ತುಮಕೂರು : 11 ವರ್ಷಗಳ ಬಳಿಕ ಪಾಲಿಕೆ ಅಧಿಕಾರ ಹಿಡಿದ ಬಿಜೆಪಿ!!

ತುಮಕೂರು :  

     10 ವರ್ಷಗಳ ಬಳಿಕ ತುಮಕೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

      ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಆಯ್ಕೆಯಲ್ಲಿ ಕುತೂಹಲವನ್ನು ಮೂಡಿಸಿತ್ತು. ಇಂದು ನಡೆದ ಚುನಾವಣೆಯಲ್ಲಿ ಪಾಲಿಕೆಯ ನೂತನ ಮೇಯರ್ ಆಗಿ 32ನೇ ವಾರ್ಡಿನ ಬಿಜೆಪಿಯ ಬಿ.ಜಿ.ಕೃಷ್ಣಪ್ಪ ಹಾಗೂ ಉಪ ಮೇಯರ್ ಆಗಿ 29ನೇ ವಾರ್ಡ್‍ನ ಜೆಡಿಎಸ್ ಪಕ್ಷದ ನಾಜಿಮಾಬೀ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ 11 ವರ್ಷಗಳ ನಂತರ ಬಿಜೆಪಿ ನಗರಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದಂತಾಗಿದೆ.

     2009ರಲ್ಲಿ ಬಿಜೆಪಿಯ ಯಶೋಧ ಗಂಗಪ್ಪ ಮೇಯರ್ ಆಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೇಯರ್ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿತ್ತು. ಮೇಯರ್, ಉಪಮೇಯರ್ ಹಾಗೂ ಪಾಲಿಕೆಯ 4 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗಾಗಿ ಶುಕ್ರವಾರ ಚುನಾವಣೆ ನಿಗಧಿಯಾಗಿತ್ತು. ಬೆಂಗಳೂರು ಪ್ರಾದೇಶಿಕ ದೇಶಿಕ ಆಯುಕ್ತರಾದ ನವೀನ್‍ರಾಜ್ ಸಿಂಗ್ ಅವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಪಾಲಿಕೆಯಲ್ಲಿ ಇರುವ ಪರಿಶಿಷ್ಟ ಪಂಗಡದ ಏಕೈಕ ಸದಸ್ಯರಾದ ಬಿಜೆಪಿಯ ಬಿ.ಜಿ.ಕೃಷ್ಣಪ್ಪ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಮಹಿಳೆಗೆ ಮೀಸಲಾದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಮೈತ್ತಿ ಅಭ್ಯರ್ಥಿಯಾಗಿ ನಾಜಿಮಾಬೀ ಮಾತ್ರವೇ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಅಗತ್ಯ ಬೆಂಬಲಿತ ಸದಸ್ಯರು ಇಲ್ಲದ ಕಾರಣ ಉಪಮೇಯರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಹೀಗಾಗಿ, ಚುನಾವಣಾಧಿಕಾರಿಗಳು ಇವರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

      ಬೆಳಿಗ್ಗೆ ಮೇಯರ್, ಉಪಮೇಯರ್ ಚುನಾವಣೆ ನಡೆಸಿದ ಪ್ರಾದೇಶಿಕ ಆಯುಕ್ತರು, ಮಧ್ಯಾಹ್ನ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಿದರು. ಈ ಎಲ್ಲಾ ಸ್ಥಾನಗಳಿಗೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ಒಳಗೊಂಡ ಸ್ಥಾಯಿ ಸಮಿತಿ ಸದಸ್ಯರು ಅವಿರೋಧ ಆಯ್ಕೆಯಾದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಚುನಾವಣೆಯಲ್ಲಿ ಭಾಗವಹಿಸಿ ನೂತನ ಮೇಯರ್, ಉಪಮೇಯರ್ ಅವರನ್ನು ಅಭಿನಂದಿಸಿ ಶುಭ ಕೋರಿದರು. ಬಿಜೆಪಿ, ಜೆಡಿಎಸ್ ಬೆಂಬಲಿಗರು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಪಕ್ಷಗಳ ಬಾವುಟಗಳು ಹಾರಾಡಿದವು. ಪಾಲಿಕೆಯ ಸಹಸದಸ್ಯರು, ಬೆಂಗಲಿಗರು ನೂತನ ಮೇಯರ್, ಉಪಮೇಯರ್‍ಗೆ ಹಾರಾರ್ಪಣೆ ಮಾಡಿ ಅಭಿನಂದಿಸಿದರು.

ಅಭಿವೃದ್ಧಿಯೇ ಆದ್ಯತೆ : ಬಿ.ಜಿ.ಕೃಷ್ಣಪ್ಪ

     ತುಮಕೂರಿನ ಬಡ್ಡಿಹಳ್ಳಿ ನಿವಾಸಿಯಾಗಿರುವ 68 ವರ್ಷದ ಬಿ.ಜಿ.ಕೃಷ್ಣಪ್ಪ ಅವರು ತುಮಕೂರು ನಗರಪಾಲಿಕೆಯ ನೂತನ ಮೇಯರ್ ಆಗಿ ಮುಂದಿನ 12 ತಿಂಗಳ ಅಧಿಕಾರವಧಿಗೆ ಆಯ್ಕೆಯಾಗಿದ್ದಾರೆ. ಪಿಯೂಸಿ ಓದಿರುವ ಇವರು ನಗರದ ಹೆಚ್‍ಎಂಟಿ ಕೈಗಡಿಯಾರ ಕಾರ್ಖಾನೆಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬಿ.ಜಿ.ಕೃಷ್ಣಪ್ಪ ಅವರು ಕೂಡಾ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿದ್ದಾರೆ.

      32ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ನಗರ ಪಾಲಿಕೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈಗ ಮೇಯರ್ ಹುದ್ದೆ ದೊರಕಿದೆ.
ಆಯ್ಕೆ ನಂತರ ಮಾತನಾಡಿದ ಬಿ.ಜಿ.ಕೃಷ್ಣಪ್ಪ, ನಾಗರೀಕ ಸೌಲಭ್ಯಗಳು ಜನರಿಗೆ ಸಕಾಲದಲ್ಲಿ, ಸಮರ್ಪಕವಾಗಿ ದೊರಕಿಸುವುದು, ನಾಗರೀಕರು ಪಾಲಿಕೆಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆಡಳಿವನ್ನು ಸರಳಗೊಳಿಸಿ, ಚುರುಕುಗೊಳಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು. ಜನರಿಗೆ ಅಗತ್ಯ ಸೇವೆ, ನಗರ ಸ್ವಚ್ಚತೆ, ಸಸಿ ನೆಡುವ, ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಇಂಗಿತ ವ್ಯಕ್ತಪಡಿಸಿದರು.

ನಾಗರೀಕ ಸೇವೆಗೆ ಕ್ರಮ: ನಾಜೀಮಾಬೀ

      ನಗರ ಪಾಲಿಕೆಯ ಉಪಮೇಯರ್ ಆಗಿ ಆಯ್ಕೆಯಾಗಿರುವ ನಾಜೀಮಾಬೀ ನಗರದ ಮರಳೂರು ದಿಣ್ಣೆ ನಿವಾಸಿ. ಸಾಮಾನ್ಯ ಗೃಹಿಣಿಯಾಗಿರುವ ಇವರು ಇದೇ ಮೊದಲ ಬಾರಿಗೆ ರಾಜಕಾರಣ ಪ್ರವೇಶಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಓದಿರುವ, 33 ವರ್ಷದ ನಾಜೀಮಾಬೀ 29ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಪಾಲಿಕೆಗೆ ಸದಸ್ಯರಾಗಿ ಆರಿಸಿಬಂದಿದ್ದರು. ಇವರ ಪತಿ ಮಹಮದ್ ಇಸ್ಮಾಯಿಲ್ ಜಿಲ್ಲಾ ಜೆಡಿಎಸ್‍ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು.

       ಉಪಮೇಯರ್ ಸ್ಥಾನಕ್ಕೆ ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಡಿ.ಸಿ.ಗೌರಿಶಂಕರ್ ಹಾಗೂ ಪಾಲಿಕೆಯ ಜೆಡಿಎಸ್ ಸದಸ್ಯರು ಹಾಗೂ ಬೆಂಬಲ ನೀಡಿದ ಕಾಂಗ್ರೆಸ್‍ನ ಮಾಜಿ ಶಾಸಕರಾದ ಷಫಿಅಹಮದ್, ಡಾ.ರಫಿಕ್‍ಅಹಮದ್ ಹಾಗೂ ಕಾಂಗ್ರೆಸ್ ಸದಸ್ಯರಿಗೆ ಧನ್ಯವಾದ ತಿಳಿಸಿದರು.

      ತುಮಕೂರು ನಗರದಲ್ಲಿ ರಸ್ತೆ, ಚರಂಡಿ ಸಮಸ್ಯೆ ಇದೆ, ಕುಡಿಯುವ ನೀರಿಗೂ ತೊಂದರೆ, ಸಮರ್ಪಕವಾಗಿ ನೀರಿನ ವಿತರಣೆ ಆಗುತ್ತಿಲ್ಲ, ಒಳಚರಂಡಿ ಸಮಸ್ಯೆ ನಿವಾರಣೆ, ನಾಗರೀಕ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡುವುದಾಗಿ ಉಪಮೇಯರ್ ನಾಜೀಮಾಬೀ ಹೇಳಿದರು.

ಒಗ್ಗಟ್ಟಿನಿಂದ ಶ್ರಮಿಸಿ : ಶಾಸಕರ ಮನವಿ

      ನಗರದ ಅಭಿವೃದ್ಧಿ, ಸಾರ್ವಜನಿಕ ಸೇವೆಗಾಗಿ ಪಾಲಿಕೆಯ ಎಲ್ಲಾ ಪಕ್ಷದವರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೂತನ ಮೇಯರ್, ಉಪಮೇಯರ್ ಅವರನ್ನು ಅಭಿನಂದಿಸಿ ಮಾತನಾಡಿದರು. ಚುನಾವಣೆವರೆಗಷ್ಟೇ ಪಕ್ಷ, ಆ ನಂತರ ನಗರದ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಾತೀತವಾಗಿ ಕೆಲಸ ಮಾಡುವುದು ಆದ್ಯತೆಯಾಗಲಿ ಎಂದು ಆಶಿಸಿದರು.

      ಎತ್ತು ಏರಿಗೆ, ಕೋಣ ನೀರಿಗೆ ಎನ್ನವಂತಾಗಬಾರದು ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ ಸೇರಿದಂತೆ, ಹಲವು ಯೋಜನೆಗಳ ಕಾಮಗಾರಿ ನಗರದಲ್ಲಿ ನಡೆಯುತ್ತಿವೆ. ರಾಜ್ಯ ಸರ್ಕಾರದಿಂದ ಬರುವ ಅನುದಾನ ಬಳಸಿಕೊಂಡು ಅಭಿವೃದ್ಧಿ ಹಾಗೂ ಜನರ ಸಮಸ್ಯೆ ನಿವಾರಣೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ವಿನಂತಿಸಿದರು.

 ತುಮಕೂರು : ಇಂದು ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

     ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿರಲಿಲ್ಲ. ಹಿಂದಿನ ಬಾರಿ ಕಾಂಗ್ರೆಸ್- ಜೆಡಿಎಸ್ ಒಟ್ಟಾಗಿ ಅಧಿಕಾರ ಹಂಚಿಕೊಂಡು ಅಧಿಕಾರ ಹಿಡಿದಿದ್ದವು. ಆದರೆ ಈ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 

     ಕಾಂಗ್ರೆಸ್, ಜೆಡಿಎಸ್‍ನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಆಯ್ಕೆ ಆಗಿಲ್ಲದ ಕಾರಣ, ಈ ವರ್ಗದ ಏಕೈಕ ಸದಸ್ಯ ಬಿಜೆಪಿಯ ಬಿ.ಜಿ.ಕೃಷ್ಣಪ್ಪ ಅವರು ಮೇಯರ್ ಆಗಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿತ್ತು. ಈ ಮೂಲಕ 10 ವರ್ಷಗಳ ಬಳಿಕ ಬಿಜೆಪಿ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap