ತುಮಕೂರು :
ಕೋವಿಡ್ ಸ್ಥಿತ್ಯಂತರಗಳ ನಡುವೆಯೂ ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಮುನ್ನೆಡೆಯುತ್ತಿದ್ದು, 2020-21ನೇ ಸಾಲಿನಲ್ಲಿ 1407.80 ಲಕ್ಷ ರೂ. ಲಾಭಾಂಶ ದೊರೆತಿದ್ದು, ಅನುತ್ಪಾದಕ ಆಸ್ತಿ ಅನುಪಾತ ಶೇ.5.55ರಷ್ಟಕ್ಕೆ ಇಳಿಕೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ಬ್ಯಾಂಕ್‍ನ ಪ್ರಧಾನ ಕಚೆರಿಯಲ್ಲಿ ವೆಬಿನಾರ್ ಮೂಲಕ ನಡೆದ 67ನೇ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಯಾಂಕ್ ಕಳೆದ ಐದು ವರ್ಷಗಳಲ್ಲಿ ಉತ್ತಮ ಸಾಧನೆಯೊಂದಿಗೆ ಮುನ್ನೆಡೆಯುತ್ತಿದ್ದು, ಸಾಲ ಸೌಲಭ್ಯ ಪಡೆಯದ ಎಲ್ಲಾ ರೈತರಿಗೂ ಆರ್ಥಿಕ ನೆರವನ್ನು ಒದಗಿಸಬೇಕೆಂಬುದು ಡಿಸಿಸಿ ಬ್ಯಾಂಕ್ ಧ್ಯೇಯವಾಗಿದೆ. ಈ ದಿಸೆಯಲ್ಲಿ ಪ್ರತೀ ಹೋಬಳಿಗೊಂದು ಡಿಸಿಸಿ ಬ್ಯಾಂಕ್ ಶಾಖೆ, ಪಂಚಾಯ್ತಿಗೊಂದು ಪ್ರಾಥಮಿಕ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಶಾಸನಬದ್ಧ ಪರಿವೀಕ್ಷಣೆ ವರದಿಯಲ್ಲೂ ಎ ಶ್ರೇಣಿ ಪಡೆದಿರುವ ಹೆಮ್ಮೆ ನಮ್ಮ ಬ್ಯಾಂಕನದ್ದಾಗಿದೆ.
8.60 ಕೋಟಿಯಷ್ಟು ಮೃತ ರೈತರ ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗಿದ್ದು, ಎಲ್ಲಾ ರೈತರಿಗೂ ಡಿಸಿಸಿ ಬ್ಯಾಂಕ್ ನೆರವು ಸಿಗಬೇಕೆಂಬ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ರಮ ಹಾಕುತ್ತಿದ್ದಾರೆ. ರೈತ ಸದಸ್ಯರ ಸಹಕಾರದಿಂದ ತುಮಕೂರಿನ ಬ್ಯಾಂಕ್ ರಾಜ್ಯದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮೃತ ಸಹಕಾರಿಗಳ ಸೇವೆ ಸ್ಮರಣೆ:
ಇತ್ತೀಚೆಗೆ ನಿಧನರಾದ ಬ್ಯಾಂಕ್ ಮಹಿಳಾ ನಿರ್ದೇಶಕಿ ಅನ್ನಪೂರ್ಣ ವೆಂಕಟನಂಜಪ್ಪ, ಎಸ್.ಎನ್.ಕೃಷ್ಣಯ್ಯ ಸೇರಿ ಮೃತ ಸಹಕಾರಿಗಳ ಸೇವೆಯನ್ನು ರಾಜಣ್ಣ ಇದೇ ಸಂದರ್ಭದಲ್ಲಿ ನೆನೆದರು.
ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್,ಸಲಹೆಗಾರ ಜಂಗಮ್ಮ,ಬ್ಯಾಂಕಿನ ನಿರ್ದೇಶಕರಾದ ಲಕ್ಷ್ಮಿನಾರಾಯಣ, ಟಿ.ಪಿ.ಮಂಜುನಾಥ್ ಸೇರಿ ಇತರ ನಿರ್ದೇಶಕರುಗಳು ಜೊತೆಗಿದ್ದರು.
ಸಮಾಜಮುಖಿ ಕಾರ್ಯಕ್ರಮಗಳ ಅನುಷ್ಠಾನ :
ಬ್ಯಾಂಕ್‍ಗೆ ಬರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗುವಂತೆ ರೈತಸ್ನೇಹಿ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದ ಕೆ.ಎನ್.ರಾಜಣ್ಣ ಅವರು ವೆಬಿನಾರ್ ಮೂಲಕ ಬ್ಯಾಂಕ್‍ನ ಪ್ರಗತಿ ಬಗ್ಗೆ ಸದಸ್ಯರುಗಳು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ವಸಂತಾ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರೈತರಿಗೆ ಸ್ಪಂದಿಸುವ ಬ್ಯಾಂಕ್ ಇಲ್ಲವಾಗಿದೆ. ಅಲ್ಲಿ ಹೊಸ ಶಾಖೆ ಸೇರಿ ಜಿಲ್ಲೆಯ 7 ಕಡೆ ಹೊಸ ಶಾಖೆ ತೆರೆಯುವ ಗುರಿಯನ್ನು ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದೆ.
ಬಡವರ ಬಂಧು ಯೋಜನೆಯಡಿ ಕಳೆದ ಸಾಲಿನಲ್ಲಿ 4592 ಫಲಾನುಭವಿಗಳಿಗೆ ಸಾಲ ನೀಡಿದ್ದು, ತುಮಕೂರು ವಿವಿಯಲ್ಲಿ ಎಸ್ಸಿ-ಎಸ್ಟಿ, ವಿಶೇಷಚೇತನ ಪ್ರಥಮ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸ್ಥಾಪಿಸಿದ್ದು, ನಮ್ಮ ಆಡಳಿತಾವಧಿಯ ಹೆಗ್ಗೆರುತೆನಿಸಿದೆ. ಸಮಾಜಮುಖಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಡಿಸಿಸಿ ಬ್ಯಾಂಕ್ ಸದಾ ಮುಂಚೂಣಿಯಲ್ಲಿರಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
