ತುಮಕೂರು : 2021-22ನೇ ಸಾಲಿನ ಬಜೆಟ್ ಮಂಡನೆಗೆ ಪಾಲಿಕೆ ಸಿದ್ದತೆ!

 ತುಮಕೂರು : 

      2021-22ನೇ ಸಾಲಿನಲ್ಲಿ ಅಂದಾಜು 213.86 ಕೋಟಿ ನಿರೀಕ್ಷೆ, 221.04 ಕೋಟಿ ವೆಚ್ಚ ನಿರೀಕ್ಷೆಯ ಬಜೆಟ್ ಮಂಡನೆಗೆ ತುಮಕೂರು ಮಹಾನಗರಪಾಲಿಕೆ ಸಿದ್ಧತೆ ನಡೆಸಿದ್ದು, ಕಳೆದ ಸಾಲಿಗಿಂತಲೂ ಹತ್ತು ಕೋಟಿ ಹೆಚ್ಚು ವೆಚ್ಚದ ಬಜೆಟ್ ಮಂಡಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ. ಮಾ.18ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಬಳಿಕ ಬಜೆಟ್ ಮಂಡನೆಗೆ ದಿನಾಂಕ ಗೊತ್ತುಪಡಿಸಲು ಪಾಲಿಕೆ ಆಡಳಿತ ತೀರ್ಮಾನಿಸಿದೆ.

      ಅಂದಾಜು ಆಯವ್ಯಯದಲ್ಲಿ ಪ್ರಮುಖವಾಗಿ 18 ಕೋಟಿ ವೇತನ ಅನುದಾನ, 5 ಕೋಟಿ ಎಸ್‍ಎಫ್‍ಸಿ ಮುಕ್ತ ಅನುದಾನ, 30 ಕೋಟಿ ಎಸ್‍ಎಫ್‍ಸಿ ವಿದ್ಯುತ್ ಶುಲ್ಕ ಅನುದಾನ ಎಸ್‍ಎಫ್‍ಸಿ ವಿಶೇಷ ಅನುದಾನ 10 ಕೋಟಿ, ಅಮೃತ ಸಿಟಿ ಅನುದಾನ ಮೂರು ಕೋಟಿ, 15ನೇ ಹಣಕಾಸು ಯೋಜನೆ ಅನುದಾನ 16 ಕೋಟಿ, 4ನೇ ಹಂತದ ನಗರೋತ್ಥಾನ ವಿಶೇಷ ಅನುದಾನ 40 ಕೋಟಿ, ರಾಯಗಾಲುವೆಗೆ ಸರಕಾರದಿಂದ ವಿಶೇಷ ಅನುದಾನದ 10 ಕೋಟಿ, ನಗರ ಮೂಲಕ ಸೌಕರ್ಯ ಮಂಡಳಿ ಸಾಲ ಪಾವತಿಗಾಗಿ 10 ಕೋಟಿ ಅನುದಾನ, ಆಸ್ತಿ ತೆರಿಗೆಯಿಂದ 32 ಆಸ್ತಿ ಹಕ್ಕು ಬದಲಾವಣೆ 1 ಕೋಟಿ,ರಸ್ತೆ ಕಟಿಂಗ್ ಫೀ 1ಕೋಟಿ, ಯುಜಿಡಿ ಸಂಪರ್ಕ 1 ಕೋಟಿ…, ಉದ್ದಿಮೆಗಳ ಪರವಾನಗಿ 1,50 ಕೋಟಿ, ಕುಡಿಯುವ ನೀರಿನ ಶುಲ್ಕದಿಂದ 12 ಕೋಟಿ.., ಜಾಹೀರಾತು ತೆರಿಗೆ 15ಲಕ್ಷ.., ಹೀಗೆ ವಿವಿಧ 41 ಆದಾಯ ಮೂಲಗಳಿಂದ 213.86 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.

ಡಿಸೆಂಬರ್ ಅಂತ್ಯಕ್ಕೆ ಶೇ.50ರಷ್ಟು ಆದಾಯ ಸಂಗ್ರಹವಾಗಿರಲಿಲ್ಲ:

     ಕಳೆದ 2020-21ನೇ ಸಾಲಿನಲ್ಲಿ 202.03 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ ಪರಿಣಾಮ ಸಂಪನ್ಮೂಲ ಕ್ರೂಢೀಕರಣದಲ್ಲಾದ ಕೊರತೆ ಸರಕಾರದ ಅನುದಾನ ಕಳೆದ ಡಿಸೆಂಬರ್ ಅಂತ್ಯದವೇಳೆಗೆ 88 ಕೋಟಿ 87 ಲಕ್ಷದ 79 ಸಾವಿರ ಮಾತ್ರ ಸಂಗ್ರಹವಾಗಿದ್ದು, ನಿರೀಕ್ಷಿತ ಗುರಿಯಲ್ಲಿ ಶೇ.50ಕ್ಕಿಂತಲೂ ಕಡಿಮೆ ಸಂಗ್ರಹವಾಗಿತ್ತು. ಈ ಬಾರಿ 221.04 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಕಳೆದ ಬಾರಿ ನಗರೋತ್ಥಾನ 14ನೇ ಹಣಕಾಸು, ರೇ ಯೋಜನೆ ಮತ್ತಿತರ ಅನುದಾನಗಳು ಬಾರದ ಕಾರಣ ಈ ಸಾಲಿನಲ್ಲೂ ನಿರೀಕ್ಷಿತ ವೆಚ್ಚದಷ್ಟು ಅನುದಾನ ಸಿಗಲಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

 ವೆಚ್ಚದಲ್ಲಿ ಶೇ8ರಷ್ಟು ಸಿಬ್ಬಂದಿ ವೇತನಕ್ಕೆ:

      ಪಾಲಿಕೆ ಬಜೆಟ್‍ನ ಒಟ್ಟು ವೆಚ್ಚದ ಶೇ.8ರಷ್ಟು ಅಂದರೆ 18 ಕೋಟಿಯಷ್ಟು ಸಿಬ್ಬಂದಿ ವೇತನಕ್ಕೆ ಬಳಕೆಯಾಗಲಿದ್ದು, ಪ್ರಯಾಣಭತ್ಯೆ/ಇಂಧನ ವೆಚ್ಚ 10 ಲಕ್ಷ ದೂರವಾಣಿ, ವಿದ್ಯುತ್ ಶುಲ್ಕ, ಅಂಚೆವೆಚ್ಚಗಳು, ಮುದ್ರಣ ವೆಚ್ಚ, ಪತ್ರಿಕಾ ಪ್ರಕಟಣೆಗಾಗಿ 50 ಲಕ್ಷ, ಹೊರಗುತ್ತಿಗೆ ವೇತನ ಕಂಪ್ಯೂಟರ್ ಆಪರೇಟರ್ಸ್‍ಗಳಿಗಾಗಿ 80 ಲಕ್ಷ, ವಾಹನ ವಿಮೆ, ಬಾಡಿಗೆ ವಾಹನ ಸೇರಿ 45 ಲಕ್ಷ, ಸಾಂಸ್ಕøತಿಕ ವಂತಿಕೆ 5 ಲಕ್ಷ ರಾಜ್ಯ ಸರಕಾರಕ್ಕೆ ಸಂದಾಯ ಮಾಡಬೇಕಾದ ಕರಗಳಲ್ಲಿ 6.60 ಲಕ್ಷ, 3ನೇ ವ್ಯಕ್ತಿ ತಪಾಸಣೆ, ಆಡಿಟ್‍ಫೀ, ಸಲಹೆಗಾರರ ಸಂಭಾವನೆ 60 ಲಕ್ಷ, ಕಾಯಿದೆ ವೆಚ್ಚಗಳು 30 ಲಕ್ಷ, ನಗರಪಾಲಿಕೆ ಕಟ್ಟಡಗಳ ನಿರ್ವಹಣೆ 1 ಕೋಟಿ, ಭೂಸ್ವಾಧೀನ ವೆಚ್ಚ 2 ಕೋಟಿ, ಪಾಲಿಕೆ ಕಟ್ಟಡ, ಸಮುದಾಯ ಭವನ ನಿರ್ಮಾಣಕ್ಕೆ 2.50 ಕೋಟಿ, ಪೀಠೋಪಕರಣ ಖರೀದಿಗೆ 50 ಲಕ್ಷ, ಕಂಪ್ಯೂಟರ್ಸ್ ತಂತ್ರಾಂಶಗಳ ಖರೀದಿಗೆ 50 ಲಕ್ಷ, ವಾಹನಗಳ ಖರೀದಿ 50 ಲಕ್ಷ, ಇತರೆ ಕಚÉೀರಿ ವೆಚ್ಚ 50 ಲಕ್ಷ, ಪಾಲಿಕೆ ಆಸ್ತಿ ಗುರುತಿಸಿ ಸಂರಕ್ಷಣೆಗೆ 2 ಕೋಟಿ, ನೀರು ಸರಬರಾಜು ಹೊರಗುತ್ತಿಗೆ ನೌಕರರ ವೇತನಕ್ಕೆ 4.10 ಕೋಟಿ. ಪೌರಕಾರ್ಮಿಕರಿಗೆ 52 ಮನೆಗಳ ನಿರ್ಮಾಣಕ್ಕೆ 1.50 ಕೋಟಿ, ಸಾಮಾನ್ಯ ದಾಸ್ತಾನು 48.41 ಲಕ್ಷ, ಉದ್ಯಾನವನಗಳ ನಿರ್ವಹಣೆ ಅಭಿವೃದ್ಧಿಗೆ 4 ಕೋಟಿ ಎಸ್-ಎಸ್‍ಟಿ ಜನಾಂಗದ ಅಭಿವೃದ್ಧಿಗೆ 2.50 ಕೋಟಿ, ಹಿಂದುಳಿಗ ವರ್ಗಗಳ ಅಭಿವೃದ್ಧಿಗೆ 90 ಲಕ್ಷ ದಿವ್ಯಾಂಗ ಚೇತನರಿಗೆ ನೆರವು 50 ಲಕ್ಷ, ಕ್ರೀಡಾ ಚಟುವಟಿಕೆಗೆ 5 ಲಕ್ಷ, ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ 25 ಲಕ್ಷ.., ಹೀಗೆ ವಿವಿಧ ಕಾರ್ಯಕ್ರಮಯೋಜನೆಗಳಡಿ ವೆಚ್ಚಕ್ಕೆ ಅಂದಾಜು ಮಾಡಲಾಗಿದೆ.

 
ಬಜೆಟ್ ಅಂದರೆ ಬದ್ದತೆಯಲ್ಲವೇ?

     ಸರಕಾರ, ಸ್ಥಳೀಯ ಸಂಸ್ಥೆಗಳ ಬಜೆಟ್ ಅಂದರೆ ಬದ್ದತೆಯೇ ಹೊರತು ಭರವಸೆಯಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಘೋಷಣೆಗಳು ಭರವಸೆಯಾಗಿಯೇ ಉಳಿಯುತ್ತಿವೆ ಎನ್ನುವುದಕ್ಕೆ ತುಮಕೂರು ಮಹಾನಗರಪಾಲಿಕೆ ಬಜೆಟ್ ಸಹ ನಿದರ್ಶನವಾಗಿದೆ. ಕಳೆದ ಸಾಲಿನಲ್ಲಿ ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ 25 ಲಕ್ಷ ಮೀಸಲಿರಿಸಲಾಗಿತ್ತು. ಆದರೆ ಅದು ಡಿಸೆಂಬರ್ ಅಂತ್ಯದವರೆಗೆ ಖರ್ಚೇ ಮಾಡಿಲ್ಲ. ಗ್ರಂಥಾಲಯಗಳ ಮೂಲ ಸೌಕರ್ಯಕ್ಕಾಗಿ 35 ಲಕ್ಷ ತೆಗೆದಿರಿಸಿದ್ದ ಹಣ ಸಹ ಖರ್ಚಾಗಿಲ್ಲ. ಪಾಲಿಕೆ ಸನಿಹದಲ್ಲಿರುವವನಗರಕೇಂದ್ರ ಗ್ರಂಥಾಲಯ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಹಿಂದಿನ ಮೇಯರ್ ಫರೀದಾಬೇಗಂ ಖುದ್ದು ಪರಿಶೀಲನೆ ನಡೆಸಿ ದುರಸ್ತಿಗೆ ಸೂಚಿಸಿದ್ದರೂ ಕ್ರಮವಾಗಿಲ್ಲ.ಇಂತಹ ನಿರ್ಲಕ್ಷ್ಯತೆಗಳು ಬಜೆಟ್ ಅಂದರೆ ಬದ್ದತೆಯಲ್ಲವೇ ಎಂಬ ಪ್ರಶ್ನೆಗಳನ್ನು ಪ್ರಜ್ಞಾವಂತರು ಕೇಳುವಂತೆ ಮಾಡಿದೆ.
 
ಅನುದಾನ ಬಾರದಿದ್ದರೆ ರಾಯಗಾಲುವೆ ಅಭಿವೃದ್ಧಿ ಮರೀಚಿಕೆಯೇ?

      ಈ ಬಾರಿಯ ಬಜೆಟ್‍ನಲ್ಲಿ ವಿಶೇಷವಾಗಿ ತುಮಕೂರು ನಗರ ವ್ಯಾಪ್ತಿಯ ರಾಯಗಾಲುವೆಗಳ ಅಭಿವೃದ್ಧಿಗೆಂದು ಸರಕಾರದಿಂದ 10 ಕೋಟಿ ಅನುದಾನ ನಿರೀಕ್ಷಿಸಿ ವೆಚ್ಚಕ್ಕೆ ಅಂದಾಜಿಸಲಾಗಿದೆ. ರಾಜ್ಯ ಸರಕಾರದಿಂದ ಈ ಅನುದಾನ ನಿರೀಕ್ಷಿಸಿದ್ದು, ಸರಕಾರ ಒಂದು ವೇಳೆ ಈ ಅನುದಾನ ಒದಗಿಸಿದಿದ್ದರೆ ನಗರದಲ್ಲಿ ಒತ್ತುವರಿಯಾಗಿರುವ ರಾಯಗಾಲುವೆಗಳು ತೆರವಾಗಿ ಅಭಿವೃದ್ಧಿ ಆಗುವುದಿಲ್ಲವೇ? ಮತ್ತೆ ಯಥಾ ಸ್ಥಿತಿಯಲ್ಲೇ ಉಳಿಯುವುದೇ ಎಂಬ ಪ್ರಶ್ನೆ ಮೂಡಿಸಿದೆ. ಸರಕಾರದ ಆದಾಯ ಬರಲಿ, ಬಿಡಲಿ ಮಳೆ ನೀರನ್ನು ಸದ್ಬಳಕೆ ಮಾಡುವ ದಿಸೆಯಲ್ಲಿ ರಾಯಗಾಲುವೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಪಾಲಿಕೆಯ ಸ್ವಂತ ಅನುದಾನದಲ್ಲಿ ಮುಂದಾಗಬೇಕೆಂದು ನಾಗರಿಕರ ಒತ್ತಾಯವಾಗಿದೆ.

ಕೋವಿಡ್ 2ನೇ ಅಲೆ; ಅನುದಾನ ಮೀಸಲು ಅಗತ್ಯ

      ಕೋವಿಡ್ 2ನೇ ಅಲೆ ಆತಂಕ ಎದುರಾಗಿದ್ದು, ಈ ಸಂದರ್ಭದಲ್ಲಿ ಪಾಲಿಕೆ ಆಡಳಿತ ಬಜೆಟ್‍ನಲ್ಲಿ ಮುಂಜಾಗ್ರತೆ ಕ್ರಮವಾಗಿ ಕೋವಿಡ್ ನಿಯಂತ್ರಣ ಚಟುವಟಿಕೆಗಳು, ಮುಂದೆ ಲಾಕ್‍ಡೌನ್ ಮತ್ತಿತರ ತುರ್ತು ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿ ನಾಗರಿಕರಿಗೆ ನೆರವಾಗಲು ಇಂತಿಷ್ಟು ಅನುದಾನ ಮೀಸಲಿಡುವುದು ಅಗತ್ಯವಾಗಿದೆ.

      2020-21ನೇ ಸಾಲಿನಲ್ಲಿ ಬಜೆಟ್ ಮಂಡನೆಗೆ ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿದ್ದು, ಅಂದಾಜು ಪಟ್ಟಿ ತಯಾರಿಸಲಾಗಿದೆ. ಮಾ.18ರ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಬಳಿಕ ಬಜೆಟ್ ಮಂಡನೆ ದಿನಾಂಕ ನಿಗದಿಪಡಿಸಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಹೆಚ್ಚಿನ ಹೊರೆಯಾಗದಂತಹ ಬಜೆಟ್ ಮಂಡನೆ ಮಾಡಲಾಗುವುದು. ಈ ಸಂಬಂಧ ಸದಸ್ಯರು, ಶಾಸಕರು, ಸಂಸದರು, ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಆಲಿಸಲಾಗಿದ್ದು, ನಗರದ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆಯಾಗುವ ವಿಶ್ವಾಸವಿದೆ.

-ಬಿ.ಜಿ.ಕೃಷ್ಣಪ್ಪ, ಮೇಯರ್, ತುಮಕೂರು ಮಹಾನಗರಪಾಲಿಕೆ.

 

ಎಸ್.ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link
Powered by Social Snap