ತುಮಕೂರು:-
ಒಂದಲ್ಲಾ ಎರಡಲ್ಲಾ, ಬರೋಬ್ಬರಿ 110 ಗ್ರಾಮಗಳು. ಈ ಗ್ರಾಮಗಳ ಸಾರ್ವಜನಿಕ ಪಾಡು ನಾಲ್ಕೈದು ತಿಂಗಳಿಂದ ಶಿವ ಶಿವ ಎನ್ನುವಂತಾಗಿದೆ. ಯಾಕೆ ಅಂತಾ ಕೇಳಿದ್ರೆ ನೀವು ಒಮ್ಮೆ ಆಶ್ವರ್ಯ ಪಡುತ್ತೀರಾ.ಇದು ಎಲ್ಲೋ ಬೇರೆ ರಾಜ್ಯದ ಕಥೆಯಲ್ಲ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗ್ರಾಮಸ್ಥರ ಪಾಡು. ಹೌದು, ಶಿರಾ ತಾಲೂಕಿನ ಬುಕ್ಕಾಪಟ್ಟಣ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿಯಾಗದೆ 110 ಗ್ರಾಮಸ್ಥರು ಪರದಾಡುತ್ತಿರುವ ಆರೋಪ ಕೇಳಿಬಂದಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯು ದೊಡ್ಡ ಹೋಬಳಿಯಾಗಿದ್ದು ಸುಮಾರು 110 ಹಳ್ಳಿಗಳು ಈ ಹೋಬಳಿಯ ನಾಡಕಚೇರಿಯ ವ್ಯಾಪ್ತಿಗೆ ಸೇರುತ್ತವೆ. ಆದರೆ, ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ನೊಂದಣಿ ಮಾಡಿಸಲು ಆಪರೇಟರ್ಗಳ ಕೊರತೆಯಿಂದಾಗಿ ಸುಮಾರು ನಾಲ್ಕೈದು ತಿಂಗಳಿಂದ ಜನ ಪರದಾಡುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯು ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಧಾರ್ ಕಾರ್ಡ್ ನೊಂದಣಿ ಮಾಡಿಸುವ ಅಧಿಕಾರಿ ಹೆರಿಗೆ ರಜೆಗೆಂದು ತೆರಳಿ ನಾಲ್ಕೈದು ತಿಂಗಳು ಕಳೆದರೂ ಸಹ ಈವರೆಗೆ ತಾಲೂಕು ಆಡಳಿತ ಅಥವಾ ಉಪ ತಾಹಸಿಲ್ದಾರ್ ಗಳು ಬುಕ್ಕಾಪಟ್ಟಣ ನಾಡಕಚೇರಿಗೆ ಆಧಾರ್ ಕಾರ್ಡ್ ಆಪರೇಟರ್ ಅನ್ನು ನೇಮಕ ಮಾಡಿಲ್ಲ ಅಥವಾ ಯಾರನ್ನು ಸಹ ನಿಯೋಜನೆ ಮಾಡಿಲ್ಲ. ಹೀಗಾಗಿ ಜನರು ಇನ್ನಿಲ್ಲದ ಯಾತನೆ ಅನುಭವಿಸುತ್ತಿರುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ತಿದ್ದುಪಡಿ ಮಾಡಿಸಲು ಜನ ಶಿರಾ ತಾಲೂಕು ಕೇಂದ್ರ ಅಥವಾ ಬೇರೆ ಬೇರೆ ಹೋಬಳಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಬುಕ್ಕಾಪಟ್ಟಣ ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಾರಂಭಿಸಬೇಕಾಗಿ ಸಾರ್ವಜನಿಕರು ಹೋಬಳಿಯ ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.
ಬುಕ್ಕಾಪಟ್ಟಣ ಒಂದು ಶಾಪಗ್ರಸ್ತ ಹೋ ಬಳಿಯಾಗಿದ್ದು ಇತ್ತ ಶಿರಾ ತಾಲೂಕಿನ ಆಡಳಿತಕ್ಕೂ ಬೇಡ ಅತ್ತಾ ಚಿಕ್ಕನಾಯಕನಹಳ್ಳಿ ತಾಲೂಕು ಬೇಡ ಎಂಬಂತಾಗಿದೆ ಆಡಳಿತಾತ್ಮಕವಾಗಿ ಮತ್ತು ವಿಧಾನಸಭಾ ವ್ಯಾಪ್ತಿಯಲ್ಲಿ ಬೇರೆ ಬೇರೆ ತಾಲೂಕು ಆಗಿರುವುದರಿಂದ ನಮ್ಮಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಅಧಿಕಾರಿಗಳು ಮನೋ ಬಂದಂತೆ ವರ್ತಿಸುತ್ತಿದ್ದಾರೆ ಆದಷ್ಟು ಬೇಗ ಆಧಾರ್ ಆಪರೇಟರ್ ನೇಮಿಸಬೇಕಾಗಿ ಗ್ರಾಮಸ್ಥರು ವಿನಂತಿ ಮಾಡಿಕೊಂಡಿದ್ದಾರೆ.