ತುಮಕೂರು : ಶಾಲೆಗೆ ಹುರುಪಿನಿಂದ ವಿದ್ಯಾರ್ಥಿಗಳು ಹಾಜರು

 ತುಮಕೂರು :

ಸೈಕಲ್ ಏರಿ ಶಾಲೆಗೆ ಹೊರಟ ಮಕ್ಕಳು.

      ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಗಳು ಹಂತ-ಹಂತವಾಗಿ ಆರಂಭಗೊಳ್ಳುತ್ತಿದ್ದು, ಸೋಮವಾರದಿಂದ ಆರಂಭಗೊಂಡ 6 ರಿಂದ 8ನೇ ತರಗತಿಗೆ ವಿದ್ಯಾರ್ಥಿಗಳು ಹುರುಪಿನಿಂದ ಭೌತಿಕ ತರಗತಿಗಳನ್ನು ಕೇಳಲು ಶಾಲೆಗಳತ್ತ ಹೆಜ್ಜೆಹಾಕಿದ್ದು, ಮೊದಲ ದಿನವೇ ಸರಾಸರಿ ಶೇ.70ಕ್ಕೂ ಮೇಲ್ಪಟ್ಟ್ಟು ಹಾಜರಾತಿ ಕಂಡುಬಂದಿರುವುದು ಗಮನಾರ್ಹವೆನಿಸಿದೆ.

      ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 6 ತಾಲೂಕಿನಲ್ಲಿ ಸೋಮವಾರ ಆರಂಭಿಸಿದ ಭೌತಿಕ ತರಗತಿಗೆ ನಗರ ವ್ಯಾಪ್ತಿಯಲ್ಲಿ ಶೇ. 65 ರಿಂದ 69ರವರಗೆ ಪ್ರತಿಶತ ಹಾಜರಾತಿ ಕಂಡುಬಂದಿದ್ದರೆ, ಗ್ರಾಮಾಂತರದಲ್ಲಿ ಶೇ.72 ರಿಂದ ಶೇ.74ರವರೆಗೆ ಹಾಜರಾತಿ ಪ್ರಮಾಣ ದಾಖಲಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿದೆ.

ತುಮಕೂರು ನಗರದ ವಿದ್ಯಾನಿಕೇತನ ಶಾಲೆಗೆ ಸಮವಸ್ತ್ರದೊಂದಿಗೆ ಶಾಲೆಗೆ ಹಾಜರಾದ ವಿದ್ಯಾರ್ಥಿಗಳು.

      ತರಗತಿವಾರು ನಗರ-ಗ್ರಾಮೀಣ ಹಾಜರಾತಿಳ ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ 6ನೇ ತರಗತಿಗೆ ದಾಖಲಾದ 8683 ವಿದ್ಯಾರ್ಥಿಗಳ ಪೈಕಿ 5785 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.66.62 ಪ್ರತಿಶತ ದಾಖಲಾತಿ ಕಂಡುಬಂದಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ 16095 ಮಕ್ಕಳಲ್ಲಿ 11,745 ಮಕ್ಕಳು ಹಾಜರಾಗಿದ್ದು, ಹಾಜರಾತಿ ಪ್ರಮಾಣ ಶೇ.72.97ರಷ್ಟಿದೆ.

7ನೇ ತರಗತಿಗೆ ದಾಖಲಾದ ನಗರ ವ್ಯಾಪ್ತಿಯ 8628 ಮಕ್ಕಳ ಪೈಕಿ 5877 ಮಂದಿ ಹಾಜರಾಗಿದ್ದು, ಹಾಜರಿ ಪ್ರಮಾಣ ಶೇ.68.12ರಷ್ಟಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ15546 ದಾಖಲಾತಿ ಪೈಕಿ 11364 ಮಂದಿ ಹಾಜರಾಗಿದ್ದು, ಹಾಜರಿ ಪ್ರಮಾಣ ಶೇ.73.10ರಷ್ಟಿದೆ. ನಗರ ವ್ಯಾಪ್ತಿಯಲ್ಲಿ 8ನೇ ತರಗತಿಗೆ ದಾಖಲಾದ 9069 ಮಕ್ಕಳ ಪೈಕಿ 6276 ಮಂದಿ ಹಾಜರಾಗಿದ್ದು, ಹಾಜರಿ ಪ್ರಮಾಣ ಶೇ.69.20ರಷ್ಟದ್ದರೆ, ಗ್ರಾಮಾಂತರ ವ್ಯಾಪ್ತಿಯಲ್ಲಿ 14619 ಮಕ್ಕಳ ಪೈಕಿ 10881 ಮಂದಿ ಹಾಜರಾಗಿದ್ದು, ಹಾಜರಾತಿ ಪ್ರಮಾಣ ಶೇ.74.43ರಷ್ಟಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆ:

      ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ ತಾಲೂಕಿನಲ್ಲಿ 6ನೇ ತರಗತಿಗೆ ದಾಖಲಾದ 13329 ವಿದ್ಯಾರ್ಥಿಗಳಲ್ಲಿ 7912 ವಿದ್ಯಾರ್ಥಿಗಳು ಹಾಜರಾಗಿದ್ದು ಶೇ.59.36ರಷ್ಟು ಹಾಜರು ಪ್ರಮಾಣದಾಖಲಾದರೆ, 7ನೇ ತರಗತಿಗೆ ಪ್ರವೇಶ ಪಡೆದ 7454 ವಿದ್ಯಾರ್ಥಿಗಳ ಪೈಕಿ 7454 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.54.39ರಷ್ಟು, 8ನೇ ತರಗತಿಗೆ ದಾಖಲಾದ 13564 ವಿದ್ಯಾರ್ಥಿಗಳ ಪೈಕಿ 5329 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.39.29 ರಷ್ಟು ಹಾಜರಾತಿ ದಾಖಲಾಗಿದೆ.

ಡಿಡಿಪಿಐಗಳಿಂದ ಪರಿವೀಕ್ಷಣೆ:

      ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೈಲಪ್ಪನ ಮಠ ಹಾಗೂ ದಸೂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಡಿಪಿಐ ಸಿ.ನಂಜಯ್ಯ ಭೇಟಿ ಕೊಟ್ಟರೆ, ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಕೆಲವು ಶಾಲೆಗಳಿಗೆ ಕೃಷ್ಣಮೂರ್ತಿ ಭೇಟಿ ಕೊಟ್ಟರು. ಎಲ್ಲಾ ಶಾಲೆಗಳಲ್ಲೂ ತರಗತಿಗಳು ಆರಂಭಕ್ಕೂ ಮುನ್ನ ಸ್ಯಾನಿಟೈಜ್ ಮಾಡಿ, ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲೆಯ ಒಳ ಬಿಡಲಾಯಿತು. ದೈಹಿಕ ಅಂತರ ಕಾಪಾಡಿ ಬೋಧನೆ ಮಾಡಲಾಯಿತು.

ಎರಡು ಪಾಳಿಗಳಲ್ಲಿ ತರಗತಿ, ಇನ್ನೂ ಬಿಸಿಯೂಟವಿಲ್ಲ

      ಶಾಲೆಗಳನ್ನೂ ತೆರೆದರೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕೆಂಬ ದೃಷ್ಟಿಯಿಂದ ಎರಡು ಪಾಳಿಗಳಲ್ಲಿ ತರಗತಿಗಳನ್ನು ಆರಂಭಿಸಿದ್ದು, 6,7,9,10 ನೇ 10 ರಿಂದ 1.30 8ನೇ ತರಗತಿಗೆ 2 ರಿಂದ 4.30ರವರೆಗೆ ತರಗತಿ ನಡೆಸಲಾಗುತ್ತಿದೆ. ವಾರದ 5 ದಿನ ಮಾತ್ರ ತರಗತಿಗಳು ನಡೆಯುತ್ತವೆ. 6ರಿಂದ 10ನೇ ತರಗತಿವರೆಗೆ ಶಾಲೆಗಳು ಆರಂಭಗೊಂಡರೂ ಇನ್ನೂ ಬಿಸಿಯೂಟ ಶಾಲೆಗಳಲ್ಲಿ ಆರಂಭವಾಗಿಲ್ಲ. ಮಕ್ಕಳು ಉತ್ಸಾಹದಿಂದ ಶಾಲೆಗೆ ಬರಲಾರಂಭಿಸಿದ್ದು, ಪೌಷ್ಠಿಕಾಂಶಯುಕ್ತ ಬಿಸಿಯೂಟ ಆರಂಭಿಸಬೇಕೆಂಬ ಒತ್ತಾಯಗಳು ಕೇಳಿಬಂದಿದೆ.

      ನಮ್ಮ ಶಾಲೆಗೆ ಸುಮಾರು 200 ಮಕ್ಕಳ ಪೈಕಿ 100 ಮಕ್ಕಳು ಹಾಜರಾಗಿದ್ದಾರೆ. ಬಹಳ ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಹಾಗೆಯೇ ಶಿಕ್ಷಕರು ಸಹ ಸಂತಸದಿಂದ ಶಾಲೆಗೆ ಬಂದಿದ್ದಾರೆ. ಸದ್ಯ ಆನ್‍ಲೈನ್ ತರಗತಿಗಳು ಸ್ಥಗಿತಗೊಂಡು ಭೌತಿಕ ತರಗತಿಗಳು ಆರಂಭವಾಗಿರುವುದು ಮಕ್ಕಳಲ್ಲಿ ಒಂದು ರೀತಿಯ ಹುರುಪು ತಂದಿದೆ.

-ಡಾ.ಜಯರಾಮರಾವ್ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap