ಜಾಲಗುಣಿಯಲ್ಲಿ ಕನ್ನಂಬಾಡಿಗಿಂತಲೂ ದೊಡ್ಡ ಡ್ಯಾಂ..!!

ಎಂ ಎನ್ ಕೋಟೆ : 

      ಎತ್ತಿನಹೊಳೆ ಯೋಜನೆಯಲ್ಲಿ ಜಾಲಗುಣಿ ಗ್ರಾಮದಲ್ಲಿ ಡ್ಯಾಂ ನಿರ್ಮಿಸಿ, ಕನ್ನಂಬಾಡಿ ಕಟ್ಟೆಗಿಂತಲೂ ಹೆಚ್ಚು ನೀರು ನಿಲ್ಲುವಂತೆ ಮಾಡಿ, ಹಾಗಲವಾಡಿ ಭಾಗಕ್ಕೆ ನೀರು ಹರಿಸಲು ಯೋಜನೆ ತಯಾರಿಸಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ನಮ್ಮ ಭಾಗದ ಎಲ್ಲಾ ಕೆರೆಗಳು ತುಂಬಿ, ಮೈಸೂರಿಗಿಂತ ಸುಭಿಕ್ಷವಾದ ನಾಡಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

      ಅವರು ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ ಗ್ರಾಮದಲ್ಲಿ ಬುಧವಾರ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು. ನಹದಲಗೆರೆ, ಭೋಗಸಂದ್ರ ಮಾರ್ಗವಾಗಿ ಬರುವ ಮಧ್ಯದಲ್ಲಿ ಇಪ್ಪತ್ತೈದರಿಂದ ಮೂವತ್ತು ಅಡಿ ಆಳದಲ್ಲಿ ಹೇಮಾವತಿ ನೀರು ಒಂದೂವರೆ ಕಿಮೀನಷ್ಟು ದೂರ ಹರಿಯಬೇಕಿದ್ದು, ಪೈಪ್‍ಲೈನ್ ಮೂಲಕ ನೀರು ಹರಿಸಲು ಯೋಜನೆ ತಯಾರಿಸಲಾಗಿದೆ, ಆದ್ದರಿಂದ ಕಾಮಗಾರಿ ವಿಳಂಬವಾಗಿದ್ದು, ಆದಷ್ಟು ಬೇಗ ನೀರು ಹರಿಯುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದರು.

      ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ಕೋಟಿ ಹಣವನ್ನು ಮನೆ ಮನೆಗೂ ನಲ್ಲಿ ನೀರು ನೀಡಲು ಯೋಜನೆ ರೂಪಿಸಲಾಗಿದೆ. ಇದರಿಂದ ಎಲ್ಲರಿಗೂ ಉಪಯೋಗವಾಗುತ್ತದೆ. ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕ್ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹೊರಗಿನವರಿಗೆ ಆದ್ಯತೆ ನೀಡುವುದಿಲ್ಲ. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ತಾಲ್ಲೂಕಿನ ಎಲ್ಲ ಭಾಗದಲ್ಲಿಯೂ ನಮ್ಮ ಅಭ್ಯರ್ಥಿಗಳೆ ಸಾಕಷ್ಟು ಜನ ಆಕಾಂಕ್ಷಿಗಳು ಸಹ ಇದ್ದಾರೆ. ಮಾನದಂಡ ಅನುಸರಿಸಿ ಟಿಕೆಟ್ ನೀಡಲಾಗುತ್ತದೆ. ಕಳೆದ ಬಾರಿ ಮಾಡಿಕೊಂಡ ತಪ್ಪನ್ನು ಮತ್ತೆ ಮಾಡುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೇ ಆದ್ಯತೆ ನೀಡಲಾಗುತ್ತದೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ. ಅದು ಚುನಾವಣಾ ಅಧಿಕಾರಿಗಳಿಗೆ ಬಿಟ್ಟಿದ್ದು, ನನ್ನ ಮೇಲೆ ಗೂಬೆ ಕೊರಿಸುವುದು ಸರಿಯಲ್ಲ. ಸರ್ಕಾರ ನಮ್ಮದೆ ಇದ್ರೂ ಸಹ ನಾವು ಯಾವುದೇ ಮೀಸಲಾತಿ ಕೊಡಿ ಎಂದು ಕೇಳಿಲ್ಲ. ಇದರ ಬಗ್ಗೆ ಗೊಂದಲಬೇಡ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕ್ ಪಂಚಾಯಿತಿ ಚುನಾವಣೆಗೆ ಸಜ್ಜಾಗಿ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೆಟ್ಟಸ್ವಾಮಿ, ತಾಲ್ಲೂಕು ಮಾಜಿ ಸದಸ್ಯರಾದ ನೀಲಕಂಠಪ್ಪ. ದಯಾನಂದ್, ಮುಖಂಡರುಗಳಾದ ಮೆಡಿಕಲ್ ಬಾಬು, ಮೆಡಿಕಲ್ ಲೋಕೇಶ್, ಯರ್ರಪ್ಪ, ಶಿವಲಿಂಗಯ್ಯ, ಪ್ರಕಾಶ್, ಮಹಾದೇವಯ್ಯ, ಜಯಣ್ಣ, ಶ್ರೀನಕವಾಸ್, ಸಿದ್ಧರಾಜು, ಕೆಂಚಪ್ಪ, ಲೋಗನಾಥ್, ಗಳಿಗೇಕೆರೆ ಕುಮಾರ್, ಶಿವರುದ್ರಯ್ಯ, ಪಿಡಿಓ ಸಿದ್ದರಾಜು, ಎಂಜನಿಯರ್ ಸುರೇಶ್ ಹಾಗೂ ಗುತ್ತಿಗೆದಾರ ಪರಮೇಶ್ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ