ತುಮಕೂರು : ಸಿದ್ಧಗಂಗೆಯಲ್ಲಿ ಮೊಳಗಿದ ಕನ್ನಡ ಗೀತ ಸುಧೆ!!

 ತುಮಕೂರು : 

      ಕನ್ನಡರಾಜ್ಯೋತ್ಸವದ ಪ್ರಯಕ್ತ ಸರಕಾರ ಈ ಬಾರಿ ವಿನೂತನವಾಗಿ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನದ ಭಾಗವಾಗಿ  ಸಿದ್ಧಗಂಗಾ ಮಠದಲ್ಲಿ ಏಕಕಾಲದಲ್ಲಿ ಸಾವಿರಾರು ಮಕ್ಕಳು ನಾಡಗೀತೆ ಮೊದಲ್ಗೊಂಡು ನಾಲ್ಕು ಕನ್ನಡ ಗೀತೆಗಳನ್ನು ಏಕಕಾಲದಲ್ಲಿ ಹಾಡುವ ಮೂಲಕ ತ್ರಿವಿಧ ದಾಸೋಹದ ನೆಲದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದರು.

      ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಒಂದು ಲಕ್ಷ ಕಂಠಗಳಲ್ಲಿ ನಾಡಗೀತೆ ಹಾಗೂ ಮೂರು ಸಮುಧರ ಕನ್ನಡ ಗೀತೆಗಳ ಗಾಯನ ಅಭಿಯಾನವನ್ನು ಗುರುವಾರ ಬೆಳಿಗ್ಗೆ ಆಯೋಜಿಸಲಾಗಿತ್ತು.

     ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕರು, ಮೇಯರ್, ಡಿಸಿ, ಸಿಇಓ, ಎಸ್ಪಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾವಿರಾರು ಮಕ್ಕಳು, ನಾಡಗೀತೆ ಮೊದಲ್ಗೊಂಡು ರಾಷ್ಟ್ರಕವಿ ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮ, ಕೆ.ಎಸ್. ನಿಸಾರ್ ಅಹಮದ್ ಅವರ ನಿತ್ಯೋತ್ಸವ, ಹಂಸಲೇಖ ರಚನೆಯ ಡಾ.ರಾಜ್‍ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸತ್ತಂತಿಹ ಕನ್ನಡಿಗರನ್ನು ಬಡಿದೆಚ್ಚರಿಸುವ ಜಾಗೃತಿ ಮೂಡಿಸಿದರು.

     ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಗಸ್ವಾಮೀಜಿ ಅವರು ಕರ್ನಾಟಕ ಸರಕಾರ ಈ ಬಾರಿ ವಿಶೇಷವಾಗಿ ರಾಜ್ಯೋತ್ಸವ ಪ್ರಯುಕ್ತ ಏಕಕಾಲದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡದ ಧ್ವನಿ ಎಲ್ಲಾ ಕಡೆ ಮೊಳಗಿಸುವುದು ಸ್ತುತ್ಯಾರ್ಹ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕತೆ ಉಳಿಸಿ ರಾಷ್ಟ್ರೀಯತೆ ಬೆಳೆಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಪೂರಕವಾಗಿದೆ. ಜಿಲ್ಲಾಡಳಿತ, ಸಂಘಸಂಸ್ಥೆಗಳು ಅಭಿಯಾನ ಯಶಸ್ಸಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

      ಆಡಳಿತದಲ್ಲಿ ಕನ್ನಡ ಹಾಗೂ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಾಗಬೇಕು ಎಂಬ ಕೂಗಿನ ನಡುವೆ. ಕನ್ನಡಿಗರು ಮೊದಲು ಕನ್ನಡತನ ಮೈಗೊಡಿಸಿಕೊಳ್ಳಬೇಕು. ನಾವು ಜೀವಿಸುವ ನೆಲ, ಆಡುವ ಭಾಷೆ ಕನ್ನಡ ನಮ್ಮ ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವ ಕಾರ್ಯಮಾಡೋಣ. ಹೊರರಾಜ್ಯ, ಗಡಿಭಾಗದಲ್ಲಿರುವ ಕನ್ನಡಿಗರು ಕನ್ನಡತನ ಉಳಿಸು ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯಪ್ರವೃತ್ತರಾಗಿರುವಾಗ ಕನ್ನಡ ನೆಲದಲ್ಲಿ ಮಾತೃಭಾಷೆ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಬೇಕು. ಮಕ್ಕಳ ಹೃದಯದಲ್ಲಿ ಕನ್ನಡತನ ಬಿತ್ತುವ ಕಾರ್ಯವಾಗಬೇಕು ಎಂದರು.

      ಜಿಪಂ ಸಿಇಓ ಡಾ.ವಿದ್ಯಾಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ 66ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಜಿಲ್ಲಾಡಳಿತ, ಜಿಪಂ ಪೂರಕ ಸಹಕಾರ ನೀಡಿ ಯಶಸ್ವಿಗೊಳಿಸಿದ್ದು, ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಕನ್ನಡ ಎಲ್ಲೆಡೆ ರಾರಾಜಿಸಬೇಕು ಎಂದರು. ಮೇಯರ್ ಬಿ.ಜಿ.ಕೃಷ್ಣಪ್ಪ, ಎಡಿಸಿ ಚನ್ನಬಸವಯ್ಯ, ಎಸಿ ಅಜಯ್, ಡಿಡಿಪಿಐ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸುರೇಶ್ ಇತರೆ ಅಧಿಕಾರಿ ವೃಂದದವರು,
ಸ್ವರ ಸಿಂಚನ ಸುಗಮ ಸಂಗೀತ ಸಂಸ್ಥೆಯ ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯ ಉಗಮಶ್ರೀನಿವಾಸ್ ಗೀತಗಾಯನದ ಮಾರ್ಗದರ್ಶಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿ ಗೀತೆಗಳ ನಂತರ ವಿದ್ಯಾರ್ಥಿಗಳು “ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ” “ಕನ್ನಡಕ್ಕಾಗಿ ನಾವು”, “ಮಾತಾಡ್ ಮಾತಾಡ್ ಕನ್ನಡ” ಘೋಷವಾಕ್ಯಗಳನ್ನು ಕೂಗುವ ಮೂಲಕ ಕನ್ನಡ ಕಹಳೆಯನ್ನು ಮೊಳಗಿಸಿದರು.

ಪ್ರತಿಜ್ಞಾವಿಧಿ ಬೋಧಿಸಿದ ಡಿಸಿ

ಗೀತಗಾಯನಕ್ಕೂ ಮುನ್ನ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂದು ಪಣತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ.ಕನ್ನಡ ನಾಡು, ನುಡಿ, ಸಂಸ್ಕøತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ’ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು.

16 ಕಡೆ, 25000 ಮಂದಿ ಗೀತ ಗಾಯನ 

      ಇದೇ ರೀತಿ ನಗರದ ಸರ್ಕಾರಿ ಎಂಪ್ರೆಸ್ ಕಾಲೇಜು ; ಜಿಲ್ಲಾ ಆಸ್ಪತ್ರೆ ಸಭಾಂಗಣ; ತುಮಕೂರು ವಿಶ್ವವಿದ್ಯಾಲಯದ ಸಭಾಂಗಣ, ಟೌನ್ ಹಾಲ್ ವೃತ್ತದ ಬಳಿಯ ಶ್ರೀ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜು; ಸರ್ಕಾರಿ ಆಸ್ಪತ್ರೆ ಮುಂಭಾಗದ ಶ್ರೀ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಿಳಾ ಕಾಲೇಜು; ಟೌನ್ ಹಾಲ್ ವೃತ್ತದ ಬಳಿಯ ಸೇಂಟ್ ಮೇರಿಸ್ ಆಂಗ್ಲ ಶಾಲೆ; ಕ್ಯಾತ್ಸಂದ್ರ ಬಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆ; ಬಿ ಹೆಚ್ ರಸ್ತೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು; ರೈಲ್ವೆ ಸ್ಟೇಷನ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಸರ್ಕಾರಿ ಪ್ರೌಢಶಾಲಾ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಪ್ತಗಿರಿ ಬಡಾವಣೆಯಲ್ಲಿನ ಸಪ್ತಗಿರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜು, ಗಡಿ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳ ಮುಂಭಾಗ ಸೇರಿದಂತೆ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಒಟ್ಟು 16 ವೇದಿಕೆಗಳಲ್ಲಿ ಗೀತ ಗಾಯನ ಕಾರ್ಯಕ್ರಮದಲ್ಲಿ ಹಾಡಲು ಸುಮಾರು 25,000 ವಿದ್ಯಾರ್ಥಿಗಳಿಗೆ ಗಾಯಕ ಕೆಂಕೆರೆ ಅವರು ಗಾಯನ ತರಬೇತಿ ನೀಡಿದ್ದರು.

ಕೇಂದ್ರದ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿರಬೇಕು

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್‍ಕುಮಾರ್ ಅವರು ಕರೆಕೊಟ್ಟ ‘ಕನ್ನಡಕ್ಕಾಗಿ ನಾವು’ ಅಭಿಯಾನ ವಿನೂತನ ಯಶಸ್ವಿಯಾಗಿದ್ದು, ಸಾಮೂಹಿಕ ಕನ್ನಡದ ಗೀತಗಾಯನ ಕಾರ್ಯಕ್ರಮ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಮಕ್ಕಳ ವಿಕಸನ, ಸ್ವಸ್ಥ ಸಮಾಜ ನಿರ್ಮಾಣ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಗೆ ಮೊದಲ ಪ್ರಾಧಾನ್ಯತೆ ಜೊತೆಗೆ ಜಾಗತಿಕವಾಗಿ ಸ್ಪರ್ಧೆಗೆ ಅಣಿಯಾಗಲು ಇತರೆ ಭಾಷೆಗಳ ಕಲಿಕೆಯು ಅಗತ್ಯ. ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರಿಸಲು ಅವಕಾಶವಿರಬೇಕು ಎಂಬುದು ನಮ್ಮ ಒತ್ತಾಯವಾಗಿದೆ.

-ಜಿ.ಬಿ.ಜ್ಯೋತಿಗಣೇಶ್, ಶಾಸಕರು. ತುಮಕೂರು ನಗರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap