ತುಮಕೂರು :
ಗ್ರಾಹಕರು ಇರುವ ಕಡೆಯೇ ಬ್ಯಾಂಕ್ ವಹಿವಾಟು ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಡಿಸಿಸಿ ಬ್ಯಾಂಕ್ ನ ಶಾಖೆಯನ್ನು ಉದ್ಘಾಟಸಿ ಅವರು ಮಾತನಾಡಿದ ಅವರು, ನೇರ ಹಣ ವರ್ಗಾವಣೆ ಯೋಜನೆಯಿಂದ ಹಣ ನೇರವಾಗಿ ಗ್ರಾಹಕರ ಖಾತೆಗೆ ಜಮಾ ಆಗುತ್ತಿರುವುದರಿಂದ ಗ್ರಾಹಕರು ಬ್ಯಾಂಕ್ ವಹಿವಾಟು ನಡೆಸಲು ದೂರ ಹೋಗದಂತೆ, ಅವರ ಕೂಗಳತೆಯ ದೂರದಲ್ಲಿಯೇ ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಹೋಬಳಿಗೆ ಒಂದರಂತೆ ಜಿಲ್ಲಾ ಸಹಕಾರ ಬ್ಯಾಂಕ್ ನ ಶಾಖೆಗಳನ್ನು ತೆರೆಯಲಾಗುವುದು ಎಂದ ಅವರು, ಗುಬ್ಬಿ ತಾಲ್ಲೂಕಿನ ನಿಟ್ಟೂರು, ಸಿ.ಎಸ್.ಪುರ, ಚೇಳೂರಿನಲ್ಲಿಯೂ ಶಾಖೆಯನ್ನು ಹಾಗೂ ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಶೀಘ್ರವಾಗಿ ಖಾತೆಯನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಗಳಿಂತ ಹೆಚ್ಚಿನ ಬಡ್ಡಿಯನ್ನು ಡಿಸಿಸಿ ಬ್ಯಾಂಕ್ ನೀಡುತ್ತಿದ್ದು, ಗ್ರಾಹಕರಿಗೆ ಅನುಕೂಲವನ್ನು ಕಲ್ಪಿಸುವುದಕ್ಕಾಗಿ ನೂತನ ಶಾಖೆಗಳನ್ನು ಪ್ರಾರಂಭಿಸುತ್ತಿದ್ದು, ರೈತರು ತಮ್ಮ ವಹಿವಾಟುಗಳನ್ನು ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕವೇ ನಡೆಸುವಂತೆ ಕೋರಿದರು.
ಡಿಸಿಸಿ ಬ್ಯಾಂಕ್ ನಲ್ಲಿ ರೈತರು ಹಾಗೂ ಹಣವುಳ್ಳವರು ಠೇವಣಿಯನ್ನು ಇಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ಸಹಕಾರಿ ಸಂಘಗಳು ನೀಡುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಶಾಸಕ ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಶ್ರೀದೇವಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಅಂಬಿಕಾ ಎಂ ಪಾಟೀಲ್, ರಮಣ್, ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮೀನಾರಾಯಣ, ತಾಳೆಮರದಹಳ್ಳಿ ನರಸಿಂಹಯ್ಯ, ರವಿಕುಮಾರ್, ರಾಜ್ ಕುಮಾರ್, ಸಿದ್ಧಲಿಂಗಪ್ಪ, ಅನ್ನಪೂರ್ಣ ವೆಂಕಟನಂಜಪ್ಪ, ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಬ್ಯಾಂಕ್ ಆರ್ಥಿಕ ಮತ್ತು ಆಡಳಿತ ಸಲಹೆಗಾರ ಜಂಗಮಪ್ಪ, ಡಿಜಿಎಂ ಶ್ರೀಧರ್, ಎಜಿಎಂ ಕೃಷ್ಣಮೂರ್ತಿ, ಮೇಲ್ವಿಚಾರಕ ಮಧುಸೂದನ್ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
