ಲೋಕ ಅದಾಲತ್‍ನಲ್ಲಿ ತುಮಕೂರು ಜಿಲ್ಲೆ ಪ್ರಥಮ

ತುಮಕೂರು:

ಪ್ಯಾನ್ ಇಂಡಿಯಾ ಕಾನೂನು ಅರಿವು ಶಿಬಿರ ನ್ಯಾ. ಬಿ.ವೀರಪ್ಪ ಉದ್ಘಾಟನೆ ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿರುವ ಜೊತೆ ಜೊತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ. ಸರ್ವರಿಗೂ ನ್ಯಾಯ ದೊರಕಬೇಕು ಎಂಬ ನಿಟ್ಟಿನಲ್ಲಿ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ ಅದಾಲತ್ ಅನ್ನು ನಡೆಸಲಾಗುತ್ತಿದ್ದು, ಈ ಕಾರ್ಯದಲ್ಲಿ ತುಮಕೂರು ಜಿಲ್ಲೆ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಬಿ.ವೀರಪ್ಪ ಪ್ರಶಂಸಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೆÇೀಲಿಸ್, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಜರುಗಿದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವು ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಸರ್ವರಿಗೂ ಸಮಾನ ಅವಕಾಶ, ಸ್ಥಾನಮಾನಗಳನ್ನು ಕಲ್ಪಿಸಿದೆ. ವ್ಯಕ್ತಿ ಗೌರವ ಮತ್ತು ಸಹೋದರತೆಯನ್ನು ಬೆಳೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತಲೆ ಎತ್ತಿ ನಡೆಯುವ ಅವಕಾಶ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ನ್ಯಾಯದಾನ ಪ್ರತಿಯೊಬ್ಬರಿಗೂ ತಲುಪಲು ಹಳ್ಳಿ-ಹಳ್ಳಿಯಲ್ಲಿಯೂ ಕಾನೂನು ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾನೂನಿನ ಅರಿವಿನ ಕೊರತೆ: ದೇಶದಲ್ಲಿ ಶಿಕ್ಷಿತರಿದ್ದರೂ ಕಾನೂನಿನ ಅರಿವಿಲ್ಲ. ಹಾಗಾಗಿಯೇ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಹಣ, ಅಧಿಕಾರದ ವ್ಯಾಮೋಹಕ್ಕಾಗಿ ಮಕ್ಕಳಿಂದ ದೂರಾಗುವ ಮತ್ತು ಅವರಿಂದ ತೊಂದರೆಗೊಳಗಾಗುವ ಪೆÇೀಷಕರ ರಕ್ಷಣೆಗಾಗಿ ಹಿರಿಯ ನಾಗರಿಕರ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮಕ್ಕಳು ಹೆತ್ತವರನ್ನು ನೋಡಿಕೊಳ್ಳದಿದ್ದರೆ ಪೆÇೀಷಕರೇ ತಮ್ಮ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಹಿರಿಯ ನಾಗರಿಕರು ಈ ಸೌಲಭ್ಯ ಪಡೆದುಕೊಳ್ಳಬೇಕೆಂದರು.

ಕಾನೂನಿನ ಅರಿವು ಮೂಡಿಸುವಲ್ಲಿ ಮಾಧ್ಯಮದ ಪಾತ್ರವೂ ಬಹು ಮುಖ್ಯವಾಗಿದೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗ ನ್ಯಾಯಾಂಗದ ಜೊತೆಗೆ ಕೈ ಜೋಡಿಸಿ ದಮನಿತರ ರಕ್ಷಣೆಗೆ ಮುಂದಾಗಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಜಿ.ನರೇಂದರ್ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ವಸ್ತು ಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದ್ದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಲೀಗಲ್ ಸರ್ವೀಸ್ ಕೆಡೆಟ್ ಕಾಪ್ಸ್ ಸ್ವಯಂ ಸೇವಕರ ಹಾಗೂ ವಿದ್ಯಾರ್ಥಿಗಳ ತಂಡದ ಮೂಲಕ ಕಾನೂನು ಸೇವೆಗಳ ಅರಿವು ಮೂಡಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.


29 ಸಾವಿರ ಹಳ್ಳಿಗಳಲ್ಲಿ ಪ್ರಾಧಿಕಾರದ ಕಾರ್ಯಕ್ರಮ: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ಯಾನ್ ಇಂಡಿಯಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 29 ಸಾವಿರ ಹಳ್ಳಿಗಳಲ್ಲಿಯೂ ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಜಿ.ಪಂ.ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ ದುರ್ಬಲರಿಗೆ ನೆರವು ನೀಡುವುದು ನ್ಯಾಯಾಂಗ ಮತ್ತು ಕಾಯಾರ್ಂಗದ ಮುಖ್ಯ ಉದ್ದೇಶ. ಸರ್ಕಾರವು ಜನರ ಮನೆ ಬಾಗಿಲಿಗೆ ಸೇವೆ ದೊರಕಿಸುವ ನಿಟ್ಟಿನಲ್ಲಿ ಸಕಾಲದಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಸಹಭಾಗಿತ್ವ ವಹಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸುಮಾರು 64 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಇದೇ ವೇಳೆ ಕಾನೂನು ಅರಿವು ಕುರಿತ ಅಲೆಗಳು ಮತ್ತು ಕಾನೂನಿನ ಬೆಳಕು ಎಂಬ ಕವನ ಸಂಕಲನಗಳನ್ನೂ ಬಿಡುಗಡೆ ಮಾಡಲಾಯಿತು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಧೀಶರುಗಳು ವಿವಿಧ ಇಲಾಖಾವಾರು ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದ ಬಳಿಕ ನಗರದಾದ್ಯಂತ ಕಾನೂನು ಅರಿವು ಮೂಡಿಸುವ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap