ತುಮಕೂರು : ಅರೆಬರೆ ಕಾಮಗಾರಿ, ತ್ಯಾಜ್ಯದ ರಾಶಿ, ಕುಡುಕರ ತಾಣ

 ತುಮಕೂರು :

 

      ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ನಗರದ ಬಿ.ಎಚ್.ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರವೇಶದ್ವಾರಕ್ಕೆ ಹಾಕಲಾಗಿದ್ದ ಕಮಾನಿನ ಒಳಗೆ ಪ್ರವೇಶಿಸಿದರೆ ಆಲದ ಮರದ ತಂಪಿನ ಸಾಲು ವಿದ್ಯಾರ್ಥಿಗಳನ್ನು ಸಾರ್ವಜನಿಕರನ್ನು ಸ್ವಾಗತಿಸುತ್ತಿದ್ದವು.

      ಆಲದ ಮರದ ನೆರಳಲ್ಲೇ ಕುಳಿತು ನಿಂತು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹರಟೆ, ಓದು, ಚರ್ಚೆಯಲ್ಲಿ ಮಗ್ನರಾಗುತ್ತಿದ್ದರು. ಪಿಯು ಕಾಲೇಜು, ಡಿಡಿಪಿಯು ಕಚೇರಿ, ಬಿಎಫ್‍ಎ ಕಾಲೇಜು, ಗಾಂಧಿ ನೆನಪಿನ ಮಂದಿರಕ್ಕೂ ನೂರಾರು ಮಂದಿ ಈ ಆಲದ ಮರದ ರಸ್ತೆಯಲ್ಲೇ ಪ್ರವೇಶಿಸಬೇಕು . ಸಾಹಿತಿ ಜಿ.ಪಿ.ರಾಜರತ್ನಂ, ಸಿದ್ಧಗಂಗೆಯ ಪೂಜ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರಂತಹ ದಿಗ್ಗಜರು ಈ ಆಲದ ಮರದ ರಸ್ತೆಯಲ್ಲೇ ಕಾಲೇಜು, ಹೈಸ್ಕೂಲಿಗೆ ಪಾಠ ಮಾಡಲು ಹೋಗುತ್ತಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಆಲದ ಮರಗಳ ರಸ್ತೆಯನ್ನು ಸಾರ್ವಜನಿಕರು, ಮಕ್ಕಳಿಗೆ ಆಕರ್ಷಣೀಯವಾಗಿಸಲು ಸ್ಮಾರ್ಟ್‍ಸಿಟಿಯಿಂದ ಕೈಗೊಂಡ ಬ್ಯಾನಿಯನ್ ಟ್ರೀ ಗಾರ್ಡನ್ ಹಾಗೂ ಓಪನ್ ಜಿಮ್ ಆಗಿ ಅಭಿವೃದ್ಧಿ ಪಡಿಸುವ ಯೋಜನೆ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಅಲ್ಲಿ ಕೈಗೊಂಡ ಕಾಮಗಾರಿಗಳು ಅರೆ ಬರೆಯಾಗಿ ತ್ಯಾಜ್ಯದ ತಿಪ್ಪೆಯಂತಾಗಿ ಕುಡುಕರ ತಾಣವಾಗಿ ಮಾರ್ಪಟ್ಟಿದೆ.

      ರಸ್ತೆ ಆರಂಭದ ಎರಡು ಬದಿಯ ಮರಗಳಿಗೆ ಕಟ್ಟಿರುವ ಕಟ್ಟೆ ಕಾಮಗಾರಿಗಳಿಂದ ಹಿಡಿದು, ರಸ್ತೆಯುದ್ದಕ್ಕೂ ಅಳವಡಿಸಿರುವ ಸ್ಲ್ಯಾಬ್‍ಗಳು, ವಾಯುವಿಹಾರಿಗಳು ಕುಳಿತುಕೊಳ್ಳಲು ಅಲ್ಲಲ್ಲಿ ಚೌಕ ನಿರ್ಮಿಸಿ ಹಾಕಿರುವ ಟೈಲ್ಸ್‍ಗಳು, ಒಣಗಿ ಗಟ್ಟಿಯಾದ ಸಿಮೆಂಟ್ ಮೂಟೆಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಹಿರಿಯ ನಾಗರಿಕರು ಅಸಹ್ಯ ಪಟ್ಟಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

      ರಾತ್ರಿ ವೇಳೆ ಕುಡುಕರ ಅಡ್ಡೆ:

      ಆಲದ ಮರದ ಕೊಂಬೆಗಳ ರಸ್ತೆಯಲ್ಲಿ ಕತ್ತಲು ಕವಿಯುತ್ತಲೇ ಕುಡುಕರ ಹಾವಳಿ ಪ್ರಾರಂಭವಾಗಲಿದ್ದು, ಅಲ್ಲೇ ಕುಡಿದು ಪಾರ್ಟಿ ಮಾಡಿ ಮಲಗುವ ದೃಶ್ಯಗಳಿಗೆ ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲ್‍ಗಳೇ ಸಾಕ್ಷಿಯಾಗಿವೆ. ಮಹಿಳೆಯರು, ಹಿರಿಯ ನಾಗರಿಕರು ಧೈರ್ಯವಾಗಿ ರಸ್ತೆಯೊಳಗೆ ಪ್ರವೇಶವಿರಲಿ, ಇಣುಕಿ ನೋಡುವುದಕ್ಕೂ ಭಯಪಡುವ ವಾತಾವರಣ ಇದೆ. ಅರೆಬರೆ ಕಾಮಗಾರಿಯ ತಾಣವಾಗಿರುವ ಕಾರಣಕ್ಕೆ ಹಗಲಿನ ವೇಳೆಯಲ್ಲೂ ಕಂಠಪೂರ್ತಿ ಕುಡಿದು ಆಲದ ಮರದ ನೆರಳಲ್ಲೇ ಕುಡುಕರು ನಿದ್ರೆಗೆ ಶರಣಾಗುತ್ತಿದ್ದಾರೆ.

ಪಾಲಿಕೆಯವರು ಏನು ಮಾಡುತ್ತಿದ್ದಾರೆ?:

      ನಗರದ 15ನೇ ವಾರ್ಡಿಗೆ ಸೇರಿರುವ ಈ ಬ್ಯಾನಿಯನ್ ಟ್ರೀ ಗಾರ್ಡನ್ ಸ್ಮಾರ್ಟ್ ಸಿಟಿ ಅರೆಬರೆ ಕಾಮಗಾರಿಯಿಂದ ನನೆಗುದಿಗೆ ಬಿದ್ದಿರುವುದು ಒಂದೆಡೆಯಾದರೆ, ಅಲ್ಲಿ ಬಿದ್ದಿರುವ ಕಸ ತ್ಯಾಜ್ಯ, ಮದ್ಯದ ಬಾಟೆಲ್‍ಗಳನ್ನು ತೆರವುಗೊಳಿಸುವ ಕುರಿತು ಗಮನಹರಿಸಬೇಕಾದ ತುಮಕೂರು ಮಹಾನಗರಪಾಲಿಕೆ ಆಡಳಿತ ಏನು ಮಾಡುತ್ತಿದೆ ಎಂಬ ಪ್ರಶ್ನೆಯನ್ನು ನಾಗರಿಕರು ಮುಂದಿಡುತ್ತಿದ್ದಾರೆ.

   ವಿಶ್ರಾಂತಿಗೆ ಪ್ರಶಾಂತದ ಸ್ಥಳವಿಲ್ಲ:

      ನಿವೃತ್ತರು, ಹಿರಿಯ ನಾಗರಿಕರು ಚಿಂತೆ ಮರೆತು ಆಲ, ಅರಳೀಮರದ ನೆರಳಲ್ಲಿ ಕುಳಿತು ವಿಶ್ರಾಂತಿ ಪಡೆಯೋಣವೆಂದರೆ ಅದಕ್ಕೆ ಸೂಕ್ತ ವ್ಯವಸ್ಥೆಯಿಲ್ಲ. ಒಂದು ಟ್ರೀ ಗಾರ್ಡನ್ ಅಭಿವೃದ್ಧಿಗೆ ಎರಡು ವರ್ಷಗಳು ಬೇಕೇ? ನಗರದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಎರಡು-ಮೂರು ಬಾರಿ ಬಂದು ನೋಡಿಕೊಂಡು ಹೋಗಿದ್ದು ಬಿಟ್ಟರೆ ಕಾಮಗಾರಿ ಪ್ರಗತಿಯನ್ನೇ ಕಂಡಿಲ್ಲ ಎಂದು ಹಿರಿಯ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.
 
2019 ಸೆಪ್ಟೆಂಬರ್‍ಗೆ ಮುಗಿಸಬೇಕಿತ್ತು :

      ಬ್ಯಾನಿಯನ್ ಟ್ರೀ ಗಾರ್ಡನ್ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಯಿಂದ 88 ಲಕ್ಷ ಮಂಜೂರಾಗಿದ್ದು, ಗುತ್ತಿಗೆದಾರರಿಗೆ2018 ನವೆಂಬರ್ 17ರಲ್ಲಿ ಕಾರ್ಯಾದೇಶ ನೀಡಲಾಗಿದ್ದು, 2019 ಸೆ.17ಕ್ಕೆ ಯೋಜನೆ ಪೂರ್ಣಗೊಳಿಸಬೇಕೆಂದು ಗಡುವು ನೀಡಲಾಗಿತ್ತು. ಆದರೆ ಗುತ್ತಿಗೆದಾರರ ವಿಳಂಬದಿಂದ ಶೇ.50ರಷ್ಟು ಕಾಮಗಾರಿ ಇನ್ನೂ ಬಾಕಿ ಇದ್ದು, ಗೇಟ್‍ಗಳ ಅಳವಡಿಕೆ, ನೆಲಹಾಸುಗಳಲ್ಲಿ ಸಿಮೆಂಟ್ ಬ್ಲಾಕ್‍ಗ¼ ಅಳವಡಿಕೆ, ಲ್ಯಾಂಡ್‍ಸ್ಕೇಪ್, ವಿದ್ಯುದ್ದೀಕರಣ ಕಾಮಗಾರಿಗಳು ಅರೆಬರೆಯಾಗಿವೆ.

 
ಎರಡು ವರ್ಷದಿಂದ ನೋಡುತ್ತಲೇ ಇದ್ದೇವೆ. ಏನೋ ಗಾರ್ಡನ್ ಮಾಡುತ್ತೇವೆ ಎಂದು ಬಂದವರು ಅರೆಬರೆಯಾಗಿ ಬಿಟ್ಟು ಹೋಗಿದ್ದಾರೆ. ಹಿರಿಯ ನಾಗರಿಕರು, ವಾಯುವಿಹಾರಿಗಳಿಗೆ ಉಲ್ಲಾಸಿತ ಸ್ಥಳವಾಗಿದ್ದು ಈ ಪ್ರದೇಶ ಇಂದು ರಾಶಿ ರಾಶಿ ಕಸ, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ನೆಮ್ಮದಿಗಾಗಿ ಈ ಸ್ಥಳದಲ್ಲಿ ಕೂರಲು ಬರುತ್ತಿದ್ದ ಹಿರಿಯ ಜೀವಗಳ ಮನಸ್ಸಿಗೆ ಕಿರಿಕಿರಿಯಾಗುವ ವಾತಾವರಣ ಇಲ್ಲಿದೆ. 300 ಮೀಟರ್ ಉದ್ದದ ಸ್ಥಳ ಅಭಿವೃದ್ಧಿಗೆ ಎರಡು ವರ್ಷ ಬೇಕೇ? ಇದೆಂಥಾ ಸ್ಮಾರ್ಟ್ ಅಭಿವೃದ್ಧಿಯ ಪ್ರಶ್ನೆ ಮೂಡುತ್ತದೆ.

-ಶ್ರೀನಿವಾಸ್, ಹಿರಿಯ ನಾಗರಿಕರು.

ಎಸ್.ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link
Powered by Social Snap