ತುಮಕೂರು
“ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ತುಮಕೂರು ನಾಲೆಗೆ ಹೇಮಾವತಿ ನೀರು ಹರಿಸಲು ಆದೇಶ ನೀಡಿದರೂ, ಅದಕ್ಕೆ ಆಗ ಶಾಸಕರಾಗಿದ್ದ ಎಚ್.ಡಿ. ರೇವಣ್ಣ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಜಿಲ್ಲಾ ಸಚಿವರ ಆದೇಶ ಪಾಲನೆಗೂ ಅಡ್ಡಿಯಾಗಿದ್ದರು” ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇರ ಆರೋಪ ಮಾಡಿದರು.
ಶನಿವಾರ ಬೆಳಗ್ಗೆ ತುಮಕೂರು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಏರ್ಪಟ್ಟಿದ್ದ ಬೋವಿ ಜನಾಂಗದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಪ್ರತ್ಯೇಕವಾಗಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
ತುಮಕೂರಿಗೆ ಹೇಮಾವತಿ ನೀರು ಬಿಡಬಾರದೆಂದು ರೇವಣ್ಣ ಆಗ್ರಹಿಸಿದ್ದರು. ನೀರು ಬಿಡುವಂತೆ ನಾನು ಆದೇಶ ಕೊಟ್ಟರೂ ಅದನ್ನು ತಡೆಯುವ ಕೆಲಸವನ್ನು ರೇವಣ್ಣ ಮಾಡಿದ್ದರು. ತಾಂತ್ರಿಕ ಮಾಹಿತಿ ಪ್ರಕಾರ ನೀರು ಬಿಡುಗಡೆ ಆಗಿದೆ. ಆದರೆ ಆ ನೀರು ವಾಸ್ತವಿಕವಾಗಿ ತುಮಕೂರು ಜಿಲ್ಲೆಗೆ ಹರಿದಿಲ್ಲ. ಮಾರ್ಗಮಧ್ಯದಲ್ಲೇ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಆ ನೀರು ಜಮೀನುಗಳಿಗೆ ಹರಿಯುವಂತೆ ಮಾಡಲಾಗಿದೆ. ಇದರಲ್ಲಿ ರೇವಣ್ಣ ಅವರ ಪಾತ್ರ ಇದೆ” ಎಂದು ಆಪಾದಿಸಿದರು.
“ಆ ಸಂದರ್ಭದಲ್ಲೇ ಆದಿಚುಂಚನಗಿರಿ ಜಾತ್ರೆಗೆ ಅನುಕೂಲವಾಗುವಂತೆ ನೀರನ್ನು ಹರಿಸುವ ವಿಷಯದಲ್ಲೂ ರೇವಣ್ಣ ಅಡ್ಡಿಪಡಿಸಿದ್ದರು. ಆದರೆ ನಾನೇ ಖುದ್ದಾಗಿ ನಿಂತು ನೀರಿನ ಸೌಲಭ್ಯ ಕಲ್ಪಿಸಿದ್ದೆ” ಎಂದು ಲಿಂಬಾವಳಿ ಅವರು ಹಳೆಯ ಪ್ರಸಂಗವನ್ನು ನೆನಪಿಸಿಕೊಳ್ಳುವ ಮೂಲಕ ರೇವಣ್ಣ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಆಸೆಯೋ? ದುರಾಸೆಯೋ?
“ದೇವೇಗೌಡರು ಹಿರಿಯರಾಗಿದ್ದು, ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರಕ್ಕೆ ಏಕೆ ಬಂದರೋ ಗೊತ್ತಾಗುತ್ತಿಲ್ಲ. ವಯಸ್ಸಿನ ಕಾರಣದಿಂದ ಈಗ ಬಿಜೆಪಿಯಲ್ಲೂ ಬದಲಾವಣೆಗಳು ಆಗುತ್ತಿದ್ದು, ಅದೇ ರೀತಿ ದೇವೇಗೌಡರು ಸಹ ಬಿಟ್ಟು ಕೊಟ್ಟಿರಬಹುದು ಎಂದು ಅನ್ನಿಸಿತಾದರೂ, ಬಳಿಕ ಅವರು ತುಮಕೂರು ಕ್ಷೇತ್ರಕ್ಕೆ ಬಂದಿದ್ದಾರೆ. ಇದು ಆಸೆಯೋ? ದುರಾಸೆಯೋ? ಅರ್ಥವಾಗದು. ಇವರಲ್ಲಿ ಪಕ್ಷವೇ ಕುಟುಂಬವಾಗಿದೆ. ಕುಟುಂಬವೇ ಪಕ್ಷವಾಗಿದೆ” ಎಂದು ದೇವೇಗೌಡರ ವಿರುದ್ಧ ಕುಟುಕಿದರು.
“ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಧಾನಿ ಮೋದಿ ರಾಜ್ಯಕ್ಕೆ ಏನೂ ಕೊಡುಗೆ ಕೊಟ್ಟಿಲ್ಲವೆಂದು ಅಪಪ್ರಚಾರ ಮಾಡುತ್ತಿವೆ” ಎಂದು ತರಾಟೆಗೆ ತೆಗೆದುಕೊಂಡ ಲಿಂಬಾವಳಿ, “ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ 2640 ಕೋಟಿ ರೂ., ಅಮೃತ್ ಯೋಜನೆಯಡಿ 1435 ಕೋಟಿ ರೂ., ಕುಡಿಯುವ ನೀರಿನ ಯೋಜನೆಗಾಗಿ 1762 ಕೋಟಿ ರೂ., ಬರ ನಿರ್ವಹಣೆಗಾಗಿ 7170 ರೂ., ನೀರಾವರಿಗಾಗಿ 1850 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 17557 ಕೋಟಿ ರೂ. ಹೀಗೆ ಬಹುಮುಖವಾಗಿ ವಿವಿಧ ಯೋಜನೆಗಳಡಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಲೆಕ್ಕ ಕೊಡಲಿ” ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸವಾಲು ಹಾಕಿದರು.
“ಪ್ರಸ್ತುತ ನಾವು ಆಡಳಿತದ ಪರವಾದ ಅಲೆಯಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬುದು ದೇಶದ ಜನರ ಅಪೇಕ್ಷೆಯಾಗಿದೆ” ಎಂದು ಅರವಿಂದ ಲಿಂಬಾವಳಿ ಹೇಳಿಕೊಂಡರು.
16 ರಂದು ನಗರಕ್ಕೆ ಅಮಿತ್ ಶಾ
“ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿ ಕಣದಲ್ಲಿರುವುದರಿಂದ ಬಿಜೆಪಿಯ ರಾಷ್ಟ್ರೀಯ/ರಾಜ್ಯ ಪ್ರಮುಖರು ತುಮಕೂರಿಗೆ ಉದ್ದೇಶಪೂರ್ವಕವಾಗಿ ಪ್ರಚಾರಕ್ಕೆ ಬಂದಿಲ್ಲವೇ?” ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇದನ್ನು ಅರವಿಂದ ಲಿಂಬಾವಳಿ ಸಾರಾಸಗಟಾಗಿ ಅಲ್ಲಗಳೆದರು. “ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರವಾಗಿ ಇಡೀ ಬಿಜೆಪಿ ಇದೆ. ಬಿಜೆಪಿ ಕಾರ್ಯಕರ್ತರು ತುಮಕೂರು ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೇ 16 ರಂದು ತುಮಕೂರಿಗೆ ಆಗಮಿಸಿ ರೋಡ್ ಶೋ ನಡೆಸಲಿದ್ದಾರೆ. ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಆಗಮಿಸಲಿದ್ದಾರೆ. ಪಕ್ಷದ ನಾಯಕರು ಇಡೀ ದೇಶದಲ್ಲಿ ಪ್ರಚಾರ ಮಾಡುತ್ತಿದ್ದಾರೆ” ಎಂದು ಸಮಜಾಯಿಷಿ ಕೊಟ್ಟರು.
“ರಾಜ್ಯಾದಾದ್ಯಂತ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ-ಮನೆಗೆ ಭೇಟಿ ನೀಡುವ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಈಗಿನ ವಾತಾವರಣ ಗಮನಿಸಿದರೆ, ರಾಜ್ಯದಲ್ಲಿ ಬಿಜೆಪಿಯು 22 ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ” ಎಂದು ಲಿಂಬಾವಳಿ ಆತ್ಮವಿಶ್ವಾಸದಿಂದ ನುಡಿದರು. ಪಕ್ಷದ ಮುಖಂಡ ಹಾಲನೂರು ಲೇಪಾಕ್ಷ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
