ಜನರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸಿ : ಸಿಇಓ

 ತುಮಕೂರು : 

      ಗ್ರಾಮೀಣ ಮಟ್ಟದಲ್ಲಿ ಜನರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಸರ್ಕಾರದ ನಗದು ರಹಿತ ವ್ಯವಹಾರ ಯೋಜನೆ ಯಶಸ್ವಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ. ವಿದ್ಯಾಕುಮಾರಿ ಅವರು ಬಿ.ಸಿ. (Bank Correspondence) ಸಖಿಯರಿಗೆ ಕರೆ ನೀಡಿದರು.

      75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಎನ್‍ಆರ್‍ಎಲ್‍ಎಂ ಯೋಜನೆಯಡಿ “ಒಂದು ಗ್ರಾಮ ಪಂಚಾಯತಿ-ಒಂದು ಬಿ.ಸಿ. ಸಖಿ” ಎಂಬ ಪರಿಕಲ್ಪನೆಯಿಂದ ಆಯಾ ಗ್ರಾಮಪಂಚಾಯಿತಿ ಮಟ್ಟದ ಸಂಜೀವಿನಿ ಸಂಘಗಳ ಸದಸ್ಯ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ, ತರಬೇತಿ ಹೊಂದಿದ ಬಿ.ಸಿ. ಸಖಿಯರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

     ಗ್ರಾಮೀಣ ಪ್ರದೇಶದ/ಸಮಾಜದ ಕಟ್ಟ ಕಡೆಯ ಮಹಿಳೆಯ ಮನೆ ಬಾಗಿಲಿಗೆ ಸರ್ಕಾರದ ವಿವಿಧ ಸೌಲಭ್ಯ ಹಾಗೂ ಬ್ಯಾಂಕಿನ ಹಲವಾರು ಸೌಲಭ್ಯಗಳನ್ನು ಆನ್‍ಲೈನ್ ಮೂಲಕ ತಲುಪಿಸುವ ನಿಟ್ಟಿನಲ್ಲಿ ಬಿ.ಸಿ. ಸಖಿಯರನ್ನು ಆಯ್ಕೆ ಮಾಡಲಾಗಿದ್ದು, ತರಬೇತಿ ಪಡೆದ ಬಿ.ಸಿ. ಸಖಿಯರು ಪ್ರಾಮಾಣಿಕವಾಗಿ ಸೇವೆ ಒದಗಿಸಿದಲ್ಲಿ ತಾವೂ ಸಹ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಮಹಿಳೆಯರನ್ನು ಹಂತ ಹಂತವಾಗಿ ಮುಖ್ಯವಾಹಿನಿಗೆ ತರಬೇಕು ಎಂದರು.

      “ಒಂದು ಗ್ರಾಮ ಪಂಚಾಯತಿ-ಒಂದು ಬಿ.ಸಿ. ಸಖಿ” ಕಾರ್ಯಕ್ರಮ ಯಶಸ್ವಿಯಾದರೆ ಗ್ರಾಮೀಣ ಪ್ರದೇಶದವರು ನಗರ ಪ್ರದೇಶದವರಂತೆಯೇ ವ್ಯವಹರಿಸಬಹುದು. ಕೆಲವು ಗ್ರಾಮೀಣ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರದ ಜ್ಞಾನ ಇರುವುದಿಲ್ಲ. ಇಂತಹ ಮಹಿಳೆಯರು, ಬ್ಯಾಂಕಿಗೆ ಭೇಟಿ ನೀಡಲಾಗದ ಅಶಕ್ತ ವಯೋವೃದ್ಧರಿಗೆ ಈ ಸೇವೆಯನ್ನು ಒದಗಿಸಲು ಬಿ.ಸಿ. ಸಖಿಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

      ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ಆರ್.ಸೆಟಿ ಸಂಸ್ಥೆ ಮೂಲಕ ಬಿ.ಸಿ. ಸಖಿಯರಿಗೆ 5 ದಿನಗಳ ತರಬೇತಿ ನೀಡಲಾಗಿದ್ದು, ಬಿ.ಸಿ. ಸಖಿಯರು ಸ್ವ ಸಹಾಯ ಗುಂಪುಗಳಿಗೆ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

     ಕನಸು ಕಾಣುವುದು ಸುಲಭ ಆದರೆ, ಕನಸು ನನಸಾಗಲು ಪರಿಶ್ರಮ ಇರಬೇಕು. ಯಾರಿಗೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಪರಿಶ್ರಮ ಪಟ್ಟರೆ ಮಾತ್ರ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಅಭಿವೃದ್ಧಿಗೊಳ್ಳುತ್ತಿರುವ ತುಮಕೂರಿನಲ್ಲಿ ಅತ್ಯುತ್ತಮ ಕೆಲಸವಾಗುತ್ತಿದೆ ಎಂಬ ಹೆಸರು ಜಿಲ್ಲೆಗೆ ಬರುವಂತೆ ಬಿ.ಸಿ. ಸಖಿಯರು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

     ಕಾರ್ಯಕ್ರಮದಲ್ಲಿ ಲೀಡ್‍ಬ್ಯಾಂಕ್ ಮ್ಯಾನೇಜರ್, ಆರ್.ಸೆಟಿ ಸಂಸ್ಥೆ ನಿರ್ದೇಶಕ, ಅಶೋಕ್, ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap