ತುಮಕೂರು :

ಜಿಲ್ಲೆಯಲ್ಲಿ ಹೊಸದಾಗಿ ಬುಧವಾರ 340 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ದಿನವೊಂದಕ್ಕೆ ಸೋಂಕಿತರ ಸಂಖ್ಯೆ ದ್ವಿಶತಕ, ತ್ರಿಶತಕ ದಾಟುತ್ತಿರುವುದು ಆತಂಕಕಾರಿಯೆನಿಸಿದೆ. ಬುಧವಾರ ಕೋವಿಡ್‍ಗೆ ಕುಣಿಗಲ್ ನಗರದ 43 ವರ್ಷದ ಮಹಿಳೆ ಮೃತಪಟ್ಟಿದ್ದು, ಇವರಿಗೆ ಏ.3ರಂದು ಕೋವಿಡ್ ದೃಢಪಟ್ಟಿತ್ತು.
ಒಟ್ಟು ಸೋಂಕಿತರ ಸಂಖ್ಯೆ 28402ಕ್ಕೆ ಏರಿಕೆಯಾಗಿದ್ದು, ತಾಲೂಕುವಾರು ಸೋಂಕಿತರ ಪೈಕಿ ಚಿ.ನಾ.ಹಳ್ಳಿ 21, ಗುಬ್ಬಿ 44, ಕೊರಟಗೆರೆ 15, ಕುಣಿಗಲ್ 14, ಮಧುಗಿರಿ 30, ಪಾವಗಡ 22, ಶಿರಾ 22, ತಿಪಟೂರು 17, ತುಮಕೂರು 132 ಮಂದಿ ಹಾಗೂ ತುರುವೇಕೆರೆಯ 23 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಂತೆಯೇ ಸೋಂಕಿತರಲ್ಲಿ 205 ಪುರುಷರು, 135 ಮಂದಿ ಮಹಿಳೆಯರಿದ್ದು 60 ವರ್ಷ ಮೇಲ್ಪಟ್ಟವರು 60 ಮಂದಿಯಿದ್ದಾರೆ. 5 ವರ್ಷದೊಳಗಿನ ಮೂವರು ಮಕ್ಕಳು ಸೇರಿದ್ದು, 198 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.
ಆಪ್ತಮಿತ್ರ ಸಹಾಯವಾಣಿ ಪುನರಾರಂಭ
ಕೋವಿಡ್ ಸೋಂಕಿತರಿಗೆ ಟೆಲಿ ಮೆಡಿಸಿನ್ ಹಾಗೂ ಆಪ್ತ ಸಮಾಲೋಚನೆ ಸೇವೆ ಒದಗಿಸುವ ಆಪ್ತಮಿತ್ರ ಸಹಾಯವಾಣಿಯನ್ನು ಸರಕಾರ ಮತ್ತೆ 6 ತಿಂಗಳವರೆಗೆ ಪುನರಾರಂಭಿಸಿದ್ದು, ಕೋವಿಡ್ ಲಕ್ಷಣವಿದ್ದವರೂ, ಸೋಂಕಿತರ ಸಂಪರ್ಕಕ್ಕೆ ಬಂದವರು 14410 ಸಹಾಯವಾಣಿಗೆ ಕರೆ ಮಾಡಿ ಸಂದೇಹ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.ಅಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಬೆಡ್‍ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕೆಂದು ಸರಕಾರ ಸೂಚಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿರಾಕರಿಸುವಂತಿಲ್ಲ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಾರ್ವಜನಿಕ ಆರೋಗ್ಯ ಪ್ರಾಧಿಕಾರಿಗಳ ದೃಢೀಕರಣದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಅಲ್ಲಿ ಅವರಿಗೆ ಉಚಿತ ಚಿಕಿತ್ಸೆ (ನಗದು ರಹಿತ) ನೀಡಬೇಕೆಂದು ಸರಕಾರ ಆದೇಶಿಸಿದೆ. ಅಂತೆಯೇ ಖಾಸಗಿ ಆಸ್ಪತ್ರೆಗಳು ಕೋವಿಡ್ 19 ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ.ಹಾಗೂ ಚಿಕಿತ್ಸೆ ವಿಳಂಬ ಮಾಡುವಂತಿಲ್ಲ ಮತ್ತು ಮುಂಗಡ ಹಣಪಾವತಿಸುವಂತೆ ಕೇಳುವಂತಿಲ್ಲ ಎಂದು ಸೂಚಿಸಿದ್ದು,ನೇರವಾಗಿ ರೋಗಿಗಳೇ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾದರೆ, ರೋಗಿಗಳು ಸರಕಾರ ನಿಗದಿಪಡಿಸಿರುವ ಈ ಕೆಳಕಂಡ ದರಗಳ ಮಿತಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆಸ್ಪತ್ರೆಯವರು ಈ ಮಿತಿಗಿಂತ ಹೆಚ್ಚಿನ ಶುಲ್ಕ ಕೇಳುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಖಾಸಗಿ ಚಿಕಿತ್ಸೆ ದರ:
ಸರಕಾರದ ಆದೇಶದಲ್ಲಿ ಸೋಂಕಿತರ ಶುಶ್ರೂಷೆಗೆ ದಿನವೊಂದಕ್ಕೆ ಸಾಮಾನ್ಯ ವಾರ್ಡ್ ಆದರೆ 10,000ರೂ., ಐಸಲೋಷೆನ್ ಐಸಿಯು ವೆಂಟಿಲೇಟರ್ ಸಹಿತ 15,000 ಹಾಗೂ ಐಸೋಲೇಷನ್ ಐಸಿಯು ವೆಂಟಿಲೇಟರ್ ಸಹಿತ ಆದರೆ 25ಸಾವಿರ ಮಾತ್ರ ದಿನವೊಂದಕ್ಕೆ ಕಟ್ಟಿಸಿಕೊಳ್ಳಬೇಕಿದೆ ಸ್ಪಷ್ಟವಾಗಿ ಹೇಳಿದೆ. ಒಂದು ವೇಳೆ ಹೆಚ್ಚಿನ ದರ ಕೇಳಿದರೆ ಸಹಾಯವಾಣಿ 1800 4258330ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








