ತುಮಕೂರು : `ಮನೆಗಳು ಬಾಡಿಗೆಗಿವೆ’ : ಹೋಗುವವರೇ ಇಲ್ಲ !

 ತುಮಕೂರು :

      ನಗರದ ಯಾವುದೇ ಬಡಾವಣೆಗೆ ಹೋದರೂ ಅಲ್ಲಿ ಟು-ಲೆಟ್ ಬೋರ್ಡ್‍ಗಳು ಕಂಡುಬರುತ್ತವೆ. ಕನ್ನಡದಲ್ಲಿ ಮನೆ ಬಾಡಿಗೆಗೆ ಇದೆ ಎಂದು ಒಂದು ಬೋರ್ಡ್ ಹಾಕಿರುತ್ತಾರೆ. ತಿಂಗಳುಗಳು ಉರುಳಿದರೂ ಆ ಬೋರ್ಡ್ ಹಾಗೆಯೇ ಇರುತ್ತದೆ.
2020ನೇ ಮಾರ್ಚ್ ಕೊನೆಯಿಂದ ಈವರೆಗೂ ನಗರದಲ್ಲಿ ಇಂತಹ ಪರಿಸ್ಥಿತಿ ಇದೆ. ಕೋವಿಡ್ ಪ್ರಭಾವವು ಬಾಡಿಗೆ ಮನೆಯ ಮೇಲೂ ಬೀರಿರುವುದಕ್ಕೆ ನಗರದಲ್ಲಿ ಕಂಡುಬರುವ ಈ ಬೋರ್ಡ್‍ಗಳೇ ಸಾಕ್ಷಿ. ಸತತವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಕೆಲವು ಉದ್ಯೋಗಿಗಳು ನಗರ ಬಿಟ್ಟಿದ್ದು ಸೇರಿದಂತೆ ಹಲವು ಹತ್ತು ಕಾರಣಗಳಿಂದಾಗಿ ನಗರದ ಅನೇಕ ಬಾಡಿಗೆ ಮನೆಗಳು ಖಾಲಿ ಹೊಡೆಯುತ್ತಿವೆ.
ಪ್ರಮುಖ ಹಾಗೂ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ವರ್ಷದಿಂದಲೂ ಮನೆಗಳು ಖಾಲಿ ಇವೆ. ಯಾರಾದರೂ ಬರಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದಾರೆ. ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗುವ ಸುಳಿವು ಸಿಕ್ಕಿದರೂ ಸಹ ಮೂರನೆ ಅಲೆಯ ಆತಂಕ ಮತ್ತೆ ಮನೆ ಮಾಲೀಕರಿಗೆ ಶುರುವಾಗಿದೆ.

      2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದಂತೆ ನಿರ್ಬಂಧಗಳು ಎದುರಾದವು. ವಿದ್ಯಾರ್ಥಿಗಳು ಹಳ್ಳಿ ಸೇರಿದರು. ನಗರದಲ್ಲಿ ಪಿಜಿಗಳಲ್ಲಿದ್ದವರೂ ಸಹ ಖಾಲಿ ಮಾಡಿದರು. ವಿದ್ಯಾರ್ಥಿಗಳಿಗಾಗಿಯೇ ಮನೆ ಮಾಡಿಕೊಂಡಿದ್ದವರು ಊರು ಸೇರಿಕೊಂಡರು. ಕೆಲವರಿಗೆ ಉದ್ಯೋಗವೂ ಇಲ್ಲದಾಯಿತು. ಅಂತಹವರು ಮನೆ ಖಾಲಿ ಮಾಡಿ ಬೇರೆ ಕಡೆಗೆ ಬರಲು ಶುರು ಮಾಡಿದರು. ಇನ್ನು ಕೆಲವರಿಗೆ ಆರ್ಥಿಕ ಸಮಸ್ಯೆ ಎದುರಾಗಿ ಕಡಿಮೆ ಬಾಡಿಗೆ ಸಿಗುವ ಕಡೆಗೆ ಮುಖ ಮಾಡಿದರು. ಇಂತಹ ಪರಿಸ್ಥತಿಗಳಿಂದಾಗಿ “ಟು-ಲೆಟ್” ಬೋರ್ಡ್‍ಗಳು ಇನ್ನೂ ರಾರಾಜಿಸುತ್ತಿವೆ.

      ಪರಿಸ್ಥಿತಿಯನ್ನು ಮನಗಂಡ ಮನೆಯ ಮಾಲೀಕರು ಬಾಡಿಗೆ ಹೆಚ್ಚಳ ಮಾಡಲು ಮುಂದಾಗಿಲ್ಲ. ಎಷ್ಟೋ ಕಡೆ ಮನೆಯ ಮಾಲೀಕರೆ ಕಡಿಮೆ ಬಾಡಿಗೆ ತೆಗೆದುಕೊಂಡಿರುವ ಉದಾಹರಣೆಗಳಿವೆ. ದೈನಂದಿನ ವ್ಯಾಪಾರ, ವ್ಯವಹಾರ ಚಟುವಟಿಕೆಗಳಲ್ಲಿ, ಖಾಸಗಿ ವ್ಯವಹಾರಗಳಲ್ಲಿ ತೊಡಗಿಕೊಂಡವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಅವರ ಪರಿಸ್ಥಿತಿ ಅರಿತು ಒಂದಷ್ಟು ಬಾಡಿಗೆಯನ್ನೂ ಕಡಿಮೆ ತೆಗೆದುಕೊಂಡಿರುವ ಬಗ್ಗೆ ಬಹಳಷ್ಟು ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

      ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಐ.ಟಿ. ಬಡಾವಣೆಯ ಶಿವಕುಮಾರ್ ಅವರು ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕರು ವಾಸ ಮಾಡುತ್ತಿದ್ದಾರೆ. ಈಗ ಅವರಿಗೆ ನಿಗದಿತ ಸಂಬಳವಿಲ್ಲ. ಅವರೂ ಸಹ ಸಂಕಷ್ಟದಲ್ಲಿರುವುದನ್ನು ಪರಿಗಣಿಸಿ ಕಡಿಮೆ ಬಾಡಿಗೆ ಕೊಡಲು ಹೇಳಿದ್ದೇನೆ. ಎಲ್ಲವೂ ಸರಿ ಹೋದ ನಂತರ ಅವರಿಂದ ನಿಗದಿತ ಬಾಡಿಗೆ ಪಡೆಯುತ್ತೇನೆ. ಒಂದು ವೇಳೆ ಮನೆ ಖಾಲಿ ಮಾಡಿಸಿದರೆ ವರ್ಷಪೂರ್ತಿ ಖಾಲಿ ಉಳಿಯುತ್ತದೆ. ಇದರಿಂದ ನಮಗೆ ನಷ್ಟವಲ್ಲವೆ ಎಂದು ತಮ್ಮ ಅನುಭವ ಹಂಚಿಕೊಂಡರು. ಶಿವಕುಮಾರ್ ಅವರ ಈ ನಿರ್ಧಾರವನ್ನು ಖಾಸಗಿ ಶಾಲೆ ಶಿಕ್ಷಕರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಹಾಗೂ ಇಂತಹ ಮಾನವೀಯತೆ ಇರುವವರು ಇದ್ದಾರಲ್ಲ ಎಂದು ಗುಣಗಾನ ಮಾಡಿದರು.

      ಹಿಂದೆಲ್ಲ ನಮಗೆ ಇಂತಹುದೆ ಮನೆ ಇರಬೇಕು ಎಂದು ಕೆಲವರು ಅಪೇಕ್ಷಿಸುತ್ತಿದ್ದರು. ಅಂತಹ ಮನೆಯನ್ನೇ ಹುಡುಕಿ ಬಾಡಿಗೆಗೆ ಹೋಗುತ್ತಿದ್ದರು. ಈಗ ಹಣಕಾಸು ಪರಿಸ್ಥಿತಿ ಭಿನ್ನವಾಗಿರುವುದರಿಂದ ಹೆಚ್ಚು ಬಾಡಿಗೆ ನೀಡುತ್ತಿದ್ದವರು. ಕಡಿಮೆ ಬಾಡಿಗೆ ಸಿಗುವ ಮನೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಇನ್ನು ಕೆಲವರು ಸಿಂಗಲ್ ಬೆಡ್ ರೂಂ ಮನೆ ಸಾಕು ಎನ್ನುತ್ತಿದ್ದಾರೆ. ಈ ಒಂದೆರಡು ವರ್ಷ ಕಷ್ಟಪಡೋಣ, ಆ ಮೇಲೆ ಸರಿ ಹೋಗುತ್ತದೆ. ಅಲ್ಲಿಯವರೆಗೆ ನಮ್ಮ ಇತಿಮಿತಿಗೆ ತಕ್ಕಂತೆ ಒಂದಾಣಿಕೆ ಮಾಡಿಕೊಳ್ಳಬೇಕಲ್ಲ ಎನ್ನುತ್ತಾರೆ ಕೆಲವರು.

      ನಗರದ ಹಲವು ಬಡಾವಣೆಗಳಲ್ಲಿ ವರ್ಷದಿಂದ ಮನೆಗಳು ಖಾಲಿ ಉಳಿದಿವೆ. ಮುಖ್ಯ ಕಾರಣ ಶಾಲಾ ಕಾಲೇಜುಗಳು ಆರಂಭವಾಗದೆ ಇರುವುದು, ಇಲ್ಲಿದ್ದ ಬಹಳಷ್ಟು ಜನ ಬೇರೆ ಕಡೆಗೆ ತೆರಳಿರುವುದು, ಹೊರರಾಜ್ಯಕ್ಕೆ ಹೋದವರು ಮರಳಿ ಬಾರದೆ ಇರುವುದು, ಇಲ್ಲಿ ಉದ್ಯೋಗ ವಂಚಿತರಾಗಿ ಬೇರೆ ಕಡೆ ಉದ್ಯೋಗ ಹುಡುಕಿಕೊಂಡಿರುವುದು ಹೀಗೆ ಹಲವು ಹತ್ತು ಕಾರಣಗಳಿಂದಾಗಿ ಮನೆ ಖಾಲಿ ಮಾಡಿದ ಮಂದಿ ಹೆಚ್ಚಿದ್ದಾರೆ. ಕೋವಿಡ್ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸುಧಾರಿಸದ ಹಾಗೂ ವಾಣಿಜ್ಯ ವ್ಯವಹಾರ ಚಟುವಟಿಕೆಗಳು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮನೆ ಬಾಡಿಗೆ ಹಿಡಿಯಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ.

ಇದನ್ನೇ ನಂಬಿದ್ದವರು ಅತಂತ್ರ :

      ನಗರದಲ್ಲಿ ವಾಸಿಸುವ ಕೆಲವರು ತಮ್ಮ ಜೀವನೋಪಾಯಕ್ಕಾಗಿ ಮತ್ತು ಭದ್ರತೆಗಾಗಿ ಮನೆ ಬಾಡಿಗೆಯನ್ನೇ ನಂಬಿಕೊಂಡಿದ್ದಾರೆ. ಮಾಸಿಕ ಆದಾಯ ಇದರಿಂದಲೆ ಬರುವ, ಅದನ್ನೇ ನಂಬಿರುವ ಮಂದಿಯೂ ಇದ್ದಾರೆ. ಇಂತಹವರಿಗೆಲ್ಲಾ ಕೋವಿಡ್ ತೀವ್ರ ಹೊಡೆತ ನೀಡಿದೆ. ವರ್ಷಾನುಗಟ್ಟಲೆ ಮನೆ ಖಾಲಿ ಉಳಿದಿರುವುದರಿಂದ ಅವರ ನಿಗದಿತ ಆದಾಯವೂ ನಿಂತು ಹೋಗಿದೆ. ಇಂತಹ ಬಹಳಷ್ಟು ಮಂದಿ ಈಗಲೂ ಪರಿತಪಿಸುತ್ತಿದ್ದಾರೆ. ವರ್ಷಪೂರ್ತಿ ಯಾರೂ ಬಾಡಿಗೆಗೆ ಹೋಗದೆ ಇದ್ದರೆ ಮನೆಯ ಅಂದ-ಚಂದವೂ ಹಾಳಾಗಿ ಹೋಗುತ್ತದೆ. ಎಷ್ಟೋ ಮಂದಿ ಕೊಟ್ಟಷ್ಟು ಬಾಡಿಗೆಗೆ ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ. ಹೀಗೆಯೆ ಮುಂದುವರಿದರೆ ಬ್ಯಾಂಕ್ ಇಲ್ಲವೆ ಅವರಿವರ ಬಳಿ ಕೈ ಸಾಲ ಮಾಡಿಕೊಂಡಿರುವವರ ಪಾಡು ದೇವರೆ ಕಾಪಾಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link