ಶ್ರೀ ಸಿದ್ದಗಂಗಾ ಮಠ – ಶಿಕ್ಷಣ ಸಂಸ್ಥೆಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

ತುಮಕೂರು : 

      ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2020-2021ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರಕಟಿಸಿದ್ದು ತ್ರಿವಿಧ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಮಠ ಹಾಗೂ ಸಿದ್ಧಗಂಗಾ ಶಿಕ್ಷಣ ಸಂಸ್ಥೆ 2021ನೇ ಸಾಲಿನ ಪ್ರಶಸ್ತಿಗೆ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್ ಅವರು ಭಾಜನರಾಗಿದ್ದಾರೆ.

     ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರೆಪ್ಪ್ಪಾ ಹಿಂಚಿಗೇರಿ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕøತರಿಗೆ ತಲಾ ಐದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುತ್ತದೆ.

       ಗಾಂಧೀ ತತ್ವಾದರ್ಶಗಳನ್ನು ಆಧರಿಸಿಕೊಂಡು ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸುವ ಸದುದ್ದೇಶದಿಂದ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಶಸಿಗ್ತೆ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪುರಸ್ಕøತರ ಪರಿಚಯ :

   ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ :

      ಶ್ರೀ ಸಿದ್ಧಗಂಗಾ ಮಠ 15ನೇ ಶತಮಾನದಿಂದಲೂ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನಲ್ಲಿ ಮನೆಮತಾಗಿರುವ ಶ್ರೀ ಮಠ. ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರಸ್ವಾಮಿಗಳು ಶ್ರೀ ಮಠದ ಕೀರ್ತಿಯನ್ನು ತ್ರಿವಿಧ ದಾಸೋಹದ ಮೂಲಕ ವಿಶ್ವವ್ಯಾಪಿ ಪಸರಿಸಿದವರು. ಬಸವಣ್ಣ, ಗಾಂಧೀಜಿಯವರ ಆಶಯದಂತೆ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿ ಪೊರೆಯುತ್ತಿರುವ ಕೀರ್ತಿ ಹೊಂದಿದೆ. ಹಿಂದಿನ ಶ್ರೀಗಳ ಸೇವಾ ಪರಂಪರೆಯನ್ನು ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಮುಂದುವರಿಸುತ್ತಿದ್ದು, 1963ರಲ್ಲಿ ಸ್ಥಾಪನೆಯಾದ ಸಿದ್ಧಗಂಗಾ ವಿದ್ಯಾ ಸಂಸ್ಥೆ 125ಕ್ಕೂ ಅಧಿಕ ಶಾಲಾ-ಕಾಲೇಜುಗಳನ್ನು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನವನ್ನು ನೀಡುತ್ತಾಬಂದಿದೆ.

ಹಿರಿಯ ಗಾಂಧಿವಾದಿ ಮೀರಾಬಾಯಿ ಕೊಪ್ಪಿಕರ್:

      ಹಿರಿಯ ಗಾಂಧಿವಾದಿ ಹುಬ್ಬಳ್ಳಿಯ ಮೀರಾಬಾಯಿ ಕೊಪ್ಪಿಕರ್(96) ಅವರು ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ. ಗಾಂಧಿವಾದಿಗಳಾಗಿದ್ದ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.

      ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಯಾರಿಂದಲೂ ಏನನ್ನೂ ಅಪೇಕ್ಷೆ ಇಲ್ಲ. ಇವರ ಮೂಲ ಧ್ಯೇಯ, ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಏನನ್ನೂ ಬಯಸಬಾರದು ಎಂಬುದು. ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ.     2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯ ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.

       ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರಾದ ಮಠ. ಪೂಜ್ಯ ಡಾ. ಶಿವಕುಮಾರಸ್ವಾಮೀಜಿ ಅವರು ಬಸವಣ್ಣ ಹಾಗೂ ಮಹಾತ್ಮಗಾಂಧಿ ವಿಚಾರಧಾರೆಯಲ್ಲಿ ಸಾಗಿ ಅನ್ನ, ವಿದ್ಯೆ ಜ್ಞಾನ ದಾಸೋಹವನ್ನು ಜಗಕ್ಕೆಲ್ಲ ಪಸರಿಸಿದರು. ಗಾಂಧೀಜಿಯವರಂತೆ ಶ್ರೀಗಳು ಸಹ ಯಾರಾದರೂ ಮಠದಲ್ಲಿ ತಪ್ಪು ಮಾಡಿದರೆ ತಾವೂ ಉಪವಾಸವಿದ್ದು ತಪ್ಪು ಮಾಡಿದರವೇ ಪಶ್ಚಾತಾಪ ಪಡುವಂತೆ ಮಾಡುತ್ತಿದ್ದರು. ಗಾಂಧಿಯವರ ಅನುಯಾಯಿಗಳಾಗಿದ್ದರು. ಪ್ರಸ್ತುತ ಶ್ರೀ ಸಿದ್ಧಲಿಂಗಸ್ವಾಮೀಜಿ ನೇತೃತ್ವದಲ್ಲಿ ಮಠ ಹಾಗೂ ವಿದ್ಯಾಸಂಸ್ಥೆ ಗುರುಪರಂಪರೆಯ ಮಾರ್ಗದಲ್ಲೇ ಮುನ್ನೆಡೆಯುತ್ತಿದ್ದು, ಮಹಾತ್ಮರ ಹೆಸರಿನ ಪ್ರಶಸ್ತಿ ಸಿದ್ಧಗಂಗಾ ಮಠ, ಸಿದ್ಧಗಂಗಾ ವಿದ್ಯಾಸಂಸ್ಥೆಗೆ ಲಭಿಸಿರುವುದು ಸಂತೋಷದಾಯಕ. ಇದಕ್ಕಾಗಿ ಸರಕಾರಕ್ಕೆ, ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

-ಟಿ.ಕೆ.ನಂಜುಂಡಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿಗಳು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap