ಮಾಧುಸ್ವಾಮಿ ಮತ್ತೆ ಸಚಿವರಾಗುವರೇ?

ತುಮಕೂರು : 

      ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟ ದರ್ಜೆ ಸಚಿವರಾಗುವ ಅವಕಾಶ ದೊರೆತಿತ್ತು. ಪ್ರಸಕ್ತ ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಅವರ ಇಡೀ ಮಂತ್ರಿಮಂಡಲವನ್ನೇ ರಾಜ್ಯಪಾಲರು ವಿಜರ್ಸಿಸಿದ್ದು, ಮುಂದಿನ ಹೊಸ ಮುಖ್ಯಮಂತ್ರಿ ಸಂಪುಟದಲ್ಲಿ ಜಿಲ್ಲೆಯ ಯಾವ ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

      ಜಿಲ್ಲೆಯ ಚಿ.ನಾ.ಹಳ್ಳಿ ಶಾಸಕರಾಗಿರುವ ಜೆ.ಸಿ.ಮಾಧುಸ್ವಾಮಿ ಅವರು ಯಡಿಯೂರಪ್ಪ ಅವರ ಸಂಪುಟದಲ್ಲಿ ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದರು. ಬಳಿಕ ಕಾನೂನು ಖಾತೆಯನ್ನು ಹಿಂಪಡೆದರೂ ಸಣ್ಣ ನೀರಾವರಿ ಸಚಿವರಾಗಿ ಮುಂದುವರಿದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಸರಕಾರವನ್ನು ಸದನದಲ್ಲಿ ಮಾಧುಸ್ವಾಮಿ ಸಮರ್ಥಿಸಿಕೊಳ್ಳುತ್ತಿದ್ದ ಪರಿ, ವಿಪಕ್ಷಗಳ ಆರೋಪ, ಟೀಕೆಗಳಿಗೆ ಅಷ್ಟೇ ತೀಕ್ಷ್ಣ, ಕಾನೂನತ್ಮಾಕವಾಗಿ ತಿರುಗೇಟು ನೀಡುತ್ತಿದ್ದ ಅವರ ವಾಕ್ಪಟುತ್ವವನ್ನು ಕಂಡು ಕೆಲವು ವಿಚಾರಗಳಲ್ಲಿ ಜೆಸಿಎಂ ಜೊತೆಗೆ ಸಂಪುಟ ಸಹೋದ್ಯೋಗಿಗಳಿಗೆ ಅಸಮಾಧಾನವಿದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿ ಮುಂದುವರಿದಿದ್ದರು.

ನಾಗೇಶ್‍ಗೆ ಪಕ್ಷ ನಿಷ್ಠೆಯ ಬಲ:

      ಈಗ ಹೊಸ ಮುಖ್ಯಮಂತ್ರಿ ಆಯ್ಕೆಯೊಂದಿಗೆ ಅಸ್ಥಿತ್ವಕ್ಕೆ ಬರಲಿರುವ ನೂತನ ಸಂಪುಟದಲ್ಲಿ ಜೆ.ಸಿ.ಮಾಧುಸ್ವಾಮಿ ಅವರಿಗೆ ಮತ್ತೆ ಅವಕಾಶ ಸಿಗುವುದೇ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಸರಕಾರದ ಸೂಕ್ತ ಸಮರ್ಥನೆಗೆ ಮಾಧುಸ್ವಾಮಿ ಅವರಂತಹ ಸಚಿವರು ಅವಶ್ಯಕ. ಜೊತೆಗೆ ಬಿಎಸ್‍ವೈ ನಿರ್ಗಮನದ ಬಳಿಕ ಲಿಂಗಾಯಿತ ಸಮುದಾಯಕ್ಕಾಗಿರುವ ಅಸಮಾಧಾನ ಶಮನಕ್ಕೂ ಅದೇ ಸಮುದಾಯಕ್ಕೆ ಸೇರಿದ ಜೆ.ಸಿಎಂ ಅವರನ್ನು ಸಂಪುಟದಲ್ಲಿ ಮುಂದುವರಿಸಲಾಗುತ್ತದೆ ಎಂಬ ಚರ್ಚೆಗಳು ಸಾಗಿವೆ. ಒಂದು ವೇಳೆ ಜೆಸಿಎಂಗೆ ಅವಕಾಶ ಸಿಗದಿದ್ದರೆ ವೀರಶೈವ- ಲಿಂಗಾಯತ ಸಮುದಾಯದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‍ಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರಗಳು ಸಾಗಿವೆ. ಪ್ರಮುಖವಾಗಿ ಮೂಲ ಬಿಜೆಪಿ ಸಂಘ ನಿಷ್ಠೆಯ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರ ಹೆಸರು ಮಂತ್ರಿ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿದ್ದು, ಯಡಿಯೂರಪ್ಪ ಸಂಪುಟದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೂ ಅಧಿಕಾರ ವಹಿಸಿಕೊಳ್ಳದ ನಾಗೇಶ್ ಅವರು ಮಂತ್ರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಬಿಜೆಪಿ ಮೂಲ ಕಾರ್ಯಕರ್ತರು ಹೇಳುತ್ತಿದ್ದಾರೆ.

      ಪರಿಷತ್ ಸದಸ್ಯರು ಅವಕಾಶದ ನಿರೀಕ್ಷೆಯಲ್ಲಿ: ಮತ್ತೊಂದೆಡೆ ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರು ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಉಪಚುನಾವಣೆಯಲ್ಲಿ ಗೆದ್ದ ಸಿರಾ ಶಾಸಕ ಸಿ.ಎಂ.ರಾಜೇಶ್‍ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ.ಎಂ.ಗೌಡ ಸಹ ತಮಗೆ ಅವಕಾಶ ಕೊಟ್ಟರೆ ತಾವೂ ಮಂತ್ರಿಗಿರಿಗೆ ಸೈ ಎನ್ನಲು ಸಿದ್ಧವಾಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟು ಮಂತ್ರಿಗಿರಿಗಾಗಿ ಲಾಭಿಯಲ್ಲಿ ತೊಡಗಿದ್ದಾರೆ.ಮಂತ್ರಿಗಿರಿಯ ಅದೃಷ್ಟ ಯಾರಿಗೆ ಒಲಿಯುವುದೋ? ಪಕ್ಷ, ಜಾತಿ, ಸಂಘಟನೆ ಯಾವ ಲೆಕ್ಕಚಾರದಲ್ಲಿ ಬಿಜೆಪಿ ವರಿಷ್ಠರು ಸಂಪುಟ ರಚಿಸುವರೋ ಕುತೂಹಲ ಕೆರಳಿಸಿದೆ.

ನಿಗಮ ಮಂಡಳಿ ನೇಮಕವಾದವರು, ಶಿಫಾರಸ್ಸಿಂದ ಅಧಿಕಾರಿಗಳಾಗಿ ಬಂದವರಲ್ಲಿ ಆತಂಕ

       ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಇಡೀ ಮಂತ್ರಿಮಂಡಲವೇ ರದ್ದುಪಡಿಸಲಾಗಿದ್ದು, ಬಿ.ಎಸ್‍ವೈ ಅವರ ಸರಕಾರದಲ್ಲಿ ನಿಗಮ ಮಂಡಳಿಗೆ ನೇಮಕವಾದ ಜಿಲ್ಲೆಯ ವಿವಿಧ ಪ್ರಾಧಿಕಾರ, ಮಂಡಳಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ನಾಮನಿರ್ದೇಶಿತರಿಗೆ ಎಲ್ಲಿ ಹೊಸ ಮುಖ್ಯಮಂತ್ರಿ ಬಂದು ಹಳೇ ನೇಮಕವನ್ನು ರದ್ದುಗೊಳಿಸುವರೋ ಎಂಬ ಆತಂಕ ಶುರುವಾಗಿದೆ. ಇದರೊಂದಿಗೆ ಬಿಎಸ್‍ವೈ ಸರಕಾರ ಸಚಿವರು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡ ಬಂದ ಅಧಿಕಾರಿಗಳಲ್ಲೂ ಹೊಸ ಸರಕಾರ ಬಂದು ಎಲ್ಲಿ ನಮ್ಮನ್ನು ಬೇರೆಡೆಗೆ ವರ್ಗ ಮಾಡುವುದೋ ಎಂಬ ಢವಢವ ಶುರುವಾಗಿದೆ.

  ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap