ತುಮಕೂರು :
ಸಂವಿಧಾನ ಒಪ್ಪಿತ 23 ಭಾಷೆಗಳು ಕೂಡ ಭಾರತದಲ್ಲಿ ಸರಿಸಮಾನವಾದವು. ಒಂದಕ್ಕೆ ಮಾತ್ರ ಕಿಮ್ಮತ್ತು ಕಿರೀಟ ಇಡುವುದು ತಪ್ಪು. ಪ್ರಾದೇಶಿಕ ಭಾಷೆಗಳೇ ರಾಜ್ಯಾಡಳಿತದಲ್ಲಿ ಮೇಲುಗೈ ಸಾಧಿಸಬೇಕು…, ಇದು ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರ ಪ್ರತಿಕ್ರಿಯೆ.
ಪ್ರಜಾಪ್ರಗತಿ-ಪ್ರಗತಿ ವಾಹಿನಿಯಲ್ಲಿ ಏರ್ಪಡಿಸಿದ್ಧ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇಂದ್ರ ಸರಕಾರದ ಪರೀಕ್ಷೆಗಳಲ್ಲಿ, ಇಲಾಖೆಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮಣೆಹಾಕು, ಇಲ್ಲದಿದ್ದರೆ ಬಿಟ್ಟು ಹೊರಡು ಎನ್ನುವ ಧ್ವನಿ ಪ್ರಬಲವಾಗಬೇಕಿದೆ. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಉದ್ಯೋಗ ಹರಸಿ ಬಂದವರು ಕಡ್ಡಾಯವಾಗಿ ಕೇಂದ್ರ ಕಸಾಪ ನಡೆಸುವ ಕಾವ, ಜಾಣ, ಮತ್ತು ರತ್ನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಅರ್ಹತಾ ಪತ್ರ ಪಡೆಯಬೇಕು. ಮಾತನಾಡುವ ಬರೆಯುವ ಶಕ್ತಿ ಬರದಿದ್ದರೆ ಅವರು ಇಲ್ಲಿ ಕೆಲಸ ಮಾಡುವುದೇ ಬೇಡ ಎಂದು ಅಭಿಪ್ರಾಯಿಸಿದರು.
ಕುದಿಯುತ್ತಿರುವ ಸಮಸ್ಯೆಗಳಿಗೆ ಸಮ್ಮೇಳನ ಧನಿಯಾಗಬೇಕು :
ಈ ಬಾರಿಯ ಹಾವೇರಿಯ ಸಮ್ಮೇಳನದ ಕುದಿಯುತ್ತಿರುವ ಸಮಸ್ಯೆಗಳಿಗೆ ಆದ್ಯತೆ ಕೊಡಬೇಕು ಎಂಬುದು ಸಮ್ಮೇಳನಾಧ್ಯಕ್ಷನಾಗಿ ನನ್ನ ಬಯಕೆಯಾಗಿದೆ ಎಂದ ದೊರಂಗೌ ಅವರು ಸಮ್ಮೇಳನ ನಿರ್ಣಯಗಳ ಅನುಷ್ಟಾನ ಕುರಿತಂತೆ ಮೇಲ್ವಿಚಾರಣ ಸಮಿತಿ ಅಸ್ಥಿತ್ವಕ್ಕೆ ತರುವ ಅಗತ್ಯವಿದೆ. ಶಕ್ತಿಕೇಂದ್ರ ವಿಧಾನಸೌಧದಲ್ಲಿ ಎಷ್ಟೋ ಅಧಿಕಾರಿಗಳ ಟಿಪ್ಪಣಿ ಇಂಗ್ಲೀಷ್‍ನಲ್ಲಿದ್ದರೂ ಅದನ್ನು ಜಯಿಸಿಕೊಂಡಿದ್ದಾರೆ. ಮೊಬೈಲ್ ಟಿವಿ ಮೊದಲ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕೆಯಲ್ಲಿ ಕನ್ನಡದ ಸೊಲ್ಲೇ ಇಲ್ಲ. ಶೇಕಡ 99ರಷ್ಟು ವಿದ್ಯುನ್ಮಾನ ಯಂತ್ರ ತಯಾರಿಕೆಯವರು ಆಂಗ್ಲ ಭಾಷೆಗೆ ಜೋತುಬಿದ್ದಿದ್ದಾರೆ. ಪ್ರಾದೇಶೀಕ ಭಾಷೆಗಳಲ್ಲಿ ಪ್ರಾಂತೀಯ ಉಪ ಭಾಷೆ, ಬುಡಕಟ್ಟು ಭಾಷೆಗಳ ಗತಿ-ಸ್ಥಿತಿ ನೋಡಬೇಕು. ಬರೀ ಕನ್ನಡವಲ್ಲ ಅದರ ಆಂತರಿಕ ಭಾಷೆಯನ್ನು ಸೇರಿ ಚರ್ಚಿಸಬೇಕು. ಆದರೆ ದುರ್ದೈವ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಸಂವಾದಗಳು ಮಾತ್ರ ನಡೆದು, ಉಳಿದ ವಿಷಯಗಳ ಬಗ್ಗೆ 2-3 ಕಿ.ಮೀ ದೂರದಲ್ಲಿ ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿಗಳನ್ನು ನಡೆಸಲಾಗುತ್ತದೆ. ಅಲ್ಲಿ ಸಭಿಕರಿಗಿಂತ, ವೇದಿಕೆಯಲ್ಲಿ ಮಾತಾಡುವವರೇ ಹೆಚ್ಚಿರುತ್ತಾರೆ ಎಂದು ಬೇಸರಿಸಿದರು.
ರಾಜಕೀಯ ಲಾಭಕ್ಕಾಗಿ ಗಡಿ ತಗಾದೆ:
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜಕೀಯ ಲಾಭಕ್ಕಾಗಿ ಮತ್ತೆ ಮತ್ತೆ ಗಡಿ ವಿವಾದವನ್ನು ಕೆದಕಬಾರದು. ಕನ್ನಡ ಧ್ವಜ ಕಿತ್ತುಹಾಕುವುದು, ಬೇರೆ ಧ್ವಜ ಹಾರಿಸುವುದು ಅವರ ಸ್ವಾರ್ಥವನ್ನು ತೋರಿಸುತ್ತದೆ. ಗಡಿ, ಭಾಷೆ, ನದಿ, ಇವುಗಳು ತುಂಬಾ ಸೂಕ್ಷ್ಮವಾದ ವಿಷಯಗಳು. ಗೋವಾದಲ್ಲಿ ಕನ್ನಡಿಗರ ಗುಡಿಸಲನ್ನು ಕಿತ್ತು ಎಸೆದಿದ್ದರು. ಮಹಾರಾಷ್ಟ್ರದಲ್ಲಿ ಕೂಡ ಕನ್ನಡಿಗರು ಅಸಹಾಯಕರಾಗುತ್ತಿದ್ದಾರೆ. ಇದಕ್ಕೆಲ್ಲ ಗಡಿ ನೀರಿನ ವಿವಾದವನ್ನು ಮಿಲಿಟರಿ, ಕಾನೂನಿನ ಬಲದಿಂದ ಮಾತ್ರ ಸಾಧಿಸಲು ಆಗದು. ಅದು ಭಾವನಾತ್ಮಕ ವಿಷಯವೂ ಹೌದು. ಅರಿವಿನ ಪರಿದಿ, ವಿಶ್ವಾಸ, ಪ್ರೀತಿ ಮುಖ್ಯ. ಎರಡು ರಾಜ್ಯಗಳ ಜನತೆಯ ಭಾವನೆಗಳಿಗೆ ಧಕ್ಕೆ ಬರಬಾರದು.
ಹೊರರಾಜ್ಯದುಲ್ಲಿಕನ್ನಡ ಓದಿಕೊಂಡು ಇಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಬಂದವರಿಗೆ ಕನಿಷ್ಠ ಶೇಕಡ 5 ಅಂಕಗಳನ್ನು ಹೆಚ್ಚು ಕೊಡಬೇಕು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣ ದಿಸೆಯಲ್ಲಿ ಶಾಸಕರು ಔದಾರ್ಯ ತೋರಿ ಬಂಡಿ ಜಾಡುಬಿಟ್ಟು ಅಕ್ಕಪಕ್ಕ ನೋಡಬೇಕು ಎಂದರು.
ಪರಮಹಂಸರು, ವಿವೇಕಾನಂದರ ಕುರಿತು ಮಹಾಕಾವ್ಯ:
1970ರಲ್ಲಿ ಕೋಲ್ಕ ತ್ತಾ ಪ್ರವಾಸ ಮಾಡಿ ಸ್ವಾಮಿ ವಿವೇಕಾನಂದರು, ಪರಮಹಂಸರು, ಶಾರದಾದೇವಿಯ ಬಗ್ಗೆ ಹೆಚ್ಚು ತಿಳಿದುಕೊಂಡೆ. ಅವರದ್ದೇ ಕಥೆಯನ್ನು ವಸ್ತುವಾಗಿಸಿ ಮಹಾಕಾವ್ಯ ರಚನೆಗೆ ನನ್ನದೇ ಛಂದಸ್ಸಿನಲ್ಲಿ ತೊಡಗಿದ್ದೇನೆ. ಪ್ರಗಾಥಕ್ಕೆ ಒಪ್ಪುವ ಛಂದಸ್ಸು ಬಳಸಿದ್ದೇನೆ. ಅದರಲ್ಲಿ ನಿಯತ, ಅನಿಯತ ಎಂದೂ ಎರಡು ಬಗೆಯಿದ್ದು ನನ್ನದು ನಿಯತ ಛಂದಸ್ಸು. 12ನೇ ಶತಮಾನದ ಶರಣರು, ಕೀರ್ತನಕಾರರು, ಸರ್ವಜ್ಞ ಜನಪದೀಯರು, ಇವರೆಲ್ಲರನ್ನು ಬಳಸಿಕೊಂಡು ಭಾರತದ ಮೂಲಕ ವಿಶ್ವ ಕಲ್ಯಾಣಕ್ಕೆ ಇಡೀ ಜಗತ್ತಿಗೆತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕನ್ನಡಿಗರು ಕೀಳರಿಮೆ ಬಿಡಬೇಕು :
ಕರ್ನಾಟಕ ಗಡಿಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಸಂವಾದದಲ್ಲಿ ಮಾತನಾಡಿ ಪ್ರಾದೇಶಿಕ ಭಾಷೆ ಉಳಿಯಬೇಕು. ಅನ್ನಕೊಡುವ ಭಾಷೆ ನಾಲಗೆ ಮೇಲೆ ಹರಿದಾಡಲಿ. ಮಹಾತ್ಮಗಾಂಧಿಯವರು ನನಗೆ ಮಾತೃಭಾಷೆಯು ತಾಯಿಯ ಸ್ತನ್ಯಪಾನದಂತೆ ಎಂದಿದ್ದಾರೆ. ಇಂದಿನ ಕನ್ನಡ ಭಾಷೆ ಅನುವಾದದ ರೂಪದಲ್ಲಿದ್ದು, ಸ್ವಂತಿಕೆ ಇಲ್ಲದಾಗಿದೆ. ಭಾಷೆಯು ಮನದಂಗಳ, ಮನೆಯಂಗಳ ಭಾಷೆಯಾಗಬೇಕು. ದ.ರಾ.ಬೇಂದ್ರೆ ಅವರದ್ದು, ಮನೆಯಂಗಳದ ಭಾಷೆ ಮರಾಠಿಯಾಗಿದ್ದರೆ, ಮನದಂಗಳದ ಭಾಷೆ ಕನ್ನಡವಾಗಿತ್ತು. ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್, ಡಾ.ಎಚ್.ನರಸಿಂಹಯ್ಯ, ಸರ್.ಎಂ.ವಿಶ್ವೇಶ್ವರಯ್ಯ ಇವರೆಲ್ಲ ಕನ್ನಡ ಶಾಲೆಯಲ್ಲಿ ಓದಿದವರೇ. ಇವರೆಲ್ಲರಿಗೂ ತಾಯಿ ಭಾಷೆಯು ಹೃದಯಕ್ಕೆ ಹತ್ತಿರವಾಗಿತ್ತು. ನನ್ನ ಆಡಳಿತಾವಧಿಯಲ್ಲಿ ಇಂಗ್ಲೀಷ್ ಕಡತಗಳನ್ನು ಹಿಂತಿರುಗಿಸಿದ್ದೇನೆ. ಕನ್ನಡಿಗರಿಗೆ ಕೀಳರಿಮೆ ಹೆಚ್ಚು ಹೋಟೆಲ್‍ಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆಂದರು.
ಕನ್ನಡ ನಾಡಿಗೆ ಗೋವಾ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ಹೀಗೆ ಒಟ್ಟು 6 ಗಡಿ ರಾಜ್ಯಗಳಿವೆ. ಅಲ್ಲಿನ ಜನಕ್ಕೆ ಮೂಲಭೂತ ಸೌಕರ್ಯ ಕೊಟ್ಟು ಕನ್ನಡ ಮನಸ್ಸನ್ನು ಗಟ್ಟಿಗೊಳಿಸಬೇಕು. ಬೆಳಗಾವಿ ಗಡಿ ಸಮಸ್ಯೆಗೆ ಭಾಷಾವಾರು ಪ್ರಾಂತ್ಯ ರಚನೆಯಲ್ಲಿಯೇ ಸಮಸ್ಯೆ ಅಂತ್ಯವಾಗಿದೆ. ಮೇಲಿಂದ ಮೇಲೆ ಸಮಸ್ಯೆ ಸೃಷ್ಟಿಸಬಾರದು. ಮಹರಾಷ್ಟ್ರ ಸಿಎಂ ತಗಾದೆ ಮಾಡಬಾರದು, ಕೊರೊನಾ, ನಿರುದ್ಯೋಗ, ಹಣದುಬ್ಬರ, ಮುಂತಾದ ಸಮಸ್ಯೆಗಿಳಿರುವಾಗ ಗಡಿಯಂತಹ ವಿವಾದಗಳನ್ನು ಸೃಷ್ಟಿಸಬಾರದು. ಭಾರತ ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿ, ವಿಶೇಷವಾಗಿ ಶಾಸಕರುಗಳು ಗಡಿ ಶಾಲೆಗಳನ್ನು ದತ್ತು ಪಡೆದುಕೊಂಡು ಗಡಿ ಭಾಗದ ಕನ್ನಡ ಶಾಲೆಗಳಿಗೆ ಹೆಚ್ಚು ಒತ್ತು ನೀಡಬೇಕು. ಮತ್ತು ಅಲ್ಲಿನ ಸಮುದಾಯಕ್ಕೆ ಉದ್ಯೋಗವಕಾಶ ಕಲ್ಪಿಸಬೇಕು. ಗೋಷ್ಠಿಯ ಗಾಂಭೀರ್ಯತೆ ಹೆಚ್ಚುತ್ತದೆ ಎಂದರು.
ಅಧಿಕಾರವೇ ಮುಖ್ಯವಾಗಿ ಭಾಷೆ ಹಿಂದುಳಿದಿದೆ : ಡಾ.ಎಸ್.ಪಿ.ಪದ್ಮಪ್ರಸಾದ್
ಹಿರಿಯ ವಿದ್ವಾಂಸ, ಸಾಹಿತಿ ಡಾ.ಎಸ್.ಪಿ.ಪದ್ಮಪ್ರಸಾದ್ ಅವರು ಸಂವಾದದಲ್ಲಿ ಪ್ರತಿಕ್ರಿಯಿಸಿ ನಿರ್ಣಯಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಪರಿಷತ್‍ಗೂ ಮಿತಿ ಇದೆ, ಸರಕಾರಕ್ಕೂ ಮಿತಿ ಇದೆ. ಇದು ಕೇವಲ ರಾಜ್ಯ ಸರಕಾರದ ಕೈಯ್ಯಲಿಲ್ಲ. ಇದಕ್ಕೆ ಸಂವಿಧಾನ, ಕೇಂದ್ರ ಸರಕಾರ ಎಲ್ಲವೂ ಇದೆ. ಆದರೆ ಇಚ್ಚಾಶಕ್ತಿಯಿದ್ದರೆ ಬಹಳಷ್ಟು ಸಾಧ್ಯವಿದೆ. ನಮ್ಮ ರಾಜ್ಯ ಸರಕಾರಗಳಿಗೆ ಅಧಿಕಾರವೇ ಮುಖ್ಯವಾಗಿ ಭಾಷೆಯ ಅಭಿವೃದ್ಧಿಯಲ್ಲಿ ತಮಿಳು, ಮಲೆಯಾಳಂ ರೀತಿ ಕನ್ನಡ ಬೆಳವಣಿಗೆ ಹೊಂದಲು ಸಾಧ್ಯವಾಗಿಲ್ಲ. ಸರೋಜಿನಿ ಮಹಿಷಿ ವರದಿ ಇಂದಿಗೂ ಅನುಷ್ಟಾನವಾಗಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಬಂದಿರುವ ಪಿ.ಎಚ್‍ಡಿ ಸಂಶೋಧನೆ ಪ್ರಕಾರ ಶೇ.70ರಷ್ಟು ನಿರ್ಣಯಗ:ಳು ಕಾರ್ಯಗತವಗಿಲ್ಲ. ಜನರು ಪುಣ್ಯಕೋಟಿಯಂತಿರದೆ, ಸರಕಾರವನ್ನು ಗುದ್ದಿದರೆ ಸರಕಾರಕ್ಕೆ ಇಚ್ಚಾಶಕ್ತಿ ತಾನಾಗಿಯೇ ಬರುತ್ತದೆ.
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಸ್ತಿಯವರು ಕೇಂದ್ರ ಕಸಾಪ ಅಧ್ಯಕ್ಷರಾಗಿದ್ದಾಗ ಬೇಂದ್ರೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆರಿಸಿದರು. ಬೇಂದ್ರೆಯವರು ಮಾಸ್ತಿಯವರನ್ನು ಅಣ್ಣ ಎಂದು ಸಂಭೋದಿಸುತ್ತಿದ್ದರು. ಆಗ ಅಣ್ಣ ತಮ್ಮನನ್ನು ಸಮ್ಮೇಳನಾಧ್ಯಕ್ಷರಾಗಿಸಿದರು ಎಂದು ಅಪಸ್ವರ ಬಂದಿತು. ಆರ್.ಸಿ.ಹಿರೇಮಠರು ಸಮ್ಮೇಳನಾಧ್ಯಕ್ಷರಾದಾಗ ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಆರಿಸಲಿಲ್ಲ ಎಂದು ವಿರೋಧ ವ್ಯಕ್ತವಾಗಿತ್ತು. ತೀನಂಶ್ರೀ ಅವರನ್ನು ಅಧ್ಯಕ್ಷರಾಗಲು ಕೋರಿದಾಗ ಅವರು ತಮಗಿಂತಲೂ ಹಿರಿಯರಾದ ಡಿ.ಎಲ್.ನರಸಿಂಹಚಾರ್ ಅವರನ್ನುಆರಿಸುವಂತೆ ಸೂಚಿಸಿದರು. ಹಾಗಾಗಿ ತೀನಂಶ್ರೀ ಅವರು ಕೊನೆಗೂ ಸಮ್ಮೇಳನಾಧ್ಯಕ್ಷರಾಗಲೇ ಇಲ್ಲ ಎಂದರು.
ಎಲ್ಲೆಡೆ ಮಹಿಳಾ ಮೀಸಲು ಅಗತ್ಯ :
ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಲು ಎಲ್ಲರ ಕಾಲಘಟ್ಟದಲ್ಲಿ ಚರ್ಚೆಯಾಗಿದೆ. ಕಳೆದ ಐದು ವರ್ಷದಲ್ಲಿ ಪರಿಷತ್‍ನಲ್ಲೂ ಮಹಿಳೆ ಪರ ಸಾಕಷ್ಟು ಪ್ರತಿಪಾದನೆ ಮಾಡಿದ್ದೇವೆ. ಮಹಿಳೆಯ ಸ್ವ ಸಾಮಥ್ರ್ಯದಿಂದ ಪ್ರತಿಭ ಉದಾಹರಣೆಗೆ ಪರೀಕ್ಷೆಗಳಲ್ಲಿ ಮೊದಲ ರ್ಯಾಂಕ್ ಅನ್ನೇ ಪಡೆಯುತ್ತಾರೆ. ಆದರೆ ಪುರುಷರು ಸ್ಥಾನಮಾನ ಕೊಡುವಾಗ ಅವರನ್ನು ಕಡೆಗಣಿಸುತ್ತಾರೆ. ಆಯ್ಕೆಯ ತಾಂತ್ರಿಕ ಪ್ರಕ್ರಿಯೆ ಕುರಿತು ನಿಯೋಜಿತ ಅಧ್ಯಕ್ಷರು ತಮ್ಮ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕು. ಮಹಿಳಾ ಮೀಸಲಾತಿ ಎಲ್ಲೆಡೆ ಬರದಿದ್ದರೆ ಅವಕಾಶ ಇಲ್ಲವಾಗುತ್ತದೆ. ಶತಮಾನ ದಾಟಿದ ಕೇಂದ್ರ ಕಸಾಪದ ಇತಿಹಾಸದಲ್ಲಿ ಅದರ ಅಧ್ಯಕ್ಷ ಚುಕ್ಕಾಣಿಯನ್ನು ಹಿಡಿಯಲು ಈವರೆಗೆ ಮಹಿಳೆಗೆ ಅವಕಾಶವೇ ಸಿಕ್ಕಿಲ್ಲ ಎಂದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಹಾಜರಿದ್ದರು. ಸಾ.ಚಿ.ರಾಜ್‍ಕುಮಾರ್ ಸಂವಾದ ನಡೆಸಿಕೊಟ್ಟರು.
ನಿರೂಪಣೆ: ಎಸ್.ಹರೀಶ್ ಆಚಾರ್ಯ, ನಾಗಾರ್ಜುನ ಸಾಗ್ಗೆರೆ.
ಶತ ಶತಮಾನಗಳಿಂದ ತುಳಿದ………………..,ಮಕ್ಕಳೇ ಎಂದು ಬರೆದ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವೇ?: ದೊರಂಗೌ
ಪುಸ್ತಕ ಆಯ್ಕೆ ಸಮಿತಿಯಲ್ಲಿರುವ 25 ಜನರ ಆಯ್ಕೆಗೆ ಬರುವ ಐದಾರು ಸಾವಿರ ಪುಸ್ತಕಗಳನ್ನು ಒಮ್ಮೆಲೆ ಓದಲು ಸಾಧ್ಯವಿಲ್ಲ. ಎಲ್ಲವನ್ನೂ ಪರಿಗಣಿಸಲು ಸಾಧ್ಯವಿಲ್ಲ ಕೆಲವು ಸಾರಿ ತುಂಬಾ ಅಶ್ಲೀಲ ವಾಕ್ಯ, ಸಾಮರಸ್ಯಕ್ಕೆ ಧಕ್ಕೆತರುವ ಪದಗಳು ಇರುತ್ತವೆ. ಉದಾಹರಣೆಗೆ ಶತ ಶತಮಾನಗಳಿಂದ ನಮ್ಮನ್ನು ತುಳಿದ…….., ….., ಮಕ್ಕಳೇ ಅಂಥಾ ಬರೆದ ಪುಸ್ತಕವನ್ನು ಹೇಗೆ ಒಪ್ಪಿಕೊಳ್ಳುವುದು ಎಂದು ಪ್ರಶ್ನಿಸಿದ ಗ್ರಂಥಾಲಯ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ದೊಡ್ಡರಂಗೇಗೌಡರು, ಇದರ ನಡುವೆ ಗಮನಕ್ಕೆ ಬಾರÀದ ಯೋಗ್ಯ ಕೃತಿಗಳಿಗೆ ಅನ್ಯಾಯವೂ ಆಗಿರಬಹುದು ಎಂದು ಡಾ.ದೊಡ್ಡರಂಗೇಗೌಡ ಹೇಳಿದರು.
ಹಾವೇರಿ ಸಮ್ಮೇಳನ ಸರಳವಾಗಿರಲಿ: ಡಾ.ಸಿ.ಸೋಮಶೇಖರ್
ಸಮ್ಮೇಳನಗಳಲ್ಲಿನ ನಿರ್ಣಯಗಳ ಅನುಷ್ಟಾನಕ್ಕೆ ಸಮಿತಿ ರಚಿಸಬೇಕು. ಅದರಲ್ಲಿ ಸಮ್ಮೇಳನಾಧ್ಯಕ್ಷರು, ಹಿರಿಯ ಸಾಹಿತಿಗಳು, ಸರಕಾರ ಹಾಗೂ ಪರಿಷತ್ ಪ್ರತಿನಿಧಿಗಳು ಇರಬೇಕು. ಸಮ್ಮೇಳನಗಳಲ್ಲಿ ವಿಜೃಂಭಣೆ ಬೇಡ. 10-11ಕೋಟಿ ಖರ್ಚು ವೆಚ್ಚ ಏಕೆ? ಇದರ ಬದಲಾಗಿ ನೂರಾರು ಪುಸ್ತಕಗಳನ್ನು ಮುದ್ರಿಸಿ ಹಂಚಿ, ಕನ್ನಡಶಾಲೆ ತೆರೆಯಿರಿ.ಕನ್ನಡ ಕಲಿಸುವವರಿಗೆ ಉತ್ತೇಜನ ನೀಡಿ. ಈ ಬಗ್ಗೆ ಸಮ್ಮೇಳನಾಧ್ಯಕ್ಷರು ನೈತಿಕ ಸೂಚನೆ ಕೊಡಬೇಕು. ಇತ್ತೀಚಿನ ಐಎಎಸ್ ಅಧಿಕಾರಿಗಳು ಕನ್ನಡ ಕಲಿಯುತ್ತಿದ್ದಾರೆ.ಕನ್ನಡ ಕಲಿಯದಿದ್ದರೆ ಇಲ್ಲಿ ಏಕೆ ಕೂತಿರುವೆ. ಇಲ್ಲಿಂದ ಹೊರಡು ಎಂದು ಹೇಳುತ್ತಿದ್ದವರು ಪಾಟೀಲ್ ಪುಟ್ಟಪ್ಪನವರು ಮಾತ್ರ ಎಂದು ನೆನಪಿಸಿಕೊಂಡರು.
ಬೆಳಗಾವಿ ಗಡಿಯಲ್ಲಿ ಕನ್ನಡಿಗರಿಗೆ ಸಮಸ್ಯೆ ಏಕೆ? ಅಲ್ಲಿನ ಕನ್ನಡಿಗರಿಗೆ ಸರಕಾರವೂ ಸೂಕ್ತ ರಕ್ಷಣೆ ನೀಡಬೇಕು. ಗೋವಾದಲ್ಲಿ ಕನ್ನಡಿಗರ ಗುಡಿಸಲು ಕಿತ್ತೆಸೆಯುವ ಸಂದರ್ಭ ಬಂದಿತು. ಇಂತಹ ದಬ್ಬಾಳಿಕೆಗಳು ಮರುಕಳಿಸದಂತೆ ಸರಕಾರ ಕ್ರಮವಹಿಸಬೇಕು. ಮೊದಲೆಲ್ಲ ಪ್ರಾದೇಶಿಕ ಭಾಷೆ, ಹಿಂದಿ, ಇಂಗ್ಲೀಷ್ ಇದ್ದವು. ಆದರೆ ಇತ್ತೀಚೆಗೆ ಬರೀ ಎರಡು ಭಾಷೆ ಮಾತ್ರ ಇದ್ದು, ಬ್ಯಾಂಕುಗಳಲ್ಲಿ ಮೊದಲೆಲ್ಲ ಪಾಸ್‍ಬುಕ್ ಮತ್ತು ಚಲನ್‍ಗಳು ಕನ್ನಡದಲ್ಲಿ ಮುದ್ರಣವಾಗುತ್ತಿದ್ದವು. ಆದರೆ ಇಂದು ಕನ್ನಡವೇ ಮಾಯವಾಗಿದೆ ಗೋಕಾಕ್ ವರದಿ, ಸರೋಜಿನಿಮಹಿಷಿ ವರದಿ, ಶಾಸ್ತ್ರೀಯಸ್ಥಾನಮಾನ ಅಕಾಡೆಮಿ, ಪ್ರಾಧಿಕಾರಗಳಿದ್ದೂ ಕನ್ನಡಕ್ಕೆಅಪಾಯವಿದೆ ಏನೋ ಎನಿಸುತ್ತದೆ.
-ಬಾ.ಹ.ರಮಾಕುಮಾರಿ ಜಿಲ್ಲಾ ಕಸಾಪ ಅಧ್ಯಕ್ಷೆ
ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಯಾದ ನಂತರ ನಿಯೋಜಿತ ಅಧ್ಯಕ್ಷರ ಸಾಹಿತ್ಯಿಕ ಸಾಧನೆ ಚರ್ಚೆಯಾಗಬೇಕೆ ಹೊರತು ಅವರ ಜಾತಿ, ಪ್ರದೇಶ, ಆಸಕ್ತಿಗಳು ಚರ್ಚೆಯಾಗಬಾರದು. ಇಲ್ಲಿ ತನಕ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವವರಲ್ಲಿ ಅನರ್ಹರಾದವರು ಯಾರು ಇಲ್ಲ. ಆ ಸ್ಥಾನಕ್ಕೆ ನಮ್ಮಲ್ಲಿ ಹೆಚ್ಚು ಅರ್ಹರಿರುವುದೇ ಒಂದು ಹೆಮ್ಮೆ ಮತ್ತು ಸಮಸ್ಯೆಯೂ ಆಗಿದೆ. ಸಮ್ಮೇಳನದಲ್ಲಿ ಈಗಾಗಲೇ ರಸ್ತೆ, ರೈಲ್ವೆ, ಮಹಾಜನ್ ವರದಿ ಸೇರಿ ಆಯಾ ಕಾಲಘಟ್ಟದ ಸಮಸ್ಯೆಗಳಿಗೆ ಸಮ್ಮೇಳನ ಧ್ವನಿಯಾಗುತ್ತಲೇ ಬಂದಿದೆ.
– ಡಾ.ಎಸ್.ಪಿ.ಪದ್ಮಪ್ರಸಾದ್ ಹೆಸರಾಂತ ಸಾಹಿತಿಗಳು
ಪ್ರಜಾಪ್ರಗತಿ -ಪ್ರಗತಿ ವಾಹಿನಿಯಿಂದ ಏರ್ಪಡಿಸಿದ್ಧ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದದಲ್ಲಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ಡಾ.ಸಿ.ಸೋಮಶೇಖರ್, ಡಾ.ಎಸ್.ಪಿ.ಪದ್ಮಪ್ರಸಾದ್ ಹಾಗೂ ಬಾ.ಹ.ರಮಾಕುಮಾರಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ