ತುಮಕೂರು : ಖಾಸಗಿ ಬಸ್ ಏಜೆಂಟರು, ಕ್ಲೀನರ್ ಗಳು ಕೂಲಿ ಕೆಲಸಕ್ಕೆ !!

ತುಮಕೂರು :

      ಗ್ರಾಮಾಂತರ ಪ್ರದೇಶಗಳ ಜನರ ಸಂಚಾರಕ್ಕೆ ನರನಾಡಿಗಳಂತೆ ದುಡಿಯುತಿದ್ದ ಖಾಸಗಿ ಬಸ್ ಮಾಲೀಕರು, ಕಾರ್ಮಿಕರ ಬದುಕೀಗ ಸಂಕಷ್ಟದಲ್ಲಿದೆ. ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೋನಾ ಬಸ್ ಮಾಲೀಕರು, ಕಾರ್ಮಿಕರ ದುಡಿಮೆಗೆ ಬರೆ ಎಳೆದಿದೆ. ಖಾಸಗಿ ಬಸ್ ವಲಯವನ್ನೆ ನಂಬಿ ಬದುಕು ಸಾಗಿಸುತ್ತಿದ್ದವರು ಜೀವನ ನಿರ್ವಹಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಲಾಕ್‍ಡೌನ್ ಮುಗಿದು ಅನ್‍ಲಾಕ್ ಬಂದರೂ ಡಿಸೇಲ್ ಬೆಲೆ ಏರಿಕೆ, ಮೂರನೇ ಅಲೆಯ ಮುನ್ಸೂಚನೆ, ಪ್ರಯಾಣಕ್ಕೆ ಜನರ ನಿರಾಸಕ್ತಿ, ಸರ್ಕಾರದ ನೆರವು ಇಲ್ಲದಿರುವುದು ಮೊದಲಾದ ಸಮಸ್ಯೆಗಳಿಂದಾಗಿ ಮುಗ್ಗರಿಸಿ ಬಿದ್ದಿರುವ ಖಾಸಗಿ ಬಸ್ ಸಾರಿಗೆಯು ಎಂದಿನಂತೆ ಮತ್ತೆ ಹಳಿಗೆ ಬರಲು ತಿಣುಕಾಡುತ್ತಿದೆ.

     ಮಾಲೀಕರಗೆ ಹೊರೆಯಾದ ಬಸ್‍ಗಳು :

      ಜಿಲ್ಲೆಯಲ್ಲಿ ಸುಮಾರು 200-250 ಕ್ಕೂ ಅಧಿಕ ಪರ್ಮೀಟ್ ಹೊಂದಿರುವ ಖಾಸಗಿ ಬಸ್‍ಗಳು, 180 ಜನ ಮಾಲೀಕರು ಇದ್ದಾರೆ. ಕೊರೊನಾ ಎಫೆಕ್ಟ್‍ನಿಂದ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರ ಹಿನ್ನೆಲೆಯಲ್ಲಿ ಲಕ್ಷಾಂತರ ರೂ. ಬಂಡವಾಳ ಹಾಕಿರುವ ಖಾಸಗಿ ಬಸ್‍ಗಳ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದು, ಬ್ಯಾಂಕ್‍ಗಳಿಂದ ಸಾಲ ಮಾಡಿರುವ ಬಾಕಿ ಹಣ ಹಾಗೂ ಬಡ್ಡಿ ಪಾವತಿ ಮಾಡಲು, ಟ್ಯಾಕ್ಸ್, ವಿಮೆ ಪಾವತಿಸಲು ಕಷ್ಟಕರವಾಗಿದೆ.

      ಪದೆ ಪದೆ ಲಾಕ್‍ಡೌನ್ ಆಗಿದ್ದರಿಂದಾಗಿ ಕೆಲವು ಬಸ್‍ಗಳು ನಿಂತಲ್ಲೆ ನಿಂತು ತುಕ್ಕು ಹಿಡಿಯುವ ಹಂತದಲ್ಲಿವೆ. ಈಗ ಬಸ್ ಸಂಚಾರ ಮರು ಆರಂಭಿಸಬೇಕಾದರೇ ಪ್ರತಿ ಬಸ್‍ಗೂ ಕನಿಷ್ಠ 1.5 ಲಕ್ಷ ರೂ. ಖರ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಮಾಲೀಕರು ಬಂದಿರುವುದು ಕಂಡು ಬರುತ್ತಿದೆ.

      ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ನೀತಿ ಅಡಿ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳನ್ನು ಸ್ಕ್ರ್ಯಾಪ್‍ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ. ಕೊರೋನಾದಿಂದ 2 ವರ್ಷ ಸರಿಯಾಗಿ ದುಡಿಮೆ ಇಲ್ಲದ ಖಾಸಗಿ ಬಸ್ ಮಾಲೀಕರಿಗೆ ಈ ನಿಯಮ ಕೂಡ ಅನಾನುಕೂಲಕಾರಿಯಾಗಿದ್ದು, ನಿಯಮದಿಂದ 2 ವರ್ಷ ರಿಯಾಯಿತಿ ಕೊಡಬೇಕು ಎಂಬ ಕೂಗು ಖಾಸಗಿ ಬಸ್ ಸಂಘಟನೆಗಳಿಂದ ಕೇಳಿ ಬಂದಿದೆ.

       ಏಜೆಂಟರು ಕೂಲಿ ಕೆಲಸಕ್ಕೆ : ಸರ್ಕಾರಿ ಸಾರಿಗೆ ಬಸ್‍ಗಳು ಅಷ್ಟೇನೂ ಸಂಚರಿಸದ ಕಾಲದಲ್ಲಿ ಸಾರ್ವಜನಿಕ ಪ್ರಯಾಣ ಕ್ಷೇತ್ರದಲ್ಲಿ ಖಾಸಗಿ ಬಸ್‍ಗಳದೇ ಪಾರುಪತ್ಯ. ತಮ್ಮದೇ ವ್ಯವಹಾರಿಕ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದ ಏಜೆಂಟರುಗಳು ಯಾವ ಸರ್ಕಾರಿ ನೌಕರರಿಗೂ ಕಡಿಮೆ ಇಲ್ಲದಂತೆ ಬದುಕುತ್ತಿದ್ದರು. ತಮಿಳುನಾಡಿನಲ್ಲಿ ಕಲೆಕ್ಟರ್ ಆಗೋದು ಒಂದೆ, ಕರ್ನಾಟಕದಲ್ಲಿ ಕಂಡಕ್ಟರ್ ಆಗೋದು ಒಂದೆ ಎಂಬ ಮಾತು ದಶಕಗಳ ಹಿಂದೆ ಚಾಲ್ತಿಯಲ್ಲಿತ್ತು. ಸರ್ಕಾರ ಯಾವಾಗ ತನ್ನ ನಿಗಮಗಳಿಂದ ಹಳ್ಳಿ ಹಳ್ಳಿಗಳಿಗೂ ಬಸ್ ಬಿಟ್ಟಿತೊ ಅಲ್ಲಿಂದ ಶುರುವಾದ ಖಾಸಗಿ ಬಸ್ ನಂಬಿದವರ ಸಂಕಷ್ಟ ಈಗ ಕೊರೋನಾದಿಂದಾಗಿ ಕುತ್ತಿಗೆಗೆ ಸುತ್ತಿಕೊಂಡು ಉಸಿರಾಡದಂತೆ ಮಾಡಿದೆ. ಒಂದು ಕಾಲದಲ್ಲಿ ದಿಲ್‍ದಾರ್‍ರಂತಿದ್ದ ಖಾಸಗಿ ಬಸ್‍ಗಳ ಏಜೆಂಟರು ಇಂದು ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಗಾರೆ ಕೆಲಸ, ಕೂಲಿ, ಕಾಫಿ-ಟೀ, ತರಕಾರಿ, ಹಣ್ಣಿನ ವ್ಯಾಪಾರ ಮೊದಲಾದ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದಾರೆ. ಕ್ಲಿನರ್‍ಗಳು, ಇತರೆ ಕಾರ್ಮಿಕರು ಸಿಕ್ಕ ಯಾವುದೇ ಕೆಲಸವನ್ನು ಮಾಡುತ್ತಿದ್ದು ಬದುಕಿನ ಬಂಡಿ ಎಳೆಯಲು ತಿಣುಕಾಡುತ್ತಿದ್ದಾರೆ.

      ಯಾವುದೇ ಭದ್ರತೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಇವರ ಪಾಡು ಹೇಳತೀರದಾಗಿದೆ. ಖಾಸಗಿ ಬಸ್‍ಗಳನ್ನೆ ನಂಬಿದ್ದ ಜಿಲ್ಲೆಯ ಸುಮಾರು 5-6 ಸಾವಿರ ಕುಟುಂಬಗಳು ತೊಂದರೆಗೆ ಒಳಗಾಗಿವೆ. ರಾಜ್ಯ ಸರಕಾರ ಕಾರು, ಟ್ಯಾಕ್ಸಿ, ಸೇರಿದಂತೆ ಇತರೆ ವರ್ಗದವರಿಗೆ ಪ್ಯಾಕೇಜ್ ಘೋಷಿಸಿದೆ. ಆದರೆ ಖಾಸಗಿ ಬಸ್ಸುಗಳ ಸಿಬ್ಬಂದಿಯ ಬಗ್ಗೆ ನಿರ್ಲಕ್ಷ್ಯ ತೋರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

   ಕೆಎಸ್ಸಾರ್ಟಿಸಿಯಿಂದ ಬೆಲೆ ಸಮರ :

      ಲಾಕ್‍ಡೌನ್‍ನಲ್ಲಿ ನಷ್ಟದಲ್ಲಿದ್ದ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಅನ್‍ಲಾಕ್‍ನಲ್ಲಿ ಸರಿ ದಾರಿಗೆ ತರುವ ಜೊತೆಗೆ ಎಲ್ಲೆಲ್ಲಿ ಹೆಚ್ಚು ಖಾಸಗಿ ಬಸ್‍ಗಳು ಸಂಚರಿಸುತ್ತವೊ ಅಲ್ಲೆಲ್ಲ ಖಾಸಗಿ ಬಸ್‍ಗಳ ಪ್ರಯಾಣ ದರಕ್ಕಿಂತಲೂ ಕಡಿಮೆ ದರವನ್ನು ಸರ್ಕಾರಿ ಬಸ್‍ಗಳಲ್ಲಿ ನಿಗದಿ ಪಡಿಸಿ ಖಾಸಗಿ ಬಸ್‍ಗಳನ್ನು ಪರ್ಮನೆಂಟಾಗಿ ಶೆಡ್ಡಿಗೆ ಕಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಆರೋಪಿಸಿದ್ದಾರೆ. ಇದರಿಂದ ಸರ್ಕಾರಿ ಮತ್ತು ಖಾಸಗಿ ಬಸ್‍ಗಳ ನಡುವೆ ದರ ಸ್ಪರ್ಧೆ ಏರ್ಪಟ್ಟು ಜನರು ಯಾರು ಕಡಿಮೆ ಟಿಕೇಟ್ ದರಕ್ಕೆ ಕರೆದು ಕೊಂಡು ಹೋಗುತ್ತಾರೋ ಆ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಡಿಸೇಲ್ ಬೆಲೆ ಗಗನಕ್ಕೆ :

      ಖಾಸಗಿ ಬಸ್‍ಗಳು ಈ ಹಿಂದೆ ಪ್ರಯಾಣದ ದರ ನಿಗದಿ ಮಾಡುವಾಗ ಡಿಸೇಲ್ ಬೆಲೆ 74 ರೂ. ಇತ್ತು. ಈಗ ಡಿಸೇಲ್ ಬೆಲೆ ಪ್ರತಿ ಲೀಟರ್‍ಗೆ 25-30 ರೂ. ಹೆಚ್ಚಾಗಿ 100 ರೂ. ಗಡಿ ಸಮೀಪವಿದ್ದು ಬೆಲೆ ಗಗನ ಮುಟ್ಟಿದೆ. ಹಳೆ ಪ್ರಯಾಣ ದರಗಳಲ್ಲೆ ಬಸ್‍ಗಳನ್ನು ಓಡಿಸಿದರೆ ನಷ್ಟ ಎದುರಿಸಿ ನೆಲ ಹಿಡಿಯುವ ಭೀತಿ ಮಾಲೀಕರನ್ನು ಕಾಡುತ್ತಿದೆ. ಸದ್ಯ ಆಷಾಡ ಮಾಸ ಸಮೀಪವಿದ್ದು ಜನರ ಸಂಚಾರ ವಿರಳವಾಗಿದೆ. ಜೊತೆಗೆ ಮೂರನೇ ಅಲೆಯ ಭಯ ಬೇರೆ. ಇಂತಹ ಸಂದರ್ಭದಲ್ಲಿ ಬಸ್‍ಗಳನ್ನು ರಸ್ತೆಗಿಳಿಸಿದರೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಅಳೆದು ತೂಗುತ್ತಿರುವ ಹಲವು ಮಾಲೀಕರು ಬಸ್‍ಗಳನ್ನು ಆತುರವಾಗಿ ರಸ್ತೆಗಿಳಿಸದೆ ಸಮಯ, ಸಂದರ್ಭ ಎದುರು ನೋಡುತ್ತಿದ್ದಾರೆ.

ಸರ್ಕಾರ ನೆರವಿಗೆ ಧಾವಿಸಲಿ :

      ರಾಜ್ಯ ಸರ್ಕಾರವು ಲಾಕ್‍ಡೌನ್‍ನಿಂದಾಗಿ ನಷ್ಟದಲ್ಲಿದ್ದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪುನಶ್ಚೇತನ ನೀಡಲು ಕೆಎಸ್ಸಾರ್ಟಿಸಿ ನಿಗಮಕ್ಕೆ 2500 ಕೋಟಿ ರೂ.ನಷ್ಟು ಸಹಾಯ ಧನ ನೀಡಿದೆ. ಆದರೆ ಖಾಸಗಿ ಬಸ್‍ಗಳನ್ನು ಮರು ಆರಂಭಿಸಲು ಸರ್ಕಾರ ಯಾವುದೇ ರೀತಿಯ ನೆರವು ನೀಡಿಲ್ಲ. ಇದಲ್ಲದೇ ಸುಮಾರು 6 ತಿಂಗಳ ತೆರಿಗೆ ಬಾಕಿಯಾಗಿದ್ದು, ಬಸ್‍ಗಳು ದುಡಿಮೆ ಇಲ್ಲದೇ ನಿಂತಿದ್ದ ಕಾರಣ ಈ ಹಣವನ್ನು ಮಾಲೀಕರೆ ಭರಿಸಬೇಕಾಗಿದೆ. ಕನಿಷ್ಠ ಈ ತೆರಿಗೆಯನ್ನಾದರೂ ಮನ್ನಾ ಮಾಡಬೇಕೆಂದು ಬಸ್ ಮಾಲೀಕರು ಅಲವತ್ತುಕೊಂಡಿದ್ದಾರೆ.

      ಮಾಲೀಕರು ಪಾವತಿಸಬೇಕಾದ ತೆರಿಗೆ ಹಾಗೂ ವಿಮೆ ಹಣವನ್ನು ಪಾವತಿ ಮಾಡುವ ವಿಷಯದಲ್ಲಿ ವಿನಾಯಿತಿ ನೀಡಬೇಕು. ಚಾಲಕರು, ನಿರ್ವಾಹಕರು, ಕ್ಲೀನರ್‍ಗಳು ಕೆಲಸವಿಲ್ಲದೆ ಪರದಾಡುತ್ತಿದ್ದು, ಇವರ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ. ಇವರಿಗೆ ಸರಕಾರ ಕೂಡಲೇ ಸಹಾಯ ಧನ ಹಾಗೂ ಆಹಾರದ ಕಿಟ್‍ಗಳನ್ನು ವಿತರಣೆ ಮಾಡಬೇಕು ಎಂಬ ಒತ್ತಾಯ ಖಾಸಗಿ ಬಸ್‍ಗಳ ಮಾಲೀಕರು ಮತ್ತು ಕಾರ್ಮಿಕ ಸಂಘಟನೆಗಳಿಂದ ಬಲವಾಗಿ ಕೇಳಿ ಬಂದಿದೆ.

      ಲಾಕ್‍ಡೌನ್ ಸಂದರ್ಭದಲ್ಲಿ ಬಸ್‍ನ ದಾಖಲೆಗಳನ್ನು ಆರ್‍ಟಿಓ ಕಚೇರಿಗೆ ಒಪ್ಪಿಸಿದವರಿಗೆ ಮಾತ್ರ ಸರ್ಕಾರ ತೆರಿಗೆ ರಿಯಾಯಿತಿ ನೀಡಿದೆ. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಸರ್ಕಾರವು ಖಾಸಗಿ ಬಸ್‍ಗಳ ಆರು ತಿಂಗಳ (2 ಕ್ವಾಟರ್) ತೆರಿಗೆಯನ್ನು ಮನ್ನಾ ಮಾಡಿದೆ. ನಮ್ಮ ರಾಜ್ಯದಲ್ಲಿ ಸರ್ಕಾರ ಖಾಸಗಿ ಬಸ್‍ಗಳ ನೆರವಿಗೆ ಯಾವುದೇ ಕ್ರಮ ಕೈ ಗೊಂಡಿಲ್ಲ. ಒಂದು ಬಸ್ ಚಾಲನೆಗೊಳಿಸಲು ದಿನವೊಂದಕ್ಕೆ 25-30 ಸಾವಿರ ರೂ. ಖರ್ಚು ಬರುತ್ತದೆ. ನಿಂತಲ್ಲೆ ನಿಲ್ಲಲಿ ಎಂದು ಬಿಟ್ಟರೆ ಬಸ್‍ಗಳು ಹಾಳಾಗುತ್ತವೆ. ಈ ಎಲ್ಲಾ ಸಮಸ್ಯೆಗಳ ನಡುವೆ ತೈಲ ಬೆಲೆ ಏರಿಕೆಯು ಖಾಸಗಿ ಬಸ್ ನಂಬಿದ್ದವರಿಗೆ ಗಾಯದ ಮೇಲೆ ಬರೆ ಎಳೆದಿದೆ.

-ಆರೀಫ್ ಉಲ್ಲಾ, ಖಾಸಗಿ ಬಸ್ ಮಾಲೀಕರು

 ಕೊರೋನಾದಿಂದಾಗಿ ದಿನಗೂಲಿ ಕಾರ್ಮಿಕರಂತಿದ್ದ ಖಾಸಗಿ ಬಸ್ ಏಜೆಂಟರು, ಕ್ಲೀನರ್‍ಗಳ ಪಾಡು ಅತ್ಯಂತ ನಿಕೃಷ್ಟವಾಗಿದೆ. ಸರ್ಕಾರ ರೇಷನ್ ಕಾರ್ಡ್ ಅಕ್ಕಿ ಕಡಿತಗೊಳಿಸಿರುವುದರಿಂದ ಒಪ್ಪೊತ್ತಿನ ಊಟಕ್ಕೂ ಪರಿ ತಪಿಸುವಂತಾಗಿದೆ. ಸರ್ಕಾರದಿಂದ ಯಾವುದೇ ನೆರವು, ಪರಿಹಾರ ಸಿಕ್ಕಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಬದುಕು ಕಷ್ಟ ಎನಿಸುತ್ತಿದೆ. ಜೀವನ ನಿರ್ವಹಣೆಗೆ ನಾನೀಗ ಗಾರೆ ಕೆಲಸಕ್ಕೆ ಹೋಗುತ್ತಿದ್ದೇನೆ. ನಾವೆಂದು ಈ ತರಹದ ಕೆಲಸ ಮಾಡಿದವರಲ್ಲ. ಏನು ಮಾಡುವುದು ಬದುಕಬೇಕಲ್ಲ.

-ಲಕ್ಷ್ಮೀಕಾಂತ್, ಖಾಸಗಿ ಬಸ್ ಏಜೆಂಟ್, ಹುಳಿಯಾರು

       ತೈಲ ಬೆಲೆ ಏರಿಕೆಯಿಂದ ಖಾಸಗಿ ಬಸ್ ಮಾಲೀಕರು ಸಂಕಷ್ಟದಲ್ಲಿದ್ದು ಪ್ರಯಾಣ ದರ ಏರಿಕೆ ಮಾಡುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ. ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣ ದರವು ಡಿಸೇಲ್ ಬೆಲೆ 70 ರೂ. ಇದ್ದಾಗ ಏರಿಕೆ ಆಗಿದ್ದು, ಈಗ ತೈಲ ಬೆಲೆ 100 ರೂ ಗಡಿ ಸಮೀಪವಿದ್ದರೂ ಸರ್ಕಾರಿ ಬಸ್ ಟಿಕೇಟ್ ದರ ಏರಿಕೆ ಆಗಿಲ್ಲ. ತೈಲ ಬೆಲೆಗಳ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಸರ್ಕಾರವು ತನ್ನ ಸಾರಿಗೆ ಬಸ್‍ಗಳ ನಷ್ಟವನ್ನು ಸರಿದೂಗಿಸಿಕೊಳ್ಳುತ್ತದೆ. ಆದರೆ ಜೀವನೋಪಾಯಕ್ಕೆ ಬಸ್ ನಂಬಿರುವ ಮಾಲೀಕರು ಮತ್ತು ಕಾರ್ಮಿಕರು ಏನು ಮಾಡಬೇಕು? ಹಾಗಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

-ಬಲ ಶ್ಯಾಮ್ ಸಿಂಗ್, ಮಾಜಿ ಅಧ್ಯಕ್ಷರು, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ

       ಖಾಸಗಿ ಬಸ್‍ಗಳು ಕಳೆದ ಮೇ ತಿಂಗಳಲ್ಲಿ ಸಂಚರಿಸಿಲ್ಲವಾದ್ದರಿಂದ ಆ ತಿಂಗಳ ಪೂರ್ತಿ ತೆರಿಗೆಯನ್ನು ಹಾಗೂ ಜೂನ್ ತಿಂಗಳ ತೆರಿಗೆಗೆ ಶೇ 50 ರಷ್ಟು ರಿಯಾಯಿತಿ ನೀಡಲಾಗಿದೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಸುವಂತೆ ಖಾಸಗಿ ಬಸ್ ಸಂಘದವರು ಮನವಿ ಮಾಡಿದ್ದಾರೆ. ಮುಂದಿನ ಜಿಲ್ಲಾಡಳಿತದ ಸಭೆಯಲ್ಲಿ ಇಲಾಖೆಯಿಂದ ಈ ವಿಷಯವನ್ನೆ ಪ್ರಮುಖ ಅಜೆಂಡಾವಾಗಿ ಇಡಲಾಗುವುದು.

-ಎಸ್.ರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ, ತುಮಕೂರು

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap