ತುಮಕೂರು :
ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿನ ಕುರಿ, ಕೋಳಿ, ಮೀನು ಮಾಂಸ ಮಾರಾಟ ಉದ್ದಿಮೆದಾರರು ಕಡ್ಡಾಯವಾಗಿ ಪರವಾನಗಿ ಪಡೆದು ಮಾಂಸ ಮಾರಾಟ ಉದ್ದಿಮೆ ನಡೆಸಬೇಕೆಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆಯದೇ ಹಾಗೂ ನವೀಕರಣ ಮಾಡಿಸದೇ ಮಾಂಸ ಮಾರಾಟದ ಉದ್ದಿಮೆ ನಡೆಸುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದ್ದು, ಉದ್ದಿಮೆದಾರರು ಉದ್ದಿಮೆ ಪರವಾನಗಿಯ ಶುಲ್ಕವನ್ನು (ಬೇಡಿಕೆ ಶುಲ್ಕ) ಪಾವತಿಸಿ ಕಡ್ಡಾಯವಾಗಿ ಉದ್ದಿಮೆ ಪರವಾನಗಿಯನ್ನು ಪಡೆದು ಉದ್ದಿಮೆಗಳನ್ನು ನಡೆಸಬೇಕು.
ಕರ್ನಾಟಕ ಪೌರ ನಿಗಮಗಳ ಕಾಯ್ದೆ-1976ರ ನಿಯಮ 381(1) ರಂತೆ ಉದ್ದಿಮೆಗಳಲ್ಲಿ ಮಾಂಸ ಮಾರಾಟ ಮಾಡುವಾಗ ಮಾಂಸಗಳನ್ನು ಉದ್ದಿಮೆಯ ಮುಂಭಾಗ ಸಾರ್ವಜನಿಕರಿಗೆ ಪ್ರದರ್ಶಿಸುವ ಹಾಗೆ ನೇತು ಹಾಕದೇ, ಪರದೆ ಅಳವಡಿಸಿಕೊಂಡು ಅಥವಾ ಅಂಗಡಿಯ ಒಳಭಾಗದಲ್ಲಿ ಶೇಖರಿಸಿ ವ್ಯಾಪಾರ ಮಾಡಬೇಕು.
ಉದ್ದಿಮೆದಾರರು ತಾವು ನಡೆಸುತ್ತಿರುವ ಉದ್ದಿಮೆಗೆ ಪಡೆದಿರುವ ಪರವಾನಗಿಯಲ್ಲಿ ನಮೂದಿಸಿದ ಉತ್ಪನ್ನಗಳನ್ನು ಮಾತ್ರ ಮಾರಾಟ (ಕೋಳಿ ಮಾಂಸ ಮಾರಾಟಕ್ಕಾಗಿ ಪರವಾನಗಿ ಪಡೆದಿದ್ದಲ್ಲಿ ಕೋಳಿ ಮಾಂಸ ಹಾಗೂ ಸಂಬಂಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ) ಮಾಡತಕ್ಕದ್ದು ಹಾಗೂ ಉದ್ದಿಮೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸಬಾರದು. ಪಾರ್ಸಲ್ ಹಾಗೂ ಹೋಮ್ ಡೆಲವರಿ ಸೇವೆಗೂ ಪ್ಲಾಸ್ಟಿಕ್ ಬಳಸುವಂತಿಲ್ಲ. ನಿಯಮಗಳನ್ನು ಪಾಲಿಸದ ಉದ್ದಿಮೆಗಳ ವಿರುದ್ಧ ಕೆ.ಎಂ.ಸಿ ಕಾಯ್ದೆಯನ್ವಯ ಕ್ರಮವಹಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
