವೆ. ಯಾವುದಾದರು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಪತ್ರಿಕಾ ಗೋಷ್ಠಿಗಳಲ್ಲೂ ಬಿಜೆಪಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಪತ್ರಿಕಾಗೋಷ್ಠಿ ಕರೆದವರೆ ಕೆಲವೊಮ್ಮೆ ನಾಪತ್ತೆಯಾಗುತ್ತಿದ್ದಾರೆ.

      ಪಕ್ಷದ ವಿರುದ್ಧವಾಗಿ ಅಥವಾ ಪಕ್ಷದ ಮುಖಂಡರ ಬಗ್ಗೆ ಇತರೆ ಪಕ್ಷಗಳು ಟೀಕೆ ಮಾಡಿದಾಗ ಅದಕ್ಕೆ ಸಮರ್ಥವಾಗಿ ಪ್ರತಿಕ್ರಿಯಿಸಬೇಕಿರುವುದು ಪಕ್ಷದ ಜಿಲ್ಲಾಧ್ಯಕ್ಷರು. ಆದರೆ ಜಿಲ್ಲಾಧ್ಯಕ್ಷರಾಗಿದ್ದ ಸುರೇಶ್‍ಗೌಡ ಅವರು ಸಮರ್ಥನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗದೆ ಇರುವುದು, ಸಭೆ ಸಮಾರಂಭಗಳಿಂದ ದೂರವೇ ಉಳಿಯುವ ಮಟ್ಟಕ್ಕೆ ಬಂದು ನಿಂತಿದ್ದರು. ಶಿರಾ ವಿಧಾನಸಭಾ ಉಪ ಚುನಾವಣೆಯ ಆರಂಭದಲ್ಲಿ ಹೆಚ್ಚು ಸಕ್ರಿಯರಾಗಿ ಕಂಡುಬಂದ ಸುರೇಶ್‍ಗೌಡ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿಕೆ ನೀಡಿದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅದನ್ನು ಪುನರುಚ್ಚರಿಸಿದ್ದರು. ಆಗಿನ ಹೇಳಿಕೆಗಳು ಈಗ ವಿಭಿನ್ನ ನಿಲುವು ಪಡೆಯತೊಡಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ಮದಲೂರು ಕೆರೆಗೆ ನೀರು ಹರಿಸಲು ಅಲೋಕೇಷನ್ ಇಲ್ಲ, ಆ ಕಾರಣಕ್ಕಾಗಿ ಸಾಧ್ಯವಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ಬಿಜೆಪಿ ಮುಖಂಡರದ್ದು.

      ಬಿಜೆಪಿ ಪಕ್ಷದೊಳಗಿನ ಆಂತರಿಕ ಗುಂಪುಗಾರಿಕೆ ಜಿಲ್ಲೆಯ ಒಟ್ಟಾರೆ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಮರೆಯಲಾಗದು. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಇತರೆ ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಗುಂಪುಗಾರಿಕೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಲ್ಲದು. ಈಗ ಜಿಲ್ಲೆಯಲ್ಲಿ ಆಗಿರುವುದು ಇದೇ. ಜಿಲ್ಲೆಗೆ ಬರಬೇಕಾಗಿರುವ ಯೋಜನೆಗಳು, ಸೌಲಭ್ಯಗಳು, ನನೆಗುದಿಗೆ ಬಿದ್ದಿರುವ ಕಾರ್ಯಗಳು ಈ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ಪ್ರಮುಖ ಸ್ಥಾನಗಳಲ್ಲಿ ಇಬ್ಬರು ಸಚಿವರು ಇರುವುದರಿಂದ ಇಂತಹ ಕೆಲಸ ಕಾರ್ಯಗಳ ಬಗ್ಗೆ ಪಕ್ಷದೊಳಗೆ ಹೆಚ್ಚು ಅವಲೋಕನವಾಗಬೇಕು. ಆದರೆ ಪಕ್ಷದ ಮುಖಂಡರುಗಳು ಒಂದು ಕಡೆ ಸೇರುತ್ತಿಲ್ಲ. ಉತ್ತರ ಮತ್ತು ದಕ್ಷಿಣ ಎನ್ನುವಂತಹ ಪರಿಸ್ಥಿತಿ ಮುಖಂಡರಲ್ಲಿ ಎದುರಾಗಿದ್ದು, ಜಿಲ್ಲೆಯ ರಚನಾತ್ಮಕ ಕೆಲಸ ಕಾರ್ಯಗಳ ಬಗ್ಗೆ ಚಿಂತಿಸುವವರು ಯಾರು?
ಓರ್ವ ಮುಖ್ಯಮಂತ್ರಿ ಜಿಲ್ಲೆಗೆ ಬರುತ್ತಾರೆಂದರೆ ಇಡೀ ನಗರ ಒಂದೆರಡು ದಿನಗಳ ಕಾಲ ಅಲರ್ಟ್ ಆಗಿರುತ್ತದೆ. ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಈ ಜಿಲ್ಲೆಯ ಪ್ರಥಮ ಕಾರ್ಯಕ್ರಮವಿದು. ಆದರೆ ಓರ್ವ ಮುಖ್ಯಮಂತ್ರಿ ನಗರಕ್ಕೆ ಬಂದು ಹೋದರೆಂಬ ವ್ಯಾಪಕ ಪ್ರಚಾರವಾಗಲಿ, ಕಾರ್ಯಕರ್ತರು, ಪಕ್ಷದ ಮುಖಂಡರು ಒಗ್ಗೂಡುವಿಕೆಯಾಗಲಿ ಕಾಣಲೇ ಇಲ್ಲ. ಇಲ್ಲಿನ ಕಾರ್ಯಕ್ರಮಗಳೆ ಮೊಟಕಾದವು.
ಅಂತರ ಕಾಯ್ದುಕೊಳ್ಳುತ್ತಿರುವ ಮುಖಂಡರು

     ಪಕ್ಷದಲ್ಲಿ ಬಣಗಳು ಉಲ್ಬಣಗೊಳ್ಳುತ್ತಿರುವಂತೆಯೇ ಮುಖಂಡರುಗಳ ನಡುವೆ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆಯೂ ಹೆಚ್ಚಾಗತೊಡಗಿದೆ. ಗುಂಪುಗಳನ್ನು ಒಗ್ಗೂಡಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಕ್ಷ ಈಗ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಅಧಿಕಾರದಲ್ಲಿರುವುದರಿಂದ ಇಲ್ಲಿರುವ ಕಾರ್ಯಕರ್ತರು, ಮುಖಂಡರು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆದರೆ ಪ್ರಾಮಾಣಿಕರು, ನಿಷ್ಠಾವಂತರು ಮೂಲೆಗುಂಪಾಗಿ ಕೆಲವರ ಕೈ ಮೇಲಾದಾಗ ಅಸಮಾಧಾನ ಭುಗಿಲೇಳುವುದು ಸಹಜ. ಇಂತಹ ಅಸಮಾಧಾನಗಳನ್ನು ನಿವಾರಿಸುವ-ನಿಭಾಯಿಸುವ ಶಕ್ತಿ ಪಕ್ಷದ ಮುಖಂಡರಲ್ಲಿ ಇರಬೇಕು. ಆದರೆ ಮುಖ ಕೊಟ್ಟು ಮಾತನಾಡದಂತಹ ಪರಿಸ್ಥಿತಿ ಮುಖಂಡರಲ್ಲೇ ಇರುವಾಗ ಇಂತಹ ಸಮಸ್ಯೆಗಳು ನಿವಾರಣೆಯಾಗುವುದಾದರೂ ಹೇಗೆ? ಇದನ್ನೆ ಪಕ್ಷದೊಳಗಿನ ಕೆಲವರು ಕೇಳುತ್ತಿದ್ದಾರೆ.

      ಸುರೇಶ್ ಗೌಡ ರಾಜಿನಾಮೆ ನಂತರ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿಬರತೊಡಗಿವೆ. ಹೆಬ್ಬಾಕ ರವಿ, ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ಊರ್ಡಿಗೆರೆಯ ಲಕ್ಷ್ಮೀಶ್, ಕೆ.ಟಿ.ಶಿವಪ್ರಸಾದ್, ಬಿ.ಕೆ.ಮಂಜುನಾಥ್, ಮಸಾಲೆ ಜಯರಾಂ ಹೀಗೆ ಐದಾರು ಹೆಸರುಗಳು ಚಾಲ್ತಿಯಲ್ಲಿವೆ. ಹಿರಿಯರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಚುನಾವಣೆಗಳು ಎದುರಾಗುತ್ತಿರುವ ಕಾರಣ ಈ ಉಸಾಬರಿ ಏಕೆ ಎಂದು ಕೆಲವರು ಚಿಂತಿಸಿದಂತಿದೆ. ಈ ನಡುವೆ ಕೆಲವರು ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ನಾನು ನಿಭಾಯಿಸುವೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಪಕ್ಷನಿಷ್ಠೆ, ಸಂಘ ಪರಿವಾರ ಸಖ್ಯ ಇವೆಲ್ಲವನ್ನು ಅಳೆದು ತೂಗಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆಂಬ ವ್ಯಾಖ್ಯಾನ ಆ ಪಕ್ಷದವರದ್ದು.

ಹಿಂದುಳಿದವರಿಗೆ ಸ್ಥಾನ ನೀಡಲು ಆಗ್ರಹ

      ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೊಂದು ಧ್ವನಿ ಬಿಜೆಪಿಯೊಳಗೆ ಹುಟ್ಟಿಕೊಂಡಿದೆ. ಉನ್ನತ ಹುದ್ದೆಗಳೆಲ್ಲ ಮುಂದುವರಿದವರ ಪಾಲಾಗಿವೆ. ಈವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಲಾಗಿದೆ. ಈ ಬಾರಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂಬ ಒತ್ತಾಸೆ ಕೇಳಿಬಂದಿದೆ. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಈ ಬೇಡಿಕೆ ಇಟ್ಟಿದ್ದು, ಚುನಾವಣೆ ಸಮಯದಲ್ಲಿ ಹಿಂದುಳಿದವರನ್ನು ಬಳಸಿಕೊಂಡು ಆನಂತರ ನಿರ್ಲಕ್ಷ್ಯ ಮಾಡುವುದು ಏಕೆ? ಸ್ಥಾನಮಾನಗಳನ್ನು ಕಲ್ಪಿಸಬೇಡವೆ ಎಂದು ಪ್ರಶ್ನಿಸಿದೆ.

     ಪಂಚಾಯತಿ ಚುನಾವಣೆಗಳು, ಅದರ ಹಿಂದೆಯೇ ವಿಧಾನಸಭಾ ಚುನಾವಣೆಗಳು ಬರುತ್ತಿದ್ದು, ಈ ಹಂತದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನದ ರಾಜಿನಾಮೆ ಒಂದು ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲವನ್ನಂತೂ ಕೆರಳಿಸಿವೆ..!

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap