ತುಮಕೂರು : ಲಾಕ್‍ಡೌನ್’ನಲ್ಲಿ ಲಾಕ್ ಆಗದ ‘ಮಾನವೀಯತೆ’

 ತುಮಕೂರು:

      ಮೊನ್ನೆಯಷ್ಟೇ ಬಸವಜಯಂತಿ ಆಚರಿಸಿದ್ದೇವೆ. ಜಗತ್ತಿಗೆ ಕಾಯಕದ ಮಹತ್ವ, ದಾಸೋಹದ ಪರಿಕಲ್ಪನೆ ಸಾರಿದ ಬಸವಣ್ಣನವರ ಆಶಯ, ತ್ರಿವಿಧ ದಾಸೋಹಿ ಲಿಂ.ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಈ ಕಲ್ಪತರು ನಾಡಿನಲ್ಲಿ ಬಿತ್ತಿದ ಅನ್ನ ದಾಸೋಹದ ಪರಿಕಲ್ಪನೆಯಂತೆ ಕೊರೋನಾ ಸಂಕಷ್ಟದಲ್ಲಿರುವವರಿಗೆ ಹಲವು ಸಂಘ-ಸಂಸ್ಥೆಗಳು ದಾನಿಗಳು ನೆರವಾಗುತ್ತಾ ಬಂದಿದ್ದು ತ್ರಿವಿಧ ದಾಸೋಹದ ನಾಡಿನಲ್ಲಿ ಮಾನವೀಯತೆ ಜಾತ್ಯತೀತವಾಗಿ ಅನಾವರಣಗೊಂಡಿದೆ.

ಕೊರೋನಾ ಕಾಲದ ಲಾಕ್‍ಡೌನ್‍ನಿಂದಾಗಿ ಹೊಸ ಹೊಸ ಸಮಸ್ಯೆಗಳು ಉದ್ಭವಿಸಿವೆ. ಹಲವು ಜನರಿಗೆ ಅನ್ನ, ನೀರು ಸಿಗುತ್ತಿಲ್ಲ, ಔಷಧಗಳ ಸಮಸ್ಯೆಯಾಗಿದೆ. ಲಾಕ್‍ಡೌನ್‍ನ ಈ ಆಪತ್ಕಾಲದಲ್ಲಿ ಅದೆಷ್ಟೊ ಜನರು, ಸಂಘ ಸಂಸ್ಥೆಗಳು ಸದ್ದಿಲ್ಲದೇ ಎಲೆಮರೆ ಕಾಯಿಗಳಂತೆ ಸೋಂಕಿತರಿಗೆ, ವ್ಯಾಧಿ ತಂದಿಟ್ಟ ಪ್ರತ್ಯಕ್ಷ ಪರೋಕ್ಷ ಸಮಸ್ಯೆಗಳಿಂದಾದ ಹಸಿದವರಿಗೆ, ಸಮಸ್ಯೆ ಇರುವರಿಗೆ ಅನ್ನ, ನೀರು ಮತ್ತು ಔಷಧವನ್ನು ನೀಡುವ ಮೂಲಕ ಸೇವೆ ಮಾಡುತ್ತಿದ್ದಾರೆ. ಇವರ ಸೇವೆಯಿಂದ ಹಳ್ಳಿಗಳಿಂದ ನಗರದ ಆಸ್ಪತ್ರೆಗಳಿಗೆ ಬಂದವರು, ಸಹಸ್ರಾರು ಬಡವರು, ನಿರ್ಗತಿಕರು, ಭಿಕ್ಷುಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸ್ಪರ್ಧಾರ್ಥಿಗಳು, ಸೆಕ್ಯೂರಿಟಿ ಗಾರ್ಡ್‍ಗಳು, ಕರ್ತವ್ಯ ನಿರತ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ವಾಹನ ಚಾಲಕರು ಹಾಗೂ ಮತ್ತಿತರ ವರ್ಗದವರಿಗೆ ಅನುಕೂಲವಾಗಿದ್ದು, ಕಷ್ಟದ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವ ಇಂತಹವರ ಸಂತತಿ ಮತ್ತಷ್ಟು ಹೆಚ್ಚಲಿ ಎಂಬ ಆಶಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸೇವಾನಿರತ ಸಂಘ ಸಂಸ್ಥೆಗಳು :

  ಸಿದ್ದಗಂಗಾ ಮಠ:

      ನಗರದ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠವು ತನ್ನ ಯಾತ್ರಿ ನಿವಾಸದಲ್ಲಿ 80 ಹಾಸಿಗೆಗಳ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವನ್ನು ತೆರೆದಿದ್ದು, ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿಜೀಯವರ ಮಾರ್ಗದರ್ಶನದಲ್ಲಿ ಮಠದ ವಿದ್ಯಾರ್ಥಿಗಳು ಸೇರಿದಂತೆ ಹಲವು ಸಾರ್ವಜನಿಕರಿಗೆ ಆರೈಕೆ ಮಾಡಿ ಚಿಕಿತ್ಸೆ ನೀಡಿದೆ. ಸ್ವತಹ ಶ್ರೀಗಳೇ ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣುಗಳನ್ನು ನೀಡಿ ಸೋಂಕಿತರಿಗೆ ದೈರ್ಯ ನೀಡುತ್ತಿದ್ದಾರೆ. ಕೊರೋನಾ ಸೋಂಕಿತರ ಆರೋಗ್ಯ ವಿಚಾರಿಸಿ ಮಠದ ಈ ಮಾನವೀಯ ಕಾರ್ಯವು ಜಿಲ್ಲೆಯ ಹಲವು ಸಂಘ-ಸಂಸ್ಥೆಗಳಿಗೆ, ಜನ ಪ್ರತಿನಿಧಿಗಳಿಗೆ ಸ್ಫೂರ್ತಿಯಾಗಿದ್ದು, ಅವರೆಲ್ಲಾ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಮಾಡಿದೆ.

  ರೆಡ್‍ಕ್ರಾಸ್ ಸೊಸೈಟಿ:

      ರೆಡ್‍ಕ್ರಾಸ್ ಜಿಲ್ಲಾ ಘಟಕವು ಕೊರೋನಾ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜಿಲ್ಲೆಯಾದ್ಯಾಂತ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ವಿತರಿಸುತ್ತಿದ್ದೆ. ಸೋಂಕಿನ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಲು ಆಟೋ ಮತ್ತಿತರ ವಾಹನಗಳಲ್ಲಿ ಪ್ರಚಾರವನ್ನೂ ಮಾಡಿದೆ.

      ಸೋಂಕಿತರಿಗೆ, ಲಾಕ್‍ಡೌನ್‍ನಿಂದ ಪ್ರತ್ಯಕ್ಷ, ಪರೋಕ್ಷವಾಗಿ ಆಹಾರ ಸಮಸ್ಯೆ ಎದುರಿಸುತ್ತಿರುವವರಿಗೆ ಆಹಾರ ವಿತರಿಸುವ ನಿಟ್ಟಿನಲ್ಲಿ ನಗರದ ‘ಗೀವ್‍ಬ್ಯಾಕ್’ ಟೀಮ್ ಮತ್ತು ಸರ್ಕಾರದೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ನಗರದ ಸಮೀಪದಲ್ಲಿರುವ ಬೆಳಗುಂಬದಲ್ಲಿ ರೆಡ್‍ಕ್ರಾಸ್ ಕಟ್ಟಡದಲ್ಲಿ ಡಾ.ಮುರುಳೀಧರ ಹಾಲಪ್ಪ ಟ್ರಸ್ಟ್, ಸತ್ಯ ಸಾಯಿಗಂಗಾ ಟ್ರಸ್ಟ್ ಹಾಗೂ ಹಲವು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸುಸಜ್ಜಿತವಾದ 20 ಆಕ್ಸಿಜನ್ ಬೆಡ್‍ಗಳು ಮತ್ತು 30 ಸಾಮಾನ್ಯ ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರ್ ಮೇ.14 ರಿಂದ ಕಾರ್ಯಾರಂಭ ಮಾಡುತ್ತಿದೆ.

‘ಗೀವ್‍ಬ್ಯಾಕ್’ ಟೀಂ:

      ‘ಋಣ ಸಂದಾಯ’ ಅಥವಾ ‘ಹಿಂತಿರುಗಿಸಿ’ ಎಂಬ ಕನ್ನಡ ಅರ್ಥದ ಜೊತೆಗೆ ‘ಸಮಾಜ ಕೊಟ್ಟಿದ್ದನ್ನು ಮರಳಿ ಸಮಾಜಕ್ಕೆ ಕೊಡಬೇಕು’ ಎಂಬ ಆಶಯ ಹೊಂದಿರುವ ‘ಗೀವ್‍ಬ್ಯಾಕ್ ಟೀಂ’ ನಗರದ ಸ್ವಯಂ ಸೇವಾ ನಾಗರೀಕರ ಸಂಘಟನೆಯಾಗಿದೆ. ಸಂಘವು ತನ್ನ ಸದಸ್ಯರ ಮತ್ತು ದಾನಿಗಳ ನೆರವಿನೊಂದಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಸೋಂಕಿತರಿಗೆ, ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದು ಮನೆಯಲ್ಲಿಯೇ ಕ್ವಾರಂಟೈನ್ ಆದವರಿಗೆ, ಆಟೋಚಾಲಕರಿಗೆ, ಕರ್ತವ್ಯ ನಿರತ ಪೊಲೀಸ್, ಗೃಹ ರಕ್ಷಕದಳ, ಪೌರ ಕಾರ್ಮಿಕರಿಗೆ, ಡೆಲಿವರಿ ಬಾಯ್‍ಗಳಿಗೆ ಹಾಗೂ ಲಾಕ್‍ಡೌನ್‍ನ ಇನ್ನಿತರ ಕಾರಣಗಳಿಂದ ಆಹಾರ ಸಮಸ್ಯೆ ಎದುರಿಸುತ್ತಿರುವವರಿಗೆ ಅವರಿದ್ದ ಕಡೆಯೇ ಹೋಗಿ ಆಹಾರ, ನೀರಿನ ಬಾಟೆಲ್ ನೀಡುತ್ತಿದ್ದಾರೆ. ಮೇ.14 ರಿಂದ ಸೋಂಕಿತರಿಗೆ ಸಾಮಾನ್ಯ ವೈದ್ಯಕೀಯ ಕಿಟ್ ಹಾಗೂ ಹಣ್ಣುಗಳನ್ನು ನೀಡುತ್ತಿದ್ದಾರೆ. ‘ಗೀವ್‍ಬ್ಯಾಕ್’ ಸಂಘಟನೆ ಮತ್ತು ಸರ್ಕಾರದ ನಡುವೆ ರಾಜ್ಯ ರೆಡ್‍ಕ್ರಾಸ್ ಸೊಸೈಟಿಯು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಸಾಫ್ಟ್‍ವೇರ್ ಎಂಜಿನಿಯರ್ ರಕ್ಷಿತ್ ಎಂ.ಎಸ್ ನೇತೃತ್ವದಲ್ಲಿ ಸ್ವಯಂ ಸೇವಕರಾದ ವಿನಯ್, ಸಚಿನ್, ನಟೇಶ್, ಗಗನ್, ದರ್ಶನ್, ನಿಖಿಲ್, ಮುದ್ದಾಸೀರ್, ಬಸವೇಶ್, ನಯನ, ಧ್ಯಾನ್, ಗಾದಿ ಲಿಂಗಪ್ಪ, ವಿನೋದ್ ಮತ್ತು ಫಾರುಕ್ ಅಹ್ಮದ್ ಮುಂತಾದವರ ಈ ತಂಡವು ಈ ಲಾಕ್‍ಡೌನ್ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಪಡಿತರ ಕಿಟ್ ನೀಡುವ ಯೋಜನೆ ಹೊಂದಿದೆ. ಸಂಘಟನೆಯ ಸದಸ್ಯ ಅಕ್ಷಯ್ ಅವರು ತಮ್ಮ ಸಿದ್ಧಿ ಕಾರ್ ಗ್ಯಾರೇಜ್‍ನ ಶೆಡ್ಡನ್ನೆ ‘ಗೀವ್‍ಬ್ಯಾಕ್’ ನ ಅಡುಗೆ ತಯಾರಿ ಕಾರ್ಯಕ್ಕೆ ಬಿಟ್ಟು ಕೊಟ್ಟಿದ್ದಾರೆ. ಈ ತಂಡದ ನೆರವು ಪಡೆಯಲು ಮತ್ತು ತಂಡಕ್ಕೆ ನೆರವು ನೀಡಲು ತಂಡದ ಮುಖ್ಯಸ್ಥ ರಕ್ಷಿತ್ ಎಂ.ಎಸ್. ಅವರ ಮೊಬೈಲ್ ಸಂಖ್ಯೆ: 72044 11856 ಅನ್ನು ಸಂಪರ್ಕಿಸುವುದು.

ಜವಾಬ್ದಾರಿ ಮರೆತ ಸರ್ಕಾರ :

      ಲಾಕ್‍ಡೌನ್‍ನಿಂದಾಗಿ ರಾಜ್ಯಾದ್ಯಾಂತ ಆಹಾರದ ಸಮಸ್ಯೆ ಉದ್ಭವವಾಗಿದೆ. ಜನ ಆಹಾರವಿಲ್ಲದೇ ಹಸಿವಿನಿಂದ ಕಂಗಾಲಾಗಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಆಡಳಿತ ನಡೆಸುವ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಸೂಕ್ಷ್ಮತೆಯಿಂದ ವರ್ತಿಸದೇ ತನ್ನ ತೆರಿಗೆದಾರ ಪ್ರಜೆಗಳ ನೆರವಿಗೆ ಬಾರದಿರುವುದು ವಿಪರ್ಯಾಸದ ಸಂಗತಿ. ಪ್ರಸ್ತುತ ದುರ್ಭಿಕ್ಷ ಕಾಲದಲ್ಲಿ ಪಡಿತರದಲ್ಲಿ ಆಹಾರ ಧಾನ್ಯಗಳ ಕಡಿತ, ಇಂದಿರಾ ಕ್ಯಾಂಟೀನ್‍ಗಳತ್ತ ಬೊಟ್ಟು ಮಾಡಿ ತೋರುತ್ತಿರುವುದು ನಮ್ಮನ್ನಾಳುವವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಲಾಕ್‍ಡೌನ್ ಮುಗಿಯುವ ತನಕ ಸರ್ಕಾರ ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಾರ್ವಜನಿಕರಿಗೆ ಉಚಿತ ಊಟ ತಿಂಡಿ ವಿತರಿಸುತ್ತಿರುವುದು ಸ್ವಾಗತಾರ್ಹ. ಆದರೇ ಹೆಚ್ಚು ಜನರನ್ನು ತಲುಪುತ್ತಿಲ್ಲ ಎಂಬುದು ಈ ಯೋಜನೆಯ ಮಿತಿ. ಸರ್ಕಾರ ಮಾಡಬೇಕಾದ ಆಹಾರ ವಿತರಣೆಯ ಕೆಲಸವನ್ನು ಹಲವು ದಾನಿಗಳು, ಸಂಘ-ಸಂಸ್ಥೆಗಳು ಮಾಡುತ್ತಿವೆ. ಸರ್ಕಾರ ಇದನ್ನೆಲ್ಲಾ ನೋಡುತ್ತಾ ಜಾಣ ಕುರುಡು ಪ್ರದರ್ಶಿಸಿ ತನ್ನ ಜವಾಬ್ದಾರಿ ಮರೆತಿದೆ.

      ಸರ್ಕಾರವು ಇನ್ನಾದರೂ ಎಚ್ಚೆತ್ತು ಚಿಂದಿ ಆಯುವವರು, ಅಲೆಮಾರಿಗಳು, ಮಂಗಳಮುಖಿಯರು, ಲೈಂಗಿಕ ಕಾರ್ಯಕರ್ತರು, ಕೋವಿಡ್ ಸೋಂಕಿಗೊಳಪಟ್ಟವರು, ಒಂಟಿ ಮಹಿಳೆಯರು, ನಿರ್ಗತಿಕರು, ಅಂದು ದುಡಿದು ಅಂದು ತಿನ್ನುವ ಬಡ ಕೂಲಿ ಕಾರ್ಮಿಕರು, ಸಮಾಜದ ಅಂಚಿನಲ್ಲಿರುವ ಧ್ವನಿ ವಂಚಿತ ಸಮುದಾಯಗಳು, ಶಾಲಾ ಮಕ್ಕಳು, ಗರ್ಭಿಣಿ-ಬಾಣಂತಿ ಸ್ತ್ರೀಯರು ಹಾಗೂ ವಯೋವೃದ್ಧರ ನೆರವಿಗೆ ಧಾವಿಸಿ ಲಾಕ್‍ಡೌನ್ ಎಲ್ಲಿಯ ತನಕ ಇರುತ್ತದೆಯೋ ಅಲ್ಲಿಯ ತನಕ ಸಾಕಾಗುವಷ್ಟು ಆಹಾರ ಧಾನ್ಯ, ಆರ್ಥಿಕ ನೆರವು ನೀಡಲಿ. ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ಕೊಡುತ್ತಿರುವ ಆಹಾರ ಧಾನ್ಯಗಳ ಪ್ರಮಾಣ ಹೆಚ್ಚಿಸಿ ಜನರ ಜೀವನ ನಿರ್ವಹಣೆಗೆ ಬೇಕಾದ ಇನ್ನಿತರ ಕೆಲ ದಿನಸಿ ಸಾಮಗ್ರಿಗಳನ್ನು ಹೊಸದಾಗಿ ಸೇರ್ಪಡೆ ಮಾಡಬೇಕು. ಇಂದಿರಾ ಕ್ಯಾಂಟೀನ್‍ಗಳ ಸಂಖ್ಯೆಯನ್ನು ನಗರ-ಪಟ್ಟಣಗಳಲ್ಲಿ ಹೆಚ್ಚಿಸಬೇಕು ಮತ್ತು ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ ಹೆಚ್ಚು ಜನರಿಗೆ ಆಹಾರ ವಿತರಿಸಬೇಕು. ಪ್ರಜೆಗಳ ಆಹಾರದ ಹಕ್ಕು, ಸರ್ಕಾರದ ಅಭಿವೃದ್ಧಿಯ ಮೊದಲ ಆದ್ಯತೆಯಾಗಬೇಕು. ಸಾರ್ವಜನಿಕರು ದಾನಿಗಳ ಸಹಾಯಕ್ಕೆ ಮುಜುಗರ ಪಡುತ್ತಾರೆ ಹೊರತು ಸರ್ಕಾರದ ನೆರವಿಗಲ್ಲ. ಏಕೆಂದರೆ ಸರ್ಕಾರ ಪ್ರಜೆಗಳದ್ದು.

ತ್ರಿವಿಧ ದಾಸೋಹ : ಬದಲಾದ ವ್ಯಾಖ್ಯಾನ

      ತುಮಕೂರು ತ್ರಿವಿಧ ದಾಸೋಹಕ್ಕೆ ಲೋಕ ಪ್ರಸಿದ್ಧವಾದ ಸಿದ್ಧಗಂಗಾ ಮಠವನ್ನು ಹೊಂದಿರುವ ನಾಡು. ತ್ರಿವಿಧ ದಾಸೋಹಗಳೆಂದರೇ “ಅನ್ನ, ಅಕ್ಷರ, ಆಶ್ರಯ” ಎಂಬುದು ನಮ್ಮೆಲ್ಲರಿಗೂ ಗೊತ್ತೆ ಇದೆ. ಕೊರೋನಾ ಕಾಲದ ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಜೀವ ಉಳಿಸಿಕೊಳ್ಳಲು ಅತ್ಯಾವಶ್ಯಕವಾಗಿ ಬೇಕಾದ “ಅನ್ನ, ನೀರು, ಔಷಧ” ಇವು ತ್ರಿವಿಧ ದಾಸೋಹದ ವರ್ತಮಾನದ ಹೊಸ ವ್ಯಾಖ್ಯಾನಕ್ಕೆ ಹೆಚ್ಚು ಹತ್ತಿರವಾಗುತ್ತಿವೆ. ಮನುಷ್ಯನಿಗೆ ಸದ್ಯ ಇವುಗಳ ಅವಶ್ಯಕತೆ ಹೆಚ್ಚಿದ್ದು, ಮಿಕ್ಕವುಗಳೆಲ್ಲಾ ಗೌಣ ಎಂಬಂತಾಗಿವೆ.

      ಆಹಾರ ಪೊಟ್ಟಣಕ್ಕೆ ಪ್ಲಾಸ್ಟಿಕ್ ಬಳಕೆ ಬೇಡ:

     ರಾಷ್ಟ್ರೀಯ ಪರಿಸರ ಆರೋಗ್ಯ ವಿಜ್ಞಾನ ಕೇಂದ್ರದ ತಜ್ಞರ ಪ್ರಕಾರ ಆಹಾರವನ್ನು ಪೊಟ್ಟಣ ಕಟ್ಟಲು ಯಾವುದೇ ರೀತಿಯ ಪ್ಲಾಸ್ಟಿಕ್ ಬಳಸುವುದರಿಂದ ವಾಸಿ ಮಾಡಲು ಸಾಧ್ಯವಾಗದಂತಹ ಮಾರಣಾಂತಿಕ ಕ್ಯಾನ್ಸರ್ ರೋಗಗಳು ಬರುತ್ತವೆ. ಅಲ್ಲದೇ ಪ್ಲಾಸ್ಟಿಕ್‍ನಲ್ಲಿ ‘ಪ್ಲಾಸ್ಟಿಸೈಸರ್’ ಎಂಬ ವಿಷಕಾರಿ ರಾಸಾಯನಿಕವಿದ್ದು ಬಿಸಿ ಆಹಾರ ಹಾಕಿದಾಗ ಆಹಾರದ ಬಿಸಿ ಪ್ಲಾಸ್ಟಿಕ್ ಕರುಗುವಂತೆ ಮಾಡಿ ‘ಡೈಯಾಕ್ಸಿನ್’ ಎಂಬ ಅಂಶವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಕುರುಡುತನ, ಸಂತಾನೋತ್ಪತ್ತಿ ಸಮಸ್ಯೆ, ಮಕ್ಕಳಲ್ಲಿ ಸ್ಮರಣಶಕ್ತಿ ಕಡಿಮೆಯಾಗುವುದು ಮೊದಲಾದ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಆಹಾರ ಪೊಟ್ಟಣ ಕಟ್ಟಲು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಡಬ್ಬಿ, ರಬ್ಬರ್ ಬಳಸುವುದು ಅಪಾಯಕಾರಿ.

ಪ್ಲಾಸ್ಟಿಕ್‍ಗೆ ಪರ್ಯಾಯ:

      ಆಹಾರ ಪೊಟ್ಟಣ ಕಟ್ಟಲು ಪ್ಲಾಸ್ಟಿಕ್‍ಗೆ ಬದಲಾಗಿ, ಎರಡು ಪದರ ನ್ಯೂಸ್‍ಪೇಪರ್‍ನ್ನು ಹಾಸಿ ಅದರ ಮೇಲೆ ಬಾಳೆಎಲೆ, ಮುತ್ತುಗದೆಲೆ ಹಾಕಿ ಅದರ ಮೇಲೆ ಆಹಾರವನ್ನು ಹಾಕಿ ಮಡಚಿ ನಂತರ ನೂಲಿನ ದಾರದಿಂದ ಪೊಟ್ಟಣವನ್ನು ಕಟ್ಟಬಹುದು. ಅಥವಾ ಪ್ರತಿದಿನ ಆಹಾರ ತರಿಸಿಕೊಳ್ಳುವವರಿಂದ ಆರಂಭದಲ್ಲಿ ಎರಡು ಸೆಟ್ ಪಾತ್ರೆ ಪಡೆದು ಒಂದು ಹೊತ್ತಿನ ಆಹಾರ ಕೊಡುವಾಗ ಮತ್ತೊಂದು ಹೊತ್ತಿನ ಆಹಾರಕ್ಕೆ ಪಾತ್ರೆ ಪಡೆಯಬಹುದು.

       “ಇದು ಋಣ ಸಂದಾಯದ ಸಮಯ, ಕೈ ಚೆಲ್ಲುವ ಸಮಯವಲ್ಲ. ಯುವಜನರೆಯಿರುವ ನಮ್ಮ ತಂಡವು ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ, ನಾನು ದೇಶಕ್ಕೆನು ಕೊಟ್ಟೆ ಎಂದು ಆಲೋಚಿಸಿ, ಎಲ್ಲರೂ ಸಂಕಷ್ಟದಲ್ಲಿರುವ ಈ ಕೊರೋನಾ ಸಂದರ್ಭದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ಸಮಾಜಕ್ಕೆ ನೆರವಾಗುತ್ತಿದ್ದೇವೆ. ಈ ರೀತಿಯ ಕಾರ್ಯಗಳನ್ನು ಮಾಡುವುದರಿಂದ ಸಮಾಜವು ಗಟ್ಟಿಯಾಗುವುದಲ್ಲದೇ, ಸೋತವರ ಕೈ ಹಿಡಿಯಲು ಯಾರಾದರು ಇರುತ್ತಾರೆ ಎಂದು ಜನರಿಗೆ ಸಮಾಜದ ಮೇಲೆ ಮರು ನಂಬಿಕೆ ಬರುತ್ತದೆ.

-ರಕ್ಷಿತ್ ಎಂ.ಎಸ್, ಮುಖ್ಯಸ್ಥ, ಗೀವ್‍ಬ್ಯಾಕ್, ತುಮಕೂರು ಶಾಖೆ.

        ಬೇಡಿಕೊಂಡು ಜೀವನ ನಿರ್ವಹಿಸುವ ನಮ್ಮ ಮಂಗಳಮುಖಿ ಸಮುದಾಯಕ್ಕೆ ಲಾಕ್‍ಡೌನ್‍ನಿಂದಾಗಿ ಬದುಕುವುದೇ ಕಷ್ಟವಾಗಿದೆ. ಒಂದೊತ್ತಿನ ಊಟ ಮಾಡುವುದಕ್ಕೂ ಕಷ್ಟಪಡುವ ಹಲವಾರು ಕುಟುಂಬಗಳಿದ್ದು, ಅಂತಹವರಿಗೆ ಸರ್ಕಾರ ಲಾಕ್‍ಡೌನ್ ಭತ್ಯೆಯಾಗಿ 10 ಸಾವಿರ ರೂ. ಮತ್ತು ಅಗತ್ಯವಿರುವ ಪಡಿತರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು.

-ದೀಪಿಕಾ, ಒಡನಾಡಿ ಸಂಸ್ಥೆ ಮುಖ್ಯಸ್ಥೆ, ಶೆಟ್ಟಿಹಳ್ಳಿ, ತುಮಕೂರು.

     ಜಾತ್ರೆ ಮತ್ತು ಸಂತೆಗಳಲ್ಲಿ ಮಣಿ, ಗುಗ್ಗೆಕಡ್ಡಿ, ಚುಮ್ಟಾ ಮತ್ತು ಜರಡಿ ಮಾರಿ ಜೀವನ ಸಾಗಿಸುವ ಬೈಲ್‍ಪತ್ತರ್ ಹಾಗೂ ಚಿಂದಿ ಆಯುವ ನಮ್ಮಂತಹ ಅಲೆಮಾರಿ ಸಮುದಾಯಗಳು ಕಳೆದ 15 ದಿವಸಗಳಿಂದ ಸರಿಯಾಗಿ ಊಟ ಮಾಡಲಾಗಿಲ್ಲ. ನಮ್ಮ ಕಷ್ಟ ಅರಿತು ದಾನಿಗಳು ಆಹಾರಧಾನ್ಯ ನೀಡಿದ್ದಾರೆ. ಸರ್ಕಾರ ನಮಗೆ ಎರಡೊತ್ತಿನ ಊಟದ ವ್ಯವಸ್ಥೆ ಮಾಡಿ ಲಾಕ್‍ಡೌನ್ ಜಾರಿಗೊಳಿಸುವುದರಲ್ಲಿ ಅರ್ಥವಿದೆ.

-ಸಿದ್ದಪ್ಪ, ಅಲೆಮಾರಿ ಸಮುದಾಯದ ಮುಖಂಡ, ಕೊಳಗೇರಿ, ತುಮಕೂರು

ಅಲೆಮಾರಿಗಳಿಗೆ ಮಿಡಿದ ಪೊಲೀಸರ ಹೃದಯ, ಜಪಾನಂದಾಜೀ ಅಭಯ:

       ಲಾಕ್‍ಡೌನ್, ಜಿಲ್ಲೆಯಲ್ಲಿರುವ ಅಲೆಮಾರಿ ಸಮುದಾಯಗಳಾದ ಶಿಳ್ಳೆಕ್ಯಾತ, ಸುಡುಗಾಡ ಸಿದ್ಧ, ದೊಂಬಿದಾಸ, ಚೆನ್ನದಾಸರ್, ಹಕ್ಕಿಪಿಕ್ಕಿ, ಕೊರಮ, ಪಿಂಜಾರ, ಹಾಲಕ್ಕಿ, ಬೈಲ್‍ಪತ್ತರ್, ಎಳವ, ಮುಂತಾದ ಅಂಚಿನ ಸಮುದಾಯಗಳ ತುತ್ತು ಕಿತ್ತುಕೊಂಡಿದೆ. ಹಸಿವಿನಿಂದ ಪರಿತಪಿಸುತ್ತಿರುವ ಈ ಜನರ ಕಷ್ಟ ಗುರುತಿಸಿ ಅವರ ಹಸಿವು ನಿವಾರಿಸಲು ಪಾವಗಡದ ರಾಮಕೃಷ್ಣ ಆಶ್ರಮದ ಡಾ.ಶ್ರೀ.ಜಪಾನಂದಾಜೀ ಹಾಗೂ ಜಿಲ್ಲಾ ಪೊಲೀಸರು ಆಹಾರ ಧಾನ್ಯ, ಪಾತ್ರೆ ಸೆಟ್, ವಿತರಿಸಿ ಮಾನವೀಯತೆಗೆ ಹೊಸ ಭಾಷ್ಯ ಬರೆದಿದ್ದಾರೆ. ಅಲ್ಲದೇ ಕೆಲವು ದಾನಿಗಳು, ಸಂಘ-ಸಂಸ್ಥೆಗಳೂ ಸಹ ಉಚಿತ ಊಟ-ತಿಂಡಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಈ ಕುರಿತು ಪತ್ರಿಕೆ ಇಂದಿನ ಸಂಚಿಕೆಯಲ್ಲಿ ಬೆಳಕು ಚೆಲ್ಲಿದೆ.

ಜಪಾನಂದಾಜೀ ಅಭಯ:

       ಜಿಲ್ಲೆಯ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಡಾ.ಶ್ರೀ ಜಪಾನಂದಾಜೀ ಅವರು ಜಿಲ್ಲೆಯ ತುಮಕೂರು ತಾಲ್ಲೂಕಿನ ಅಮಲಾಪುರ, ಚಿ.ನಾ.ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಜಯಚಂದ್ರ ನಗರ, ಡಿಂಕನಹಳ್ಳಿ, ಹುಳಿಯಾರು ಪಟ್ಟಣದ ಒಣಕಾಲುವೆ, ಶಂಕರಪುರ, ರಾಮ್‍ಗೋಪಾಲ್ ಸರ್ಕಲ್‍ಗಳಲ್ಲಿ ನೆಲೆಸಿರುವ ಅಲೆಮಾರಿಗಳಿಗೆ ಇನ್ಫೋಸಿಸ್ ಪ್ರತಿಷ್ಟಾನದ ನೆರವಿನೊಂದಿಗೆ ಅಗತ್ಯ ಆಹಾರ ಧಾನ್ಯ ಸಾಮಗ್ರಿ, ಅಡಿಗೆಗೆ ಬೇಕಾದ ಪಾತ್ರೆ ಸಾಮಗ್ರಿ, ಮುಖಗವಸು, ಸೋಪು ವಿತರಿಸಿ ಅವರಿಗೆ ಆರೋಗ್ಯದಿಂದಿರುವಂತೆ ಮನವಿ ಮಾಡಿದ್ದಾರೆ. ಪಾವಗಡ ತಾಲ್ಲೂಕಿನಲ್ಲಿ ಲಾಕ್‍ಡೌನ್‍ನಿಂದಾಗಿ ದುಡಿಮೆಯಿಲ್ಲದ ಖಾಸಗಿ ಬಸ್ ಚಾಲಕರು ಮತ್ತು ಏಜೆಂಟರಿಗೂ ಸಹ ದಿನಸಿ ಸಾಮಗ್ರಿ ವಿತರಿಸಿದ್ದಾರೆ. ಆಹಾರ ವಿತರಣೆಯಷ್ಟೆ ಅಲ್ಲದೇ ಪಾವಗಡ ತಾಲ್ಲೂಕು ಆಸ್ಪತ್ರೆಗೆ ತಮ್ಮ ಮಠದ ಅಮೆರಿಕ ಭಕ್ತಾದಿಗಳ ನೆರವಿನಿಂದ 7 ಜಂಬೋ ಟ್ಯಾಂಕರ್ ಆಮ್ಲಜನಕದ ಸಿಲಿಂಡರ್, ಹಾಗೂ ಅಗತ್ಯ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ.

ಮಿಡಿದ ಪೊಲೀಸರ ಹೃದಯ:

      ಲಾಕ್‍ಡೌನ್ ಬಂದೋಬಸ್ತ್‍ನಲ್ಲಿ ಹೆಚ್ಚು ಕೆಲಸದ ಒತ್ತಡಕ್ಕೆ ಸಿಲುಕಿರುವ ಪೊಲೀಸರು ತಮ್ಮ ಒತ್ತಡದಲ್ಲೂ ಸಹ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಅಲೆಮಾರಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ನೀಡುವ ಮೂಲಕ ನೆರವಾಗಿದ್ದಾರೆ. ನಗರದ ಸದಾ ಶಿವನಗರ, ಟೂಡಾ ಲೇಔಟ್, ರೋಟಿಘರ್, ಬಟವಾಡಿ ಮತ್ತು ಅಮಲಾಪುರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ದಿಕ್ಕಿಲ್ಲದ ಅಲೆಮಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ನೇತೃತ್ವದ ಸಿಬ್ಬಂದಿ ತಂಡ 250 ಕಿಟ್ ಆಹಾರಧಾನ್ಯ ವಿತರಿಸಿದೆ. ಶಿರಾ ತಾಲ್ಲೂಕಿನ ಕಲಿಗೋನಹಳ್ಳಿಯಲ್ಲಿ ಬಿಡಾರ ಹೂಡಿದ್ದ ಅಲೆಮಾರಿಗಳಿಗೆ ಪಟ್ಟನಾಯಕನಹಳ್ಳಿ ಪಿಎಸ್‍ಐ ಭಾಸ್ಕರ್ ಹಾಗೂ ಸಿಬ್ಬಂದಿ ಆಹಾರ ಕಿಟ್ ನೀಡಿದ್ದಾರೆ. ಇದೇ ತಾಲ್ಲೂಕಿನ ಬರಗೂರಿನಲ್ಲಿ ಉಪ ಪೊಲೀಸ್‍ಠಾಣೆಯ ಸಿಬ್ಬಂದಿಗಳ ಸಹಕಾರದಿಂದ ಶಿರಾ ಗ್ರಾಮಾಂತರ ಪಿಎಸ್‍ಐ ರವಿಕುಮಾರ್ 200 ಕ್ಕೂ ಅಧಿಕ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಿದ್ದಾರೆ. ಅಲ್ಲದೇ ಶಿರಾ ನಗರದ ತೋವಿನಕೆರೆ ಠಾಣೆಯ ಪೇದೆ ಮಲ್ಲಿಕಾರ್ಜನ್ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಅನಾಥ ಭಿಕ್ಷುಕನ ಶವ ಸಂಸ್ಕಾರ ಮಾಡಿ ತಮ್ಮ ಮಾನವೀಯ ಅಂತ:ಕರಣ ತೆರೆದಿಟ್ಟು ಇತರರಿಗೆ ಮಾದರಿಯಾಗಿದ್ದಾರೆ. ಹಾಗಾಗಿ ಜಿಲ್ಲೆಯ ಅಲ್ಲಲ್ಲಿ ಪೊಲೀಸರು ನೊಂದವರ ಕಣ್ಣಿರೊರೆಸುವ ಮೂಲಕ ಜನ ಸಾಮಾನ್ಯರ ದೃಷ್ಠಿಯಲ್ಲಿ ಪೊಲೀಸರೆಂದರೇ ಕೇವಲ ಭಯವಲ್ಲ, ಅಭಯವೂ ಹೌದು ಎಂಬುದನ್ನು ಜಿಲ್ಲೆಯಲ್ಲಿ ಸಾಬೀತುಪಡಿಸಿ ಮಾನವೀಯತೆಗೆ ಹೆಚ್ಚು ಘನತೆ ತಂದಿದ್ದಾರೆ.

ಜ್ವಾಲಾಮಾಲಾ ಹೆಲ್ತ್‍ಕೇರ್ ಫೌಂಡೇಷನ್:

      ಈ ಫೌಂಡೇಷನ್‍ನ ಸ್ಥಾಪಕ ಜಿ.ವಿ.ಶಾಂತೀಶ್‍ಜೈನ್ ಅವರು ನಗರದಲ್ಲಿ ನಿತ್ಯ ತಮ್ಮ ಕಾರಿನಲ್ಲಿ ಸಂಚರಿಸುತ್ತಾ ಆಸ್ಪತ್ರೆಗಳಲ್ಲಿರುವ ಕೊರೋನಾ ಸೋಂಕಿತರಿಗೆ, ಇನ್ನಿತರ ಕಾರಣಗಳಿಂದ ಆಸ್ಪತ್ರೆಗೆ ಬಂದವರಿಗೆ, ರಸ್ತೆಯಲ್ಲಿ ಸಿಗುವ ಭಿಕ್ಷುಕರಿಗೆ, ಮಾನಸಿಕ ಅಸ್ವಸ್ಥರಿಗೆ, ಕೂಲಿ ಕಾರ್ಮಿಕರಿಗೆ, ವಯೋವೃದ್ಧರಿಗೆ, ಇನ್ನಿತರ ಹಸಿದವರಿಗೆ ಉಚಿತ ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದಾರೆ. ಜೊತೆಗೆ ಅಗತ್ಯವಿದ್ದವರಿಗೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೂ ಉಚಿತವಾಗಿ ಮಾತ್ರೆ, ಔಷಧ ನೀಡುತ್ತಿದ್ದಾರೆ. ತಮ್ಮ ಇನ್ನೋವಾ ಕಾರನ್ನೆ ಆಂಬ್ಯೂಲೆನ್ಸ್ ಮಾಡಿಕೊಂಡಿರುವ ಇವರು ಕಾರಿನಲ್ಲಿ ಏಕ ಕಾಲದಲ್ಲಿ ಇಬ್ಬರಿಗೆ ಆಕ್ಸಿಜನ್ ನೀಡಲು ಸಿಲಿಂಡರ್ ಅಳವಡಿಸಿಕೊಂಡು, ಅಗತ್ಯ ವೈದ್ಯಕೀಯ ಪರಿಕರಗಳೊಂದಿಗೆ ತುರ್ತು ಇದ್ದಾಗ ತಮ್ಮ ಕಾರನ್ನು ಸೋಂಕಿತರಿಗಾಗಿ ಬಳಸುತ್ತಿದ್ದಾರೆ. ಕೊರೋನಾ ಸೋಂಕಿಗೊಳಗಾದ ಬಡವರಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸುವ ಆಶಯ ಹೊಂದಿರುವ ಇವರು ತಮ್ಮ ಫೌಂಡೇಷನ್ ನೆಟ್‍ವರ್ಕ್‍ನಲ್ಲಿರುವ ಹಲವು ಆಸ್ಪತ್ರೆಗಳಲ್ಲಿ ಇದುವರೆಗೆ 686 ಜನ ಸೋಂಕಿತರಿಗೆ ಕಡಿಮೆದರದಲ್ಲಿ ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ಕೊಡಿಸಿರುವುದಾಗಿ ಹೇಳುತ್ತಾರೆ. ಸೋಂಕಿತರಿಗೆ ಉಚಿತ ಹೋಂ ಕ್ವಾರಂಟೈನ್, 3000 ಉಚಿತ ಆಪ್ತ ಸಮಾಲೋಚನೆ ಮಾಡಿ ಭರವಸೆ ತುಂಬಿರುತ್ತಾರೆ. ಉಚಿತ ಆಹಾರ, ಔಷಧ, ಕಡಿಮೆ ದರದ ಚಿಕಿತ್ಸೆಯ ಅವಶ್ಯಕತೆ ಇರುವವರು ಹೆಚ್ಚಿನ ಮಾಹಿತಿಗೆ ಅವರ 99450 78822\ 99022 81504 ಈ ಪೋನ್ ನಂಬರ್‍ಗಳಿಗೆ ಕರೆ ಮಾಡಿ ವಿಚಾರಿಸಬಹುದು.

ತುಮಕೂರು ನಗರ ವೀರಶೈವ ಸಮಾಜ:

      ನಗರದ ‘ತುಮಕೂರು ನಗರ ವೀರಶೈವ ಸಮಾಜ’ವು ವಿವಿಧ ಜನಾಂಗಗಳ ದಾನಿಗಳ ನೆರವಿನೊಂದಿಗೆ ನಗರದ ಖಾಸಗಿ ಬಸ್ ನಿಲ್ದಾಣದ ಎದುರಿಗಿರುವ ಶ್ರೀ ರೇಣುಕಾ ವಿದ್ಯಾ ಪೀಠದಲ್ಲಿ 150 ಹಾಸಿಗೆಗಳ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವನ್ನು ತೆರೆದಿದೆ. ಕೋವಿಡ್ ಕೇರ್ ಕೇಂದ್ರಕ್ಕೆ ಬೇಕಾದ ಮೂಲಭೂತ ಸೌಕರ್ಯಯನ್ನು ವಿರಶೈವ ಸಮಾಜ ಮತ್ತು ವಿವಿಧ ಜನಾಂಗಗಳ ದಾನಿಗಳು ಒದಗಿಸುತ್ತಿದ್ದು, ವೈದ್ಯಕೀಯ ಸೇವೆ ಮತ್ತು ಸ್ವಚ್ಛತಾ ಕಾರ್ಯವನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತಿದೆ. ಕೇಂದ್ರವು ಮೇ.14 ರಂದು ಚಾಲನೆಗೊಂಡು ಸೋಂಕಿತರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆ:

      ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ನಗರ ಘಟಕದವರು ನಗರದ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೆÇಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಬಡ ಕುಟುಂಬಗಳಿಗೆ ಕೆಲ ದಿನಗಳಿಂದ ಉಚಿತ ಆಹಾರ ವಿತರಣೆ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧ್ಯಕ್ಷ ಡಮರುಗೇಶ್ ಮಾತನಾಡಿ ಕೊರೊನÀ ಸೋಂಕು ತಡೆಯುವಿಕೆಯಲ್ಲಿ ಆರೋಗ್ಯ ಇಲಾಖೆ ಮತ್ತು ಪೆÇಲೀಸ್ ಇಲಾಖೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದು ತಮ್ಮ ಕುಟುಂಬಗಳನ್ನು ಲೆಕ್ಕಿಸದೆ ಸಾರ್ವಜನಿಕರಿಗಾಗಿ ಹಗಲು-ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ ಇನ್ನುಮುಂದೆ ಲಾಕ್‍ಡೌನ್ ಮುಗಿಯುವವರೆಗೂ ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಉಪಹಾರದ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಜನಸಾಮಾನ್ಯರ ಸೇವೆ:

      ನಗರದ ಜನ ಸಾಮಾನ್ಯರು ಸಹ ಲಾಕ್‍ಡೌನ್‍ನಿಂದ ಆಹಾರ ಸಮಸ್ಯೆ ಎದುರಿಸುತ್ತಿರುವವರಿಗೆ ಉಚಿತ ಆಹಾರ ಪೂರೈಸುತ್ತಿದ್ದಾರೆ. ಮೂಲೆಮನೆ ಮೆಸ್‍ನ ಗಂಗಣ್ಣ, ಪೃಥ್ವಿ ರೆಸ್ಟೋರೆಂಟ್‍ನ ಪೃಥ್ವಿ ಮಲ್ಲಣ್ಣ, ಸಖಿ ಸೆಲ್ಯೂನ್ ಮತ್ತು ಮೇಕಪ್ ಅಕಾಡೆಮಿಯ ಮುಖ್ಯಸ್ಥೆ ಅಕ್ಷರ, ಗೃಹಿಣಿ ಸವಿತ ಸೇರಿದಂತೆ ಎಲೆ ಮರೆಕಾಯಿಯಂತೆ ಪ್ರಚಾರಕ್ಕೆ ಬಾರದ ಅದೆಷ್ಟೋ ಮಂದಿ ತಮ್ಮ ಕೈಲಾದಷ್ಟು ಉಚಿತ ಆಹಾರ ಹಾಗೂ ಔಧದದ ನೆರವು ನೀಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ರಾಜಕೀಯ ಪಕ್ಷಗಳಿಂದ ಸಹಾಯವಾಣಿ:

      ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರು ಕೊರೋನಾ ಸೋಂಕಿತರಿಗೆ, ಆಹಾರ ಸಮಸ್ಯೆ ಇರುವವರಿಗೆ ಊಟ-ತಿಂಡಿ, ಆಹಾರ ಕಿಟ್, ವೈದ್ಯಕೀಯ ನೆರವು ನೀಡಲು ಸಹಾಯವಾಣಿಗಳನ್ನು ಆರಂಭಿಸಿವೆ. ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ರಾಜಕೀಯಕ್ಕೆ ವಿರಾಮ ನೀಡಿ ಮಾನವೀಯ ಕೆಲಸದಲ್ಲಿ ನಿರತರಾಗಿ ಜನ ಸೇವೆ ಮಾಡುತ್ತಿರುವುದು ರಾಜಕೀಯ ಪಕ್ಷಗಳ ನೈತಿಕ ಜವಾಬ್ದಾರಿಯನ್ನು ಮುನ್ನೆಲೆಗೆ ತಂದಿದ್ದು, ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

      ಜಿಲ್ಲೆಯಾದ್ಯಾಂತ ನಿಲ್ಲದ ನೆರವು:

      ಜಿಲ್ಲೆಯ ತಾಲ್ಲೂಕುಗಳಲ್ಲಿ ಹಲವಾರು ಸಂಘ-ಸಂಸ್ಥೆಗಳು ಆಹಾರ, ಔಷಧ, ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಮತ್ತು ಆರ್.ರಾಜೇಂದ್ರ ಅಭಿಮಾನಿಗಳ ಬಳಗ, ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅಭಿಮಾನಿಗಳ ಬಳಗ, ಎಂಎನ್‍ಜೆ ಗ್ರೂಪ್, ಶಿರಾದಲ್ಲಿ ಶಾಸಕ ಡಾ.ರಾಜೇಶ್‍ಗೌಡ, ಪಾವಗಡದಲ್ಲಿ ಜಪಾನಂದ ಸ್ವಾಮೀಜಿ, ಶಶಿಕಿರಣ್ ನೇತೃತ್ವದ ಹೆಲ್ತ್ ಸೊಸೈಟಿ, ಸಿಪಿಐ ರಾಘವೇಂದ್ರ ನೇತೃತ್ವದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್, ತಿಪಟೂರಿನಲ್ಲಿ ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಚಿ.ನಾ.ಹಳ್ಳಿಯ ಮುಂಜಾನೆ ಗೆಳೆಯರ ಬಳಗ ಹಾಗೂ ಜಿಲ್ಲೆಯ ಹಾಲಿ-ಮಾಜಿ ಶಾಸಕರು ತಮ್ಮ ತಮ್ಮ ತಾಲ್ಲೂಕು ಕೇಂದ್ರಗಳಲ್ಲಿ ಆಸ್ಪತ್ರೆಗೆ ಬರುವ ಕೊರೋನಾ ಸೋಂಕಿತರು, ಇನ್ನಿತರ ರೋಗಿಗಳು, ಅವರ ಕಡೆಯವರಿಗೆ ಉಚಿತ ಆಹಾರ ಮತ್ತು ಔಷಧ, ವೈದ್ಯಕೀಯ ನೆರವು ನೀಡುವ ಮೂಲಕ “ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿ ಸಿಕ್ಕರು ಬದುಕಿಯಾನು” ಎಂಬಂತಿರುವ ಈ ಕಾಲದಲ್ಲಿ ಮನುಷ್ಯತ್ವ ಎಂಬುದು ಲಾಕ್ ಆಗಿಲ್ಲ ಇನ್ನೂ ಜೀವಂತವಾಗಿದೆ ಎಂಬುದನ್ನು ನಿರೂಪಿಸಿದ್ದಾರೆ.

      ಪ್ರಾಣಿ-ಪಕ್ಷಿಗಳ ಮೇಲಿರಲಿ ಕನಿಕರ:

      ಲಾಕ್‍ಡೌನ್‍ನಿಂದಾಗಿ ನಗರದಲ್ಲಿರುವ ಬೀದಿ ನಾಯಿ, ಬೆಕ್ಕುಗಳು, ಬೀಡಾಡಿ ದನಗಳು, ಅಲ್ಲಲ್ಲಿ ಕಂಡು ಬರುವ ಕೋತಿಗಳು, ಗೂಡುಗಳಲ್ಲಿರುವ ಇರುವೆ, ಕಾಗೆ, ಗುಬ್ಬಿ, ಇತರೆ ಪ್ರಾಣಿ ಪಕ್ಷಿಗಳಿಗೂ ಆಹಾರ ಸಮಸ್ಯೆ ಆಗಿದೆ. ಈ ಹಿಂದೆ ಹೊಟೇಲ್‍ನಲ್ಲಿ ಮಿಕ್ಕ ಆಹಾರ, ಕಲ್ಯಾಣ ಮಂಟಪಗಳ ಮದುವೆ ಊಟದ ತ್ಯಾಜ್ಯ ಪ್ರಾಣಿಗಳ ಪಾಲಾಗುತ್ತಿತ್ತು. ಆದರೇ ಈಗ ಅದಕ್ಕೆಲ್ಲ ತಡೆ ಉಂಟಾಗಿದೆ. ಸಾಮಾನ್ಯ ದಿನಗಳಲ್ಲಿ ಕೆಲ ಜನ ಪ್ರಾಣಿ ಪಕ್ಷಿಗಳಿಗೆ ಆಹಾರ, ಕಾಳು, ಹಣ್ಣು ಕೊಡುತ್ತಿದ್ದರು. ಆದರೇ ಈಗ ಜನರು ಅನಗತ್ಯವಾಗಿ ಸಂಚರಿಸದೇ ಇರುವುದರಿಂದ ಪ್ರಾಣಿ-ಪಕ್ಷಿಗಳ ಆಹಾರಕ್ಕೆ ಸಮಸ್ಯೆಯಾಗಿದೆ ಹಾಗಾಗಿ ಪ್ರಾಣಿ-ಪಕ್ಷಿಗಳಿಗೂ ಒಂದು ತುತ್ತು ಮೀಸಲಿಡಿ.

      ನಗರ, ಪಟ್ಟಣಗಳಿಂದ ದೂರವಿದ್ದು ನಾಗರೀಕ ಸಮಾಜಕ್ಕೆ ತೆರೆದುಕೊಳ್ಳದೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಪಶುಗಳಂತೆ ಜೀವಿಸುತ್ತಿರುವ ಅಲೆಮಾರಿ ಜನರನ್ನು ನೋಡಿ ಕಣ್ಣುಗಳು ತುಂಬಿ ಬಂದವು. ಮನುಷ್ಯತ್ವ ಇರುವ ಯಾರೇ ಆದರೂ ಇವರನ್ನು ನೋಡಿದರೇ ಮಮ್ಮಲ ಮರುಗುತ್ತಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಜನರ ನೆರವಿಗೆ ನಿಲ್ಲುವುದೇ ಈ ಹೊತ್ತಿನ ಧರ್ಮವಾಗಿದೆ. ಜಿಲ್ಲೆಯಲ್ಲಿರುವ ಅಲೆಮಾರಿಗಳ ಕುರಿತು ನನ್ನ ಗಮನಕ್ಕೆ ತಂದರೇ ಅವರಿಗೂ ಸಹ ಸೂಕ್ತ ನೆರವು ನೀಡಲಾಗುವುದು.

-ಡಾ.ಶ್ರೀ.ಜಪಾನಂದಾಜೀ, ಅಧ್ಯಕ್ಷರು, ಶ್ರೀರಾಮಕೃಷ್ಣಾಶ್ರಮ, ಪಾವಗಡ.

 -ಚಿದಾನಂದ್ ಹುಳಿಯಾರ್

Recent Articles

spot_img

Related Stories

Share via
Copy link