ತುಮಕೂರು : ಕಾಲೇಜು ಆರಂಭವಾಗಿ 2 ವಾರವಾದರೂ ಸುಧಾರಣೆಯಿಲ್ಲ!!

ತುಮಕೂರು : 

      ಕೊರೊನಾ ತಡೆ ಕ್ರಮಗಳನ್ನು ಅನುಸರಿಸಿ ಅಂತಿಮ ವರ್ಷದ ಪದವಿ ತರಗತಿಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕಾಲೇಜು ಆರಂಭವಾಗಿ ಎರಡು ವಾರ ಕಳೆದರೂ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ. ಬೆರಳೆಣಿಕೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಇಂದು ಬಂದವರು ನಾಳೆ ಬರುವುದಿಲ್ಲ. ಬಂದರೂ ಒಂದೆರಡು ಪಿರಿಯಡ್‍ನಲ್ಲಿ ತರಗತಿಯಲ್ಲಿ ಕುಳಿತವರು, ಉಳಿದ ಪಿರಿಯಡ್‍ಗಳಿಗೆ ಹಾಜರಾಗದೆ ಹೋಗುತ್ತಾರೆ. ಹೀಗಾಗಿ, ಪದವಿ ಆಫ್‍ಲೈನ್ ತರಗತಿ ಸಮರ್ಪಕವಾಗಿ ನಡೆಯಲು ಸಾಧ್ಯವಾಗಿಲ್ಲ. ಬಹುತೇಕ ಎಲ್ಲಾ ಕಾಲೇಜುಗಳಲ್ಲೂ ಇದೇ ಪರಿಸ್ಥಿತಿ ಇದೆ.

      ಆದರೆ, ವಿದ್ಯಾರ್ಥಿಗಳಿಗೆ ಹಾಜರಾತಿ ಹಾಗೂ ಆಫ್‍ಲೈನ್ ತರಗತಿ ಕಡ್ಡಾಯವೇನಿಲ್ಲ, ಕಾಲೇಜಿಗೆ ಹಾಜರಾಗದವರು ಆನ್‍ಲೈನ್‍ನಲ್ಲೇ ಪಾಠ ಕೇಳಲು ಅವಕಾಶವಿದೆ. ಆದರೆ, ಕಾಲೇಜು ಉಪನ್ಯಾಸಕರು ಮಾತ್ರ ನಿತ್ಯ ಕಾಲೇಜಿಗೆ ಬಂದು ತರಗತಿ ಕೊಠಡಿಯಲ್ಲಿ ಕಪ್ಪು ಹಲಗೆ ಮುಂದೆ ನಿಂತು ಪಾಠ ಹೇಳಬೇಕಾಗಿದೆ. ವಿದ್ಯಾರ್ಥಿಗಳು ಈ ತರಗತಿಗೆ ಹಾಜರಾಗಬಹುದು ಇಲ್ಲವೇ, ಇದೇ ಬೋಧನೆಯನ್ನು ಆನ್‍ಲೈನ್‍ನಲ್ಲೂ ಕೇಳಲು ಅವಕಾಶವಿದೆ.

      ಆಫ್‍ಲೈನ್ ತರಗತಿಗೆ ವಿದ್ಯಾರ್ಥಿಗಳು ಗೈರು ಹಾಜರಾಲು ವಿವಿಧ ಕಾರಣಗಳಿವೆ. ಬಹುತೇಕ ಪ್ರಾಧ್ಯಾಪಕರು ಹೇಳುವ ಪ್ರಕಾರ, ವಿದ್ಯಾರ್ಥಿಗಳಿಗೆ ಕೊರೊನಾ ಭಯಕ್ಕಿಂತಾ ನಿರ್ಲಕ್ಷತೆಯೇ ಹೆಚ್ಚು. ಕಾಲೇಜುಗಳಲ್ಲಿ ಕೊರೊನಾ ತಡೆ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಆದರೂ ಬರುತ್ತಿಲ್ಲ, ಆನ್‍ಲೈನ್‍ನಲ್ಲೇ ಪಾಠ ಕೇಳಿದರಾಯಿತು ಎಂಬ ಉದಾಸೀನ ಎನ್ನುತ್ತಾರೆ.

      ಈ ತಿಂಗಳ 17ರಿಂದ ಅಂತಿಮ ವರ್ಷದ ಪದವಿಗಳ ಆಫ್‍ಲೈನ್ ತರಗತಿ ಶುರುವಾಗಿವೆ. ವಿದ್ಯಾರ್ಥಿಗಳ ಸ್ಪಂದನೆ ನಿರೀಕ್ಷಿದಷ್ಟು ದೊರೆತಿಲ್ಲ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ನ ನೆಗೆಟಿವ್ ವರದಿ, ಪೋಷಕರ ಅನುಮತಿ ಪತ್ರ ನೀಡಬೇಕು, ಮಾಸ್ಕ್ ಧರಿಸಬೇಕು, ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಬೇಕು, ಸ್ಯಾನಿಟೈಸರ್‍ನಲ್ಲಿ ಕೈ ತೊಳೆಯಲು ಅವಕಾಶ ಮಾಡಬೇಕು ಎಂದೆಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲು ಸರ್ಕಾರ ಸೂಚಿಸಿದೆ. ಕಾಲೇಜುಗಳಲ್ಲಿ ಇದನ್ನು ಅನುಸರಿಸಲಾಗುತ್ತಿದೆ. ಆದರೂ ವಿದ್ಯಾರ್ಥಿಗಳು ಬರುತ್ತಿಲ್ಲ.

      ಆರಂಭದ ದಿನಗಳಲ್ಲಿ ಉತ್ಸಾಹದಿಂದಲೇ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಕಾಲೇಜಿನವರು ವಾಪಾಸ್ ಕಳಿಸಿದರು. ಆ ವೇಳೆ ಟೆಸ್ಟ್‍ಗಾಗಿ ವಿದ್ಯಾರ್ಥಿಗಳು ಆಸ್ಪತ್ರೆಗಳಲ್ಲಿ ಮುಗಿಬಿದ್ದರು. ಟೆಸ್ಟ್ ಮಾಡಿಸಿ ಕೆಲವರು ಕಾಲೇಜಿಗೆ ಬಂದರೆ, ಉಳಿದವರು ಬರುವ ಆಸಕ್ತಿ ತೋರಿಸಲಿಲ್ಲ. 

ಗ್ರಾಮೀಣ ಸಾರಿಗೆ ಪೂರ್ಣ ಆರಂಭವಾಗಿಲ್ಲ : 

      ಪದವಿ ಕಾಲೇಜು ವಿದ್ಯಾರ್ಥಿಗಳು ಉಳಿದುಕೊಳ್ಳಲು ಹಾಸ್ಟೆಲ್‍ಗಳು ಆರಂಭವಾಗಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದು-ಹೊಗುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲ. ಕೊರೊನಾ ಲಾಕ್‍ಡೌನ್ ವೇಳೆ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿಯ ಗ್ರಾಮೀಣ ಸಾರಿಗೆ ಸೇವೆ ಎಲ್ಲಾ ಮಾರ್ಗಗಳಲ್ಲಿ ಪುನರಾರಂಭವಾಗಿಲ್ಲ. ಹೀಗಾಗಿ, ಹಳ್ಳಿಗಳಿಂದ ನಗರ, ಪಟ್ಟಣದ ಕಾಲೇಜಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

      ಗ್ರಾಮಾಂತರ ಪ್ರದೇಶದಲ್ಲಿ ಬಸ್ ಸೇವೆ ಆರಂಭಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪ್ರಯಾಣಿಕರ ಕೊರತೆ ಹಾಗೂ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಾರಣ ಬಸ್ ಹತ್ತುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇದೆ. ಪ್ರಯಾಣಿಕರ ಬೇಡಿಕೆ, ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಮುಂಬರುವ ದಿನಗಳಲ್ಲಿ ಬಸ್ ಸೇವೆ ಒದಗಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

      ತರಗತಿ ಆರಂಭಿಸುವ ಮೊದಲು ಸರ್ಕಾರ ವಿದ್ಯಾರ್ಥಿಗಳ ಅನುಕೂಲ, ಅನಾನುಕೂಲಗಳನ್ನು ಪರಿಗಣಿಸಬೇಕಾಗಿತ್ತು. ಹಾಸ್ಟೆಲ್ ವ್ಯವಸ್ಥೆ, ಸಾರಿಗೆ ಸೌಕರ್ಯ, ಆರೋಗ್ಯ ರಕ್ಷಣೆ ಕ್ರಮಗಳ ಬಗ್ಗೆ ಆದ್ಯತೆ ನೀಡಿ, ಆತ್ಮವಿಶ್ವಾಸ ಮೂಡಿಸಬೇಕಾಗಿತ್ತು. ಅದೆಲ್ಲವನ್ನೂ ಕಡೆಗಣಿಸಿ, ಏಕಾಏಕಿ ಆಫ್‍ಲೈನ್ ತರಗತಿ ಆರಂಭಕ್ಕೆ ಅನುಮತಿ ನಿಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಗ್ರಾಮಿಣ ಪ್ರದೇಶದ ವಿದ್ಯಾರ್ಥಿಗಳು ಆಫ್‍ಲೈನ್ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ. ಶಿವಣ್ಣ ಹೇಳಿದರು.

ಸುರಕ್ಷತೆಗೆ ಎಲ್ಲಾ ಕ್ರಮ :

     ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ತರಗತಿಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಆದರೂ ವಿದ್ಯಾರ್ಥಿಗಳು ಆಫ್‍ಲೈನ್ ತರಗತಿಗಳಿಗೆ ಹಾಜರಾಗುತ್ತಿಲ್ಲ ಎಂದು ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್.ಲೀಲಾವತಿ ಹೇಳಿದರು.

     ತರಗತಿಗೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಬಂದರೂ ನಿರ್ಲಕ್ಷ ಮಾಡದೆ ಆಫ್‍ಲೈನ್ ಬೋಧನೆ ಮಾಡಲಾಗುತ್ತದೆ. ಸದ್ಯ, ಬೆರಳೆಣಿಕೆಯಷ್ಟು ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಕಾಲೇಜಿಗೆ ಬಂದು ತರಗತಿಯಲ್ಲಿ ಪಾಲ್ಗೊಳ್ಳಿ ಎಂದು ಉಳಿದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದೇವೆ ಎಂದರು.

     ಕಾಲೇಜುಗಳಲ್ಲಿ ತರಗತಿ ಪ್ರವೇಶಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ನ ನೆಗೆಟಿವ್ ಇರುವ ವರದಿ ಹಾಗೂ ಪೋಷಕರ ಅನುಮತಿ ಪತ್ರವನ್ನು ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಕೆಲವರು ಕೋವಿಡ್ ಟೆಸ್ಟ್ ಮಾಡಿಸಿ ವರದಿಯನ್ನು ಕಾಲೇಜಿಗೆ ನೀಡಿದರು. ಕೆಲವರು ಟೆಸ್ಟ್ ಮಾಡಿಸುವ ಗೋಜಿಗೇ ಹೋಗದೆ, ಕಾಲೇಜು ಕಡೆಯೂ ಹೋಗದೆ ಆನ್‍ಲೈನ್ ತರಗತಿ ಅವಲಂಬಿಸಿ ಮನೆಯಲ್ಲೇ ಉಳಿದರು. ಹೀಗಾಗಿ, ಕಾಲೇಜು ಆರಂಭದಲ್ಲಿ ತರಗತಿ ಪ್ರವೇಶ ಮಾಡಿ ಆಫ್‍ಲೈನ್ ತರಗತಿಗೆ ಹಾಜರಾಗಬೇಕೆಂಬ ಉತ್ಸಾಹ ಇಲ್ಲವಾಗಿ ವಿದ್ಯಾರ್ಥಿಗಳು ಕಾಲೇಜು ಕಡೆ ಬರದಾದರು. ಹೀಗಾಗಿ, ಅನೇಕ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಲ್ಲ, ಬರುವ ಕೆಲವೇ ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಜರಾಗುವ ವಿಶ್ವಾಸ : 

      ಕೋವಿಡ್ ಟೆಸ್ಟ್‍ನ ನೆಗೆಟಿವ್ ರಿಪೋರ್ಟ್ ನೀಡುವುದು ಕಡ್ಡಾಯ ಮಾಡಿರುವುದರಿಂದ ವಿದ್ಯಾರ್ಥಿಗಳು ಟಸ್ಟ್ ವರದಿ ತರುವುದು ತಡವಾಗಿ ಕೆಲವರು ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದರೂ ಶೇಕಡ 30-35ರಷ್ಟು ವಿದ್ಯಾರ್ಥಿಗಳು ಆಫ್ಲೈನ್ ಕ್ಲಾಸ್‍ಗೆ ಹಾಜರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ತುಮಕೂರು ವಿವಿ ಕಾಲೇಜಿನ ಸಮಾಜ ಕಾರ್ಯ ಮತ್ತು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪರಶುರಾಮ್ ಕೆ.ಜಿ. ಹೇಳುತ್ತಾರೆ.

      ಆಫ್‍ಲೈನ್ ತರಗತಿಗೆ ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳು ಈವರೆಗೆ ಹಾಜರಾಗಿಲ್ಲ, ಆದರೆ, ಮುಂದೆ ಬರುತ್ತಾರೆ, ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಅದರ ಭಯವೂ ಕಮ್ಮಿಯಾಗುತ್ತಿದೆ, ವಿದ್ಯಾರ್ಥಿಗಳು ಭಯಬಿಟ್ಟು ಕಾಲೇಜಿಗೆ ಬರುತ್ತಾರೆ. ಬೋಧನಾ ವ್ಯವಸ್ಥೆ ಸಹಜ ರೀತಿಯಲ್ಲಿ ಮುಂದುವರೆಯತ್ತದೆ ಎಂದು ವಿವಿ ಕಲಾ ಕಾಲೇಜಿನ ಪನ್ನಡ ಪ್ರಾಧ್ಯಾಪಕ ಪ್ರೊ.ಕರಿಯಣ್ಣ ಅಭಿಪ್ರಾಯಪಟ್ಟರು.
ಪ್ರಸ್ತುತ ಆನ್‍ಲೈನ್ ತರಗತಿ ನಡೆಯುತ್ತಿವೆ, ನೆಟ್‍ವರ್ಕ್ ಸಮಸ್ಯೆಯಾಗಿ ಪಾಠ ಕೇಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಬೋಧನೆಯ ವಿಡಿಯೋವನ್ನು ಪಿಡಿಎಫ್ ಮಾಡಿ ಅವರ ಮೊಬೈಲ್‍ಗೆ ಕಳುಹಿಸಲಾಗುತ್ತದೆ ಎಂದರು.

      ಅಂತಿಮ ವರ್ಷದ ಪದವಿಯ ಆಫ್‍ಲೈನ್ ತರಗತಿಗಳು ಸಹಜ ಸ್ಥಿತಿಯಲ್ಲಿ ನಡೆದು ಯಶಸ್ವಿಯಾದರೆ, ಮುಂದೆ, ಉಳಿದ ಪದವಿ, ಪಿಯೂಸಿ ಹಾಗೂ ಶಾಲೆಗಳನ್ನು ಆರಂಭ ಮಾಡಲು ವಿಶ್ವಾಸ ಮೂಡುತ್ತದೆ. ಅಂತಹ ಸಂದರ್ಭಕ್ಕಾಗಿ ವಿದ್ಯಾರ್ಥಿಗಳು, ಪೋಷಕರು ಎದುರು ನೋಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap